ತನ್ನೊಳಗಿನ ನಟನಾ ಶಕ್ತಿಯನ್ನು ತೋರುವ ನಿಟ್ಟಿನಲ್ಲಿ ಒಂದು ಒಳ್ಳೆಯ ಚಿತ್ರದ ಮೂಲಕ ಸಂಭಾಷಣೆಗಾರ ಕಮ್ ನಿರ್ದೇಶಕ ಮಂಜು ಮಾಂಡವ್ಯ ತೆರೆ ಮೇಲೆ ರಾರಾಜಿಸಿದ್ದಾರೆ. ಕತೆ ಮತ್ತು ಪಾತ್ರಗಳಿಗೆ ಗಮನ ಕೊಟ್ಟರೆ ಹೊಸ ಪ್ರಯತ್ನಗಳು ಸಾಧ್ಯವಾಗುತ್ತದೆ ಎಂಬುದನ್ನು ‘ಶ್ರೀ ಭರತ ಬಾಹುಬಲಿ’ ಚಿತ್ರದ ಮೂಲಕ ಸಾಬೀತು ಮಾಡಿದ್ದಾರೆ.
ಆರ್ ಕೇಶವಮೂರ್ತಿ
ಸಹಜ ನಟನೆ, ಅಷ್ಟೇ ಸಹಜ ಸಂಭಾಷಣೆ ಚಿತ್ರದ ಹೈಲೈಟ್. ಹೆತ್ತವರನ್ನು ಹುಡುಕುವ ನಾಯಕಿ, ಹಳ್ಳಿಯಲ್ಲಿ ಇಬ್ಬರು ಬೇಜವಾಬ್ದಾರಿಗಳು, ಸ್ಫೂರ್ತಿದಾಯಕವಾಗಿ ನಿಲ್ಲಬಲ್ಲ ಒಂದು ಐತಿಹಾಸಿಕ ಕತೆ, ಪ್ರೇಮ ಕತೆ, ಮಕ್ಕಳಿಂದ ದೂರವಾಗಿ ಅನಾಥ ಭಾವನೆಯಲ್ಲಿ ಬದುಕುತ್ತಿರುವ ಹೆತ್ತವರು... ಇವು ಚಿತ್ರದ ಪ್ರಧಾನ ಅಂಶಗಳು. ಭರತ ಮತ್ತು ಬಾಹುಬಲಿಯ ಕತೆಯನ್ನು ಚಿತ್ರಕ್ಕೆ ಪೂರಕವಾಗಿ ಬಳಸಿಕೊಂಡಿರುವ ನಿರ್ದೇಶಕರ ಜಾಣ್ಮೆ ಮೆಚ್ಚುವಂತಹುದು.
ಕಾರು, ಚಿನ್ನಾಭರಣ ಗೆಲ್ಲೋಕೆ ಅವಕಾಶ; ಮಿಸ್ ಮಾಡದೇ ಶ್ರೀ ಭರತ ಬಾಹುಬಲಿ ನೋಡಿ!
ನಾಯಕಿಗೆ ತನ್ನ ಕನಸಿನಲ್ಲೊಂದು ದುರ್ಘಟನೆ ಪದೇ ಪದೇ ಕಾಡುತ್ತಿದೆ. ಅದೇನು ಎನ್ನುವ ಕುತೂಹಲ ಮತ್ತು ಹುಡುಕಾಟ. ಆಕೆಯ ಕನಸಲ್ಲಿ ಬರುವುದನ್ನು ಹುಡುಕುತ್ತ ವಿದೇಶದಿಂದ ಕರ್ನಾಟಕಕ್ಕೆ ಬರುತ್ತಾಳೆ. ಇಲ್ಲಿ ಕೆಲಸ ಇಲ್ಲದೆ ಅಪಾಪೋಲಿಗಳಾಗಿ ತಿರುಗಾಡಿಕೊಂಡಿರುವ ನಾಯಕ ಮತ್ತು ಅವನ ಗೆಳೆಯನನ್ನು ಜೈಲಿನಿಂದ ಬಿಡಿಸುತ್ತಾನೆ. ತನ್ನ ಹುಡುಕಾಟಕ್ಕೆ ಜತೆಯಾಗುವಂತೆ ಕೇಳುತ್ತಾರೆ. ಅಲ್ಲಿಗೆ ಶ್ರೀ, ಭರತ ಹಾಗೂ ಬಾಹುಬಲಿ ಈ ಮೂವರು ಜತೆಯಾಗುತ್ತಾರೆ. ಇಲ್ಲಿ ಮೋಸದ ಗಾಳಿ ಸೋಕುತ್ತದೆ. ಇದು ಪ್ರೀತಿಗೂ ದಾರಿ ಮಾಡಿಕೊಡುತ್ತದೆ. ಆದರೆ, ನಾಯಕಿ ಹುಡುಕುತ್ತಿರುವುದು ಯಾರನ್ನ, ಅವರು ಸಿಗುತ್ತಾರೆಯೇ ಎನ್ನುವ ಭಾವುಕ ಪಯಣಕ್ಕೆ ನಿರೀಕ್ಷೆಯೇ ಮಾಡಿರದ ತಿರುವೊಂದು ದಕ್ಕುತ್ತದೆ. ಆ ತಿರುವಿನಲ್ಲಿ ಅಪ್ಪನಾಗಿ ಸೇತುರಾಮ್ ಎಂಟ್ರಿ ಕೊಡುತ್ತಾರೆ. ಈ ನಡುವೆ ಭರತ ಮತ್ತು ಬಾಹುಬಲಿ ನಡುವೆ ಪ್ರೀತಿಯ ಸ್ಪರ್ಧೆಯೂ ನಡೆಯುತ್ತದೆ. ಇನ್ನೇನು ನಾಯಕಿ ಪ್ರೀತಿ ನಾಯಕನದ್ದೇ ಎಂದುಕೊಳ್ಳುತ್ತಿರುವಾಗಲೇ ಅದು ಮತ್ತೊಂದು ಟ್ವಿಸ್ಟ್ ಕೊಟ್ಟು ಹೊಸ ರೀತಿಯಲ್ಲಿ ಮುಕ್ತಾಯ ಹಾಡುತ್ತಾರೆ ನಿರ್ದೇಶಕರು. ಇಂಟರ್‌ಕಟ್ ಹಾಗೂ ಫ್ಲ್ಯಾಷ್‌ಬ್ಯಾಕ್ ದೃಶ್ಯಗಳ ನಿರೂಪಣೆಯಲ್ಲಿ ಕೊಂಚ ಗೊಂದಲ ಕಾಣುವ ಹೊರತಾಗಿ, ‘ಶ್ರೀ ಭರತ ಬಾಹುಬಲಿ’ಯದ್ದು ಹೊಸ ಪ್ರಯತ್ನ ಎನ್ನಬಹುದು.
90 ಲಕ್ಷ ವೆಚ್ಚದ ಯುದ್ಧ; 'ಶ್ರೀ ಭರತ ಬಾಹುಬಲಿ'ಯಾಗಿ ಚರಣ್ ರಾಜ್ ಪುತ್ರ!
ಮಂಜು ಮಾಂಡವ್ಯ ಅವರು ಸಂಭಾಷಣೆಕಾರರಾಗಿ ಗೆದ್ದಿರುವ ವ್ಯಕ್ತಿ. ‘ಮಾಸ್ಟರ್‌ಪೀಸ್’ನಲ್ಲೂ ನಿರ್ದೇಶನದ ಪ್ರತಿಭೆ ಪ್ರದರ್ಶಿಸಿದವರು. ಈಗ ನಾಯಕನಾಗಿ ಡ್ಯಾನ್ಸ್, ಮಾಸ್ ಲುಕ್‌ಗಳಿಂದ ಮೊದಲು ಆಕರ್ಷಿಸುತ್ತಾರೆ. ಚಿಕ್ಕಣ್ಣ ನಗಿಸಿದರೆ, ಸಾರಾ ಹರೀಶ್ ಹಾಗೂ ಶ್ರೇಯಾ ಶೆಟ್ಟಿಮೊದಲ ಪ್ರಯತ್ನದಲ್ಲಿ ಗಮನ ಸೆಳೆಯುತ್ತಾರೆ. ಹರೀಶ್ ರಾಯ್ ಅವರು ವಿಭಿನ್ನವಾದ ಪಾತ್ರದಲ್ಲಿ ಬಂದು ಹೋಗುತ್ತಾರೆ. ಸೆಂಟಿಮೆಂಟ್ ಹಾಗೂ ಪ್ರೀತಿ ಮತ್ತು ತ್ಯಾಗ ಚಿತ್ರದ ಹೈಲೈಟ್ ಆಗಿ ನಿಲ್ಲುತ್ತದೆ. ಚರಣ್ ರಾಜ್ ಪುತ್ರ ತೇಜ್ ಚರಣ್ ಅವರು ಪುಟ್ಟಪಾತ್ರದಲ್ಲೇ ಹೀರೋ ಆಗುವ ಭರವಸೆ ಕೊಟ್ಟಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತದ ಹಾಡುಗಳು ಚೆನ್ನಾಗಿವೆ.