
ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಕೇವಲ 15 ನಿಮಿಷಗಳಲ್ಲಿ ಆರೋಪಿಗಳ ಬಂಧನ! ಮಹಿಳಾ IPS ಅಧಿಕಾರಿ ತೇಜಸ್ವಿನಿ ಗೌತಮ್‌ಗೆ ಸಿಎಂ ಮೆಚ್ಚುಗೆ
ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ರಾಜಸ್ಥಾನದ ಕೋಟಾ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಮೂವರು ಶಂಕಿತರನ್ನು ಬಂಧಿಸಿದ್ದಾರೆ. ಮುಂಬೈ ಪೊಲೀಸರಿಂದ ಮಾಹಿತಿ ಬಂದ ಕೇವಲ 15 ನಿಮಿಷಗಳಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದಿರುವುದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಕೋಟಾ ನಗರ ಪೊಲೀಸ್ ವರಿಷ್ಠಾಧಿಕಾರಿ (SP) ತೇಜಸ್ವಿನಿ ಗೌತಮ್ ಅವರ ಸಮಯಪ್ರಜ್ಞೆ ಮತ್ತು ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ರಾಜಸ್ಥಾನದ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಕೂಡ ಕರೆ ಮಾಡಿ ಪೊಲೀಸ್ ತಂಡವನ್ನು ಅಭಿನಂದಿಸಿದ್ದಾರೆ.
ವರದಿಗಳ ಪ್ರಕಾರ, ಬೆಳಿಗ್ಗೆ ಸುಮಾರು 9:45ಕ್ಕೆ ಮುಂಬೈ ಕ್ರೈಂ ಬ್ರಾಂಚ್‌ನಿಂದ ತೇಜಸ್ವಿನಿ ಗೌತಮ್ ಅವರಿಗೆ ತುರ್ತು ಮಾಹಿತಿ ಬಂದಿತ್ತು. ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿಗಳು ರೈಲಿನಲ್ಲಿ ಕೋಟಾ ಕಡೆಗೆ ಪ್ರಯಾಣಿಸುತ್ತಿದ್ದಾರೆ ಎಂಬ ಸುಳಿವು ಸಿಕ್ಕಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಎಸ್‌ಪಿ, ತಮ್ಮ ತಂಡವನ್ನು ಅಲರ್ಟ್ ಮಾಡಿ ರೈಲಿನಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದರು. ಕೊನೆಗೆ ಕೇವಲ 15 ನಿಮಿಷಗಳಲ್ಲಿ ಶಂಕಿತರನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಬಂಧಿತರನ್ನು ಹರಿಯಾಣದ ಸೋನಿಪತ್‌ನ ರೇಹನ್ ಅಲಿಯಾಸ್ ಸುಕ್ಕಾ, ಬಿಹಾರ ಮೂಲದ ಹೃತಿಕ್ ಕುರ್ಮಿ ಅಲಿಯಾಸ್ ರೋಷನ್ ಮತ್ತು ಒಬ್ಬ ಅಪ್ರಾಪ್ತ ಎಂದು ಗುರುತಿಸಲಾಗಿದೆ.
ಜುಹು ಪ್ರದೇಶದಲ್ಲಿ ದಾಳಿ ನಡೆಸಿದ ಬಳಿಕ ಆರೋಪಿಗಳು ಮೋಟಾರ್‌ಸೈಕಲ್‌ನಲ್ಲಿ ಪರಾರಿಯಾಗಿದ್ದರು. ನಂತರ ಅಂಧೇರಿ ರೈಲು ನಿಲ್ದಾಣ ತಲುಪಿ, ಲೋಕಲ್ ರೈಲಿನಲ್ಲಿ ಬೊರಿವಿಲಿಗೆ ತೆರಳಿದ್ದರು. ಅಲ್ಲಿಂದ ಕ್ಯಾಬ್ ಮೂಲಕ ಸೂರತ್‌ಗೆ ಪ್ರಯಾಣಿಸಿ, ಬಳಿಕ ಕೋಟಾ ಕಡೆಗೆ ತೆರಳುತ್ತಿದ್ದ ರೈಲನ್ನು ಹತ್ತಿದ್ದರು.
