
ಚಿತ್ರರಂಗದಲ್ಲಿ ಪ್ರೇಮಕಥೆಗಳಿಗೆಂದೂ ಕೊರತೆಯಿಲ್ಲ. ಆದರೆ, ಕೆಲವು ಸಿನಿಮಾಗಳು ಅತಿರಂಜಿತ ನಾಟಕೀಯತೆಯಿಲ್ಲದೆ, ಅತ್ಯಂತ ಸರಳವಾಗಿ ಮನಸ್ಸಿನಾಳಕ್ಕೆ ಇಳಿದುಬಿಡುತ್ತವೆ. ಅಂತಹದ್ದೇ ಒಂದು ಅಪರೂಪದ ಹಾಗೂ ಪ್ರಶಾಂತ ಪ್ರೇಮಕಾವ್ಯ 'ಬೆತ್ಲೆಹೇಮ್ ಕುಟುಂಬ ಯೂನಿಟ್' (Bethlehem Kudumba Unit). ಮೊದಲೇ ಸ್ಪಷ್ಟಪಡಿಸಬೇಕೆಂದರೆ, ಇದು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ 'ವಯಸ್ಸಿನ ಅಂತರದ' (Age Gap) ಕಥೆಯಲ್ಲ; ಬದಲಾಗಿ ಸರಿಯಾದ ಮತ್ತು ಪವಿತ್ರವಾದ ಪ್ರೀತಿಯನ್ನು ಕಂಡುಕೊಳ್ಳುವ ಇಬ್ಬರು ಮನಸ್ಸುಗಳ ಸುಂದರ ಪಯಣ.
ಸಿನಿಮಾದ ಕಥಾಹಂದರವನ್ನು ಮೇಲ್ನೋಟಕ್ಕೆ ನೋಡಿದರೆ ಇದು ತೀರಾ ಸರಳವಾದ ಪ್ರೇಮಕಥೆಯಂತೆ ಕಾಣುತ್ತದೆ. ಒಬ್ಬ ಹುಡುಗಿ ಹೊಸ ನಗರಕ್ಕೆ ಬರುತ್ತಾಳೆ, ನೆರೆಮನೆಯಲ್ಲಿರುವ ವ್ಯಕ್ತಿಯನ್ನು ನೋಡುತ್ತಾಳೆ. ಅವಳಿಗೆ ಅವನು ಇಷ್ಟವಾಗುತ್ತಾನೆ, ಅವನಿಗೆ ಅವಳು ಇಷ್ಟವಾಗುತ್ತಾಳೆ. ದೈನಂದಿನ ಸಂಭಾಷಣೆ, ಸಣ್ಣಪುಟ್ಟ ಕ್ಷಣಗಳ ನಡುವೆ ಇಬ್ಬರ ನಡುವೆ ಪ್ರೀತಿ ಚಿಗುರುತ್ತದೆ. ಇಲ್ಲಿ ಯಾವುದೇ ಅತಿರಂಜಿತ ಘಟನೆಗಳಿಲ್ಲ, ತೀರಾ ಸಾಧಾರಣ ಎನಿಸುವ ಈ ಸರಳತೆಯೇ ಸಿನಿಮಾದ ಜೀವಾಳ.
ಕಥೆಯಲ್ಲಿ ಪ್ರೀತಿ ಚಿಗುರುತ್ತಿದ್ದಂತೆಯೇ ವಾಸ್ತವದ ಎಂಟ್ರಿಯಾಗುತ್ತದೆ. ಹುಡುಗಿಯ ಮನೆಯವರಿಗೆ ಈ ವಿಷಯ ತಿಳಿದು, ಪ್ರಶ್ನೆಗಳ ಸುರಿಮಳೆಯಾಗಿ, ಮನೆಯಲ್ಲಿ ಗಲಾಟೆಯಾಗುತ್ತದೆ. ಆದರೆ ಜಸ್ಟಿನ್ (Justin), ಆಕೆಯ ಜೀವನ ತನ್ನಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಈಡಾಗಬಾರದು ಎಂಬ ಉದ್ದೇಶದಿಂದ ಆಕೆಯಿಂದ ದೂರ ಸರಿಯುತ್ತಾನೆ.
