ಮೈ ನವಿರೇಳಿಸುವ ಸಾಹಸ, ಅದ್ಭುತ ಸಿನಿಮಾಟೋಗ್ರಫಿ, ಹಿನ್ನೆಲೆ ಸಿಂಗೀತ, ಅನೂಹ್ಯ ತಿರುವುಗಳು.. ಲಾಕ್‌ಡೌನ್ ಬಳಿಕ ಥಿಯೇಟರ್‌ಗೆ ಫಸ್ಟ್ ಎಂಟ್ರಿ ಕೊಟ್ಟಸಿನಿಮಾ ‘ಕಲಿವೀರ’ ಈ ಎಲ್ಲ ಕಾರಣಕ್ಕೆ ಮಾಸ್‌ಗೆ ಹತ್ತಿರವಾಗುವ ಗುಣ ಹೊಂದಿದೆ.
ಸಿಟಿಗೆ ಬಂದ ಅತಿಮಾನುಷ ಶಕ್ತಿಯ ಕಾಡಿನ ಹುಡುಗ ಕಲಿವೀರ ಎಲ್ಲಾ ಕುತೂಹಲಗಳ ಕೇಂದ್ರಬಿಂದು. ಆತನ ವೇಷ, ಮ್ಯಾನರಿಸಂ, ಮೌನ, ಸಾಹಸ ಎಲ್ಲವೂ ನಿಗೂಢ. ಈ ಕಲಿಯ ಹಿಂದೆ ಬೀಳುವ ಇನ್ಸ್‌ಪೆಕ್ಟರ್ ಮುನಿ, ಡ್ಯಾನಿಯ ರೌಡಿ ಪಡೆ.. ಇವರಿಂದ ಆತನನ್ನು ಬಚಾವ್ ಮಾಡುವ ಲಾಯರ್ ಪಾವನ, ಕುಡುಕ ತಬಲಾ ನಾಣಿ, ಇದರ ನಡುವೆ ಕಲಿವೀರನ ರಿಯಲ್ ಫೈಟ್‌ನ ರೋಚಕತೆ, ಅದ್ಭುತ ಕ್ಯಾಮರಾ ವರ್ಕ್ ಫಸ್ಟ್‌ಹಾಫ್‌ನಲ್ಲಿ ಆಕಳಿಸಲು ಬಿಡುವುದಿಲ್ಲ. ಸೆಕೆಂಡ್ ಹಾಫ್‌ನಲ್ಲಿ ಈತನ ಸಿಟಿ ಎಂಟ್ರಿಯ ಕಾರಣ ತಿಳಿಯುತ್ತದೆ.
ರೋಚಕ ಫೈಟ್‌ನೊಳಗೆ ಅಸ್ತವ್ಯಸ್ತವಾದ ಕತೆಯ ಹೆಣಿಗೆ ಇದೆ. ಮಂತ್ರವಾದ, ಪ್ರೇತ, ಜೊತೆಗೆ ನೂರಾರು ವರ್ಷಗಳ ಹಿಂದಿನ ಹಿಸ್ಟರಿಯನ್ನು ಕತೆಗೆ ಲಿಂಕ್ ಮಾಡುವ ಪ್ರಯತ್ನ ಗಲಿಬಿಲಿ ಉಂಟುಮಾಡುತ್ತೆ. ಮಹಮ್ಮದ್ ಘಜ್ನಿಯ ಭಾರತ ದಾಳಿಯನ್ನು ಎಳೆದು ತಂದು ಕತೆಗೆ ಜೋಡಿಸಲಾಗಿದೆ. ಈ ನಡುವೆ ಕಥೆಯ ಮುಖ್ಯ ಎಳೆ ಕಾಡು ಜನರ ಬದುಕು, ಅವರ ನಂಬಿಕೆಗಳು, ಅವರಿಗಾದ ಅನ್ಯಾಯ ಪರಿಣಾಮಕಾರಿ ಅನಿಸೋದಿಲ್ಲ. ಮತ್ತೊಂದು ಕಡೆ ಚಿತ್ರವನ್ನು ಅತಿ ರೋಚಕಗೊಳಿಸುವುದೂ ಹೇಗೆ ಒಂದು ಮಿತಿ ಅನ್ನುವುದಕ್ಕೂ ಈ ಸಿನಿಮಾ ಪಾಠದಂತಿದೆ.
ಥಿಯೇಟರ್ ತೆರೆದ ಮೇಲೆ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾ 'ಕಲಿವೀರ'ತಾರಾಗಣ: ಅಭಿಮನ್ಯು, ಪಾವನಾ ಗೌಡ, ಚಿತ್ರಶ್ರೀ ಅಂಚನ್, ತಬಲಾ ನಾಣಿ, ಮುನಿ
ನಿರ್ದೇಶನ: ಅವಿ ರಾಮ್
ಛಾಯಾಗ್ರಹಣ: ಎಸ್ ಹಾಲೇಶ್
ಸಂಗೀತ: ವಿ ಮನೋಹರ್
ರೇಟಿಂಗ್: 3
ಇಷ್ಟಾದರೂ ಸಿನಿಮಾ ಮನರಂಜನೆಗೆ ಮೋಸ ಮಾಡುವುದಿಲ್ಲ. ಸಿನಿಮಾಟೋಗ್ರಫಿ ಸಾಹಸಕ್ಕೆ ಪೂರಕವಾಗಿ ಬಂದು ಅನುಭವವನ್ನು ದಟ್ಟವಾಗಿಸುತ್ತದೆ. ಆದರೆ ಹಾಡುಗಳಲ್ಲೂ ಕಲಿವೀರನ ಸಾಹಸ ಪಟ್ಟುಗಳು ಕಾಣಿಸಿಕೊಂಡು ಕಣ್ಣು ರಿಲ್ಯಾಕ್ಸೇಶನ್‌ಗಾಗಿ ಅತ್ತಿತ್ತ ಹೊರಳುತ್ತದೆ. ಕೆಲವು ಹಾಡುಗಳು ಹತ್ತಿಪ್ಪತ್ತು ವರ್ಷ ಹಿಂದೆ ಬಂದಿದ್ದರೆ ಚೆನ್ನಾಗಿತ್ತು ಅನಿಸುತ್ತದೆ. ಪಾವನ ಗೌಡ ಮಾಡಿದ ಪಾತ್ರ, ಅದರ ಟ್ವಿಸ್ಟ್‌ಗಳು ಇಂಟರೆಸ್ಟಿಂಗ್. ಕಲಿವೀರ ಪಾತ್ರಧಾರಿ ಅಭಿಮನ್ಯು ಈ ಪಾತ್ರಕ್ಕಾಗಿ 100 ಪರ್ಸೆಂಟ್ ಎಫರ್ಟ್ ಹಾಕಿರೋದು ಗೊತ್ತಾಗುತ್ತೆ. ಪಾವನಾ ಗೌಡ, ಮುನಿ, ತಬಲಾ ನಾಣಿ ಮೊದಲಾದವರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಭರಪೂರ ಮನರಂಜನೆಯ ಉದ್ದೇಶದಿಂದ ಥಿಯೇಟರ್‌ಗೆ ಹೋಗೋದಾದ್ರೆ ಖಂಡಿತಾ ಕಲಿವೀರ ಕೊಟ್ಟದುಡ್ಡಿಗೆ ಮೋಸ ಮಾಡಲ್ಲ.