ಚಿತ್ರ ವಿಮರ್ಶೆ: ಕನ್ನಡ್‌ ಗೊತ್ತಿಲ್ಲ

By Web DeskFirst Published Nov 23, 2019, 3:39 PM IST
Highlights

ಒಂದು ಆತ್ಮಹತ್ಯೆಯಿಂದ ಸಿನಿಮಾ ಶುರುವಾಗುತ್ತದೆ. ಆತ್ಮಹತ್ಯೆ ಮಾಡಿಕೊಂಡಿದ್ದು ಯಾರು, ಯಾಕೆ ಅಂತ ಗೊತ್ತಾಗುವುದು ಮಾತ್ರ ಕೊನೆಗೆ. ಅಷ್ಟರ ಮಟ್ಟಿಗೆ ಕುತೂಹಲಭರಿತ ಸಿನಿಮಾ ಇದು. ಭಾಷೆ ಮೇಲಿನ ಪ್ರೇಮವೇ ನಿರ್ದೇಶಕರ ಆಸ್ತಿ ಮತ್ತು ಶಕ್ತಿ. ಹಾಗಾಗಿ ಕನ್ನಡ ಭಾಷೆಯ ಇತಿಹಾಸ ಮತ್ತು ಹಿರಿಮೆ ಎರಡನ್ನೂ ಮೊದಲೊಂಚೂರು ಚೂರು ಹೇಳಿಬಿಡುತ್ತಾರೆ. ಅಲ್ಲಿಗೆ ಸಿನಿಮಾ ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ ಎಂಬುದನ್ನು ಸೂಚ್ಯವಾಗಿ ಹೇಳಬಹುದು ಎಂದು ಹೊಳೆಯುತ್ತದೆ. 

ರಾಜೇಶ್‌ ಶೆಟ್ಟಿ

ಅಲ್ಲೇ ಇರುವುದು ತಿರುವು. ನಿರ್ದೇಶಕರು ಜಾಣತನ ಮೆರೆಯುತ್ತಾರೆ. ತಮಗೆ ಹೇಳಬೇಕಾದ್ದನ್ನು ಹೇಳುವುದಕ್ಕಾಗಿ ಒಂದು ಥ್ರಿಲ್ಲರ್‌ ಎಳೆ ತರುತ್ತಾರೆ. ಕನ್ನಡವನ್ನು ಹೀಯಾಳಿಸುವ ಮಂದಿ ಇದ್ದಕ್ಕಿದ್ದಂತೆ ಕಾಣೆಯಾಗತೊಡಗುತ್ತಾರೆ. ಒಂದೆರಡು ಶವವೂ ಬೀಳುತ್ತದೆ. ಆಗ ಖಡಕ್‌ ಪೊಲೀಸ್‌ ಅಧಿಕಾರಿ ಹರಿಪ್ರಿಯಾ ಪ್ರವೇಶ.

ಅವರು ವಿಶೇಷ ಪೊಲೀಸ್‌ ಅಧಿಕಾರಿ. ಹಾಗಾಗಿ ಅವರಿಗೆ ಪೊಲೀಸ್‌ ಸಮವಸ್ತ್ರ ಧರಿಸುವ ಅಗತ್ಯ ಬೀಳುವುದಿಲ್ಲ. ಮಾಲಾಶ್ರೀ, ವಿಜಯಶಾಂತಿ ಥರ ಇವರೂ ಅಗತ್ಯ ಬಿದ್ರೆ ರೌದ್ರಾವತಾರ ತೋರಿಸುತ್ತಾರೆ ಎಂಬುದನ್ನು ಮೊದಲ ದೃಶ್ಯದಲ್ಲೇ ಹೇಳಲಾಗುತ್ತದೆ. ಆದರೆ ಹಾರಿ ಎಗರಿ ಬೀಳುವಂತಹ ಸಾಹಸ ಇಲ್ಲಿಲ್ಲ. ಆದರೆ ನಟನೆಗೆ ಮತ್ತು ಬುದ್ಧಿಮತ್ತೆಗೆ ಕೆಲಸ ಉಂಟು. ಅದನ್ನು ಹರಿಪ್ರಿಯಾ ಅಚ್ಚುಕಟ್ಟಾಗಿ ಮಾಡಿದ್ದಾರೆ. ಅವರಿಗೆ ಮಯೂರ್‌, ಪವನ್‌ ನೆರವಾಗುತ್ತಾರೆ. ಮಯೂರ್‌ ನಿರ್ದೇಶನದಲ್ಲೂ ಭರವಸೆ ಮೂಡಿಸುತ್ತಾರೆ.

