
ವರದಿ: ಪ್ರಜ್ವಲ್ ನಿಟ್ಟೂರು
ಬೆಂಗಳೂರು:ಸ್ಯಾಂಡಲ್‌ವುಡ್‌ನ ಖ್ಯಾತ ನಟ 'ದುನಿಯಾ' ವಿಜಯ್ ಅವರ ಪುತ್ರನ ವಿರುದ್ಧ ಸಹಪಾಠಿಯೊಬ್ಬನನ್ನು ಕಾರಿನಲ್ಲಿ ಬಲವಂತವಾಗಿ ಕರೆದೊಯ್ದು ತೀವ್ರವಾಗಿ ಹಲ್ಲೆ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ. ಕಾರು ಓವರ್‌ಟೇಕ್ ಮಾಡಿದ ಸಣ್ಣ ವಿಚಾರಕ್ಕೆ ಆರಂಭವಾದ ಗಲಾಟೆ, ಕೊನೆಗೆ ಅಪಹರಣ ಹಾಗೂ ಹಲ್ಲೆ ಪ್ರಕರಣದಲ್ಲಿ ಅಂತ್ಯವಾಗಿದೆ.
ಮಾಹಿತಿಯ ಪ್ರಕಾರ, ನಿನ್ನೆ ಸಂಜೆ ರಾಜರಾಜೇಶ್ವರಿ ನಗರದಲ್ಲಿ (ಆರ್.ಆರ್. ನಗರ) ಸಾಮ್ರಾಟ್ ಮತ್ತು ಅವರ ಸ್ನೇಹಿತರು ಜಿಪ್ಸಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಹಲ್ಲೆಗೊಳಗಾದ ವಿದ್ಯಾರ್ಥಿ ಹಾಗೂ ಅವರ ಸ್ನೇಹಿತರು ಐ20 (i20) ಕಾರಿನಲ್ಲಿ ಬಂದು ದುನಿಯಾ ವಿಜಯ್ ಪುತ್ರನ ಕಾರನ್ನು ಓವರ್‌ಟೇಕ್ ಮಾಡಿದ್ದರೆನ್ನಲಾಗಿದೆ. ಈ ಸಣ್ಣ ವಿಚಾರ ಎರಡೂ ತಂಡದ ನಡುವೆ ಮಾತಿನ ಚಕಮಕಿಗೆ ಕಾರಣವಾಗಿತ್ತು.
ನಿನ್ನೆ ಸಂಜೆಯ ಗಲಾಟೆಯ ಹಿನ್ನೆಲೆಯಲ್ಲಿ, ಇಂದು ಮಧ್ಯಾಹ್ನ ಮೈಸೂರು ರಸ್ತೆಯಲ್ಲಿರುವ ಆರ್‌ವಿ ಯೂನಿವರ್ಸಿಟಿ (RV University) ಆವರಣದ ಹೊರಗಡೆ ಸಹಪಾಠಿ ವಿದ್ಯಾರ್ಥಿ ನಿಂತಿದ್ದಾಗ, ದುನಿಯಾ ವಿಜಯ್ ಪುತ್ರ ಹಾಗೂ ಆತನ ಬೆಂಬಲಿಗರು ವಿದ್ಯಾರ್ಥಿಯನ್ನು ಬಲವಂತವಾಗಿ ತಮ್ಮ ಕಾರಿನಲ್ಲಿ ಎಳೆದೊಯ್ದಿದ್ದಾರೆ. ಚಲಿಸುವ ಕಾರಿನಲ್ಲಿಯೇ ಆತನ ಮೇಲೆ ವಿಜಯ್ ಪುತ್ರ ಮತ್ತು ಆತನ ಸ್ನೇಹಿತರು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಗೊಳಗಾದ ದಹಪಾಠಿ ಹಾಗೂ ಆರೋಪ ಎದುರಿಸುತ್ತಿರುವ ವಿಜಯ್ ಪುತ್ರ ಇಬ್ಬರೂ ಆರ್‌ವಿ ಯೂನಿವರ್ಸಿಟಿಯ ಸಹಪಾಠಿಗಳಾಗಿದ್ದಾರೆ . ಹಲ್ಲೆಯಿಂದ ಗಾಯಗೊಂಡಿರುವ ವಿದ್ಯಾರ್ಥಿ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಗಾಯಾಳು ವಿದ್ಯಾರ್ಥಿ ಕೆಂಗೇರಿ ಪೊಲೀಸ್ ಠಾಣೆಗೆ ತೆರಳಿ ದುನಿಯಾ ವಿಜಯ್ ಪುತ್ರ ಹಾಗೂ ಆತನ ಗೆಳೆಯರ ವಿರುದ್ಧ ಅಧಿಕೃತ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೆಂಗೇರಿ ಠಾಣೆ ಪೊಲೀಸರು ಸದ್ಯ ತನಿಖೆ ಆರಂಭಿಸಿದ್ದಾರೆ.
ನಟ, ನಿರ್ದೇಶಕ ದುನಿಯಾ ವಿಜಯ್ ಅವರು ತಮ್ಮ ಮಗನ ಹುಟ್ಟುಹಬ್ಬವನ್ನ ಕಳೆದ ಜೂನ್ ತಿಂಗಳಲ್ಲಿ ಅದ್ಧೂರಿಯಾಗಿ ಆಚರಿಸಿದ್ದರು. ಮಗನನ್ನ ನೋಡ್ತಿದ್ದಂತೆ ತಬ್ಬಿಕೊಂಡು, ಎಮೋಷನಲ್ ಆಗಿದ್ದರು. ಈ ಸಂಬಂಧ ವಿಡಿಯೋವನ್ನು ಹಂಚಿಕೊಂಡಿದ್ದರು. ದುನಿಯಾ ವಿಜಯ್ ಅವರಿಗೆ ಮೂವರು ಮಕ್ಕಳು. ಈಗಾಗಲೇ ಅವರ ಪುತ್ರಿಯರಾದ, ರಿತನ್ಯಾ, ಮೋನಿಕಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಗನನ್ನು ಕೂಡ ಸಿನಿಮಾಗೆ ಕರೆತರುವ ಪ್ಲ್ಯಾನ್‌ನಲ್ಲಿದ್ದಾರೆ ದುನಿಯಾ ವಿಜಯ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.