ಸ್ಯಾಂಡಲ್‌ವುಡ್‌ಗೆ ವಕ್ಕರಿಸಿದ ಸೈಬರ್ ದಾಳಿ, ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಖಾತೆಯಿಂದ 4.25 ಲಕ್ಷ ದೋಚಿದ ಕಳ್ಳರು!

Published : Sep 29, 2025, 07:33 PM IST
Rajendra Singh Babu

ಸಾರಾಂಶ

ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಸೈಬರ್ ವಂಚನೆಗೆ ಒಳಗಾಗಿದ್ದಾರೆ. "ರಕ್ತ ಕಾಶ್ಮೀರ" ಸಿನಿಮಾದ ತೆಲುಗು ರೈಟ್ಸ್ ನೀಡುವುದಾಗಿ ನಂಬಿಸಿದ ವಂಚಕರು, ಅವರಿಂದ ಬ್ಯಾಂಕ್ ವಿವರಗಳನ್ನು ಪಡೆದು ಸುಮಾರು 4.25 ಲಕ್ಷ ರೂಪಾಯಿ ದೋಚಿದ್ದಾರೆ.  

ಬೆಂಗಳೂರು: ಕನ್ನಡ ಚಲನಚಿತ್ರರಂಗಕ್ಕೆ ಪದೇ ಪದೇ ಸೈಬರ್ ವಂಚನೆಯಾಗುತ್ತಿದೆ. ಇತ್ತೀಚೆಗೆ ನಟಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಹ್ಯಾಕ್ ಮಾಡಿದ ವಂಚಕರು ಹಣ ದೋಚಿದ್ದರು. ಇದೀಗ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸೈಬರ್ ವಂಚಕರ ಬಲೆಗೆ ಸಿಲುಕಿರುವ ಘಟನೆ ಬೆಳಕಿಗೆ ಬಂದಿದೆ. ವಂಚಕರು ಅವರ ಬ್ಯಾಂಕ್ ಖಾತೆಯಿಂದ ಸುಮಾರು 4.25 ಲಕ್ಷ ರೂಪಾಯಿ ಹಣ ಲಪಟಾಯಿಸಿರುವುದು ಬಹಿರಂಗವಾಗಿದೆ. ಈ ಸಂಬಂಧ ಉತ್ತರ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆ ಹೇಗೆ ನಡೆಯಿತು?

ವಂಚಕರು “ರಕ್ತ ಕಾಶ್ಮೀರ” ಸಿನಿಮಾದ ತೆಲುಗು ರೈಟ್ಸ್ ಕುರಿತಂತೆ ರಾಜೇಂದ್ರ ಸಿಂಗ್ ಬಾಬು ಅವರೊಂದಿಗೆ ಸಂಪರ್ಕ ಸಾಧಿಸಿದ್ದಾರೆ. ರೈಟ್ಸ್ ನೀಡಿದರೆ ಹಣ ವರ್ಗಾವಣೆ ಮಾಡುತ್ತೇವೆ ಎಂದು ನಂಬಿಸಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ವಿಶ್ವಾಸ ಮೂಡಿಸಿದ ವಂಚಕರು ನಿರ್ದೇಶಕರಿಂದ ಆಧಾರ್ ಕಾರ್ಡ್, ಪಾನ್ ಕಾರ್ಡ್ ಹಾಗೂ ಬ್ಯಾಂಕ್ ಅಕೌಂಟ್ ವಿವರಗಳನ್ನು ಪಡೆದುಕೊಂಡಿದ್ದಾರೆ.

