
-ಆರ್.ಕೇಶವಮೂರ್ತಿ
ಇನ್ನೂ ಹುಟ್ಟದೇನೆ ಇರೋರು ಭೂಮಿಗೆ ಬಂದು ಈಗಾಗಲೇ ಹುಟ್ಟಿರುವವರ ಜೀವನದ ಜಂಜಾಟಗಳನ್ನು ನೋಡಲು ಶುರು ಮಾಡಿದರೆ ಹೇಗಿರುತ್ತದೆ!? ಹಾಗಂತ ಇದು ಆತ್ಮ, ಪ್ರೇತಾತ್ಮದ ಕತೆಯಲ್ಲ. ಅಪ್ಪಟ ಮನುಷ್ಯರ ಕತೆ, ಪ್ರೀತಿ ಹಂಚೋ ಕತೆ. ಪ್ರೀತಿ ಬೆಳೆಸಿಕೊಳ್ಳಿ, ನಗು ಮಾತ್ರ ಹಂಚಿಕೊಳ್ಳಿ ಎನ್ನುವ ಕತೆ. ಇಲ್ಲಿ ಯಾರೂ ಅನಾಥರಲ್ಲ. ಹಾಗಂತ ಎಲ್ಲರಿಗೂ ಮನೆ-ಮಠ, ಅಪ್ಪ-ಅಮ್ಮ ಇದ್ದಾರೆಯೇ ಎಂದರೆ, ಇಲ್ಲ! ಇಲ್ಲಾಂದ್ರೆ, ಇದ್ದಾರೆ! ಸರಿ, ಇಂಥ ಫಿಲಾಸಫಿಕಲ್ ವಿಚಾರಗಳನ್ನು ನಿರ್ದೇಶಕ ಸತ್ಯಪ್ರಕಾಶ್ ಹೇಗೆ ಹೇಳಿದ್ದಾರೆ ಎನ್ನುವ ಕುತೂಹಲವೂ ಇರುತ್ತದೆ. ಅವರು ನಿರ್ದೇಶಕರಾಗಿ ಈಗಾಗಲೇ ಗೆದಿದ್ದಾರೆ.
ಈಗ ನಟರಾಗಿಯೂ ಗೆದ್ದಿದ್ದಾರೆ ಎಂಬುದು ‘ಎಕ್ಸ್ ಆ್ಯಂಡ್ ವೈ’ ಚಿತ್ರದ ಸ್ಪೆಷಲ್ ಮ್ಯಾಟ್ರು. ಸೂತ್ರಧಾರ, ಪಾತ್ರಧಾರ ಎರಡೂ ಆಗುವ ಜತೆಗೆ ಬಂಡವಾಳದಾರನೂ ಆಗಿ ಈ ಚಿತ್ರವನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಗಾಢವಾಗಿರೋ ವಿಷಾದ, ಅಲ್ಲಲ್ಲಿ ವ್ಯಂಗ್ಯ, ಒಂಚೂರು ಪ್ರವಚನ, ಭರಪೂರ ನಗು ಇವಿಷ್ಟು ಅಂಶಗಳನ್ನು ತುಂಬಾ ಸಮರ್ಥವಾಗಿ ಬಳಸಿಕೊಂಡು ಚಿತ್ರಕಥೆಯನ್ನು ಕಟ್ಟಿದ್ದಾರೆ ಸತ್ಯಪ್ರಕಾಶ್. ಎಲ್ಲೂ ಬೋರ್ ಆಗಲ್ಲ. ಹಾಡಬೇಕು, ಫೈಟ್ ಮನಾಡಬೇಕಿತ್ತು, ಮೇಕಿಂಗ್ ಅದ್ದೂರಿಯಾಗಿರಬೇಕಿತ್ತು ಎನ್ನುವ ಅಭಿಪ್ರಾಯಗಳಿಂದ ಪ್ರೇಕ್ಷಕನನ್ನು ಒಂದು ಸರಳವಾದ ಲೈಫ್ ರಸ್ತೆಗೆ ಕರೆದುಕೊಂಡು ಬರುವುದೇ ಈ ಚಿತ್ರದ ಹೆಚ್ಚುಗಾರಿಕೆ.
