#MovieReview: ಈ ಜಂಟಲ್‌ಮನ್ ನಿಜಕ್ಕೂ 'ನಂಬರ್ ಒನ್..!'

By Suvarna News  |  First Published Feb 7, 2020, 11:28 AM IST

ಜಂಟಲ್‌ಮನ್ ಕನ್ನಡ ಸಿನಿಮಾ ವಿಮರ್ಶೆ. ಇದು ಪ್ರಜ್ವಲ್ ದೇವರಾಜ್ ಅಭಿನಯದ ಚಿತ್ರ. ಜಡೇಶ್ ಕುಮಾರ್ ನಿರ್ದೇಶಕರು.


- ಶಶಿಕರ ಪಾತೂರು

ಚಿತ್ರ: ಜಂಟಲ್ ಮನ್
ನಿರ್ದೇಶಕ: ಜಡೇಶ್ ಕುಮಾರ್ ಹಂಪಿ
ತಾರಾಗಣ: ಪ್ರಜ್ವಲ್ ದೇವರಾಜ್, ನಿಶ್ವಿಕಾ ನಾಯ್ಡು

Tap to resize

Latest Videos

undefined

ಹೊಸ ಸಿನಿಮಾ ಮಾಡಲು ಕತೆ ಇರಲ್ಲ ಎನ್ನುವವರು ಈ ಚಿತ್ರ ನೋಡಬೇಕು! ಯಾಕೆಂದರೆ ಇಲ್ಲಿ ಕತೆ ತುಸು ಹೆಚ್ಚಾಗಿಯೇ ಇದೆ. ಆದರೆ ಅದು ಬರಿಯ ಕತೆಯಾಗಿರದೆ, ಭಾವನೆಗಳ ಜತೆಯಾಗಿದೆ ಎನ್ನುವುದೇ ಜಂಟಲ್ ಮನ್ ಸಿನಿಮಾದ ವಿಶೇಷ.

ಗ್ರೀಷ್ಮಾ ಶ್ರೀಧರ್ ಮಾಲ್ಗುಡಿ ನಾಯಕಿ ಆಗಿದ್ದು ಹೇಗೆ?

ಹೆಸರು ಭರತ್ ಕುಮಾರ್. ಆದರೆ ಭರತ ಖಂಡದಲ್ಲೇ ಅಪರೂಪವೆನಿಸುವ ವ್ಯಾಧಿ ಆತನದು. ನಾಲ್ಕು ಕೋಟಿಗೊಬ್ಬರನ್ನು ಕಾಡುವ ಅದರ ಹೆಸರು`ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್'. ದಿನಕ್ಕೆ 18 ತಾಸು ನಿದ್ದೆ ಮಾಡುವ ಭರತ್, ಆಧುನಿಕ ಕುಂಭಕರ್ಣ. ಆದರೆ ಎಚ್ಚರವಿರುವ ಆರು ತಾಸುಗಳಲ್ಲೇ ನಡೆಸುತ್ತಾನೆ ಪರಿಪೂರ್ಣತೆಗೆ ಪಯತ್ನ. ಆತನಿಗೆ ನಿದ್ದೆಯ ಸಮಸ್ಯೆ ಇದ್ದರೂ, ಮುದ್ದಿನಿಂದಲೇ ನೋಡಿಕೊಳ್ಳುವ ಅಣ್ಣ ಅತ್ತಿಗೆ ಇದ್ದಾರೆ. ಅವರಿಗೊಂದು ಪುಟ್ಟ ಮಗು. ಇದಿಷ್ಟು ಆತನ ಕುಟುಂಬ. ಈ ಮಧ್ಯೆ ಎಚ್ಚರವಿರುವ ಆರು ಗಂಟೆಗಳಲ್ಲೇ  ಯುವತಿಯೋರ್ವಳ ಪ್ರೇಮದ ನಂಟಿಗೆ ಕೈಚಾಚುತ್ತಾನೆ. ಆದರೆ ಆಕೆಯಿಂದ ತನ್ನ ನಿದ್ದೆಯ ವಿಚಾರ ಮರೆಮಾಚುತ್ತಾನೆ. ಅದುವೇ ಆತನ ಪಾಲಿಗೆ ತಪ್ಪಾಗುತ್ತದೆ. ಅಲ್ಲಿಗೆ ಭರತ್ ಕುಮಾರನ ಪ್ರೇಮ ಬ್ರೇಕಪ್ಪಾಗುತ್ತದೆ. ಲವ್ವಲ್ಲಿ ಒಂದು ಬ್ರೇಕಪ್ ಬಳಿಕ ಪ್ಯಾಚಪ್ ಇದ್ದಿದ್ದೇ ಎಂದು ನೀವು ಅಂದುಕೊಂಡರೆ  ತಪ್ಪು! ಇಲ್ಲಿ ಮತ್ತೆ ಅವರನ್ನು ಒಂದಾಗಿಸುವಂಥ ವಿಚಾರವೇ ಬೇರೆ. ಆ ಕಾರಣ ಸಿನಿಮಾದ ಹೂರಣವೂ ಹೌದು.

