
ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಈಗ ಮತ್ತೊಂದು ದೊಡ್ಡ ತಮಿಳು ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ. ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ ಅಭಿನಯದ ಮುಂಬರುವ 'ಡೇರ್ ಡೆವಿಲ್' ಸಿನಿಮಾದಲ್ಲಿ ಶಿವಣ್ಣ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ಕನ್ನಡ ಮತ್ತು ತಮಿಳು ಚಿತ್ರರಂಗದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ವಿಶೇಷವೆಂದರೆ, ಈ ಸಿನಿಮಾದಲ್ಲಿ ಅಜಿತ್ ಮತ್ತು ಶಿವಣ್ಣ ಮುಖಾಮುಖಿಯಾಗಲಿದ್ದಾರೆ.
ವರದಿಯ ಪ್ರಕಾರ, ನಿರ್ದೇಶಕ ಅಧಿಕ್ ರವಿಚಂದ್ರನ್ ಅವರ 'ಡೇರ್ ಡೆವಿಲ್' ಚಿತ್ರದಲ್ಲಿ ಶಿವರಾಜ್‌ಕುಮಾರ್ ಪ್ರಮುಖ ಖಳನಾಯಕನಾಗಿ ನಟಿಸಲಿದ್ದಾರೆ. ಈ ಪಾತ್ರಕ್ಕಾಗಿ ಚಿತ್ರತಂಡ ಹಲವು ನಟರ ಹೆಸರುಗಳನ್ನು ಪರಿಶೀಲಿಸಿತ್ತು. ಕೊನೆಗೆ ಶಿವಣ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಅಜಿತ್ ಕುಮಾರ್ ಅವರಿಗೆ ಶಿವರಾಜ್‌ಕುಮಾರ್ ಅವರ ಬಗ್ಗೆ ಅಪಾರ ಗೌರವವಿದ್ದು, ಅವರನ್ನೇ ಈ ಪಾತ್ರಕ್ಕೆ ಆಯ್ಕೆ ಮಾಡಲು ಆಸಕ್ತಿ ತೋರಿಸಿದ್ದಾರೆ ಎಂದು ಅಜಿತ್ ಅವರ ಮ್ಯಾನೇಜರ್ ಸುರೇಶ್ ಚಂದ್ರ ತಿಳಿಸಿದ್ದಾರೆ.
ಶಿವರಾಜ್‌ಕುಮಾರ್ ನವೆಂಬರ್ 17 ಅಥವಾ 18ರಂದು ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕೆಲವು ಆಕ್ಷನ್ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಹೈದರಾಬಾದ್‌ನಲ್ಲಿ ನಡೆಯುವ ಚಿತ್ರೀಕರಣದ ಬಳಿಕ ಚಿತ್ರತಂಡ ಥಾಯ್ಲೆಂಡ್ ಮತ್ತು ಮಲೇಷ್ಯಾದಲ್ಲಿಯೂ ಪ್ರಮುಖ ಭಾಗಗಳನ್ನು ಚಿತ್ರೀಕರಿಸಲು ಯೋಜಿಸಿದೆ ಎಂದು ವರದಿಯಾಗಿದೆ.
'ಶಿವರಾಜ್‌ಕುಮಾರ್ ಈಗಾಗಲೇ ತಮಿಳಿನ 'ಜೈಲರ್', 'ಕ್ಯಾಪ್ಟನ್ ಮಿಲ್ಲರ್' ಮತ್ತು 'ಜೈಲರ್ 2' ಸಿನಿಮಾಗಳಲ್ಲಿ ನಟಿಸಿ ತಮಿಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಅದರಲ್ಲೂ 'ಜೈಲರ್' ಸಿನಿಮಾದಲ್ಲಿನ ನರಸಿಂಹ ಪಾತ್ರ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತ್ತು. ಇದೀಗ ಅಜಿತ್ ಕುಮಾರ್ ಎದುರು ಖಳನಾಯಕನಾಗಿ ಕಾಣಿಸಿಕೊಳ್ಳುವ ಮೂಲಕ ಮತ್ತೊಮ್ಮೆ ತಮಿಳು ಚಿತ್ರರಂಗದಲ್ಲಿ ಗಮನ ಸೆಳೆಯಲು ಸಜ್ಜಾಗಿದ್ದಾರೆ.
ಈ ಸಿನಿಮಾವನ್ನು ಅಧಿಕ್ ರವಿಚಂದ್ರನ್ ನಿರ್ದೇಶಿಸುತ್ತಿದ್ದು, ಅಜಿತ್ ಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ. ಕನ್ನಡದ ನಟಿ ಶ್ರೀಲೀಲಾ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಮಲಯಾಳಂ ನಟ ಉನ್ನಿ ಮುಕುಂದನ್, ಪ್ರಭು, ಆರ್. ಪಾರ್ಥಿಬನ್, ಸುನಿಲ್ ಮತ್ತು ರೆಡಿನ್ ಕಿಂಗ್ಸ್ಲಿ ಸೇರಿದಂತೆ ಹಲವು ಕಲಾವಿದರು ಚಿತ್ರತಂಡದಲ್ಲಿದ್ದಾರೆ.
ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದು, ಅಜಿತ್ ಅವರ ಪತ್ನಿ ಶಾಲಿನಿ ಅಜಿತ್ ಕುಮಾರ್ ತಮ್ಮ ಬ್ರೇವ್‌ಹಾರ್ಟ್ಸ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.
ಅಜಿತ್ ಮತ್ತು ಅಧಿಕ್ ರವಿಚಂದ್ರನ್ ಜೋಡಿಯ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾ ಬಳಿಕ ಇಬ್ಬರೂ ಮತ್ತೊಮ್ಮೆ ಒಂದಾಗುತ್ತಿರುವುದು ವಿಶೇಷ. 'ಡೇರ್ ಡೆವಿಲ್' ಸಿನಿಮಾ 2027ರಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ. ಶಿವಣ್ಣನ ಖಳನಾಯಕನ ಪಾತ್ರ ಮತ್ತು ಅಜಿತ್ ಜೊತೆಗಿನ ಮುಖಾಮುಖಿಯನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.