ಭಾರತದಲ್ಲಿ ಒನ್‌ಪ್ಲಸ್ ಫೋನ್ ಮಾರುಕಟ್ಟೆ ವಿಸ್ತರಿಸಿದೆ. ಅತ್ಯಾಕರ್ಷಕ ಬೆಲೆ, ಅತ್ಯಾಧುನಿಕ ಫೀಚರ್ಸ್, ಹೆಚ್ಚು ಬ್ಯಾಟರಿ ಲೈಫ್ ಸೇರಿದಂತೆ ಹಲವು ವಿಶೇಷತೆಗಳು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ. ಇದೀಗ ಒನ್‌ಪ್ಲಸ್ ನಾರ್ಡ್ CE4 ಫೋನ್ ಲಾಂಚ್ ಮಾಡಿದೆ. ಈ ಫೋನ್ ಹೇಗಿದೆ? ಬೆಲೆ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.
ಬೆಂಗಳೂರು(ಏ.02) ವರ್ಷಕ್ಕೆ ಮೂರರಿಂದ ನಾಲ್ಕು ಬಗೆಯ ಫೋನುಗಳನ್ನು ಮಾರುಕಟ್ಟೆಗೆ ತರುತ್ತಿರುವ ವನ್ ಪ್ಲಸ್ ಎಲ್ಲಾ ಸೆಗ್‌ಮೆಂಟಿನ ಗ್ರಾಹಕರನ್ನೂ ಗಮನದಲ್ಲಿ ಇಟ್ಟುಕೊಂಡಿದೆ. ಹೀಗಾಗಿ ಅರವತ್ತು ಸಾವಿರದಿಂದ ಇಪ್ಪತ್ತೆರಡು ಸಾವಿರದ ತನಕ ವನ್ ಪ್ಲಸ್ ಫೋನುಗಳ ಬೆಲೆ ಏರಿಳಿಯುತ್ತದೆ. ವನ್‌ಪ್ಲಸ್ ಫೋನುಗಳ ಪೈಕಿ ಜನಪ್ರಿಯತೆ ಗಳಿಸಿರುವ ನಾರ್ಡ್ ಸರಣಿಯಲ್ಲಿ ಇದೀಗ ವನ್ ಪ್ಲಸ್ ನಾರ್ಡ್ ಸಿಇ 4 ಮಾರುಕಟ್ಟೆಗೆ ಬಂದಿದೆ.
ವಿನ್ಯಾಸ ಆಕರ್ಷಕವಾಗಿರುವಂತೆ ನೋಡಿಕೊಳ್ಳುವುದರಲ್ಲಿ ವನ್ ಪ್ಲಸ್ ಯಾವತ್ತೂ ಹಿಂದೆ ಬಿದ್ದಿಲ್ಲ. ನಾರ್ಡ್ ಸಿಇ4 ವಿನ್ಯಾಸವೂ ಅದ್ಭುತ, ಮೈಕಟ್ಟೂ ಬಲ. ಅಮೋಲೆಡ್ ಡಿಸ್‌ಪ್ಲೇ, ಮುಟ್ಟಿದರೆ ಜಲತರಂಗ, ಹಾಡು ಕೇಳಲಿಕ್ಕೆ ಎರಡು ಸ್ಪೀಕರ್, 5500 ಎಂಎಎಚ್‌ನ ಅತಿ ದೊಡ್ಡ ಬ್ಯಾಟರಿ, ವೇಗದ ಚಾರ್ಜರ್, ಎರಡು ಅಕರ್ಷಕ ಬಣ್ಣಗಳಲ್ಲಿ ಲಭ್ಯ. ಇದನ್ನೇ ಯೂಥ್‌ಫುಲ್ ಲುಕ್ ಅಂತ ಕಂಪೆನಿ ಕರೆಯತ್ತದೆ. ಆ ಕುರಿತು ನಮಗೂ ತಕರಾರಿಲ್ಲ.
ಭಾರತದಲ್ಲಿ 5G ತಂತ್ರಜ್ಞಾನದ ಅನುಭವ ಹೆಚ್ಚಿಸಲು ಜಿಯೋ-ಒನ್‌ಪ್ಲಸ್ ಒಪ್ಪಂದ!
ಈ ಫೋನು ಬಿದ್ದರೂ ಅಷ್ಟೇನೂ ಏಟಾಗದಂತೆ ಕುಶನ್ ಎಫೆಕ್ಟ್ ರೂಪಿಸಲಾಗಿದೆ. ಒಂದೂವರೆ ಮೀಟರ್ ಎತ್ತರದಿಂದ ಫೋನನ್ನು ಮಾರ್ಬಲ್ ನೆಲಕ್ಕೆ ಹಾಕಿದರೂ ಫೋನಿಗೆ ಏನೂ ಆಗಿಲ್ಲ ಅನ್ನುತ್ತದೆ ಕಂಪೆನಿ ನಡೆಸಿದ ಟೆಸ್ಟ್. 120 ಹರ್ಟ್ಸ್ ಫ್ಲೂಯಿಡ್ ಅಮೋಲೆಡ್, 2412X1080 ಪಿಕ್ಸೆಲ್ ಡಿಸ್‌ಪ್ಲೇ. ಮುಟ್ಟಿದರೆ ಸ್ಕ್ರೀನಿನ ಮೇಲೆ ನೀರ ಹನಿ ಮೂಡುತ್ತದೆ. ಯಾರೋ ಫೋನನ್ನು ಮಳೆಯಲ್ಲಿಟ್ಟಂತೆ.