ಹುಡುಗಿ ಬೇರೆ ದೇಶಕ್ಕೆ ತೆರಳುತ್ತಾಳೆ, ಬೇರೆಯದೇ ಜೀವನ ಆರಂಭವಾಗುತ್ತದೆ, ಕಾಲ ಉರುಳುತ್ತದೆ. ಆದರೆ, ದೂರವಾದ ತಕ್ಷಣ ಕೆಲವು ಆಳವಾದ ಭಾವನೆಗಳು ಎಂದಿಗೂ ಮಾಯವಾಗುವುದಿಲ್ಲ. ವರ್ಷಗಳ ನಂತರ ಆಕೆ ಮರಳಿ ಬಂದಾಗ, ಅವನನ್ನು ಕಂಡ ತಕ್ಷಣ ಆಕೆಗೆ ತನ್ನ ಭಾವನೆಗಳ ಅರಿವಾಗುತ್ತದೆ. ಕೊನೆಗೆ ಇಬ್ಬರೂ ಮತ್ತೆ ಒಂದಾಗುತ್ತಾರೆ, ಈ ಬಾರಿ ಅವರ ಸುತ್ತಮುತ್ತಲಿನ ಜನರಿಗೂ ಹೇಳಲು ಏನೂ ಇರುವುದಿಲ್ಲ. ಕಥೆ ಇಷ್ಟೇ ಆದರೂ, ಈ ಸರಳತೆಯ ಒಳಗೆ ಬೃಹತ್ ಭಾವನಾತ್ಮಕ ಜಗತ್ತೇ ಅಡಗಿದೆ!
ಪ್ರಮುಖ ಪಾತ್ರಧಾರಿಗಳಾದ ಆಶ್ಲಿ (Ashley) ಮತ್ತು ಜಸ್ಟಿನ್ ನಡುವೆ 12 ರಿಂದ 13 ವರ್ಷಗಳ ವಯಸ್ಸಿನ ಅಂತರವಿದೆ. ಹಾಗಿದ್ದರೂ ಆಶ್ಲಿ, ಜಸ್ಟಿನ್‌ಗೆ ಮನಸೋಲೋದು ಏಕೆ ಅನ್ನೋದಕ್ಕೂ ಕಾರಣವಿದೆ.ಆತನ ಸಾಮೀಪ್ಯದಲ್ಲಿ ಆಕೆಗೆ ಜೀವನಕ್ಕೆ ಅತ್ಯಗತ್ಯವಾದ ಸಂಗತಿಗಳು ಸಿಗುತ್ತವೆ. ಜಸ್ಟೀನ್‌ನಲ್ಲಿ ಆಕೆ, ಸಮಾಧಾನ, ಸುರಕ್ಷತೆ, ಮೆಚ್ಚುಗೆ,ಪ್ರಾಮುಖ್ಯತೆ ಮತ್ತು ಆದ್ಯತೆ ಎಲ್ಲವೂ ಆಕೆಗೆ ಅಲ್ಲಿ ಸಿಗುತ್ತೆ.
ಜಸ್ಟಿನ್ ಇಡೀ ಸಿನಿಮಾದ ಎಲ್ಲೂ ಆಕೆಗೆ "ನೀನು ನನಗೆ ಮುಖ್ಯ" ಎಂದು ಬಾಯಲ್ಲಿ ಹೇಳುವುದಿಲ್ಲ, ಬದಲಾಗಿ ತನ್ನ ನಡವಳಿಕೆಯ ಮೂಲಕ ಆಕೆಗೆ ಅದನ್ನು ಅನುಭವಿಸುವಂತೆ ಮಾಡುತ್ತಾನೆ. ಆಕೆಯ ಆಸಕ್ತಿಗಳನ್ನು ಮೆಚ್ಚುತ್ತಾನೆ, ಆಕೆಗೆ ಮುಖ್ಯವೆನಿಸುವ ವಿಷಯಗಳಿಗಾಗಿ ಕಷ್ಟಪಡುತ್ತಾನೆ. ಆಶ್ಲಿ ಇಷ್ಟಪಡುವ ಮತ್ತು ಮಿಸ್ ಮಾಡಿಕೊಳ್ಳುವ ಪ್ರತಿಯೊಂದು ಸಣ್ಣ ಸಂಗತಿಯನ್ನೂ ಗಮನಿಸುವ ಜಸ್ಟಿನ್, "ನಾನು ನಿನ್ನ ಮಾತನ್ನು ಆಲಿಸಿದ್ದೇನೆ" ಎಂಬ ಭಾವನೆ ಮೂಡಿಸುತ್ತಾನೆ. ಇಬ್ಬರನ್ನೂ ನೋಡುತ್ತಿದ್ದಂತೆ ಅವರ ನಡುವಿನ ವಯಸ್ಸಿನ ಅಂತರ ಮಾಯವಾಗಿ, ಅವರ ನಡುವಿನ ಭಾವನಾತ್ಮಕ ಬಂಧ ಮಾತ್ರ ಕಣ್ಣಿಗೆ ಕಟ್ಟುತ್ತದೆ.
