
ಬೆಂಗಳೂರು (ಜು.7): ಎಂಸಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಿಟಿಡಿ ಕುಟುಂಬದ ವಿರುದ್ಧ ಹಳೆ ಸೇಡು ತೀರಿಸಿಕೊಳ್ಳಲು ಸಿಎಂ ವಾಮ ಮಾರ್ಗ ಬಳಸಿದ್ದರೇ ಎನ್ನುವ ಅನುಮಾನ ವ್ಯಕ್ತವಾಗಿದೆ. ಇದಕ್ಕೆ ಕಾರಣವಾಗಿರುವುದು ಸಹಕಾರ ಸಚಿವ ಕೆಎನ್ ರಾಜಣ್ಣ ಆಡಿರುವ ಮಾತುಗಳು. ಸಹಕಾರ ಕ್ಷೇತ್ರ ಚುನಾವಣೆಯಲ್ಲಿ ಕೈ ಅಭ್ಯರ್ಥಿಗಳ ಗೆಲುವಿನ ರಹಸ್ಯವನ್ನು ರಾಜಣ್ಣ ಬಹಿರಂಗಪಡಿಸಿದ್ದಾರೆ.
ಸಿಎಂ ಆಪ್ತರಾಗಿರುವ ಸಹಕಾರ ಸಚಿವ ಕೆ ಎನ್ ರಾಜಣ್ಣ, 'ಸಿದ್ದರಾಮಯ್ಯಗೆ ಸಹಕಾರ ಕ್ಷೇತ್ರದ ಬಗ್ಗೆ ಏನೂ ಗೊತ್ತಿರಲಿಲ್ಲ. ನಾನೇ ಅದರ ಗೆಲುವಿಗಾಗಿ ಕಸರತ್ತು ಮಾಡಿದ್ದೆ. 38 ಹೊಸ ಸೊಸೈಟಿ ರಿಜಿಸ್ಟರ್ ಮಾಡಿಕೊಟ್ಟೆ. ರೂಲ್ 121 ನಲ್ಲಿ ಅವರಿಗೆ ವೋಟಿಂಗ್ ಪವರ್ ಕೂಡ ಕೊಟ್ಟೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ. ಆ ಮೂಲಕ ಜಿಟಿ ದೇವೇಗೌಡ ಕುಟುಂಬ ಹಣಿಯಲು ಕೈ ನಾಯಕರು ಚಕ್ರವ್ಯೂಹ ರಚಿಸಿದ್ದರು ಎನ್ನುವುದು ಗೊತ್ತಾಗಿದೆ.
ಇದರೊಂದಿಗೆ ಚುನಾವಣೆ ವೇಳೆ ಜಿಡಿ ಹರೀಶ್ ಗೌಡ ಹೇಳಿದ್ದು ಕೂಡ ನಿಜವಾದಂತಾಗಿದೆ. ಎಲ್ಲಾ ಸೊಸೈಟಿಗಳಿಗೆ ಮೂರು ಮತಗಳನ್ನ ಸೇರಿಸಲಾಗಿದೆ ಎಂದು ಹರೀಶ್ ಗೌಡ ಆರೋಪಿಸಿದ್ದರು. ಕಳೆದ ತಿಂಗಳು 26 ರಂದು ನಡೆದಿದ್ದ ಮೈಸೂರು ಚಾಮರಾಜನಗರ ಸಹಕಾರ ಕೇಂದ್ರ ಬ್ಯಾಂಕ್ ಚುನಾವಣೆ. 13 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 6 ಕ್ಷೇತ್ರ, ಜೆಡಿಎಸ್ 3ಕ್ಷೇತ್ರ ಗೆದ್ದಿದ್ದು. 4 ಕ್ಷೇತ್ರಗಳ ಫಲಿತಾಂಶ ಬಂದಿಲ್ಲ. ಸದ್ಯ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು, ವಾಮಮಾರ್ಗದ ಮೂಲಕ ಎಂಸಿಡಿಸಿಸಿ ಗದ್ದುಗೆಗೆ ಕೈ ನಾಯಕರು ಏರಿದ್ದು ಗೊತ್ತಾಗಿದೆ.
