ಇ.ಡಿಯಿಂದ 100 ಕೋಟಿ ರು. ಮೌಲ್ಯದ 92 ಮುಡಾ ಸ್ಥಿರಾಸ್ತಿ ಜಪ್ತಿ

Published : Jun 11, 2025, 07:34 AM IST
Muda

ಸಾರಾಂಶ

ಮುಡಾ ಹಗರಣ ಸಂಬಂಧ ಜಾರಿ ನಿರ್ದೇಶನಾಲಯವು  ಪ್ರಾಧಿಕಾರದ ಸುಮಾರು 100 ಕೋಟಿ ರು. ಮೌಲ್ಯದ 92 ಸ್ಥಿರಾಸ್ತಿಗಳನ್ನು  ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.

 ಬೆಂಗಳೂರು :  ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ(ಮುಡಾ) ಹಗರಣ ಸಂಬಂಧ ಜಾರಿ ನಿರ್ದೇಶನಾಲಯವು(ಇ.ಡಿ) ಪ್ರಾಧಿಕಾರದ ಸುಮಾರು 100 ಕೋಟಿ ರು. ಮೌಲ್ಯದ 92 ಸ್ಥಿರಾಸ್ತಿಗಳನ್ನು (ನಿವೇಶನಗಳು) ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿ ಈ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಸ್ಥಿರಾಸ್ತಿಗಳನ್ನು ವಸತಿ ಸಹಕಾರಿ ಸಂಘ ಮತ್ತು ಮುಡಾ ಅಧಿಕಾರಿಗಳು ಸೇರಿ ಪ್ರಭಾವಿ ವ್ಯಕ್ತಿಗಳ ಹೆಸರಿನಲ್ಲಿ ನೋಂದಾಯಿಸಲಾಗಿದೆ.

ಮುಡಾ ಹಗರಣ ಸಂಬಂಧ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರರ ವಿರುದ್ಧ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿ ಎಫ್‌ಐಆರ್ ದಾಖಲಿಸಿದ್ದಾರೆ. ಈ ಎಫ್‌ಐಆರ್‌ ಆಧಾರದಡಿ ಇ.ಡಿ. ತನಿಖೆ ಆರಂಭಿಸಿದೆ. ವಿವಿಧ ಕಾನೂನುಗಳು, ಸರ್ಕಾರಿ ಆದೇಶಗಳು ಹಾಗೂ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮತ್ತು ಇತರೆ ಮೋಸದ ವಿಧಾನಗಳ ಮೂಲಕ ಮುಡಾ ನಿವೇಶನಗಳ ಹಂಚಿಕೆಯಲ್ಲಿ ಬೃಹತ್‌ ಪ್ರಮಾಣದ ಹಗರಣ ನಡೆಸಿರುವುದು ಇ.ಡಿ ತನಿಖೆಯಲ್ಲಿ ಬಹಿರಂಗವಾಗಿದೆ.

ಅನರ್ಹ ಘಟಕಗಳು/ವ್ಯಕ್ತಿಗಳಿಗೆ ಪರಿಹಾರದ ರೂಪದಲ್ಲಿ ನಿವೇಶನ ಹಂಚಿಕೆಯಲ್ಲಿ ಮುಡಾ ಮಾಜಿ ಆಯುಕ್ತ ಜಿ.ಟಿ.ದಿನೇಶ್‌ ಕುಮಾರ್‌ ಸೇರಿ ಇತರೆ ಮಾಜಿ ಆಯುಕ್ತರು ಪ್ರಮುಖ ಪಾತ್ರ ವಹಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಚರ ಹಾಗೂ ಸ್ಥಿರ ಆಸ್ತಿಗಳ ರೂಪದಲ್ಲಿ ಅಕ್ರಮ ಹಂಚಿಕೆ ಮಾಡಲು ನಗದು, ಬ್ಯಾಂಕ್‌ ವರ್ಗಾವಣೆ ಮೂಲಕ ಲಂಚ ಪಡೆದಿರುವ ಬಗ್ಗೆ ಇ.ಡಿ. ತನಿಖೆ ವೇಳೆ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ.

ನಿವೇಶನಗಳ ಅಕ್ರಮ ಹಂಚಿಕೆಯಲ್ಲಿ ಅನರ್ಹ ಫಲಾನುಭವಿಗಳನ್ನು ಗುರುತಿಸುವುದು, ನಕಲಿ ದಾಖಲೆಗಳು/ ಅಪೂರ್ಣ ದಾಖಲೆಗಳನ್ನು ಬಳಸಿಕೊಂಡು ಸರ್ಕಾರಿ ಆದೇಶಗಳನ್ನು ನೇರವಾಗಿ ಉಲ್ಲಂಘಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೆಲ ಸಂದರ್ಭಗಳಲ್ಲಿ ಹಂಚಿಕೆ ಪತ್ರಗಳ ಹಿಂದಿನ ದಿನಾಂಕ ನೀಡುವುದು, ಸಹಕಾರಿ ಸಂಘಗಳು, ಅಧಿಕಾರಿಗಳ ಸಂಬಂಧಿಕರು, ಸಹವರ್ತಿಗಳ ಬ್ಯಾಂಕ್‌ ಖಾತೆಗಳ ಮೂಲಕ ಹಣ ವರ್ಗಾವಣೆ ನಡೆದಿದೆ. ಈ ಹಣದಿಂದ ಮುಡಾ ಅಧಿಕಾರಿಗಳ ಸಂಬಂಧಿಕರ ಹೆಸರಿನಲ್ಲಿ ಅಕ್ರಮವಾಗಿ ಹಂಚಿಕೆಯಾದ ಕೆಲ ಮುಡಾ ನಿವೇಶನ ಖರೀದಿಸಿರುವುದು ಇ.ಡಿ. ತನಿಖೆಯಲ್ಲಿ ಬಯಲಾಗಿದೆ.

ಇ.ಡಿ. ಅಧಿಕಾರಿಗಳು ಈ ಮುಡಾ ಹಗರಣ ಸಂಬಂಧ ಈ ಹಿಂದೆ ಸುಮಾರು 300 ಕೋಟಿ ರು. ಮೌಲ್ಯದ 160 ಮುಡಾ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಇದೀಗ ಮುಂದುವರೆದ ಭಾಗವಾಗಿ ಸುಮಾರು 100 ಕೋಟಿ ರು. ಮೌಲ್ಯದ 92 ಮುಡಾ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಈ ಮೂಲಕ ಪ್ರಕರಣದಲ್ಲಿ ಈವರೆಗೆ ಒಟ್ಟು 400 ಕೋಟಿ ರು. ಮೌಲ್ಯದ 252 ಮುಡಾ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಹಗರಣ ಸಂಬಂಧ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Read more Articles on
click me!

Recommended Stories

ಚಾಮುಂಡಿ ದೇವಾಲಯಕ್ಕೆ ಕನ್ನ: ದೇವಿ ಮೇಲಿನ ಚಿನ್ನದ ತಾಳಿಯನ್ನೂ ಬಿಡಲಿಲ್ಲ!
ಮೈಸೂರು ರೈಲ್ವೆ ನಿಲ್ದಾಣಕ್ಕೆ ಹೈಟೆಕ್ ಟಚ್‌, ಬರೋಬ್ಬರಿ 395.73 ಕೋಟಿ ರೂ. ವೆಚ್ಚದಲ್ಲಿ ಮರು ಅಭಿವೃದ್ಧಿ!