ಮೊದಲೇ ಹೇಳಿದ ಹಾಗೆ ಎರಡು ಬ್ಯಾಟರಿಗಳಿರುವ ವನ್ ಪ್ಲಸ್ ನಾರ್ಡ್ ಸಿಇ4 ಒಮ್ಮೆ ಚಾರ್ಜ್ ಮಾಡಿದರೆ ಒಂದೂವರೆ ದಿನ ಬಳಸಬಹುದು. 29 ನಿಮಿಷದಲ್ಲಿ ಬ್ಯಾಟರಿ ಚಾರ್ಜ್ ಮಾಡಬಹುದು. ನಾಲ್ಕು ವರ್ಷಗಳ ಕಾಲ ಈ ಬ್ಯಾಟರಿ ಬಳಸಿದರೂ ಕಿಂಚಿತ್ತೂ ಶಕ್ತಿ ಕಳಕೊಳ್ಳುವುದಿಲ್ಲ ಅನ್ನುವುದು ಮತ್ತೊಂದು ಹೆಗ್ಗಳಿಕೆ.
ಇದು ಅತ್ಯಂತ ವೇಗದ ಫೋನ್ ಕೂಡ. 8 ಜಿಬಿ ರಾಮ್ ಇರುವ ಈ ಫೋನಿನ ಮೆಮರಿಯನ್ನು ಮತ್ತೆ 8 ರಾಮ್ ವಿಸ್ತರಿಸಬಹುದು. ರಾಮ್-ವೈಟಾ ಎಂಬ ವಿಶಿಷ್ಟ ತಂತ್ರಜ್ಞಾನವನ್ನೂ ಇದು ಬಳಸಿದೆ. ಹೀಗಾಗಿ 16 ಅಪ್ಲಿಕೇಷನ್‌ಗಳನ್ನು ಏಕಕಾಲದಲ್ಲಿ ತೆರೆದಿಟ್ಟರೂ ಫೋನು ನಿಧಾನವಾಗುವುದಿಲ್ಲ. ಸ್ಟೋರೇಜ್ ಕೂಡ 256 ಜಿಬಿ. ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1 ಟಿಬಿ ಸ್ಟೋರೇಜ್ ಕೂಡ ಸೇರಿಸಿಕೊಳ್ಳಬಹುದು.
ಇದರ ಕ್ಯಾಮರಾವಂತೂ ಅದ್ಭುತ. 50 ಮೆಗಾಪಿಕ್ಸೆಲ್ ಸೋನಿ ಎಲ್‌ವೈಟಿ-600 ಸೆನ್ಸರ್ ಬಳಸುವ ಈ ಕ್ಯಾಮರಾ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಷನ್ ತಂತ್ರಜ್ಞಾನ ಹೊಂದಿದೆ. ಕೈಯಲ್ಲಿ ಹಿಡಕೊಂಡು ಅಲ್ಲಾಡುವ ಗಾಡಿಯಲ್ಲಿ ಹೋಗುತ್ತಿದ್ದರೂ ಫೋಟೋಗಳು ಕಲಸಿಹೋಗುವುದಿಲ್ಲ. ಝೂಮ್ ಮಾಡಿದಾಗಲೂ ಫೋಟೋಗಳು ಒಡೆಯುವುದಿಲ್ಲ.
OnePlus ಬಳಕೆದಾರರಿಗೆ ಸೂಪರ್ ಆಫರ್: ಫೋನ್ ಸ್ಕ್ರೀನ್‌ಗೆ ಲೈಫ್‌ಟೈಮ್ ವಾರಂಟಿ, 30 ಸಾವಿರ ರೂ. ವೋಚರ್!
ಎರಡು ವರ್ಷಗಳ ಕಾಲ ಸಾಫ್ಟ್‌ವೇರ್ ಅಪಡೇಟ್, ಅದಾದ ಮೇಲೆ ಒಂದು ವರ್ಷ ಸೆಕ್ಯುರಿಟಿ ಅಪ್‌ಡೇಟ್ ನೀಡುವ ವನ್ ಪ್ಲಸ್ ನಾರ್ಡ್ ಸಿಇ4 ಬೆಲೆ 24,999. ಸ್ವಲ್ಪ ಕಾಲ ಕಾದರೆ ಬೇರೆ ಬೇರೆ ಆನ್‌ಲೈನ್ ಅಂಗಡಿಗಳಲ್ಲಿ ಇನ್ನೂ ಕಡಿಮೆಗೂ ಸಿಗಬಹುದು.