ತತ್ರಾಣಿ - ದೀಪಾ ಜೋಶಿ ಬರೆದ ಕಳೆದ ಶತಮಾನದ ಒರಟು ಜೀವನದ ತಂಪಿನ ಕತೆ

By Suvarna News  |  First Published Jan 15, 2025, 3:07 PM IST

ದೀಪಾ ಜೋಶಿ ಬರೆದ ತತ್ರಾಣಿ ಕಾದಂಬದಿ ಓದಿದರೆ ಕಳೆದ ಶತಮಾನದ ಚಿತ್ರಣ ಕಣ್ಣಿಗೆ ಕಟ್ಟುವುದಲ್ಲದೇ, ಇವರು ಬರೆದ ಮೊದಲ ಕಾದಂಬರಿ ಅನಿಸುವದೇ ಇಲ್ಲ. 


ರಜನಿ.ಎಂ.ಜಿ  ಮೆಟ್ರೋ ಬ್ಯೂರೋ ಮುಖ್ಯಸ್ಥೆ. ಏಷ್ಯಾನೆಟ್​ ಸುವರ್ಣನ್ಯೂಸ್​​

ತತ್ರಾಣಿ - ಗತಶತಮಾನದ ಉತ್ಕ್ರಾಂತಿಯ ಕತೆ - ಎಂಬ ಉಪಶೀರ್ಷಿಕೆಯ ದೀಪಾ ಜೋಶಿಯವರ ಚೊಚ್ಚಲ ಕಾದಂಬರಿ. ಆದರೆ ಕಾದಂಬರಿಯ ಆಳ- ವಿಸ್ತಾರ, ಪಾತ್ರಗಳ ಹರವು, ಸಾಮಾಜಿಕ ಪಲ್ಲಟಗಳ ತೆರೆದಿಟ್ಟ ಬಗೆಯನ್ನು ನೋಡಿದರೆ ಖಂಡಿತವಾಗಿಯೂ ಇದು ಮೊದಲ ಕಾದಂಬರಿ ಎಂದು ನಂಬಲಾಗದು. ತತ್ರಾಣಿ ಎಂದರೆ  ಮಣ್ಣಿನ ಹೂಜಿ. ಹೆಸರಿಗೆ ತಕ್ಕಂತೆ ಐಹಿಕ ಸುಖಭೋಗಗಳಿಲ್ಲದ ಒರಟು ಜೀವನ ಕತೆಯನ್ನು ಹೇಳುತ್ತಲೇ  ಜೇಡಿ ಮಣ್ಣಿನ ಮಡಕೆಯ ತಂಪಿನ ಅನುಭವ ನೀಡುವ ಕತೆಯಿದು.
 
ಮಧ್ಯ ಕರ್ನಾಟಕದ ಚಿಕ್ಕ ಪಟ್ಟಣ  ರಾಣೆಬೆನ್ನೂರು ತತ್ರಾಣಿಯ ಕೇಂದ್ರಸ್ಥಳ.   ಒಂದು ಶತಮಾನ ಹಿಂದಿನ ರಾಣೆಬೆನ್ನೂರಿನ ಜೀವನ ವಿಧಾನವನ್ನು, ಅಲ್ಲಿ ಭಾಷೆಯೊಂದಿಗೆ  ಕಟ್ಟಿಕೊಟ್ಟ ಬಗೆ ಆಶ್ಚರ್ಯ ಹುಟ್ಟುವಷ್ಟು ರಿಯಲಿಸ್ಟಿಕ್ ಆಗಿದೆ.  ಅಂದಂದಿನ ಊಟಕ್ಕೇ ಬಡಿದಾಡಬೇಕಾದ ಅಂದಿನ ಬಡತನ, ಅಡುಗೆ ಮನೆಯಲ್ಲೇ ಸವೆಯುವ ಹೆಣ್ಣುಮಕ್ಕಳ ಇಷ್ಟ ಕಷ್ಟಗಳು, ತಾವೇ ರೂಪಿಸಿಕೊಂಡ ಶಾಸ್ತ್ರ ಸಂಪ್ರದಾಯಗಳು, ಧಾರ್ಮಿಕ ನಂಬಿಕೆಗಳು, ಅದನ್ನು ಮೀರುವ ಹೃದಯವಂತಿಕೆ, ಸಾವು ನೋವಿನಲ್ಲಿ ಮಾಗುವ ಜೀವ-ಜೀವನ  ಕಾದಂಬರಿಯನ್ನು ಹೃದಯಕ್ಕೆ ಹತ್ತಿರವಾಗಿಸುತ್ತದೆ.

