
ಮೈಸೂರು: ಮನೆ ಮುಂದೆ ಹಸು ಕಟ್ಟುವ ಸಣ್ಣ ವಿಚಾರವೊಂದು ದೊಡ್ಡ ದುರಂತಕ್ಕೆ ಕಾರಣವಾಗಿದೆ. ನೆರೆಹೊರೆಯವರ ಕ್ಷುಲ್ಲಕ ಜಗಳಕ್ಕೆ ಅಪ್ರಾಪ್ತ ಬಾಲಕನೊಬ್ಬ ಬಲಿಯಾಗಿದ್ದಾನೆ. ತಂದೆಯ ಮೇಲೆ ಕಣ್ಣೆದುರೇ ನಡೆದ ರಕ್ತಸಿಕ್ತ ಹಲ್ಲೆ ಮತ್ತು ಆರೋಪಿಗಳು ಹಾಕಿದ ಪ್ರಾಣ ಬೆದರಿಕೆಗೆ ಬೆದರಿದ ಬಾಲಕ, ಮನನೊಂದು ಸಾವಿಗೆ ಶರಣಾಗಿರುವ ದಾರುಣ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನಲ್ಲಿ ನಡೆದಿದೆ.
ನಂಜನಗೂಡು ತಾಲ್ಲೂಕಿನ ಸಿಂಗಾರಿಪುರ ಗ್ರಾಮದ ನಿವಾಸಿ ಶಂಕರ್ (49) ಎಂಬುವವರ ಮೇಲೆ ಈ ಭೀಕರ ಹಲ್ಲೆ ನಡೆದಿದೆ. ಶಂಕರ್ ಅವರು ತಮ್ಮ ಮನೆ ಮುಂದೆ ಹಸು ಕಟ್ಟುವ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದೆ. ಹಳೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಗ್ರಾಮದ ಮಾದೇಗೌಡ, ಕುಳ್ಳೇಗೌಡ, ಮಾದೇವ ಸೇರಿದಂತೆ ಒಟ್ಟು ಒಂಬತ್ತು ಮಂದಿ ಶಂಕರ್ ಅವರೊಂದಿಗೆ ಗಲಾಟೆ ತೆಗೆದಿದ್ದಾರೆ.
ಜಗಳದ ವೇಳೆ ಸಿಟ್ಟಿಗೆದ್ದ ಆರೋಪಿಗಳು ಏಕಾಏಕಿ ಶಂಕರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಕಲ್ಲು, ದೊಣ್ಣೆಗಳಿಂದ ಮನಬಂದಂತೆ ಹೊಡೆದ ಪರಿಣಾಮ ಶಂಕರ್ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಸದ್ಯ ತೀವ್ರವಾಗಿ ಗಾಯಗೊಂಡಿರುವ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಶಂಕರ್ ಅವರ ಮೇಲೆ ಹಲ್ಲೆ ನಡೆಯುವಾಗ ಅವರ ಅಪ್ರಾಪ್ತ ಪುತ್ರ ನಾಗೇಂದ್ರ ಅಲ್ಲೇ ಇದ್ದ. ಆರೋಪಿಗಳು ಶಂಕರ್ ಅವರನ್ನು ಹೊಡೆಯುವುದಲ್ಲದೆ ನಾಗೇಂದ್ರನಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಿನ್ನನ್ನೂ ಸುಮ್ಮನೆ ಬಿಡುವುದಿಲ್ಲ, ನಿನ್ನನ್ನೂ ಕೊಲ್ಲುತ್ತೇವೆ ಎಂದು ಎಲ್ಲರ ಮುಂದೆ ಪ್ರಾಣ ಬೆದರಿಕೆ ಹಾಕಿದ್ದಾರೆ. ತನ್ನ ಕಣ್ಣೆದುರೇ ತಂದೆಯ ಮೇಲೆ ನಡೆದ ಕ್ರೂರ ಹಲ್ಲೆ ಮತ್ತು ತನಗೂ ಸಾವು ಕಾದಿದೆ ಎಂಬ ಭಯದಿಂದ ನಾಗೇಂದ್ರ ತೀವ್ರವಾಗಿ ನೊಂದಿದ್ದಾನೆ. ಆರೋಪಿಗಳು ಹೋದ ನಂತರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕ ನೇ* ಬಿಗಿದುಕೊಂಡು ಆತ್ಮ*ತ್ಯೆ ಮಾಡಿಕೊಂಡಿದ್ದಾನೆ.
ಈ ಘಟನೆಯಿಂದ ಸಿಂಗಾರಿಪುರ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಮೃತ ಬಾಲಕನ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಕೌಲಂದೆ ಪೊಲೀಸ್ ಠಾಣೆಯಲ್ಲಿ ಮಾದೇಗೌಡ, ಕುಳ್ಳೇಗೌಡ, ಮಾದೇವ ಸೇರಿದಂತೆ ಒಟ್ಟು 9 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಘಟನೆಯ ನಂತರ ಎಲ್ಲಾ ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಅವರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
ಒಂದು ಸಣ್ಣ ಜಗಳ ಒಂದು ಇಡೀ ಕುಟುಂಬವನ್ನೇ ಬೀದಿಗೆ ತಂದಿದೆ. ಮಗ ಮಣ್ಣಿನ ಪಾಲಾಗಿದ್ದರೆ, ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. "ನನ್ನ ಮಗನ ಸಾವಿಗೆ ಆ ಒಂಬತ್ತು ಮಂದಿಯೇ ಕಾರಣ, ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಶಂಕರ್ ಪತ್ನಿ ಸುಮಿತ್ರಾ ಕಣ್ಣೀರಿಡುತ್ತಿದ್ದಾರೆ.