
Drishyam Hindi movie Release: ಭಾರತೀಯ ಚಿತ್ರರಂಗದಲ್ಲಿ ಒಂದೇ ಕಥೆ ಹಲವು ಭಾಷೆಗಳಲ್ಲಿ ರೀಮೇಕ್ ಆಗುವುದು ಹೊಸದೇನಲ್ಲ. ಆದರೆ ಒಂದು ಸಿನಿಮಾ ಇಷ್ಟೊಂದು ಭಾಷೆಗಳಲ್ಲಿ ರೀಮೇಕ್ ಆಗಿ, ಪ್ರತಿ ಅವತರಣಿಕೆಯಲ್ಲೂ ಪ್ರೇಕ್ಷಕರನ್ನು ಸೆಳೆಯುವುದು ಅಪರೂಪ. ಈ ಸಾಲಿನಲ್ಲಿ ‘ದೃಶ್ಯಂ’ ಸಿನಿಮಾ ಸರಣಿ ತನ್ನದೇ ಆದ ವಿಶೇಷ ಸ್ಥಾನ ಪಡೆದುಕೊಂಡಿದೆ. 2013ರಲ್ಲಿ ಮೋಹನ್‌ಲಾಲ್ ಅಭಿನಯದ ಮಲಯಾಳಂ ‘ದೃಶ್ಯಂ’ ಬಿಡುಗಡೆಯಾದ ಬಳಿಕ ಈ ಕಥೆ ಭಾರತೀಯ ಚಿತ್ರರಂಗದ ಹಲವು ಭಾಷೆಗಳಿಗೆ ಪಯಣ ಬೆಳೆಸಿತ್ತು.
ಇದೀಗ ಇದೇ ಜನಪ್ರಿಯ ಸರಣಿಯ ಹಿಂದಿ ಮೂರನೇ ಭಾಗದ ಮೇಲೆ ಸಿನಿಪ್ರೇಕ್ಷಕರ ಕಣ್ಣು ನೆಟ್ಟಿದೆ. ಅಜಯ್ ದೇವಗನ್ ನಾಯಕತ್ವದ ‘ದೃಶ್ಯಂ 3’ ಸಿನಿಮಾ ಅಕ್ಟೋಬರ್ 2ರಂದು ತೆರೆಗೆ ಬರಲು ಸಜ್ಜಾಗಿದ್ದು, ಬಿಡುಗಡೆಗೂ ಮುನ್ನವೇ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಚಿತ್ರದ ಅಡ್ವಾನ್ಸ್ ಬುಕಿಂಗ್‌ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗಾಗಲೇ ₹10 ಕೋಟಿಗೂ ಅಧಿಕ ಮೊತ್ತವನ್ನು ಮುಂಗಡ ಬುಕ್ಕಿಂಗ್ ಮೂಲಕವೇ ಗಳಿಸಿದೆ ಎನ್ನಲಾಗಿದೆ.
2015ರಿಂದ ಅಜಯ್ ದೇವಗನ್ ಅಭಿನಯದಲ್ಲಿ ‘ದೃಶ್ಯಂ’ ಫ್ರಾಂಚೈಸಿಯ ಹಿಂದಿ ಅವತರಣಿಕೆಗಳು ಪ್ರೇಕ್ಷಕರನ್ನು ರಂಜಿಸುತ್ತಿವೆ. ಮೊದಲ ಭಾಗದಲ್ಲಿ ಕುಟುಂಬವನ್ನು ಸಂಕಷ್ಟದಿಂದ ಪಾರು ಮಾಡಲು ನಾಯಕ ರೂಪಿಸುವ ತಂತ್ರ ಪ್ರೇಕ್ಷಕರನ್ನು ಕುತೂಹಲದ ಅಂಚಿನಲ್ಲಿಟ್ಟಿತ್ತು. ಬಳಿಕ ಬಂದ ‘ದೃಶ್ಯಂ 2’ ಕೂಡ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇದೀಗ ಮೂರನೇ ಭಾಗದಲ್ಲಿ ಕಥೆ ಯಾವ ತಿರುವು ಪಡೆಯಲಿದೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಆಸಕ್ತಿದಾಯಕ ಸಂಗತಿಯೆಂದರೆ, ಮಲಯಾಳಂನಲ್ಲಿ ‘ದೃಶ್ಯಂ 3’ ಸಿನಿಮಾದ ಚಿತ್ರೀಕರಣ ಆರಂಭವಾಗುವ ವೇಳೆಯಲ್ಲೇ ಹಿಂದಿ ಅವತರಣಿಕೆಯ ಪ್ರೀ-ಪ್ರೊಡಕ್ಷನ್ ಕೆಲಸಗಳೂ ಶುರುವಾಗಿದ್ದವು ಎನ್ನಲಾಗಿದೆ. ಆದರೆ ಮಲಯಾಳಂ ಮತ್ತು ಹಿಂದಿ ಆವೃತ್ತಿಗಳ ಕಥೆಯಲ್ಲಿ ಗಮನಾರ್ಹ ವ್ಯತ್ಯಾಸ ಇರಲಿದೆ ಎಂದು ಚಿತ್ರತಂಡ ಈಗಾಗಲೇ ತಿಳಿಸಿದೆ. ವಿಶೇಷವಾಗಿ ಹಿಂದಿ ‘ದೃಶ್ಯಂ 3’ ಮೂಲಕ ಕಥೆಯನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸುವ ಉದ್ದೇಶವಿದೆ ಎನ್ನಲಾಗಿದ್ದು, ಅದಕ್ಕಾಗಿಯೇ ಚಿತ್ರಕ್ಕೆ ‘ದಿ ಕನ್‌ಕ್ಲೂಷನ್’ ಎಂಬ ಅಡಿಬರಹ ನೀಡಲಾಗಿದೆ.