ಹಾಸನದ ಕಾರ್ಯಕ್ರಮವೊಂದರಲ್ಲಿ ಸಚಿವ ರಾಜಣ್ಣ ಹಾಗೂ ಬಾಲಕೃಷ್ಣ- ನಡುವಿನ ಸಂಭಾಷಣೆ.
ಸಚಿವ ರಾಜಣ್ಣ- ಸಿದ್ದರಾಮಯ್ಯದು ಪರ್ಸನಲ್ ಇಟ್ರೆಸ್ಟು, ನಾನೇನ್ ಮಾಡ್ದೆ ಬಾಲಕೃಷ್ಣ.
ಬಾಲಕೃಷ್ಣ- ಸರಿ.
ಸಚಿವ ರಾಜಣ್ಣ- ಚೀಫ್ ಮಿನಿಷ್ಟರ್‌ಗೆ ಕೋಪರೇಟಿವ್ ಬಗ್ಗೆ ಗೊತ್ತಿಲ್ಲ.
ಬಾಲಕೃಷ್ಣ- ಗೊತ್ತಿಲ್ಲ ಹೇಳಿ.
ಸಚಿವ ರಾಜಣ್ಣ- ನಾನೇನ್ ಮಾಡ್ದೆ 38 ಸೊಸೈಟಿ ರಿಜಿಸ್ಟರ್ ಮಾಡಿಕೊಟ್ಟಿದ್ದೆ. ಹೊಸಾವು.
ಬಾಲಕೃಷ್ಣ- ಸರಿ.
ಸಚಿವ ರಾಜಣ್ಣ- ಅವುಗಳಿಗೆ ವೋಟಿಂಗ್ ರೈಟ್ ಇರ್ಲಿಲ್ವಲ್ಲ,
ಬಾಲಕೃಷ್ಣ- ಹಂ.
ಸಚಿವ ರಾಜಣ್ಣ- 121ನಲ್ಲಿ ವೋಟಿಂಗ್ ರೈಟ್ ಕೊಟ್ಟೆ.
ಬಾಲಕೃಷ್ಣ- ಸರಿ.
ಸಚಿವ ರಾಜಣ್ಣ- ಅದ್ರಿಂದ ಎಲ್ಲವ ಒಂದೊಂದ್ ವೋಟಲ್ಲಿ ಗೆದ್ದವೆ.
ಬಾಲಕೃಷ್ಣ- ಅಂ
ಸಚಿವ ರಾಜಣ್ಣ- ಅಮೇಲೆ ಐದೈದು ಆರಾರು ವೋಟ್ ಕ್ರಿಯೇಟ್ ಮಾಡಿಕೊಟ್ಟೆ.
ಬಾಲಕೃಷ್ಣ- ಅಂ, ಪಬ್ಲಿಕ್ ಸ್ವಲ್ಪ ವೈಟ್ ಮಾಡ್ತಿದ್ದಾರೆ.
ಸಚಿವ ರಾಜಣ್ಣ- ಅಂಗಾಗಿ ಅವ್ರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಟಿ ಹರೀಶ್ ಗೌಡ, ನಾವು ಐದು ಕ್ಷೇತ್ರಗಳಲ್ಲಿ ಮುಂದೆ ಇದ್ದೇವೆ. ಹನೂರು, ಹೆಚ್ ಡಿ ಕೋಟೆ ಟೈ ಆಗಿದೆ. ಇನ್ನುಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಚುನಾವಣೆ ಪಾರದರ್ಶಕವಾಗಿ ನಡೆಸಬೇಕು. ಹಿಂದಿನ ಬಾಗಿಲಿನಿಂದ ಚುನಾವಣೆ ನಡೆಸೋದಲ್ಲ. ಹಲವೆಡೆ ಮತಗಳನ್ನ ಸೇರ್ಪಡೆ ಮಾಡಿ ಚುನಾವಣೆ ಗೆದಿದ್ದಾರೆ. ಇಲ್ಲದಿದ್ರೆ ನಾವು 9 ಕ್ಷೇತ್ರಗಳಲ್ಲಿ ಗೆಲ್ಲುತ್ತಿದ್ದೆವು. ಸಹಕಾರಿಗಳು ನಮ್ಮ ಕೈ ಬಿಟ್ಟಿಲ್ಲ ಎಂದು ಹೇಳಿದ್ದಾರೆ.