ಈ ಸಿನಿಮಾದಲ್ಲಿ ಜಸ್ಟಿನ್ ಪರಿಪೂರ್ಣ ವ್ಯಕ್ತಿಯೇನೂ ಅಲ್ಲ (Not Perfect). ಆತನಿಂದಲೂ ತಪ್ಪುಗಳಾಗುತ್ತವೆ, ಆತ ಆಕೆಗೆ ಬೇಸರ ತರಿಸುತ್ತಾನೆ. ಆದರೆ, ಆತ ತನ್ನ ಅಹಂ ಕಾಯ್ದುಕೊಳ್ಳಲು ಸಮಯ ವ್ಯರ್ಥ ಮಾಡುವುದಿಲ್ಲ. ಆತ ಆಕೆಯ ಮಾತನ್ನು ಆಲಿಸುತ್ತಾನೆ, ಅರ್ಥೈಸಿಕೊಳ್ಳುತ್ತಾನೆ ಮತ್ತು ತನ್ನನ್ನು ತಾನು ತಿದ್ದುಕೊಳ್ಳಲು ಪ್ರಯತ್ನಿಸುತ್ತಾನೆ. ಏಕೆಂದರೆ, ಪ್ರೀತಿ ಎಂದರೆ ಕೇವಲ ತಪ್ಪುಗಳನ್ನು ಮಾಡದಿರುವುದಲ್ಲ, ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದು ಕೂಡ ಹೌದು.
ಇನ್ನೊಂದೆಡೆ, ಆಶ್ಲಿ ಕೇವಲ ತನ್ನೆದುರು ನಿಂತಿರುವ ಇಂದಿನ ಜಸ್ಟಿನ್‌ನನ್ನು ಮಾತ್ರ ಪ್ರೀತಿಸುವುದಿಲ್ಲ. ಆತನ ಗತಕಾಲ, ಆತನ ಕಳೆದುಕೊಂಡ ಕ್ಷಣಗಳು, ನೆನಪುಗಳು ಹಾಗೂ ಹಳೇ ಇತಿಹಾಸವನ್ನೂ ಸಂಪೂರ್ಣವಾಗಿ ಸ್ವೀಕರಿಸುತ್ತಾಳೆ. ಆತನ ಹಿಸ್ಟರಿ ತನಗೆ ಸ್ಪರ್ಧೆಯಲ್ಲ, ಅದು ಆತನ ಜೀವನದ ಒಂದು ಭಾಗ ಅಷ್ಟೇ ಎಂಬುದನ್ನು ಆಕೆ ಅರ್ಥೈಸಿಕೊಳ್ಳುತ್ತಾಳೆ. ಒಬ್ಬ ವ್ಯಕ್ತಿಯನ್ನು ಪ್ರೀತಿಸುವುದೆಂದರೆ ಕೇವಲ ಅವರಲ್ಲಿರುವ ಸುಂದರ ವಿಷಯಗಳನ್ನು ಪ್ರೀತಿಸುವುದಲ್ಲ, ಬದಲಾಗಿ ಅವರ ನೋವು, ನೆನಪುಗಳು ಮತ್ತು ಅವರು ಹೊತ್ತು ತಂದಿರುವ ಜೀವನದ ಹಳೆಯ ಭಾಗಗಳನ್ನು ಗೌರವಿಸುವುದು ಎಂಬ ಸತ್ಯ ಇಲ್ಲಿದೆ.
ಕೆಲವು ಪ್ರೇಮಕಥೆಗಳು ಸುತ್ತಲಿನ ಪ್ರಪಂಚದ ನಾಟಕೀಯತೆಯಿಂದಾಗಿ ಹೈಲೈಟ್ ಆಗುತ್ತವೆ. ಆದರೆ 'ಬೆತ್ಲೆಹೇಮ್ ಕುಟುಂಬ ಯೂನಿಟ್' ಚಿತ್ರವು ತನ್ನ ಪ್ರಶಾಂತ ಪ್ರೀತಿಯಿಂದಲೇ ವಿಶೇಷವೆನಿಸುತ್ತದೆ. ಎರಡೆರಡು ಕಷ್ಟಕರ ಜೀವನಗಳ ನಡುವೆ ಮೂಡುವ ಸರಳ ನಿರ್ಧಾರ: "ನಾನು ಈಗಲೂ ನಿನ್ನನ್ನೇ ಆಯ್ಕೆ ಮಾಡುತ್ತೇನೆ" (I still choose you) ಎಂಬುದು ಹೃದಯ ಸ್ಪರ್ಶಿ.
