Kaddha Chitra Review: ಆರಂಭದಲ್ಲಿ ಅನುಮಾನ, ಅಂತ್ಯದಲ್ಲಿ ಅಚ್ಚರಿ

By Kannadaprabha NewsFirst Published Sep 9, 2023, 9:13 AM IST
Highlights

ವಿಜಯ್ ರಾಘವೇಂದ್ರ, ರಾಘು ಶಿವಮೊಗ್ಗ, ನಮೃತಾ ಸುರೇಂದ್ರನಾಥ್ ನಟಿಸಿರುವ ಕದ್ದ ಚಿತ್ರ ಬಿಡುಗಡೆಯಾಗಿದೆ. ಸಿನಿಮಾ ಹೇಗಿದೆ?

ರಾಜೇಶ್ ಶೆಟ್ಟಿ

ಬರಹಗಾರನ ಉತ್ಸಾಹ, ಹೊಸ ಸಾಲು ಹೊಳೆದಾಗಿನ ಸಂತೋಷ, ಆತಂಕಕ್ಕೆ ಒಳಗಾಗಿರುವಾಗಿನ ಉದ್ವೇಗ, ಅಂದುಕೊಂಡಿದ್ದು ಸಾಧಿಸಿದಾಗಿನ ನಿರಾಳತೆ, ವಿನಾಕಾರಣ ಸಿಟ್ಟು ಗೊತ್ತಾದಾಗಿನ ಪಶ್ಚಾತ್ತಾಪ, ಮಗುವಿನ ಮೇಲಿನ ಮಮಕಾರ, ಅನ್ಯಾಯದ ವಿರುದ್ಧದ ಆಕ್ರೋಶ ಎಲ್ಲವನ್ನೂ ಸಮರ್ಥವಾಗಿ ದಾಟಿಸುವ ವಿಜಯ ರಾಘವೇಂದ್ರ ಈ ಸಿನಿಮಾದ ಶಕ್ತಿ ಮತ್ತು ಆಧಾರ.

ತಾರಾಗಣ: ವಿಜಯ್ ರಾಘವೇಂದ್ರ, ರಾಘು ಶಿವಮೊಗ್ಗ, ನಮೃತಾ ಸುರೇಂದ್ರನಾಥ್

ನಿರ್ದೇಶನ: ಸುಹಾಸ್ ಕೃಷ್ಣ

ರೇಟಿಂಗ್: 3

ಕತೆ ಚಲಿಸುವುದು ಕೂಡ ವಿಜಯ ರಾಘವೇಂದ್ರ ಪಾತ್ರದಿಂದ. ಆ ಪಾತ್ರ ಪ್ರವೇಶ ಪಡೆದುಕೊಂಡಾಗಿನಿಂದ ಕತೆ ಆರಂಭ. ಆತ ಒಬ್ಬ ಬರಹಗಾರ. ಆ ಬರಹಗಾರನ ಏಳುಬೀಳು ತೋರಿಸುತ್ತಾ ಸಾಗುವ ಸಿನಿಮಾ ಒಂದು ಹಂತದಲ್ಲಿ ಬೇರೊಂದು ತಿರುವು ಪಡೆದುಕೊಂಡು ಸಿನಿಮಾಗೊಂದು ವಿಶಿಷ್ಟ ಪ್ರಭೆಯನ್ನು ದಯಪಾಲಿಸುತ್ತದೆ. ಅದು ಈ ಸಿನಿಮಾದ ವೈಶಿಷ್ಟ್ಯ.

ನೋವನ್ನು ಬಿಡುವುದು ಕಷ್ಟ, ಕಳೆದವಾರ ಕಿರುತೆರೆಗೆ ಬಂದೆ ಈ ವಾರ ಚಿತ್ರಮಂದಿರಕ್ಕೆ ಬಂದೆ: ವಿಜಯ್ ರಾಘವೇಂದ್ರ

ಒಂದು ಕೌಟುಂಬಿಕ ಕತೆಯಂತೆ ಆರಂಭವಾಗುವ ಸಿನಿಮಾ ಹೋಗ್ತಾ ಹೋಗ್ತಾ ತೀವ್ರವಾಗುತ್ತದೆ. ಆ ತೀವ್ರತೆಯನ್ನು ಹೇಳಲು ನಿರ್ದೇಶಕರು ಹಲವು ಅಂಶಗಳನ್ನು ಅಸ್ಪಷ್ಟವಾಗಿ ಕಾಣಿಸುತ್ತಾರೆ. ನೋಡುಗನಿಗೆ ಅಲ್ಲಲ್ಲಿ ಕೆಲವು ಪ್ರಶ್ನೆಗಳನ್ನು ಇಟ್ಟು ಕಾಯಿಸುತ್ತಾರೆ. ಇದೆಲ್ಲಕ್ಕೂ ಅಂತ್ಯದಲ್ಲಿ ಉತ್ತರ ಇದೆ ಬನ್ನಿ ಎನ್ನುವಂತೆ ಚಿತ್ರಕತೆ ರೂಪಿಸಿದ್ದಾರೆ. ಪ್ರೇಕ್ಷಕನ ತಲೆಗೆ ಹುಳ ಬಿಟ್ಟಂತಾಗುವುದು ಅಲ್ಲಿಯೇ. ಚಿತ್ರಕತೆ ರೂಪಿಸಿರುವ ಶೈಲಿ ಪ್ರೇಕ್ಷಕನನ್ನು ಹಿಡಿದು ಕೂರಿಸುವುದೇ ಆಗಿದ್ದರೂ ಅಸ್ಪಷ್ಟತೆಯ ಹಾದಿ ಕೊಂಚ ದೀರ್ಘವಾಗಿದೆ. ಅದನ್ನು ದಾಟಿ ಬಂದರೇನೇ ಸಿಗುವುದು ಅಚ್ಚರಿ. ಹಾಗಾಗಿ ಅಂತಿಮಗುರಿಯನ್ನು ತಲುಪುವವರೆಗೆ ಸಹನೆಯ ದಾರಿ ಸಾಗಬೇಕು.

ತಂದೆ ಜೊತೆ Dp ಹಾಕಿದ್ದ ಸ್ಪಂದನಾ ಎಂದೂ ಬದಲಾಯಿಸಲಿಲ್ಲ: ವಿಜಯ್ ರಾಘವೇಂದ್ರ ಭಾವುಕ

ಪ್ರಥಮಾರ್ಧ ಪಾತ್ರಗಳನ್ನು ಮನಸ್ಸಲ್ಲಿ ಕೂರಿಸುವುದರಲ್ಲಿ ಯಶಸ್ವಿಯಾದರೆ ದ್ವಿತೀಯಾರ್ಧದ ಕೊನೆ ಈ ಸಿನಿಮಾವನ್ನು ವಿಭಿನ್ನವಾಗಿ ನಿಲ್ಲಿಸುತ್ತದೆ. ಕೆಲವೇ ಕೆಲವು ಪಾತ್ರಗಳ ಮೂಲಕ ಕತೆಯೊಂದನ್ನು ದಾಟಿಸುವುದು ಈ ಸಿನಿಮಾದ ಹೆಗ್ಗಳಿಕೆ. ಉಳಿದಂತೆ ಛಾಯಾಗ್ರಹಣ, ಸಂಗೀತ ಚಿತ್ರಕ್ಕೆ ಪೂರಕ. ಒಟ್ಟಾರೆ ಈ ಪ್ರಯಾಣ ವಿಶಿಷ್ಟ.

click me!