2021ಕ್ಕೆ ರಿಲಯನ್ಸ್‌ನಿಂದ 'ಆತ್ಮನಿರ್ಭರ' 5ಜಿ!

By Kannadaprabha News  |  First Published Jul 16, 2020, 8:30 AM IST

ವಿಶ್ವದ ಬಹುತೇಕ ದೇಶಗಳು ತಮ್ಮ 5ಜಿ ಸೇವೆಗಾಗಿ ಚೀನಾ ಮೂಲದ ಹುವೈ ಕಂಪನಿಯನ್ನೇ ಅವಲಂಬನೆ| 2021ಕ್ಕೆ ರಿಲಯನ್ಸ್‌ನಿಂದ ಸ್ವದೇಶಿ 5ಜಿ ತಂತ್ರಜ್ಞಾನ| ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಕನಸಿಗೆ ಮತ್ತಷ್ಟು ಬಲ


ಮುಂಬೈ(ಜು.16): ವಿಶ್ವದ ಬಹುತೇಕ ದೇಶಗಳು ತಮ್ಮ 5ಜಿ ಸೇವೆಗಾಗಿ ಚೀನಾ ಮೂಲದ ಹುವೈ ಕಂಪನಿಯನ್ನೇ ಅವಲಂಬಿಸಿರುವ ಹೊತ್ತಿನಲ್ಲೇ, ರಿಲಯನ್ಸ್‌ ಕಂಪನಿ ತಾನು ಕೂಡಾ 5ಜಿ ಸೇವೆ ಅಭಿವೃದ್ಧಿಪಡಿಸುವುದರಲ್ಲಿ ನಿರತರಾಗಿರುವುದಾಗಿ ಘೋಷಿಸಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಕನಸಿಗೆ ಮತ್ತಷ್ಟುನೀರೆರೆದಿದ್ದಾರೆ.

ಬುಧವಾರ ಇಲ್ಲಿ ನಡೆದ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಮುಕೇಶ್‌ ಅಂಬಾನಿ, ‘ನಾವು ಸಂಪೂರ್ಣ ಸ್ವದೇಶಿ ತಂತ್ರಜ್ಞಾನ ಬಳಸಿಕೊಂಡು ದೇಶೀಯ 5ಜಿ ಸೇವೆಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಶೂನ್ಯದಿಂದ ಆರಂಭವಾಗಿರುವ ಈ ಯತ್ನ, ದೇಶದಲ್ಲಿ 5ಜಿ ಸ್ಪೆಕ್ಟ್ರಂ ಲಭ್ಯವಾಗುತ್ತಲೇ ಪ್ರಯೋಗಕ್ಕೆ ಒಳಪಡಲಿದೆ. ಮುಂದಿನ ವರ್ಷದ ವೇಳೆಗೆ ಸೇವೆಗೆ ಬಿಡುಗಡೆಯಾಗಲಿದೆ’ ಎಂದು ಘೋಷಿಸಿದ್ದಾರೆ.

Latest Videos

undefined

ಸ್ಟಾರ್ಟಪ್‌ಗಳು ಮತ್ತು ಇತರೆ ಭಾರತೀಯ ಕಂಪನಿಗಳ ಜೊತೆಗೂಡಿ ನಾವು ಮೇಡ್‌ ಇನ್‌ ಇಂಡಿಯಾ, ಮೇಡ್‌ ಫಾರ್‌ ಇಂಡಯಾ ಮತ್ತು ಮೇಡ್‌ ಫಾರ್‌ ವಲ್ಡ್‌ರ್‍ ಉತ್ಪನ್ನಗಳನ್ನು ಉತ್ತೇಜಿಸುತ್ತಿದ್ದೇವೆ. ಇದರ ಭಾಗವಾಗಿ ಈಗಾಗಲೇ ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಲ್ಲಿ 5ಜಿ ಸೇವೆ ಅಭಿವೃದ್ಧಿಪಡಿಸುತ್ತಿದ್ದೇವೆ. ಈ ಮೂಲಕ ಹುವೈ ಸೇರಿದಂತೆ ಯಾವುದೇ ವಿದೇಶಿ ಕಂಪನಿಗಳ ಮೇಲಿನ ಅವಲಂಬನೆಯಿಂದ ಮುಕ್ತರಾಗುತ್ತಿದ್ದೇವೆ ಎಂದು ಘೋಷಿಸಿದ್ದಾರೆ.

ಈ ನಡುವೆ ಮುಕೇಶ್‌ ಘೋಷಣೆಗೂ ಕೆಲವೇ ಗಂಟೆಗಳ ಮುನ್ನ ಮಾತನಾಡಿದ್ದ ಅಮೆರಿಕದ ವಿದೇಶಾಂಗ ಸಚಿವ ಮೈಕ್‌ ಪೊಂಪೆ, ರಿಲಯನ್ಸ್‌ ಸೇರಿದಂತೆ ಹಲವು ಜಾಗತಿಕ ಕಂಪನಿಗಳು ಹುವೈ ಉತ್ಪನ್ನಗಳನ್ನು ಬದಿಗೊತ್ತಿ ಸ್ವಚ್ಛ ಸೇವೆಗೆ ಮುಂದಾಗಿರುವುದನ್ನು ಶ್ಲಾಘಿಸಿದ್ದರು.

click me!