ಸೂತ್ರಧಾರನಾಗಿದ್ದ ಸತ್ಯ ಪ್ರಕಾಶ್, ಪಾತ್ರಧಾರನಾಗಲು ಹೊರಟಾಗ ತನ್ನಲ್ಲಿರೋ ಮೈನಸ್ ಮತ್ತು ಪ್ಲಸ್ ಎರಡನ್ನು ಚೆನ್ನಾಗಿ ತಿಳಿಕೊಂಡಿದ್ದಾರೆ. ಹೀಗಾಗಿ ನೀವು ಸತ್ಯ ಪ್ರಕಾಶ್ ಅವರನ್ನ ‘ಹೀರೋ’ಗಿಂತಲೂ ‘ಆರ್ಟಿಸ್ಟ್’ ಅಂತ ಮೆಚ್ಚಿಕೊಳ್ಳಬಹುದು. ಸುಂದರ್ ವೀಣಾ, ಆಯನಾ, ದೊಡ್ಡಣ್ಣ ಅವರು ನೆನಪಿಲ್ಲಿ ಉಳಿಯೋ ಪಾತ್ರಧಾರಿಗಳು. ಅಪ್ಪ, ಅಮ್ಮ, ಹುಟ್ಟದೆ ಇರೋ ಒಂದು ಮಗು ಪಾತ್ರಗಳಲ್ಲಿ ಬೃಂದಾ ಆಚಾರ್ಯ, ಸತ್ಯ ಪ್ರಕಾಶ್, ಪ್ರಕಾಶ್ ಅಥರ್ವ ಕಾಣಿಸಿಕೊಂಡಿರೋದು ಮಾತ್ರವಲ್ಲ, ಕತೆಯ ಮುಖ್ಯ ಸ್ತಂಭಗಳು ಇವರು. ಪ್ರಕಾಶ್ ಅಥರ್ವ ಅವರ ಸಹಜ ಅಭಿನಯ, ಬೃಂದಾ ಅವರ ಬ್ಯೂಟಿ ವಿಥ್ ಆ್ಯಕ್ಚಿಂಗ್, ಸತ್ಯಪ್ರಕಾಶ್ ಅವರ ಕ್ರಿಯೇಟಿವ್ ಈ ಮೂರು ಸೇರಿ ಸಮಾಜವನ್ನು ಬೆಸೆಯುವ ಈ ಚಿತ್ರದ ದೃಶ್ಯವೊಂದರಲ್ಲಿ ಬರುವ ಸಂಭಾಷಣೆ ಹೀಗಿದೆ;
ಇದೇನಿದು?
ಹೂವು.
ಎಷ್ಟು ದಿನ ಇರುತ್ತೆ?
ಒಂದೇ ದಿನ.
ಒಂದಿನಾ ಇರೋ ಹೂವುಗಳೇ ಎಷ್ಟು ಚೆನ್ನಾಗಿ ನಗ್ತಾವಲ್ಲ!
ಚಿತ್ರ: ಎಕ್ಸ್ ಆಂಡ್ ವೈ
ತಾರಾಗಣ: ಸತ್ಯ ಪ್ರಕಾಶ್, ಬೃಂದಾ ಆಚಾರ್, ಪ್ರಕಾಶ್ ಅಥರ್ವ, ಸುಂದರ್ ವೀಣಾ, ಆಯನಾ, ದೊಡ್ಡಣ್ಣ, ವೀಣಾ ಸುಂದರ್, ಧರ್ಮಣ್ಣ ಕಡೂರು
ನಿರ್ದೇಶನ: ಸತ್ಯ ಪ್ರಕಾಶ್
ರೇಟಿಂಗ್: 3.5
ಇಡೀ ಚಿತ್ರದ ಬುನಾದಿ ಇದೇ ಹೂವು. ‘ಜಾತಿ, ಧರ್ಮ, ದ್ವೇಷ ಬಿಟ್ಟು ಈ ಮನುಷ್ಯರು ಆ ಹೂವಿನ ರೀತಿ ಯಾಕಮ್ಮ ಇರಲ್ಲ’ ಎನ್ನುವ ಇನ್ನೂ ಹುಟ್ಟದೆ ಇರುವ ಆ ಜೀವದ ಪ್ರಶ್ನೆಗೆ ಸಿನಿಮಾ ನೋಡೋ ಪ್ರೇಕ್ಷಕ ಮಾತ್ರವಲ್ಲ, ನೋಡದೆ ಇರೋರು ಕೂಡ ಉತ್ತರ ಕಂಡುಕೊಳ್ಳಬೇಕು. ಇದು ಚಿತ್ರದ ಬುನಾದಿ. ಹೀಗಾಗಿ ಚಿತ್ರದ ಕತೆ ಏನೆಂಬುದು ಇದಕ್ಕಿಂತ ಹೆಚ್ಚು ಹೇಳಬೇಕಿಲ್ಲ. ಅಂದರೆ ನೋಡಬೇಕಿರುವ ಕತೆ ಇದು. ಯಾಕೆಂದರೆ ಚಿತ್ರದ ಬುನಾದಿ ಮತ್ತು ಆಶಯ ತುಂಬಾ ಚೆನ್ನಾಗಿರೋದಕ್ಕೆ ಇದು ನೋಡಲೇಬೇಕಾದ ಸಿನಿಮಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.