ನಿರ್ದೇಶಕರಿಂದ ಎಲ್ಲಾ ದಾಖಲೆಗಳನ್ನು ಪಡೆದ ಬಳಿಕ, ವಂಚಕರು ಅವುಗಳನ್ನು ದುರುಪಯೋಗಪಡಿಸಿಕೊಂಡು ಹಣ ಎಗರಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಬ್ಯಾಂಕ್ ಖಾತೆಯಿಂದ 4.25 ಲಕ್ಷ ರೂಪಾಯಿ ಹಣ ವಂಚಕರು ಕದಿಯಿರುವುದು ಗೊತ್ತಾದ ತಕ್ಷಣ, ರಾಜೇಂದ್ರ ಸಿಂಗ್ ಬಾಬು ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರ ತನಿಖೆ

ಸದ್ಯ ಉತ್ತರ ವಿಭಾಗದ ಸಿಇಎನ್ ಪೊಲೀಸ್ ಠಾಣೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವಂಚಕರು ಕರೆ ಮಾಡಿದ್ದ ನಂಬರಿನ ವಿವರ, ಹಣ ವರ್ಗಾವಣೆ ಮಾಡಲಾದ ಖಾತೆಗಳು ಹಾಗೂ ಬಳಸಲಾದ ತಂತ್ರಜ್ಞಾನ ಕುರಿತಂತೆ ತನಿಖೆ ನಡೆಯುತ್ತಿದೆ.

ಚಲನಚಿತ್ರರಂಗದಲ್ಲಿ ಆಘಾತ

ಈ ಘಟನೆ ಚಲನಚಿತ್ರರಂಗದಲ್ಲಿ ಆಘಾತ ಮೂಡಿಸಿದ್ದು, ಸೈಬರ್ ವಂಚನೆಗಳಿಂದ ಎಚ್ಚರಿಕೆಯಿಂದಿರಬೇಕೆಂಬ ಸಂದೇಶವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಕನ್ನಡ ಸಿನಿರಂಗದ ಹೆಸರಾಂತ ನಿರ್ದೇಶಕನೂ ವಂಚಕರ ಬಲೆಗೆ ಸಿಲುಕಿರುವುದು ಅಚ್ಚರಿ ಹುಟ್ಟಿಸಿದೆ.

ರಾಜೇಂದ್ರ ಸಿಂಗ್ ಬಾಬು ಅವರ ದೂರು ಆಧರಿಸಿ ಪೊಲೀಸರು ವಂಚಕರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ಪ್ರಕರಣ ಸೈಬರ್ ಅಪರಾಧಗಳ ಗಂಭೀರತೆ ಮತ್ತು ಜನರು ತಮ್ಮ ವೈಯಕ್ತಿಕ ಹಾಗೂ ಬ್ಯಾಂಕ್ ಮಾಹಿತಿಯನ್ನು ಹಂಚಿಕೊಳ್ಳುವಾಗ ಅನುಸರಿಸಬೇಕಾದ ಜಾಗ್ರತೆಗಳ ಮಹತ್ವವನ್ನು ಎತ್ತಿಹಿಡಿದಿದೆ. ಇನ್ನು ಪ್ರಿಯಾಂಕಾ ಉಪೇಂದ್ರ ಅವರ ಖಾತೆಯಿಂದ ಲಕ್ಷಗಟ್ಟಲೇ ಹಣ ಪೀಕಿದ್ದ ಖದೀಮರ ಗುರುತು ಪತ್ತೆ ಆಗಿದೆ. ಬಿಹಾರ್ ಮೂಲದ ಸೈಬರ್ ಕಳ್ಳರು ನಟಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಹ್ಯಾಕ್ ಮಾಡಿ ಆ ಮೂಲಕ ಅವರದೇ ನಂಬರ್‌ಗೆ ಆಪ್ತರಿಂದ ಹಣ ಹಾಕಿಸಿಕೊಂಡು ಒಟ್ಟೂ 1.65 ಲಕ್ಷ ರೂಪಾಯಿಗಳನ್ನು ಲೂಟಿ ಮಾಡಿದ್ದಾರೆ. ಆ ಸೈಬರ್ ಕಳ್ಳರ ಪತ್ತೆ ಆಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!
ಈಗ್ಲೇ ದರ್ಶನ್ 'ಡೆವಿಲ್'ಗೆ ಯಾಕೆ ಟೆನ್ಷನ್..? ನರ್ತಕಿ ಚಿತ್ರಮಂದಿರದ ಮೇಲೆ ಬೇರೆ ಸ್ಟಾರ್‌ಗಳ ಕಣ್ಣು ಬಿತ್ತಾ?