
ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಅಡಿಯಲ್ಲಿ ನೌಕರರ ಪಿಂಚಣಿ ಯೋಜನೆ (EPS) ಮೂಲಕ ಮಾಸಿಕ ಪಿಂಚಣಿ ಪಡೆಯಲು ಕನಿಷ್ಠ 10 ವರ್ಷಗಳ ಸೇವೆ ಕಡ್ಡಾಯವಾಗಿದೆ. ಆದರೆ, ನಿಮ್ಮ ದಾಖಲೆಗಳಲ್ಲಿನ ಒಂದು ಸಣ್ಣ ತಪ್ಪು ವೃದ್ಧಾಪ್ಯದಲ್ಲಿ ಬರುವ ಪಿಂಚಣಿಯನ್ನು ಇಲ್ಲದಂತೆ ಮಾಡಬಹುದು ಎಂಬುದು ನಿಮಗೆ ತಿಳಿದಿದೆಯೇ? ಖಾತೆಯಲ್ಲಿ ನಿಮ್ಮ ಸೇರ್ಪಡೆ ದಿನಾಂಕ (Date of Joining) ಅಥವಾ ನಿರ್ಗಮನ ದಿನಾಂಕ (Date of Exit) ತಪ್ಪಾಗಿದ್ದರೆ ಉಂಟಾಗುವ ತೊಂದರೆಗಳು ಮತ್ತು ಅದನ್ನು ಮನೆಯಲ್ಲೇ ಸರಿಪಡಿಸಿಕೊಳ್ಳುವ ಸರಳ ವಿಧಾನ ಇಲ್ಲಿದೆ.
ನಿಮ್ಮ ನಿಜವಾದ ಕೆಲಸದ ಅವಧಿ 10 ವರ್ಷಗಳಾಗಿದ್ದರೂ, ದಾಖಲೆಯಲ್ಲಿ ತಪ್ಪಾದ ದಿನಾಂಕ ನಮೂದಾಗಿದ್ದರೆ ಒಟ್ಟು ಸೇವಾ ಅವಧಿ 10 ವರ್ಷಕ್ಕಿಂತ ಕಡಿಮೆ ಎಂದು ತೋರಿಸಬಹುದು. ಇದರಿಂದ ನೀವು ಪಿಂಚಣಿ ಪಡೆಯುವ ಅರ್ಹತೆಯನ್ನೇ ಕಳೆದುಕೊಳ್ಳುವ ಅಪಾಯವಿರುತ್ತದೆ.
ದಿನಾಂಕಗಳು ಸರಿಯಿಲ್ಲದಿದ್ದರೆ, ನೀವು ಕೆಲಸ ಮಾಡದಿದ್ದರೂ ಕಂಪನಿಗಳ ನಡುವೆ 'ಅಂತರ' (Gap) ಇದೆಯೆಂದು ಅಥವಾ ಒಂದೇ ಸಮಯದಲ್ಲಿ ಎರಡು ಕಂಪನಿಗಳಲ್ಲಿ ಕೆಲಸ ಮಾಡಿದ್ದೀರಿ (Overlapping) ಎಂದು ಸಿಸ್ಟಮ್ ತೋರಿಸುತ್ತದೆ. ಇದು ಭವಿಷ್ಯದಲ್ಲಿ ಸೇವೆಯನ್ನು ಸಾಬೀತುಪಡಿಸಲು ದೊಡ್ಡ ತೊಡಕಾಗುತ್ತದೆ.
