EPFO: ಪಿಎಫ್‌ಗೆ 5 ವರ್ಷ ಹಣ ಹಾಕಿಲ್ಲ ಅಂದ್ರೆ ಬಡ್ಡಿ ನಿಲ್ಲುತ್ತಾ? ನಿಮ್ಮ ಖಾತೆಯ ಹಣದ ಲೆಕ್ಕ ಇಲ್ಲಿದೆ!

Published : Sep 09, 2026, 08:24 PM IST
EPFO Pension

ಸಾರಾಂಶ

ಉದ್ಯೋಗಿ ಭವಿಷ್ಯ ನಿಧಿ (EPF) ಖಾತೆಗೆ ಹಣ ಜಮಾ ಮಾಡುವುದು ನಿಂತರೂ, ಖಾತೆದಾರನಿಗೆ 58 ವರ್ಷ ವಯಸ್ಸಾಗುವವರೆಗೆ ಬಡ್ಡಿ ಜಮೆಯಾಗುತ್ತಲೇ ಇರುತ್ತಾ? 2016ರ ನಿಯಮ ತಿದ್ದುಪಡಿಯ ಪ್ರಕಾರ, ನಿಷ್ಕ್ರಿಯ ಖಾತೆಗಳಿಗೂ ಬಡ್ಡಿ ಲಭ್ಯವಿದೆಯಾ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ!

ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (EPFO) ಖಾತೆಗೆ ಹಣ ಜಮಾ ಮಾಡುವುದು ನಿಂತ ತಕ್ಷಣವೇ ಬಡ್ಡಿ ಬರುವುದು ನಿಂತುಹೋಗುತ್ತದೆ ಎಂಬುದು ಹಲವು ಚಂದಾದಾರರಲ್ಲಿರುವ ದೊಡ್ಡ ತಪ್ಪು ಕಲ್ಪನೆ. ನಾನು ಕಳೆದ 5 ವರ್ಷಗಳಿಂದ ಪಿಎಫ್‌ಗೆ ಹಣ ಠೇವಣಿ ಮಾಡಿಲ್ಲ, ನನಗಿನ್ನೂ ಬಡ್ಡಿ ಸಿಗುತ್ತದೆಯೇ? ಎಂಬ ಪ್ರಶ್ನೆಗೆ ಸ್ಪಷ್ಟ ಮತ್ತು ನೇರ ಉತ್ತರ ‘ಹೌದು, ಖಂಡಿತವಾಗಿಯೂ ಸಿಗುತ್ತದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ. ಇಪಿಎಫ್‌ಒ ನ ನಿಯಮಗಳ ಪ್ರಕಾರ, ನೀವು ಕೆಲಸ ಬಿಟ್ಟರೂ ಅಥವಾ ಖಾತೆಗೆ ವಂತಿಗೆ ಜಮೆಯಾಗುವುದು ನಿಂತರೂ ಸಹ, ನಿಮ್ಮ ಪಿಎಫ್‌ ಖಾತೆಯಲ್ಲಿರುವ ಮೊತ್ತಕ್ಕೆ ನಿಯಮಿತವಾಗಿ ಬಡ್ಡಿ ಜಮೆಯಾಗುತ್ತಲೇ ಇರುತ್ತದೆ.

3 ವರ್ಷಗಳ ನಿಯಮದ ಅಸಲಿ ಸತ್ಯವೇನು?

