
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಹೊರವಲಯದಲ್ಲಿ ಜುಲೈ 15 ರಂದು ನಡೆದಿದ್ದ ಸಿನಿಮಾ ಶೈಲಿಯ ಭಯಾನಕ ಅಪಹರಣ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಗುತ್ತಿಗೆದಾರರೊಬ್ಬರನ್ನು ಅಪಹರಿಸಿದ ದುಷ್ಕರ್ಮಿಗಳ ತಂಡವೊಂದು ಅವರನ್ನು ರಾತ್ರಿಯಿಡೀ ಕಾರಿನಲ್ಲಿ ಸುತ್ತಾಡಿಸಿ ಲಕ್ಷಾಂತರ ರೂಪಾಯಿ ಹಣ ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದೆ.
ಮೈಸೂರು ತಾಲೂಕಿನ ಮುದೇಗೌಡನ ದೊಡ್ಡಿ ಗ್ರಾಮದ ನಿವಾಸಿ ಗುತ್ತಿಗೆದಾರ ರಾಮು ಅಪಹರಣಕ್ಕೊಳಗಾದ ವ್ಯಕ್ತಿ. ಜುಲೈ 15 ರಂದು ರಾಮು ಅವರು ತಮ್ಮ ತೋಟದಿಂದ ಮನೆಗೆ ವಾಪಸ್ ಬರುತ್ತಿದ್ದಾಗ ನಾಲ್ವರ ತಂಡವೊಂದು ಅವರನ್ನು ಅಡ್ಡಗಟ್ಟಿ ಬಲವಂತವಾಗಿ ಕಾರಿಗೆ ಹತ್ತಿಸಿಕೊಂಡಿದೆ. ನಂತರ ಅವರ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿ ರಾತ್ರಿಯಿಡೀ ಮೈಸೂರಿನ ವಿವಿಧೆಡೆ ಕಾರಿನಲ್ಲಿ ಸುತ್ತಾಡಿಸಿದ್ದಾರೆ.
ಗ್ರಾಹಕರಿಗೆ ಅನುಮಾನ ಬಾರದಿರಲೆಂದು ರಾಮು ಅವರ ಮೊಬೈಲ್‌ನಿಂದಲೇ ಅವರ ಪತ್ನಿಗೆ ಕರೆ ಮಾಡಿಸಿದ ಕಿಡ್ನಾಪರ್ಸ್, ಇಂದು ರಾತ್ರಿ ಕೆಲಸದ ಕಾರಣ ಮನೆಗೆ ಬರುವುದಿಲ್ಲ ಎಂದು ಹೇಳಿಸಿದ್ದಾರೆ.
ಕಿಡ್ನಾಪ್ ಮಾಡಿದ ನಂತರ ರಾಮು ಅವರ ಬಳಿಯಿದ್ದ 30 ಗ್ರಾಂ ಚಿನ್ನದ ಚೈನು, 10 ಗ್ರಾಂ ತೂಕದ ಎರಡು ಉಂಗುರ ಹಾಗೂ ಜೇಬಿನಲ್ಲಿದ್ದ 50 ಸಾವಿರ ಹಣವನ್ನು ಕಿತ್ತುಕೊಂಡಿದ್ದಾರೆ. ಅಷ್ಟಕ್ಕೇ ನಿಲ್ಲದ ಕಿಡ್ನಾಪರ್ಸ್, ನಿನ್ನನ್ನು ಕೊಲೆ ಮಾಡಲು ನಮಗೆ 9 ಲಕ್ಷ ರೂಪಾಯಿ ಸುಪಾರಿ ಕೊಟ್ಟಿದ್ದಾರೆ. ನೀನು ಬದುಕಬೇಕೆಂದರೆ ನಮಗೆ 40 ಲಕ್ಷ ರೂಪಾಯಿ ನೀಡಬೇಕು ಎಂದು ತಲೆಗೆ ಹೊಡೆದು ಮಾರಣಾಂತಿಕವಾಗಿ ಬೆದರಿಸಿದ್ದಾರೆ.
ತನ್ನ ಪ್ರಾಣ ಉಳಿಸಿಕೊಳ್ಳಲು ರಾಮು ಅವರು, ನನ್ನ ಬಳಿ 40 ಲಕ್ಷ ಇಲ್ಲ, 16 ಲಕ್ಷ ಕೊಡುತ್ತೇನೆ ಎಂದು ಮಾತುಕತೆ ನಡೆಸಿದ್ದಾರೆ.
ರಾಮು ಅವರ ಒಪ್ಪಿಗೆಯಂತೆ ಕಿಡ್ನಾಪರ್ಸ್ ಅವರ ಪತ್ನಿಗೆ ಕರೆ ಮಾಡಿಸಿ, ಗುತ್ತಿಗೆದಾರರಿಗೆ ಹಣ ನೀಡಬೇಕಿದೆ, ನಮ್ಮ ಬಾಮೈದ ಸುರೇಶ್ ಬರುತ್ತಾನೆ ಅವನಿಗೆ 16 ಲಕ್ಷ ಹಣ ಕೊಡು ಎಂದು ಹೇಳಿಸಿದ್ದಾರೆ. ನಂತರ ಸುರೇಶ್ ಮೂಲಕ ಹಣ ತರಿಸಿ, ನಂದಗುಂದ ಸೇತುವೆಯ ಬಳಿ ಕಪ್ಪು ಶರ್ಟ್ ಧರಿಸಿ ನಿಂತಿದ್ದ ತನ್ನ ಗ್ಯಾಂಗ್‌ನ ವ್ಯಕ್ತಿಯೊಬ್ಬನಿಗೆ ಹಣ ಸಿಗುವಂತೆ ಮಾಡಿದ್ದಾರೆ. ಹಣ ಕೈ ಸೇರಿದ ನಂತರ ಒಂದು ಗಂಟೆ ಕಾಲ ರಾಮು ಅವರನ್ನು ಕಾರಿನಲ್ಲಿ ಸುತ್ತಾಡಿಸಿ ಅಜ್ಞಾತ ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಒಂದು ವೇಳೆ ಪೊಲೀಸರಿಗೆ ದೂರು ನೀಡಿದರೆ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಕಿಡ್ನಾಪರ್ಸ್ ಪರಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಈ ಸಂಬಂಧ ಮೈಸೂರಿನ ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಮಲ್ಲಿಕಾರ್ಜುನ ಬಾಲದಂಡಿ ಅವರು ಭೇಟಿ ನೀಡಿ, ಸಂತ್ರಸ್ತ ರಾಮು ಅವರೊಂದಿಗೆ ಮಾತುಕತೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಮೊಬೈಲ್ ನೆಟ್‌ವರ್ಕ್ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಿಡ್ನಾಪರ್ಸ್‌ಗಳಿಗಾಗಿ ಬಲೆ ಬೀಸಿದ್ದಾರೆ.