
ಕೋಟ್ಯಂತರ ಉದ್ಯೋಗಿಗಳಿಗೆ ಮತ್ತು ಇಪಿಎಫ್‌ಒ (EPFO) ಚಂದಾದಾರರಿಗೆ ಕೇಂದ್ರ ಸರ್ಕಾರ ಬಿಗ್ ರಿಲೀಫ್ ನೀಡಿದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ‘ನೌಕರರ ಭವಿಷ್ಯ ನಿಧಿ ಯೋಜನೆ, 2026’ ಅಡಿಯಲ್ಲಿ ಪಿಎಫ್ ಖಾತೆಯಿಂದ ಭಾಗಶಃ ಹಣವನ್ನು (PF Partial Withdrawal) ಹಿಂಪಡೆಯುವ ನಿಯಮಗಳನ್ನು ಅತ್ಯಂತ ಸರಳ ಮತ್ತು ಪಾರದರ್ಶಕಗೊಳಿಸಿದೆ. ಈ ಹಿಂದೆ ಇದ್ದ ಸಂಕೀರ್ಣ ನಿಯಮಗಳು ಹಾಗೂ ಹತ್ತಾರು ನಮೂನೆಗಳ (Forms) ಗೊಂದಲಕ್ಕೆ ತೆರೆ ಎಳೆದಿರುವ ಇಪಿಎಫ್‌ಒ, ಮುಂಗಡ ಹಣ ಕ್ಲೈಮ್ ಮಾಡುವುದನ್ನು ಮೂರು ಪ್ರಮುಖ ವರ್ಗಗಳಾಗಿ (Categories) ವಿಂಗಡಿಸಿದೆ.
ವರ್ಗ 1: ಅನಾರೋಗ್ಯ, ಶಿಕ್ಷಣ ಮತ್ತು ಮದುವೆ;
ಅನಾರೋಗ್ಯ ಚಿಕಿತ್ಸೆ; ಸದಸ್ಯರು ತಮ್ಮ ಅಥವಾ ತಮ್ಮ ಕುಟುಂಬದ ಸದಸ್ಯರ ಆರೋಗ್ಯ ತುರ್ತುಸ್ಥಿತಿಗಾಗಿ ಯಾವುದೇ ನಿರ್ದಿಷ್ಟ ಮಿತಿಯಿಲ್ಲದೆ ಎಷ್ಟು ಬಾರಿ ಬೇಕಾದರೂ ಮುಂಗಡ ಹಣವನ್ನು ಹಿಂಪಡೆಯಬಹುದು.
ಶಿಕ್ಷಣ; ಇಪಿಎಫ್ ಸದಸ್ಯತ್ವದ ಸಂಪೂರ್ಣ ಅವಧಿಯಲ್ಲಿ ಮಕ್ಕಳ ಅಥವಾ ಸ್ವಂತ ಉನ್ನತ ಶಿಕ್ಷಣಕ್ಕಾಗಿ ಗರಿಷ್ಠ 10 ಬಾರಿ ಹಣ ಪಡೆಯಲು ಅವಕಾಶವಿದೆ.
ಮದುವೆ; ಸದಸ್ಯತ್ವ ಅವಧಿಯಲ್ಲಿ ಮದುವೆ ವೆಚ್ಚಗಳಿಗಾಗಿ ಗರಿಷ್ಠ ೫ ಬಾರಿ ಮುಂಗಡ ಪಡೆಯಬಹುದು.
ವರ್ಗ 2; ಮನೆ ಖರೀದಿ, ನಿರ್ಮಾಣ ಮತ್ತು ಗೃಹ ಸಾಲ!
ಮನೆ ಅಥವಾ ಫ್ಲಾಟ್ ಖರೀದಿ, ಭೂಮಿ ಖರೀದಿ, ಹೊಸ ಮನೆ ನಿರ್ಮಾಣ, ಗೃಹ ಸಾಲ ಮರುಪಾವತಿ (Home Loan Repayment) ಮತ್ತು ಮನೆಯ ನವೀಕರಣಕ್ಕಾಗಿ (Renovation) ಇಡೀ ಸದಸ್ಯತ್ವ ಅವಧಿಯಲ್ಲಿ ಗರಿಷ್ಠ 5 ಬಾರಿ ಮುಂಗಡ ಹಣ ಹಿಂಪಡೆಯಬಹುದು.