ಹಿಂದೆ (2016 ಕ್ಕಿಂತ ಮೊದಲು) ಪಿಎಫ್‌ ಖಾತೆಗೆ ಸತತ 36 ತಿಂಗಳು (3 ವರ್ಷ) ಯಾವುದೇ ಹಣ ಜಮೆಯಾಗದಿದ್ದರೆ, ಅದನ್ನು 'ನಿಷ್ಕ್ರಿಯ ಖಾತೆ' (Inoperative Account) ಎಂದು ಪರಿಗಣಿಸಿ ಬಡ್ಡಿ ನೀಡುವುದನ್ನು ತಡೆಹಿಡಿಯಲಾಗುತ್ತಿತ್ತು. ಆದರೆ, ಇಪಿಎಫ್‌ಒ 2016 ರಲ್ಲಿ ಈ ನಿಯಮಕ್ಕೆ ತಿದ್ದುಪಡಿ ತಂದಿದೆ. ಹೊಸ ನಿಯಮದಂತೆ, ಖಾತೆದಾರನಿಗೆ 58 ವರ್ಷ ವಯಸ್ಸಾಗುವವರೆಗೆ ಪಿಎಫ್‌ ಖಾತೆಯಲ್ಲಿರುವ ಹಣಕ್ಕೆ ಚಕ್ರಬಡ್ಡಿ (Compounding Interest) ಸಿಗುತ್ತಲೇ ಇರುತ್ತದೆ.

ಉದಾಹರಣೆಯೊಂದಿಗೆ ಅರ್ಥ ಮಾಡಿಕೊಳ್ಳಿ!

ಉದಾಹರಣೆಗೆ; ಒಬ್ಬ ವ್ಯಕ್ತಿ ತಮ್ಮ ೪೦ನೇ ವಯಸ್ಸಿನಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ, ಪಿಎಫ್‌ ಹಣವನ್ನು ಹಿಂಪಡೆಯದೆ ಹಾಗೆಯೇ ಬಿಡುತ್ತಾರೆ ಎಂದಿಟ್ಟುಕೊಳ್ಳೋಣ. 5 ವರ್ಷಗಳ ಕಾಲ (ಅಂದರೆ ಅವರಿಗೆ 45 ವರ್ಷವಾಗುವವರೆಗೆ) ಯಾವುದೇ ಹಣ ಜಮೆಯಾಗದಿದ್ದರೂ, ಮುಂದಿನ 13 ವರ್ಷಗಳ ಕಾಲ ಅಂದರೆ ಅವರಿಗೆ 58 ವರ್ಷ ವಯಸ್ಸಾಗುವವರೆಗೆ ಆ ಖಾತೆಯಲ್ಲಿರುವ ಹಣಕ್ಕೆ ಇಪಿಎಫ್‌ಒ ನಿಗದಿಪಡಿಸುವ ವಾರ್ಷಿಕ ಬಡ್ಡಿ ಜಮೆಯಾಗುತ್ತಲೇ ಇರುತ್ತದೆ. ಅದೇ ರೀತಿ, 50ನೇ ವಯಸ್ಸಿನಲ್ಲಿ ಕೆಲಸ ಬಿಟ್ಟ ಸಚೇತನ ಸದಸ್ಯರಿಗೂ 58 ವರ್ಷ ತಲುಪುವವರೆಗಿನ 8 ವರ್ಷಗಳ ಕಾಲ ಬಡ್ಡಿ ಪಡೆಯಲು ಅರ್ಹತೆ ಇರುತ್ತದೆ.

ತೆರಿಗೆ ನಿಯಮವನ್ನು ಮರೆಯದಿರಿ!

ನಿಮ್ಮ ಹಣಕ್ಕೆ ಬಡ್ಡಿಯಂತೂ ಸಿಗುತ್ತದೆ, ಆದರೆ ಇಲ್ಲಿ ಒಂದು ಪ್ರಮುಖ ತೆರಿಗೆ ನಿಯಮವನ್ನು ನೆನಪಿನಲ್ಲಿಡಬೇಕು. ನೀವು ಕೆಲಸದಲ್ಲಿದ್ದಾಗ ಪಿಎಫ್‌ ಬಡ್ಡಿಗೆ ತೆರಿಗೆ ವಿನಾಯಿತಿ ಇರುತ್ತದೆ. ಆದರೆ, ಕೆಲಸ ಬಿಟ್ಟ ನಂತರ ನಿಮ್ಮ ಪಿಎಫ್‌ ಖಾತೆಯಲ್ಲಿ ಜಮೆಯಾಗುವ ಬಡ್ಡಿಯು ‘ಇತರ ಮೂಲಗಳಿಂದ ಬಂದ ಆದಾಯ’ (Income from Other Sources) ಎಂದು ಪರಿಗಣಿತವಾಗುತ್ತದೆ ಮತ್ತು ಆ ಬಡ್ಡಿಯ ಮೊತ್ತಕ್ಕೆ ನೀವು ನಿಮ್ಮ ಆದಾಯ ತೆರಿಗೆ ಸ್ಲ್ಯಾಬ್‌ಗೆ ಅನುಗುಣವಾಗಿ ತೆರಿಗೆ ಪಾವತಿಸಬೇಕಾಗುತ್ತದೆ.

