
ಉತ್ತರಕನ್ನಡ (ಅ.08): ಗೆಳೆಯನ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ಯುವಕನೊಬ್ಬ ಹೊಳೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ (Drowning) ದುರಂತ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕೆಳಾಸೆ ಸಮೀಪದ ಬೇಡ್ತಿ ಹಳ್ಳದ ಬಳಿ ನಡೆದಿದೆ. ಈ ಯುವಕನ ಮೃತದೇಹಕ್ಕಾಗಿ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ನಿನ್ನೆಯಿಂದಲೇ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಈವರೆಗೆ ಪತ್ತೆಯಾಗಿಲ್ಲ. ಮೃತನನ್ನು ಯಲ್ಲಾಪುರದ ಸಬಗೇರಿ ಮೂಲದ ಸಾಗರ್ ದೇವಾಡಿಗ (23) ಎಂದು ಗುರುತಿಸಲಾಗಿದೆ.
ಘಟನೆ ನಡೆದಿದ್ದು ನಿನ್ನೆ ಮಧ್ಯಾಹ್ನದ ವೇಳೆ. ಸಾಗರ್ ದೇವಾಡಿಗ ಹಾಗೂ ಅವನ ಮೂರ್ನಾಲ್ಕು ಗೆಳೆಯರು ಸೇರಿಕೊಂಡು ಹುಟ್ಟುಹಬ್ಬದ ಪಾರ್ಟಿ ಆಚರಿಸಲು ಕೆಳಾಸೆ ಹೊಳೆಯ ಬಳಿಗೆ ಬಂದಿದ್ದರು. ಸಂಭ್ರಮದ ವಾತಾವರಣದ ನಡುವೆಯೇ, ಸಾಗರ್ ಮತ್ತು ಸ್ನೇಹಿತರು ಹೊಳೆಯಲ್ಲಿ ಈಜಲು ನಿರ್ಧರಿಸಿದ್ದಾರೆ. ಈಜುವ ಸಂದರ್ಭದಲ್ಲಿ ಅಚಾನಕ್ಕಾಗಿ ಸಾಗರ್‌ನ ಕಾಲು ಜಾರಿ, ಹೊಳೆಯ ಆಳವಾದ ಪ್ರದೇಶಕ್ಕೆ ಬಿದ್ದಿದ್ದಾನೆ. ತಕ್ಷಣವೇ ಬೇಡ್ತಿ ಹಳ್ಳದ ರಭಸದ ನೀರಿನ ಪ್ರವಾಹಕ್ಕೆ ಸಿಲುಕಿದ ಸಾಗರ್ ನಿಯಂತ್ರಣ ಕಳೆದುಕೊಂಡು ಕೊಚ್ಚಿಹೋಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ನೇಹಿತರು ತಕ್ಷಣವೇ ಆತನನ್ನು ರಕ್ಷಿಸಲು ಪ್ರಯತ್ನಿಸಿದರೂ, ನೀರಿನ ಸೆಳೆತ ಹೆಚ್ಚಿದ್ದ ಕಾರಣ ಯಶಸ್ವಿಯಾಗಲಿಲ್ಲ.
ಘಟನೆಯ ಬಗ್ಗೆ ಸ್ಥಳೀಯರಿಂದ ಮಾಹಿತಿ ದೊರೆತ ತಕ್ಷಣವೇ ಯಲ್ಲಾಪುರ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿದರು. ನಿನ್ನೆಯಿಂದಲೇ (ಅ. 07) ಹೊಳೆಯುದ್ದಕ್ಕೂ ಸಾಗರ್‌ನ ಮೃತದೇಹಕ್ಕಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ, ಹೊಳೆಯಲ್ಲಿ ನೀರಿನ ಹರಿವು ಹೆಚ್ಚಿರುವುದರಿಂದ ಮತ್ತು ಆಳ ಹೆಚ್ಚಾಗಿರುವ ಕಾರಣದಿಂದ ಶೋಧ ಕಾರ್ಯಕ್ಕೆ ಅಡಚಣೆಯಾಗುತ್ತಿದ್ದು, ಈ ವರದಿ ಬರೆಯುವ ತನಕ ಮೃತದೇಹ ಪತ್ತೆಯಾಗಿಲ್ಲ. ಯುವಕ ಸಾಗರ್ ದೇವಾಡಿಗ ಅವರ ಅಕಾಲಿಕ ಮರಣದಿಂದ ಕುಟುಂಬದಲ್ಲಿ ಮತ್ತು ಗೆಳೆಯರ ವಲಯದಲ್ಲಿ ತೀವ್ರ ದುಃಖ ಆವರಿಸಿದೆ. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.