ಚಿತ್ರದ ತಾರಾಗಣವೂ ಹಿಂದಿನ ಎರಡು ಭಾಗಗಳ ಪ್ರಮುಖ ಆಕರ್ಷಣೆಯನ್ನು ಮುಂದುವರಿಸುತ್ತಿದೆ. ಅಜಯ್ ದೇವಗನ್ ಜೊತೆಗೆ ಶ್ರಿಯಾ ಶರಣ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟಬು ಕೂಡ ತಮ್ಮ ಪಾತ್ರವನ್ನು ಮುಂದುವರಿಸಿದ್ದಾರೆ. ‘ದೃಶ್ಯಂ 2’ನಲ್ಲಿ ಅಕ್ಷಯ್ ಖನ್ನಾ ನಿರ್ವಹಿಸಿದ್ದ ಪಾತ್ರದ ಜಾಗದಲ್ಲಿ ಈ ಬಾರಿ ಜಯದೀಪ್ ಅಹ್ಲಾವತ್ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನು ನಿರ್ದೇಶನದ ಹೊಣೆ ಮತ್ತೊಮ್ಮೆ ಅಭಿಷೇಕ್ ಪಾಠಕ್ ಅವರ ಹೆಗಲೇರಿದೆ. ಮಲಯಾಳಂ ಮೂಲ ಸಿನಿಮಾದ ಕಥೆಯನ್ನು ಅನುಸರಿಸುವ ಬದಲು ಹಿಂದಿ ಆವೃತ್ತಿಗೆ ವಿಭಿನ್ನ ಕಥಾಹಂದರ ಮತ್ತು ನಿರೂಪಣೆ ನೀಡಲಾಗಿದೆ ಎಂಬುದು ಈಗಾಗಲೇ ಕುತೂಹಲ ಹೆಚ್ಚಿಸಿದೆ.
ಹೀಗಾಗಿ ಅಕ್ಟೋಬರ್ 2ರಂದು ತೆರೆಗೆ ಬರಲಿರುವ ‘ದೃಶ್ಯಂ 3’ ಮೇಲೆ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ಸಿನಿಮಾ ಬಿಡುಗಡೆಯಾಗುವುದಕ್ಕೂ ಮುನ್ನವೇ ₹10 ಕೋಟಿಗೂ ಅಧಿಕ ಅಡ್ವಾನ್ಸ್ ಬುಕಿಂಗ್ ಆಗಿರುವುದು ಚಿತ್ರದ ಮೇಲಿರುವ ಕ್ರೇಜ್‌ಗೆ ಮತ್ತೊಂದು ಉದಾಹರಣೆಯಾಗಿದೆ. ಈ ಬಾರಿ ಜಾರ್ಜ್‌ಕುಟ್ಟಿಯ ಹಿಂದಿ ಅವತಾರ ವಿಜಯ್ ಸಲ್ಗಾಂವ್ಕರ್ ಕಥೆಯನ್ನು ಯಾವ ಹಂತಕ್ಕೆ ಕೊಂಡೊಯ್ಯಲಿದ್ದಾನೆ? ಇಷ್ಟು ವರ್ಷಗಳಿಂದ ಕಾಡುತ್ತಿರುವ ರಹಸ್ಯಕ್ಕೆ ನಿಜಕ್ಕೂ ತೆರೆ ಬೀಳಲಿದೆಯೇ? ಎಂಬ ಪ್ರಶ್ನೆಗಳಿಗೆ ಅಕ್ಟೋಬರ್ 2ರಂದು ಉತ್ತರ ಸಿಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.