ಖಾತೆದಾರರು ಏನು ಮಾಡಬೇಕು?

1. ಕೆಲಸ ಬದಲಾಯಿಸಿದ್ದರೆ; ಹಳೆಯ ಪಿಎಫ್‌ ಖಾತೆಯಲ್ಲಿರುವ ಹಣವನ್ನು ಹಿಂಪಡೆಯುವ ಬದಲು, ಹೊಸ ಕಂಪನಿಯ ಯುಎಎನ್‌ (UAN) ಖಾತೆಗೆ ವರ್ಗಾವಣೆ (Transfer) ಮಾಡುವುದು ಜಾಣತನ.

2. ಕೆಲಸ ಬಿಟ್ಟಿದ್ದರೆ/ವಿರಾಮದಲ್ಲಿದ್ದರೆ; 58 ವರ್ಷಗಳವರೆಗೆ ಹಣ ಸುರಕ್ಷಿತವಾಗಿರುತ್ತದೆ ಮತ್ತು ಬಡ್ಡಿಯೂ ಸಿಗುತ್ತದೆ. ಆದರೆ ಅಗತ್ಯವಿಲ್ಲದಿದ್ದರೆ ಹಣವನ್ನು ಸುಮ್ಮನೆ ಇಡುವ ಬದಲು ಸೂಕ್ತ ಹೂಡಿಕೆ ಯೋಜನೆಗಳಿಗೆ ಬಳಸುವುದು ಉತ್ತಮ.

3. 58 ವರ್ಷ ಪೂರ್ಣಗೊಂಡರೆ; ಖಾತೆದಾರನಿಗೆ 58 ವರ್ಷ ತುಂಬಿದ ನಂತರವೂ ಹಣ ಹಿಂಪಡೆಯದಿದ್ದರೆ ಮಾತ್ರ ಖಾತೆಯನ್ನು 'ನಿಷ್ಕ್ರಿಯ' ಎಂದು ವರ್ಗೀಕರಿಸಿ, ಬಡ್ಡಿ ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ. ಆದ್ದರಿಂದ, 5 ವರ್ಷಗಳಿಂದ ಹಣ ಠೇವಣಿಯಾಗದಿದ್ದರೂ ನಿಮ್ಮ ಪಿಎಫ್‌ ಖಾತೆಯಲ್ಲಿ ನಿಮ್ಮ ಹಣ ಬಡ್ಡಿಯೊಂದಿಗೆ ಸುರಕ್ಷಿತವಾಗಿ ಬೆಳೆಯುತ್ತಿರುತ್ತದೆ.

PREV
Read more Articles on
click me!

Recommended Stories

PF ಅಕೌಂಟ್ ಇರುವವರಿಗೆ ಕೇಂದ್ರದ ಗುಡ್‌ನ್ಯೂಸ್; ಈ ಸಿಂಪಲ್ ಕೆಲಸ ಮಾಡಿ, ಖಾತೆಗೆ ಬೀಳುತ್ತೆ 15 ಸಾವಿರ ರೂ.
Cricket: ಒಂದೇ ದಿನ ಎರಡು ದೇಶಗಳಲ್ಲಿ ಕಣಕ್ಕಿಳಿಯಲಿದೆ ಭಾರತ! 28 ವರ್ಷಗಳ ಬಳಿಕ ಮರುಕಳಿಸಲಿದೆ ಅಪರೂಪದ ಇತಿಹಾಸ!