
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಬಹುಕೋಟಿ ಮೌಲ್ಯದ 50:50 ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಕಠಿಣ ಕ್ರಮ ಕೈಗೊಂಡಿದ್ದಾರೆ. ನಿಯಮ ಮೀರಿ ಹಂಚಿಕೆಯಾಗಿದ್ದ ಬರೋಬ್ಬರಿ 1,100 ನಿವೇಶನಗಳನ್ನು ರದ್ದುಗೊಳಿಸುವ ಮೂಲಕ ಸಚಿವರು ಶಾಕ್ ನೀಡಿದ್ದಾರೆ.
50:50 ನಿಯಮದಡಿ ಅಕ್ರಮವಾಗಿ ಹಂಚಿಕೆಯಾಗಿದ್ದ ಸುಮಾರು 1,100 ನಿವೇಶನಗಳ ಹಂಚಿಕೆಯನ್ನು ಸಚಿವರು ತಕ್ಷಣವೇ ಜಾರಿಗೆ ಬರುವಂತೆ ರದ್ದುಗೊಳಿಸಿದ್ದಾರೆ. ಈ ದಿಟ್ಟ ಕ್ರಮದಿಂದಾಗಿ ಪ್ರಾಧಿಕಾರಕ್ಕೆ ಸೇರಬೇಕಿದ್ದ ಸುಮಾರು 2,000 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಈಗ ಸರ್ಕಾರದ ವಶದಲ್ಲೇ ಉಳಿದಂತಾಗಿದೆ.
14-03-2023ರಂದು ಸರ್ಕಾರ ನೀಡಿದ್ದ ಸ್ಪಷ್ಟ ನಿರ್ದೇಶನಗಳನ್ನು ಉಲ್ಲಂಘಿಸಿ ಈ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಈ ಹಗರಣದ ಕುರಿತು ತನಿಖೆ ನಡೆಸಿದ್ದ ಏಕಸದಸ್ಯ ವಿಚಾರಣಾ ಆಯೋಗ ಮತ್ತು ಉನ್ನತ ಮಟ್ಟದ ತಾಂತ್ರಿಕ ಸಮಿತಿ ನೀಡಿರುವ ವರದಿಯ ಆಧಾರದ ಮೇಲೆ ಸಚಿವರು ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಕೇವಲ ಹಂಚಿಕೆ ಆದೇಶ ರದ್ದುಗೊಳಿಸುವುದು ಮಾತ್ರವಲ್ಲದೆ ಈಗಾಗಲೇ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾಗಿರುವ ನಿವೇಶನಗಳ ವಿರುದ್ಧವೂ ಸಚಿವರು ಗದಾಪ್ರಹಾರ ನಡೆಸಿದ್ದಾರೆ. ಈಗಾಗಲೇ ಕ್ರಯಪತ್ರ (Sale Deed) ಆಗಿರುವ ನಿವೇಶನಗಳನ್ನು ರದ್ದುಪಡಿಸಲು ತಕ್ಷಣವೇ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡುವಂತೆ ಮುಡಾ (MDA) ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನೋಂದಣಿಯಾಗಿರುವ ನಿವೇಶನಗಳಿಗೆ ಖಾತಾ ಮಾಡಿಕೊಡುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಮೈಸೂರು ಮಹಾನಗರ ಪಾಲಿಕೆ, ನಗರಸಭೆ ಹಾಗೂ ಗ್ರಾಮ ಪಂಚಾಯಿತಿಗಳಿಗೆ ನಿರ್ದೇಶನ ನೀಡಲು ಮುಡಾಗೆ ತಿಳಿಸಲಾಗಿದೆ.
ಸರ್ಕಾರದ ಮುಂದಿನ ಸ್ಪಷ್ಟ ಮಾರ್ಗಸೂಚಿ ಬರುವವರೆಗೂ ಪ್ರಾಧಿಕಾರದಿಂದ ಯಾವುದೇ ಹೊಸ ಕ್ರಯಪತ್ರಗಳನ್ನು ನೀಡದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಹಗರಣದ ಆಳ-ಅಗಲವನ್ನು ಪರಿಶೀಲಿಸಿ ಅಕ್ರಮ ಎಸಗಿದವರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಮಾಡಲಾಗಿರುವ ಎಲ್ಲಾ ಹಂಚಿಕೆಗಳು ಅಸಿಂಧು ಎಂದು ಅವರು ಈ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಈ ಕ್ರಮದಿಂದಾಗಿ ಮೈಸೂರಿನ ರಿಯಲ್ ಎಸ್ಟೇಟ್ ವಲಯದಲ್ಲಿ ಸಂಚಲನ ಸೃಷ್ಟಿಯಾಗಿದ್ದು ಅಕ್ರಮವಾಗಿ ನಿವೇಶನ ಪಡೆದಿದ್ದ ಪ್ರಭಾವಿಗಳಿಗೆ ಆತಂಕ ಶುರುವಾಗಿದೆ.