16ರ ಬಾಲಕಿಗೆ 32 ವರ್ಷದ ವರನೊಂದಿಗೆ ವಿವಾಹ| SSLC ಫಲಿತಾಂಶ ಕಾದಿದ್ದ ಯುವತಿಗೆ ಕಂಕಣ ಭಾಗ್ಯ
ಚಿಕ್ಕಬಳ್ಳಾಪುರ[ಏ.29]: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ 16 ವರ್ಷದ ಬಾಲಕಿಯೊಬ್ಬಳನ್ನು 32 ವರ್ಷದ ವರನಿಗೆ ಕೊಟ್ಟು ಮದುವೆ ಮಾಡಿರುವ ಘಟನೆ ಬಾಗೇಪಲ್ಲಿ ತಾಲೂಕಿನ ಯಗವಬಂಡ್ಲಕೆರೆ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಬಾಲಕಿಯ ವಿವಾಹ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದ ವರನೊಂದಿಗೆ ಶನಿವಾರ ಹಾಗೂ ಭಾನುವಾರ ಅದ್ಧೂರಿಯಾಗಿ ನೆರವೇರಿದೆ.
ವಿಪರ್ಯಾಸವೆಂದರೆ ಮದುವೆ ಮುಗಿದ ಬಳಿಕ ವಧು-ವರರ ಜತೆಗೆ ನೆಂಟರೆಲ್ಲರೂ ತೆರಳಿದ ಬಳಿಕ ಗ್ರಾಮಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಲವು ದಿನಗಳಿಂದ ಮದುವೆಗೆ ಸಿದ್ಧತೆ ಕೈಗೊಳ್ಳಲಾಗಿತ್ತು, ಆಹ್ವಾನ ಪತ್ರಿಕೆ ಸಹ ಹಂಚಲಾಗಿತ್ತು. ಆದಾಗ್ಯೂ ಎಲ್ಲಾ ಮುಗಿದ ಮೇಲೆ ಅಧಿಕಾರಿಗಳು ಆಗಮಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.