ಹುಚ್ಚಾಚಾರ್ ಸಾವಿನಿಂದ ಪ್ರಾರಂಭವಾಗುವ ಕತೆ ಅವರ ಮಗ ಭುಜಂಗಾಚಾರ್  ಜೀವನದ ಏಳು ಬೀಳಿನ ಕತೆಯಾಗಿ ಸಾಗುತ್ತದೆ. ಜಮೀನು ಇಲ್ಲದ, ಕೃಷಿಕನಲ್ಲದ, ಪೌರೋಹಿತ್ಯವನ್ನು ಮಾಡದ ಮಾಧ್ವ ಬ್ರಾಹ್ಮಣ ಭುಜಂಗಾಚಾರ್ ಪ್ರತಿ ಬಾರಿಯೂ ಹಣ ಸಂಪಾದನೆಗೆ ಬೇರೆ ಬೇರೆ ಕೌಶಲ್ಯ ಕಲಿಯುವುದು ಅವರ entrprenuershipಗೆ ಸಾಕ್ಷಿ. ಲೌಡ್ ಸ್ಪೀಕರ್, ಮೈಕ್, ವಾಚ್, ಟ್ರಕ್, ಮೇಸ್ತ್ರಿ ಕೆಲಸ, ಎಂಜಿನಿಯರ್ ಕೆಲಸ, ಲೋಹದ ಪಾಲಿಶಿಂಗ್ ಹೀಗೆ ಅವರದ್ದು ‘ಭುಜಾಂಗಾಚಾರರ ದಶಾವತಾರ’

‘ಯೋಗದಾ’: ನವರಾತ್ರಿಯಲ್ಲಿ ಓದಲೇಬೇಕಾದ ಶ್ರೀಚಕ್ರ ಉಪಾಸನೆಯ ಕಾದಂಬರಿ!

Tap to resize

Latest Videos

ತತ್ರಾಣಿ - ಇಡೀ ಒಂದು ಜನಾಂಗದ ಕತೆಯಾದರೂ ಕಾದಂಬರಿಯಲ್ಲಿ ಯಾರೂ ಕೇಡಿಗರಿಲ್ಲ. ಸದಾ ಭುಜಂಗಾಚಾರರ ಜೊತೆ ಜಗಳವಾಡುವ ಗೌರವ್ವನ ಗಟ್ಟಿ ಮಾತಿನ ಹಿಂದೆ ಪ್ರೀತಿ ಜಿನುಗುವುದು ಕಾಣುತ್ತದೆ.  ಅಪ್ಪನ ವಂಶಪಾರಂಪರ್ಯದ ಆಸ್ತಿ-ಚಿನ್ನ ಕದ್ದವ ಕೂಡ ಕ್ಷಮೆ ಪಡೆದು ಬಿಡುತ್ತಾನೆ. ತಂಗಿಯನ್ನು ಮದುವೆ ಮಾಡಿಕೊಡುವಾಗ ಗಿಲೀಟಿನ ಒಡವೆ ಹಾಕಿದ್ದು, ಮಗಳನ್ನು ಶ್ರೀಮಂತರ ಮನೆಗೆ ಸೊಸೆಯಾಗಿ ಕೊಟ್ಟಿದ್ದು, ಗಂಡಸರಿಗೆ ಗೊತ್ತಿಲ್ಲದಂತೆ ಹೆಂಗಸರು ಸೀರೆ ಕೊಂಡಿದ್ದು, ಅಪ್ಪನಿಲ್ಲದಾಗ ಮನೆಯಲ್ಲಿ ಚಾ ಮಾಡಿಕೊಂಡು ಕುಡಿದಿದ್ದು ಯಾವುದೂ ಅಪರಾಧವೆನಿಸದೆ ಸಹಜ ವರ್ತನೆಯಾಗಿ ತೋರುವುದು ಕಾದಂಬರಿಯ ವಿಶೇಷತೆ. 