ಚಿತ್ರದ ಇಂಟರ್‌ವಲ್ ವೇಳೆಗೆ ಪ್ರೇಕ್ಷಕರ ಮುಖದಲ್ಲಿ ಸಣ್ಣದೊಂದು ಮಂದಹಾಸ ಮೂಡಿದರೆ, ಸಿನಿಮಾ ಮುಗಿಯುವ ಹೊತ್ತಿಗೆ ಒಳಗೊಳಗೇ ಒಂದು ರೀತಿಯ ಬೆಚ್ಚಗಿನ ಅನುಭೂತಿ ಆವರಿಸುತ್ತದೆ. ಇದು ಯಾವುದೇ ಅತಿರಂಜಿತ ಘಟನೆಯಿಂದಾಗ ಅಲ್ಲ, ಬದಲಾಗಿ ಅತ್ಯಂತ ನೈಜವಾದ ಮಾನವೀಯ ಭಾವನೆಗಳಿಂದ ಮೂಡಿದ ಅನುಭವ!
ಈ ಸಿನಿಮಾವನ್ನು ನೀವು ಮೊದಲು ಒಬ್ಬರೇ ಕುಳಿತು ನೋಡಬಹುದು. ನಂತರ ಕುಟುಂಬದ ಜೊತೆ, ಸ್ನೇಹಿತರ ಜೊತೆ ಅಥವಾ ನೀವು ಪ್ರೀತಿಸುವವರ ಜೊತೆ ನೋಡಬೇಕೆನಿಸುತ್ತದೆ. ಅದಾದ ನಂತರ, ಇನ್ನೊಮ್ಮೆ ಒಬ್ಬರೇ ಕುಳಿತು ನೋಡಲು ಮನಸ್ಸಾಗುತ್ತದೆ. ಏಕೆಂದರೆ ಕೆಲವು ಸಿನಿಮಾಗಳು ಕೇವಲ ಮನರಂಜನೆ ನೀಡುವುದಿಲ್ಲ, ಅವು ಒಬ್ಬ ಒಳ್ಳೆಯ ಸ್ನೇಹಿತನಂತೆ ನಮಗೆ ಜೊತೆಯಾಗುತ್ತವೆ.
ಚಿತ್ರದಲ್ಲಿ ಬರುವ 'ರೂಮ್ ನಂಬರ್ 17' (Room No. 17) ಮತ್ತು 'ಎಂಪಿ3 ಕಿಂಗ್' (MP3 King) ಪ್ರಸಂಗಗಳು ಅತ್ಯಂತ ಸರಳ ಸತ್ಯವನ್ನು ನಮಗೆ ನೆನಪಿಸುತ್ತವೆ: ಒಬ್ಬರ ಗತಕಾಲವನ್ನು ಸ್ವೀಕರಿಸಿ, ಅವರು ಹೇಗಿದ್ದಾರೂ ಅವರನ್ನು ಗೌರವಿಸಿ, ಪರಸ್ಪರ ಜೊತೆಯಾಗಿ ನಿಂತು ಸದಾ ಒಬ್ಬರನ್ನೊಬ್ಬರು ಆಯ್ಕೆ ಮಾಡಿಕೊಳ್ಳಿ. ಎರಡು ಮನಸ್ಸುಗಳು ಇದನ್ನು ಮಾಡಿದಾಗ, ಪ್ರೀತಿ ಎನ್ನುವುದು ಕ್ಲಿಷ್ಟಕರ ಅನಿಸುವುದನ್ನು ನಿಲ್ಲಿಸಿ, ಸ್ವಂತ 'ಮನೆ'ಯಂತೆ ನೆಮ್ಮದಿ ನೀಡಲು ಆರಂಭಿಸುತ್ತದೆ!
ಕನ್ನಡದ ಪ್ರೇಮದ ಊರಲಿ ಸಿನಿಮಾವನ್ನು ಥಿಯೇಟರ್‌ನಲ್ಲಿ ಕಂಡು ಪ್ರೀತಿ, ತ್ಯಾಗದ ಅತ್ಯಂತ ಸರಳ ಕಥೆಯನ್ನು ನೋಡಿ ಖುಷಿಪಟ್ಟವರು ಒಟಿಟಿಯಲ್ಲಿ ಬೆತ್ಲೆಹೇಮ್ ಕುಟುಂಬ ಯುನಿಟ್ ಸಿನಿಮಾ ನೋಡಿ ಸಂಭ್ರಮ ಪಡಬಹುದು. ಜಿಯೋ ಹಾಟ್‌ಸ್ಟಾರ್‌ನಲ್ಲಿ ಈ ಸಿನಿಮಾವನ್ನು ನೋಡಬಹುದು. ಕನ್ನಡ ಡಬ್ಬಿಂಗ್ ಕೂಡ ಲಭ್ಯವಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.