ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರ ದೇವರ ದರ್ಶನಕ್ಕೆ ಪ್ರತ್ಯೇಕ ಸಾಲು!

Published : Jul 03, 2025, 07:26 PM IST
Chamundi Hills Ashada Friday

ಸಾರಾಂಶ

ಜುಲೈ 4 ರ ಆಷಾಢ ಶುಕ್ರವಾರದಂದು ಚಾಮುಂಡಿ ಬೆಟ್ಟದಲ್ಲಿ ಮೆಟ್ಟಿಲುಗಳ ಮೂಲಕ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಭಕ್ತರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಪ್ರತ್ಯೇಕ ಸಾಲು ಮತ್ತು ಸಮಯ ನಿಗದಿಪಡಿಸಲಾಗಿದೆ.

ಬೆಂಗಳೂರು (ಜು.3): ಆಷಾಡ ಶುಕ್ರವಾರದಂದು (Ashada Friday) ಮೆಟ್ಟಿಲುಗಳ ಮೂಲಕ ದೇವರ ದರ್ಶನಕ್ಕೆ ಆಗಮಿಸುವ ಸಾರ್ವಜನಿಕರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಮೈಸೂರು (Mysuru) ಪೊಲೀಸ್‌ ಆಯುಕ್ತರ ಕಚೇರಿ ಪ್ರಕಟಣೆಯ ಮೂಲಕ ತಿಳಿಸಿದೆ. ಆಷಾಢ ಶುಕ್ರವಾರದ ದಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ (Chamundeshwari Temple) ದೇವರ ದರ್ಶನದ ಸಂಬಂಧ ಸಾರ್ವಜನಿಕರ ಹಿತದೃಷ್ಟಿಯಿಂದ ಜನಸಂದಣಿ ನಿರ್ವಹಣೆಗೆ ಸಂಬಂಧಿಸಿದ ಪ್ರಮಾಣಿತ ಕಾರ್ಯಾಚರಣೆ ವಿಧಾನ ಅಡಿಯಲ್ಲಿ ಭಕ್ತಾದಿಗಳು/ಸಾರ್ವಜನಿಕರಿಗೆ ಪ್ರಮುಖ ಮಾಹಿತಿಯನ್ನು ಪೊಲೀಸರು ಹಂಚಿಕೊಂಡಿದ್ದಾರೆ.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದಿನಾಂಕ ಜೂನ್‌ 27 ರಂದು ಆಷಾಢ ಮಾಸದ ಮೊದಲನೇ ಶುಕ್ರವಾರದಂದು ಮೆಟ್ಟಿಲುಗಳ ಮೂಲಕ ಆಗಮಿಸುವ ಭಕ್ತಾದಿಗಳಿಗೆ ಧರ್ಮದರ್ಶನದ ವ್ಯವಸ್ಥೆಯನ್ನು ಜಿಲ್ಲಾಡಳಿತ ಮತ್ತು ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೈಗೊಳ್ಳಲಾಗಿತ್ತು.

ಈ ಸಂಬಂಧ ಚಾಮುಂಡಿ ಬೆಟ್ಟದಲ್ಲಿ ದೇವರ ದರ್ಶನಕ್ಕಾಗಿ ವಿವಿಧ ಸರದಿ ಸಾಲುಗಳನ್ನು ವಿಂಗಡಿಸಿ ಪ್ರತಿಯೊಂದಕ್ಕೂ ಪ್ರವೇಶದ ಮಾರ್ಗವನ್ನು ನಿಗಧಿಪಡಿಸಿ ಮೆಟ್ಟಿಲುಗಳ ಮೂಲಕ ಬರುವ ಭಕ್ತಾದಿಗಳಿಗೆ ಬೆಳಿಗ್ಗೆ 05 ಗಂಟೆಯಿಂದ ಧರ್ಮದರ್ಶನದ ಸಾಲಿನ ಮೂಲಕ ದೇವರ ದರ್ಶನಕ್ಕೆ ಅನುವು ಮಾಡಲಾಗಿತ್ತು.