ಮಂಡಳಿಯು ನಿಗದಿಪಡಿಸಿದ ವಿಶೇಷ ತುರ್ತು ಅಥವಾ ಇತರೆ ಅಗತ್ಯಗಳಿಗಾಗಿ ಸದಸ್ಯರು ಒಂದು ಹಣಕಾಸು ವರ್ಷದಲ್ಲಿ ಗರಿಷ್ಠ ೨ ಬಾರಿ ಭಾಗಶಃ ಪಿಎಫ್ ಹಣವನ್ನು ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಕನಿಷ್ಠ 12 ತಿಂಗಳ ಸದಸ್ಯತ್ವ; ಯಾವುದೇ ವರ್ಗದಲ್ಲಿ ಭಾಗಶಃ ಪಿಎಫ್ ಮುಂಗಡ ಪಡೆಯಲು, ಉದ್ಯೋಗಿಯು ಕನಿಷ್ಠ 12 ತಿಂಗಳು (1 ವರ್ಷ) ಇಪಿಎಫ್ ಸದಸ್ಯತ್ವ ಪೂರ್ಣಗೊಳಿಸಿರಬೇಕು.
ಶೇ. 75ರಷ್ಟು ಮುಂಗಡ ಪಡೆಯಬಹುದು; ಇನ್ಮುಂದೆ ಚಂದಾದಾರರು ತಮ್ಮ ಮತ್ತು ಉದ್ಯೋಗದಾತರ ಒಟ್ಟು ಕೊಡುಗೆಯ ಗರಿಷ್ಠ ಶೇ. 75 ರಷ್ಟು ಹಣ ಹಾಗೂ ಅದಕ್ಕೆ ಬಂದ ಬಡ್ಡಿಯನ್ನು ಮುಂಗಡವಾಗಿ ಹಿಂಪಡೆಯಬಹುದು.
ಉದ್ಯೋಗಿಯ ನಿವೃತ್ತಿ ಜೀವನ ಸುರಕ್ಷಿತವಾಗಿರಬೇಕು ಎಂಬ ಉದ್ದೇಶದಿಂದ ಖಾತೆಯಲ್ಲಿ ಒಟ್ಟು ಪಿಎಫ್ ಬ್ಯಾಲೆನ್ಸ್‌ನ ಕನಿಷ್ಠ ಶೇ. 25ರಷ್ಟು ಹಣವನ್ನು ಕಡ್ಡಾಯವಾಗಿ ಕಾಯ್ದಿರಿಸಬೇಕಾಗುತ್ತದೆ. ಈ ಸರಳೀಕೃತ ವ್ಯವಸ್ಥೆಗೆ ಅಕ್ಟೋಬರ್ ೨೦೨೫ ರಲ್ಲಿ ಇಪಿಎಫ್‌ಒನ ಕೇಂದ್ರೀಯ ಟ್ರಸ್ಟಿಗಳ ಮಂಡಳಿ (CBT) ಅನುಮೋದನೆ ನೀಡಿತ್ತು. ತದನಂತರ ಜುಲೈ ೨೦೨೬ ರಿಂದ ದೇಶಾದ್ಯಂತ ಇದು ಕಾನೂನುಬದ್ಧವಾಗಿ ಅನುಷ್ಠಾನಕ್ಕೆ ಬಂದಿದೆ.
ಹಳೆಯ ಗೊಂದಲಮಯ ನಿಯಮಗಳಿಂದಾಗಿ ಲಕ್ಷಾಂತರ ಪಿಎಫ್ ಕ್ಲೈಮ್‌ಗಳು ರಿಜೆಕ್ಟ್ (Reject) ಆಗುತ್ತಿದ್ದವು. ಈ ಮೂರು ಸ್ಪಷ್ಟ ವರ್ಗೀಕರಣದಿಂದಾಗಿ ಕ್ಲೈಮ್‌ಗಳು ತಿರಸ್ಕರಿಸಲ್ಪಡುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದ್ದು, ತುರ್ತು ಅಗತ್ಯವಿರುವ ಉದ್ಯೋಗಿಗಳ ಕೈಗೆ ಶೀಘ್ರವಾಗಿ ಹಣ ತಲುಪಲಿದೆ.