ಚಿತ್ರ ವಿಮರ್ಶೆ: ಮನರೂಪ

ಕನ್ನಡ್‌ ಗೊತ್ತಿಲ್ಲ ಅನ್ನುವ ಪದ ಮಾಯವಾಗಿ ಕನ್ನಡ ಗೊತ್ತಿದೆ ಎಂಬುದಷ್ಟೇ ಕೇಳಬೇಕು ಅನ್ನುವ ಆಸೆ, ಆಶಯ ಎಲ್ಲರಲ್ಲೂ ಉಂಟು. ಇಲ್ಲೂ ಇದೆ. ಆ ಆಶಯ ನೆರವೇರುವುದಕ್ಕಾಗಿ ಸ್ವಲ್ಪ ದಂಡಂ ದಶಗುಣಂ ಬೇಕು ಅಂತ ಒಂದು ಹಂತದಲ್ಲಿ ಹೇಳಿದರೂ ಆಮೇಲೆ ಹೊಡೆದಾಟ ಬಡಿದಾಟ ಏನೂ ಬೇಡ, ಕನ್ನಡವನ್ನು ಯಾರೂ ಸೋಲಿಸೋಕಾಗಲ್ಲ ಎಂಬ ಮಾತುಗಳನ್ನು ಹೇಳಲಾಗುತ್ತದೆ. ಅದೂ ಇರಲಿ, ಇದೂ ಬೇಕು ಎಂಬ ಗೊಂದಲ ನೋಡುಗರಲ್ಲಿ ಹುಟ್ಟಬಹುದು. ಆದ್ರೆ ಪಾತ್ರಗಳಲ್ಲಿ ಇಲ್ಲ, ನಿರ್ದೇಶಕರಲ್ಲೂ ಇಲ್ಲ. ಒಟ್ಟಾರೆ ಕನ್ನಡಕ್ಕೆ ಒಳ್ಳೆಯದಾಗಬೇಕಷ್ಟೇ. ಅದಕ್ಕೆ ತಕ್ಕಂತೆ ಕತೆ, ಚಿತ್ರಕತೆ, ಒಂದು ಹಾಡು ಹೆಣೆಯಲಾಗಿದೆ. ಉದ್ದೇಶ ಒಳ್ಳೆಯದೇ. ಹಾಗಾಗಿ ಕೆಟ್ಟದ್ದು ಹುಡುಕುವಂತಿಲ್ಲ.

ಇದೊಂಥರಾ ಕನ್ನಡಪರ ಹೋರಾಟದ ಸಿನಿಮಾ ಆವೃತ್ತಿ. ಒಳ್ಳೆಯ ರೀತಿಯಲ್ಲಿ ಮನಸ್ಸು ಮುಟ್ಟುವಂತೆ ಕನ್ನಡ ಪ್ರೇಮವನ್ನು ಸಾರಿದ್ದಾರೆ. ಈ ಪ್ರಯತ್ನ ಆಗಾಗ ನಡೆಯುವ ಕನ್ನಡಪರ ಮುಷ್ಕರದಂತೆ ಯಶಸ್ವಿಯಾಗಿದೆ.

click me!