ಮನೆ ತುಂಬಾ ಜನ, ಹೆಗಲಿಗೆ ಬಿದ್ದ ತಮ್ಮಂದಿರು- ಮಕ್ಕಳು, ಊಟಕ್ಕೂ ಗತಿಯಿಲ್ಲದ ಬಡತನ, ಸದಾ ಹಣ ಹೊಂಚುವ ಸವಾಲು- ಹೀಗಿದ್ದೂ ಎಂದೂ ಬದುಕಿಗೆ ಬೆನ್ನು ತೋರದ ಭುಜಂಗಾಚಾರ್​​​ ಮಾದರಿಯಾಗಿ ನಿಲ್ಲುತ್ತಾರೆ. ಮದುವೆ ಮನೆಯಲ್ಲಿ ಅಡುಗೆಯವರು ಕುಡಿದುಬಂದರೆಂದು ತಾವೇ ಅಡುಗೆ ಮಾಡುವ ಮದುಮಗ ಭುಜಂಗಾಚಾರ್​​​​, ಬದರಿ ಯಾತ್ರೆಯಲ್ಲಿ ಕೊನೆಗೆ ವಾಹನ ಹಾಳಾದರೂ, ಡ್ರೈವರ್​ ಕೈಕೊಟ್ಟರೂ ತಾವೇ ಸರಿಪಡಿಸಿಕೊಂಡು ವಾಹನ ಚಲಾಯಿಸಿಕೊಂಡು ಬಂದು​​ ನಿಜವಾಗಿಯೂ ಹೀರೋ ಆಗಿ ಕಾಣುತ್ತಾರೆ. ಯಾವುದೇ ಬೌದ್ಧಿಕ ಕಸರತ್ತಿಲ್ಲದೆ, ಜೀವನ ಬಂದಂತೆ ಅನುಭವಿಸುತ್ತಾ ಸಾಗುವ ಭುಜಂಗಾಚಾರ್​​  ಕೊನೆಗೆ ಸ್ಥಿತಪ್ರಜ್ಞ ಸ್ಥಿತಿಗೆ ತಲುಪುವುದು ನಮಗೆ ಆಶ್ಚರ್ಯವೆನಿಸುವುದಿಲ್ಲ.  ಬಾಲ್ಯದಲ್ಲೇ ತಂದೆಯ ಅಷ್ಟೂ ಆಸ್ತಿ -ಬಂಗಾರ ಕಳುವಾಗಿದ್ದು,  ಇಡೀ ಜೀವನ ಅದರ ಹಳಹಳಿಕೆಯಲ್ಲೇ ಕಳೆದರೂ ಅದನ್ನು ಕದ್ದವ ಸಿಕ್ಕಾಗ ಆತನನ್ನು ಕ್ಷಮಿಸುವಷ್ಟು ಮಾಗುವ ಭುಜಂಗಾಚಾರ್, ತಾಯಿ ಸುಂದರಾ​ ನಡವಳಿಕೆ ಧೀರೋದಾತ್ತವಾಗಿ ಕಾಣುತ್ತದೆ. 

ಕಳೆದ ಶತಮಾನದ ಪೂರ್ವಾರ್ಧದಲ್ಲಿ ಮನೆಗಳಿಗೆ ಚಹಾ ಕಾಲಿಟ್ಟಿದ್ದು, 9 ಗಜ ಸೀರೆಯಿಂದ ಹೆಣ್ಣುಮಕ್ಕಳು 6 ಗಜ ಸೀರೆಗೆ ಬದಲಾಗಿದ್ದು, ಊರಿಗೆ ಮೊದಲ ಬಾರಿ ಲೌಡ್​ ಸ್ಪೀಕರ್​​ ಬಂದಿದ್ದು,  ಪಕ್ಕಾ ಮಡಿವಂತರ ಮನೆಗಳಲ್ಲೂ ಹೆಣ್ಣುಮಕ್ಕಳನ್ನು ಓದಿಸಬೇಕು ಎಂಬ ಭಾವ ಹುಟ್ಟಿದ್ದು- ದೇಶಕ್ಕೆ ಸ್ವಾತಂತ್ರ್ಯ ಬಂದ ಘಟನೆಗಿಂತ ಕಡಿಮೆಯೇನೂ ಅನಿಸುವುದಿಲ್ಲ. 