ಸೇರ್ಪಡೆ ದಿನಾಂಕ ತಪ್ಪಿದ್ದರೆ ನಿಮ್ಮ ಪಿಎಫ್ ಖಾತೆಗೆ ಜಮೆಯಾಗುವ ಕೊಡುಗೆ ಹಾಗೂ ಬಡ್ಡಿಯ ಲೆಕ್ಕಾಚಾರದಲ್ಲಿ ವ್ಯತ್ಯಾಸವಾಗಬಹುದು. ಅದೇ ರೀತಿ, ಹಳೆಯ ಕಂಪನಿಯು ಸರಿಯಾದ 'Date of Exit' ನವೀಕರಿಸದಿದ್ದರೆ, ಹೊಸ ಕಂಪನಿಗೆ ನಿಮ್ಮ ಪಿಎಫ್ ಹಣವನ್ನು ಆನ್‌ಲೈನ್‌ನಲ್ಲಿ ವರ್ಗಾಯಿಸಲು (Transfer) ಅಥವಾ ಹಿಂಪಡೆಯಲು (Withdrawal) ಸಾಧ್ಯವಾಗುವುದಿಲ್ಲ.
ಸಾಮಾನ್ಯವಾಗಿ ಉದ್ಯೋಗದಾತರು (Employer) ಪೋರ್ಟಲ್‌ನಲ್ಲಿ ಮಾಹಿತಿ ನೀಡುವಾಗ ಇಂತಹ ತಪ್ಪುಗಳು ನಡೆಯುತ್ತವೆ. ಆದರೆ ಆಧಾರ್ ಲಿಂಕ್ ಆಗಿರುವ UAN ಹೊಂದಿರುವ ಸದಸ್ಯರು ಈಗ ಆನ್‌ಲೈನ್ ಮೂಲಕವೇ ಇದನ್ನು ಸರಿಪಡಿಸಿಕೊಳ್ಳಬಹುದು.
1. ನೀವು ಕೆಲಸ ಬಿಟ್ಟು 2 ತಿಂಗಳು ಕಳೆದ ನಂತರ, EPFO ಸದಸ್ಯರ ಪೋರ್ಟಲ್‌ಗೆ ಲಾಗಿನ್ ಆಗಿ.
2. ಅಲ್ಲಿ Manage' ವಿಭಾಗಕ್ಕೆ ಹೋಗಿ 'Mark Exit' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
3. ನಿಮ್ಮ ಸರಿಯಾದ ನಿರ್ಗಮನ ದಿನಾಂಕ ಮತ್ತು ಕೆಲಸ ಬಿಡಲು ಕಾರಣವನ್ನು ನಮೂದಿಸಿ.
4. ಆಧಾರ್ ಆಧಾರಿತ OTP ಮೂಲಕ ಪರಿಶೀಲನೆ (Verification) ಪೂರ್ಣಗೊಳಿಸಿ.
ಗಮನಿಸಿ; ಕೆಲವು ಸಂಕೀರ್ಣ ಸಂದರ್ಭಗಳಲ್ಲಿ ಅಥವಾ ಹಳೆಯ ಪ್ರಕ್ರಿಯೆಗಳಿದ್ದಾಗ ಉದ್ಯೋಗದಾತರ (Employer) ಮೂಲಕವೇ ತಿದ್ದುಪಡಿ ಮಾಡಬೇಕಾಗಬಹುದು.
ಕೆಲಸ ಬದಲಾಯಿಸಿದಾಗ ಅಥವಾ ಕೆಲಸ ತೊರೆದ ತಕ್ಷಣವೇ ನಿಮ್ಮ EPF ದಾಖಲೆಗಳನ್ನು ಪರಿಶೀಲಿಸುವುದು ಅತ್ಯಗತ್ಯ. ಸಮಯಕ್ಕೆ ಸರಿಯಾಗಿ ದಿನಾಂಕಗಳನ್ನು ನವೀಕರಿಸುವುದರಿಂದ ಭವಿಷ್ಯದಲ್ಲಿ ಪಿಂಚಣಿ, ಪಿಎಫ್ ವರ್ಗಾವಣೆ ಅಥವಾ ಹಣ ಹಿಂಪಡೆಯುವ ಸಮಯದಲ್ಲಿ ಎದುರಾಗುವ ಅನಗತ್ಯ ತೊಂದರೆಗಳಿಂದ ಪಾರಾಗಬಹುದು.