ಜಿಟಿ ದೇವೇಗೌಡ್ರು ಚುನಾವಣೆಗೆ ಬಂದಿಲ್ಲ. ನಾವೇ ನಿಂತು ಚುನಾವಣೆ ಮಾಡಿದ್ದೆವು. ಶಾಸಕರ ವಿರುದ್ಧವೇ ನಿಂತು ನಮ್ಮ ಅಭ್ಯರ್ಥಿಗಳು ಪೈಪೋಟಿ ನೀಡಿದ್ದಾರೆ.
ಇನ್ನು ನಾಲ್ಕು ಕ್ಷೇತ್ರಗಳಿಗೆ ಮತದಾನ ನಡೆಯಬೇಕು. ಇವತ್ತು ಇಡಿ ಸರ್ಕಾರ ಆಡಳಿತ ಯಂತ್ರ ಬಳಸಿ ಎಂಸಿಡಿಸಿಸಿ ಬ್ಯಾಂಕ್ ನ ಸರ್ಕಾರದ ವಶಕ್ಕೆ ತೆಗೆದುಕೊಳ್ಳಲು ಮುಂದಾಗಿದೆ. ಆದರೆ ಸಹಕಾರಿಗಳು ನಮ್ಮ ಜೊತೆ ಇದ್ದಾರೆ ನಮ್ಮ ಕೈ ಬಿಟ್ಟಿಲ್ಲ. ಇವರೆಲ್ಲರೂ ಹೋರಾಟ ಮಾಡಿರೋದು ಸರ್ಕಾರದ ವಿರುದ್ದ. ಈ ಚುನಾವಣೆ ನೋಡಿ ಎಲ್ಲರು ಕಲಿಯೋದು ತುಂಬಾ ಇದೆ. ಈ ಚುನಾವಣೆಯಿಂದ ನಾವೇನು ಕುಗ್ಗಿಲ್ಲ. ಈ ಚುನಾವಣೆಯಲ್ಲಿ ನಮಗೆ ಹಿನ್ನಡೆ ಆಗಿಲ್ಲ. ಪ್ರತಿ ಕ್ಷೇತ್ರದಲ್ಲಿ ಮೂರು ಮತಗಳನ್ನ ಸೇರಿಸಿದರಿಂದ ನಮಗೆ ಹಿನ್ನಡೆ ಆಗಿದೆ. ನಾವು ಸೋತಿರೋದು ಒಂದೊಂದು ಮತಗಳ ಅಂತರದಲ್ಲಿ. ಈ ಫಲಿತಾಂಶ ಸಹಕಾರಿಯಾಗಿ ನನಗೆ ಬಹಳ ಸಂತೋಷ ಕೊಟ್ಟಿದೆ. ನಮ್ಮನ್ನ ಕುಗ್ಗಿಸೋಕೆ ತುಳಿಯೋಕೆ ಯಾರಿಂದಲು ಸಾಧ್ಯವಿಲ್ಲ ಎಂದು ಮೈಸೂರಿನಲ್ಲಿ ಶಾಸಕ ಜಿಡಿ ಹರೀಶ್ ಗೌಡ ಹೇಳಿಕೆ ನೀಡಿದ್ದಾರೆ.