ಕಣಿವೆಯ ಹಾಡು: ಹಳ್ಳಿ-ನಗರಗಳ ನಡುವೆ ಮೊಮ್ಮಗಳ ಕನಸಿನ ಹಾರಾಟ, ನೋಡಲೇಬೇಕಾದ ನಾಟಕ

ಇಡೀ ಕತೆ ಒಂದು ಮಟ್ಟದ್ದಾದರೆ, ಕಾದಂಬರಿಯಲ್ಲಿ ಬರುವ ಬದರಿ ಯಾತ್ರೆಯೆ ಇನ್ನೊಂದು ಮಟ್ಟದ್ದು. ಈಗ ವಿಮಾನದಲ್ಲಿ 4 ದಿನದಲ್ಲಿ  ಹೋಗಿ ಬರಬಹುದಾದ  ಬದರಿ ಯಾತ್ರೆ 4 ತಿಂಗಳು ಟ್ರಕ್​​ನಲ್ಲಿ ಹೋಗಿದ್ದು ಯಾತ್ರೆ ಎಂಬುದು ಕೇವಲ ಭೌಗೋಳಿಕ ಬದಲಾವಣೆ ಮಾತ್ರವಲ್ಲ, ಮಾನಸಿಕ ಬದಲಾವಣೆ ಎನ್ನುವುದಕ್ಕೆ ಸಾಕ್ಷಿಯಾಗುತ್ತದೆ. ಯಾತ್ರಾಕ್ಷೇತ್ರಗಳನ್ನು ಸಂದರ್ಶಿಸುತ್ತಾ ಹೋಗುತ್ತಿದ್ದಂತೆ ಯಾತ್ರಾರ್ಥಿಗಳ ಮನಸ್ಸು ತಾತ್ವಿಕತೆಯಡೆಸಾಗುತ್ತಾ, ಪರಿಪೂರ್ಣತೆ ಪಡೆಯುವುದನ್ನು ಗಮನಿಸಬಹುದು. ಒಪ್ಪತ್ತಿನ ಊಟಕ್ಕೆ ತತ್ವಾರವಿದ್ದರೂ ವಾರಣಾಸಿಯ ವಿಧವೆಯರಿಗೆ ದಾನ ಮಾಡುವ ಉದಾರತೆ, ಹುಸೇನಿಯ ಮುಖದಲ್ಲಿ ಕೃಷ್ಣನ ಕಾಣುವ ಹೃದಯವಂತಿಕೆ, ಬಿಟ್ಟರೆ ಇಲ್ಲೇ ಪ್ರಾಣ ಬಿಡಬೇಕು ಎನ್ನುವ ತುಳಸಮ್ಮನ ವೈರಾಗ್ಯ, ಹಣಕಾಸಿನಲ್ಲಿ ನಷ್ಟವಾದರೂ ಸರಿ, ಯಾತ್ರೆಯ ಜವಾಬ್ಧಾರಿ ನನ್ನದು ಎನ್ನುವ ಬದ್ಧತೆ.. ಹೀಗೆ ಪ್ರತಿಪಾತ್ರವೂ  ಒಂದೊಂದು ಮನಸ್ಥಿತಿಯಲ್ಲಿ ಹೊಳಪುಗೊಳ್ಳುತ್ತಾ ಸಾಗುತ್ತದೆ. ಕಾದಂಬರಿಯಲ್ಲಿ ಬದರಿ-ಕೇದಾರ ಯಾತ್ರೆ ನೀಡುವ ಜೀವನಾನುಭವ ಬರೀ ಬೆಳಕಲ್ಲ.. ದರ್ಶನ . ಬಹುಶಃ ಆ ಮನಸ್ಥಿತಿಯಲ್ಲೇ ಪಕ್ವಗೊಂಡ ಭುಜಂಗಾಚಾರ್​​ ಕೊನೆಗೆ ಕಳ್ಳನನ್ನೂ ಕ್ಷಮಿಸಿ ದೊಡ್ಡವರೆನಿಸಿಕೊಳ್ಳುತ್ತಾರೆ. ಮಾಳಖೇಡ ಗುರುಗಳ ಅನುಗ್ರಹಕ್ಕೆ ಪಾತ್ರರಾಗಿ ಧನ್ಯತೆಯನ್ನೂ ಪಡೆಯುತ್ತಾರೆ. 

ಪುಸ್ತಕ :ತತ್ರಾಣಿ
ಲೇಖಕರು : ದೀಪಾ ಜೋಶಿ
ಪ್ರಕಾಶನ : ಅಂಕಿತಾ ಪ್ರಕಾಶನ
ಬೆಲೆ: 395 ರೂ.

click me!