ಸಿಸಿಟಿವಿ ದೃಶ್ಯಗಳು ಮತ್ತು ಆರೋಪಿಗಳ ಪ್ರಯಾಣದ ಹಾದಿಯನ್ನು ಆಧರಿಸಿ ಮುಂಬೈ ಪೊಲೀಸರು ನಿರಂತರವಾಗಿ ಅವರ ಚಲನವಲನಗಳನ್ನು ಪತ್ತೆಹಚ್ಚಿದ್ದರು. ಮಾಹಿತಿ ರಾಜಸ್ಥಾನ ಪೊಲೀಸರಿಗೆ ತಲುಪಿದ ತಕ್ಷಣ ಕೋಟಾ ಪೊಲೀಸರು ಮತ್ತು ಆಂಟಿ-ಗ್ಯಾಂಗ್‌ಸ್ಟರ್ ಟಾಸ್ಕ್ ಫೋರ್ಸ್ ಜಂಟಿಯಾಗಿ ಕಾರ್ಯಾಚರಣೆ ನಡೆಸಿದವು. ಪುಣೆ-ಜೈಪುರ ಎಕ್ಸ್‌ಪ್ರೆಸ್ ರೈಲಿನ ಜನರಲ್ ಬೋಗಿಯಿಂದ ಶಂಕಿತರನ್ನು ವಶಕ್ಕೆ ಪಡೆಯಲಾಯಿತು.
ಯಾರು ಈ IPS ತೇಜಸ್ವಿನಿ ಗೌತಮ್?
2013ರ ಬ್ಯಾಚ್‌ನ ರಾಜಸ್ಥಾನ ಕೇಡರ್ ಐಪಿಎಸ್ ಅಧಿಕಾರಿಯಾಗಿರುವ ತೇಜಸ್ವಿನಿ ಗೌತಮ್ ಮೂಲತಃ ದೆಹಲಿಯವರು. ಲೇಡಿ ಶ್ರೀರಾಮ್ ಕಾಲೇಜಿನಲ್ಲಿ ರಾಜಕೀಯ ವಿಜ್ಞಾನದಲ್ಲಿ ಪದವಿ ಪಡೆದಿರುವ ಅವರು, ಎಲ್‌ಎಲ್‌ಬಿ ಹಾಗೂ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪೂರ್ಣಗೊಳಿಸಿದ್ದಾರೆ. ದೆಹಲಿ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕ ಪಡೆದ ಹೆಗ್ಗಳಿಕೆ ಅವರದು.
ಚುರು, ಅಜ್ಮೀರ್ ಮತ್ತು ಬಿಕಾನೇರ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿರುವ ಅವರು, ಪೊಲೀಸ್ ಕಾರ್ಯಾಚರಣೆಗಳ ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳಲ್ಲೂ ಗುರುತಿಸಿಕೊಂಡಿದ್ದಾರೆ. ಚುರು ಜಿಲ್ಲೆಯಲ್ಲಿ ಬೀದಿ ನಾಟಕಗಳ ಮೂಲಕ ಜನಜಾಗೃತಿ ಮೂಡಿಸಿದ್ದ ಅವರು, ಅಜ್ಮೀರ್‌ನಲ್ಲಿ ಮಾದಕ ವ್ಯಸನಕ್ಕೆ ಒಳಗಾದ ಮಕ್ಕಳ ಪುನರ್ವಸತಿಗಾಗಿ 'ಪ್ರೇರಣಾ' ಯೋಜನೆಯನ್ನು ಜಾರಿಗೆ ತಂದಿದ್ದರು.
ತ್ವರಿತ ನಿರ್ಧಾರ, ದಕ್ಷ ಆಡಳಿತ ಮತ್ತು ಸಾಮಾಜಿಕ ಕಳಕಳಿಯಿಂದ ಗಮನ ಸೆಳೆಯುತ್ತಿರುವ ತೇಜಸ್ವಿನಿ ಗೌತಮ್ ಅವರ ಈ ಕಾರ್ಯಾಚರಣೆ ಮತ್ತೊಮ್ಮೆ ಅವರ ನಾಯಕತ್ವದ ಸಾಮರ್ಥ್ಯವನ್ನು ಮುನ್ನೆಲೆಗೆ ತಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.