ಚಿತ್ರದಲ್ಲಿ ನಾಯಕನ ನಿದ್ದೆ ಕಾಯಿಲೆ, ಲವ್ ಮತ್ತು ಫ್ಯಾಮಿಲಿ ಸೆಂಟಿಮೆಂಟ್, ಹೋರಾಟ, ಹೊಡೆದಾಟ ಹೀಗೆ ಎಲ್ಲ ಭಾವಗಳಿಗೂ ಅವಕಾಶ ಇದೆ. ಭರತ್ ಪಾತ್ರದಲ್ಲಿ ಪ್ರಜ್ವಲ್ ಈ ಹಿಂದೆಂದಿಗಿಂತಲೂ ವಿಭಿನ್ನವಾಗಿದ್ದಾರೆ. ರೋಗಿಯಾಗಿದರೂ ಪರ್ಫೆಕ್ಟ್ ಹೀರೋ! ಮಾಗಿರುವ ಕಂಠ, ಆಕರ್ಷಕ ಸಂಭಾಷಣೆ, ಶ್ರೇಷ್ಠತೆಯತ್ತ ಸಾಗಿರುವ ಭಾವ ಪ್ರಕಟಣೆ.. ಹೀಗೆ ಎಲ್ಲದರಲ್ಲಿಯೂ ಸರಿ ಹೋಗಿದ್ದಾರೆ!! ನಾಯಕಿಯಿಂದ ನಿರಾಕರಿಸಲ್ಪಡುವ ಸನ್ನಿವೇಶ ಮತ್ತು ಮಗುವಿನ ಸುಳಿವಿಗಾಗಿ ಅಲೆದಾಡಿ ಹುಚ್ಚನಂತೆ ಕಿರುಚುವ ದೃಶ್ಯಗಳಲ್ಲಿ ಪ್ರಜ್ವಲ್ ಅಭಿನಯ ಅಮೋಘ.  ನಿದ್ರಾರೋಗಿಯ ಕತೆ ಎಂದಾಕ್ಷಣ ತಮಿಳಿನ ವಿಶಾಲ್ ಚಿತ್ರದ ರಿಮೇಕ್ ಎಂದುಕೊಂಡವರಿಗೆ ಚಿತ್ರ ಅದಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಸಾರಿ ಹೇಳಿದೆ. ನಾಯಕನ ನಿದ್ದೆಯ ಜತೆಗೆ ಆತ ಮಹಿಳಾ ದೌರ್ಜನ್ಯದ ವಿರುದ್ಧದ ಹೋರಾಡುತ್ತಾನೆ ಎನ್ನುವುದಷ್ಟೇ ಅದರೊಂದೊಗಿನ  ಹೋಲಿಕೆ ಎನ್ನಬಹುದು. ಮಹಿಳೆಯರ ಅಪಹರಣದ ಕತೆ ಈ ಹಿಂದೆ ತಮಿಳಿನ `ರಾಕ್ಷಸನ್' ಮತ್ತು ಕಳೆದವಾರ ತೆರೆಕಂಡ ತೆಲುಗು ಚಿತ್ರ `ಅಶ್ವಥ್ಥಾಮ' ಚಿತ್ರದಲ್ಲಿಯೂ ಇತ್ತು. ಆದರೆ ಅವುಗಳಿಗಿಂತ ಇಲ್ಲಿನ ಉದ್ದೇಶವೇ ವಿಭಿನ್ನ ಮತ್ತು ಆಸಕ್ತಿದಾಯಕ. ತೀರ ಹೊಸತು ಕೂಡ. ಕೂದಲು ಗಾತ್ರದ ಸುಳಿವು ಕೂಡ ನೀಡದಂತೆ, ಸಸ್ಪೆನ್ಸ್ ಕತೆಯೊಳಗೆ ಕತೆ ಸೇರಿಸಿ ನಾಜೂಕಾಗಿ ಜಡೆ ಹೆಣೆದಿದ್ದಾರೆ ನಿರ್ದೇಶಕ ಜಡೇಶ್ ಕುಮಾರ್. ಮಾಸ್ತಿಯವರ ಸಂಭಾಷಣೆ ಎಂದಿನಂತೆ ಆಕರ್ಷಕ. ಮಾತುಗಳಿಗೆ ಸಂತೋಷ್ ಕೂಡ ಕೈ ಜೋಡಿಸಿದ್ದಾರೆ. ಅಜನೀಶ್ ಲೋಕನಾಥ್ ರಾಗ ಸಂಯೋಜನೆಯ ಹಾಡುಗಳು ಚಿತ್ರದ ಮತ್ತೊಂದು ಹೈಲೈಟ್. ಮೌನದಲ್ಲಿಯೂ ಭಾವಮೀಟುವ, ವಾದ್ಯದೊಂದಿಗೆ ಎಲ್ಲೆದಾಟುವ ಹಿನ್ನೆಲೆ ಸಂಗೀತ.