ಆದರೆ, ಜೂ. 27 ರಂದು ಭಕ್ತಾದಿಗಳು/ ಸಾರ್ವಜನಿಕರು ನಡುರಾತ್ರಿ 1 ಗಂಟೆಯಿಂದಲೇ ಬೆಟ್ಟದ ಪಾದದ ಬಳಿ ಜಮಾವಣೆ ಗೊಂಡು ಮೆಟ್ಟಿಲುಗಳ ಮೂಲಕ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಈ ಹಿನ್ನಲೆಯಲ್ಲಿ ಜುಲೈ 4ರ ಆಷಾಡ ಶುಕ್ರವಾರದಂದು ಜಿಲ್ಲಾಡಳಿತ ಹಾಗೂ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ಆಗಮಿಸುವ ಭಕ್ತಾದಿಗಳಿಗೆ ದೇವಸ್ಥಾನದ ಹೊರ ಆವರಣದಲ್ಲಿ ಪ್ರತ್ಯೇಕವಾದ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಈ ಸಾಲು ಮುಂದೆ ಸಾಗಿ ಧರ್ಮದರ್ಶನದ ಸಾಲಿನೊಂದಿಗೆ ಸೇರಿಕೊಂಡ ನಂತರ ಒಟ್ಟಾಗಿ ಸಾಗಿ ದರ್ಶನ ಮಾಡುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.

ಅಲ್ಲದೇ ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ಆಗಮಿಸುವ ಭಕ್ತರಿಗೆ ಪಾದದ ಬಳಿ ಬೆಳಿಗ್ಗೆ 5 ಯಿಂದ ಸಂಜೆ 6 ಗಂಟೆಯ ವರೆಗೆ ಮಾತ್ರ ಪ್ರವೇಶಕ್ಕೆ ಅವಕಾಶವಿರುತ್ತದೆ. ಬೆಳಿಗ್ಗೆ 5 ಗಂಟೆಗೆ ಮುಂಚಿತವಾಗಿ ಯಾವುದೇ ಸಾರ್ವಜನಿಕರು ಮತ್ತು ವಾಹನಗಳು ಜಮಾವಣೆಯಾಗಲು ಅವಕಾಶವಿರುವುದಿಲ್ಲ.

ಚಾಮುಂಡಿ ಬೆಟ್ಟದ ಹೊರ ಆವರಣದಲ್ಲಿ ದರ್ಶನದ ಎಲ್ಲಾ ಸಾಲುಗಳಲ್ಲಿನ ಭಕ್ತಾದಿಗಳು ಸೇರಿದಂತೆ ಒಮ್ಮೆಗೆ ಸುಮಾರು 15000 ಜನರಿಗೆ ಆಗುವಷ್ಟು ಮಾತ್ರವೇ ಸ್ಥಳಾವಕಾಶವಿದ್ದು ದೇವಸ್ಥಾನದ ಹೊರ ಆವರಣದಿಂದ ವಿವಿಧ ಸಾಲುಗಳ ಮೂಲಕ ಆಗಮಿಸುವ ಭಕ್ತಾದಿಗಳು ದೇವಸ್ಥಾನದ ಒಳ ಪ್ರಾಂಗಣಕ್ಕೆ ಸೇರಿ ಒಟ್ಟಾಗಿ ದರ್ಶನ ಮಾಡಬೇಕಾಗಿರುತ್ತದೆ. ಆದ್ದರಿಂದ ಸಾರ್ವಜನಿಕರು ನೂಕುನುಗ್ಗಲು, ಕಾಲ್ತುಳಿತ ಮುಂತಾದ ಅವಘಡಗಳಿಗೆ ಆಸ್ಪದ ಕೊಡದಂತೆ ತಾಳ್ಮೆಯಿಂದ ಸಹಕರಿಸಿ ದೇವರ ದರ್ಶನವನ್ನು ಮಾಡಲು ಕೋರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

PREV
Read more Articles on
click me!

Recommended Stories

ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ
ಚಾಮುಂಡಿ ದೇವಾಲಯಕ್ಕೆ ಕನ್ನ: ದೇವಿ ಮೇಲಿನ ಚಿನ್ನದ ತಾಳಿಯನ್ನೂ ಬಿಡಲಿಲ್ಲ!