ಶ್ವೇತಾ ಚೆಂಗಪ್ಪ ಲಿಟಲ್ ಪ್ರಿನ್ಸ್ ಹೀಗಿದ್ದಾನೆ?

ಕಥಾನಾಯಕ ಭರತ್ ಕುಮಾರ್ ನ ಅಣ್ಣನಾಗಿ ಭರತ್ ಕಲ್ಯಾಣ್ ಅಭಿನಯಿಸಿದ್ದಾರೆ. ಅವರಿಗೆ ಜೋಡಿಯಾಗಿದ್ದಾರೆ,   ಕಿರುತೆರೆ ಖ್ಯಾತಿಯ ಆರತಿ ಕುಲಕರ್ಣಿ. ಕೆಲವೇ ದೃಶ್ಯಗಳಲ್ಲಿ ಬಂದು ಹೋದರೂ, ತಮ್ಮ ನಟನಾ ಸಾಮರ್ಥ್ಯ, ಭಾಷೆಯ ವೈವಿಧ್ಯತೆಯ ಮೂಲಕ ಪಾತ್ರವಾಗಿ ಅವರು ನೆನಪಲ್ಲಿ ಉಳಿಯುತ್ತಾರೆ. ಪುಟ್ಟ ಮಗು ಆರಾಧ್ಯ `ವರೂ' ಪಾತ್ರದಿಂದಲೇ ತನ್ನ ಹವಾ ಶುರು ಮಾಡಿದ್ದಾಳೆ. ನಾಯಕಿಯಾಗಿ ನಿಶ್ವಿಕಾ ನಾಯ್ಡು ರಮ್ಯಾರನ್ನು ನೆನಪಿಸುತ್ತಾರೆ. ಮುಂದೆ ಈಕೆ ಕೂಡ ತಾರೆಯಾಗಿ ಆಕೆ ಏರಿದ ಗಮ್ಯ ಸೇರಿದರೆ ಅಚ್ಚರಿ ಇಲ್ಲ! ಪೊಲೀಸ್ ಅಧಿಕಾರಿಯಾಗಿ ಸಂಚಾರಿ ವಿಜಯ್ ಅವರ ಆಗಮನ ಮತ್ತು ಅವರ ಪಾತ್ರಗಳಲ್ಲಿನ ಶೇಡ್‌ಗಳು ಚಿತ್ರಕ್ಕೆ ಮತ್ತೊಂದು ಆಯಾಮವನ್ನು ನೀಡಿದೆ. ಕುಲಭೂಷಣ್ ಎನ್ನುವ ವೈದ್ಯನ ಪಾತ್ರದಲ್ಲಿಅರವಿಂದ ರಾವ್ ಇದ್ದಾರೆ. ಆದರೆ ಹೆಣ್ಣುಕುಲಕ್ಕೇ ಪಾಷಾಣವಾಗುವ ಖಳನಾಗಿ ಅರ್ಜುನ್ ನಟಿಸಿದ್ದಾರೆ. ಕಿರುತೆರೆಯಿಂದ ಬಂದ ನಟನಾದರೂ ತಾನು ಯಾವ ಪರಭಾಷೆಯ ವಿಲನ್‌ಗೂ ಕಡಿಮೆ ಇಲ್ಲ ಎಂದು ಅವರು ಸಾಬೀತು ಮಾಡಿದ್ದಾರೆ. ಪ್ರಶಾಂತ್ ಸಿದ್ದಿ ಕೂಡ ಜಾನಿ ಪಾತ್ರದಲ್ಲಿ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ಅವಕಾಶ ಪಡೆದಿದ್ದಾರೆ. ಟ್ರಾಫಿಕ್ ಪೊಲೀಸ್ ಅಧಿಕಾರಿಯಾಗಿ ತಬಲಾ ನಾಣಿ ಮತ್ತು ಇತರ ಪಾತ್ರಗಳಲ್ಲಿ ರಘು ರಾಮನಕೊಪ್ಪ, ವಿಜಯ್ ಚೆಂಡೂರ್, ಹನುಮಂತೇಗೌಡ, ಅರುಣಾ ಬಾಲರಾಜ್, ರೇಖಾ ಕುಮಾರ್, ಅಮಿತ್ ಮೊದಲಾದವರು ಮನಸೆಳೆಯುತ್ತಾರೆ.  ಖಂಡಿತವಾಗಿ ಲೇಡೀಸ್ ಆಂಡ್ ಜಂಟಲ್‌ಮ್ಯಾನ್‌ಗಳು ಒಮ್ಮೆ ನೋಡಬಹುದಾದ ವಸ್ತು ಹೊಂದಿರುವಂಥ ಚಿತ್ರ ಇದು.

click me!