
ಮೊಬೈಲು ಮಾರುಕಟ್ಟೆಯ ಗಮನ ಈಗ ಮಿಡ್ ರೇಂಜ್ ಫೋನುಗಳತ್ತ ಹರಿಯುತ್ತಿದೆ. ವನ್ ಪ್ಲಸ್ ನಂಥ ಸಂಸ್ಥೆಗಳು ಹೈರೇಂಜ್ ಮತ್ತು ಲೋ ರೇಂಜ್ ಫೋನುಗಳಿಗಿಂತ ಹೆಚ್ಚಾಗಿ ಮಧ್ಯಮ ಶ್ರೇಣಿಯ ಫೋನುಗಳತ್ತ ಹೆಚ್ಚು ಗಮನ ಕೊಡುತ್ತಿದ್ದಾರೆ. ನಾರ್ಡ್ ಸರಣಿಯ ಫೋನುಗಳನ್ನು ವನ್ ಪ್ಲಸ್ ಹೊರತಂದಿರುವುದು ಇದೇ ಕಾರಣಕ್ಕೆ. ತಾನು ಈ ಹಿಂದೆ ಹೊರತಂದ ಮಿಡ್ ರೇಂಜ್ ಫೋನುಗಳ ಮಾನದಂಡವನ್ನು ಮತ್ತಷ್ಟು ಎತ್ತರಿಸುವ ಸಲುವಾಗಿ ಅದೀಗ ವನ್‌ಪ್ಲಸ್ ತನ್ನ ನಾರ್ಡ್ 5 ಮತ್ತು ನಾರ್ಡ್ ಸಿಇ 5 ಸ್ಮಾರ್ಟ್‌ಫೋನ್‌ಗಳನ್ನು ಇಂದು ಮಾರುಕಟ್ಟೆಗೆ ತಂದಿದೆ. ಆಕರ್ಷಕ ಬೆಲೆಯಲ್ಲಿ ಫ್ಲಾಗ್‌ಶಿಪ್ ದರ್ಜೆಯ ಕಾರ್ಯಕ್ಷಮತೆಯನ್ನು ಈ ಮೂಲಕ ಒದಗಿಸಿದೆ. ರೈಸಿಂಗ್ ದಿ ಬಾರ್ ಅನ್ನುತ್ತಾರಲ್ಲ, ಅದನ್ನು ಹೀಗೆ ಮಾಡಿ ತೋರಿಸಿದೆ.
ವನ್‌ಪ್ಲಸ್ ನಾರ್ಡ್ 5 ಈ ಸರಣಿಯ ಪ್ರಮುಖ ಆಕರ್ಷಣೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8s ಜನರೇಷನ್ 3 ಪ್ರೊಸೆಸರ್‌ನಿಂದ ಚಾಲಿತವಾಗಿರುವ ಇದು, 12ಜಿಬಿ LPDDR5X RAM ಮತ್ತು ಯುಎಫ್ಎಸ್ 4.0 ಸ್ಟೋರೇಜ್ ಹೊಂದಿದೆ. ಗೇಮರ್‌ಗಳು, ಮಲ್ಟಿಟಾಸ್ಕಿಂಗ್ ಮಾಡುವವರು ಮತ್ತು ನಿರಂತರ ಬಳಕೆದಾರರಿಗೆ ಸೂಕ್ತವಾದ ಉನ್ನತ ದರ್ಜೆಯ ಕಾರ್ಯಕ್ಷಮತೆಯನ್ನು ನೀಡುತ್ತದೆ. 6.74-ಇಂಚಿನ 1.5ಕೆ ಅಮೋಲ್ಡ್ ಡಿಸ್‌ಪ್ಲೇ 144 ಹರ್ಟ್ಜ್ ರಿಫ್ರೆಶ್ ರೇಟ್ ಮತ್ತು 1,800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿರುವ ಈ ಫೋನಿನ ಸ್ಕ್ರೀನು ತೀಕ್ಷ್ಣವಾದ ಸೂರ್ಯನ ಬೆಳಕಿನಲ್ಲೂ ಕಣ್ಣಿಗೆ ಸ್ಪಷ್ಟವಾಗಿಯೇ ಕಾಣುತ್ತದೆ.
ಫೋನ್ ಅಂದರೆ ಕ್ಯಾಮರಾ ಅಂತ ನಂಬಿರುವ ಯುಗ ಇದು. ನಾರ್ಡ್ 5 ಸೋನಿಯ ಎಲ್‌ವೈಟಿ-700 50ಎಂಪಿ ಸೆನ್ಸರ್ ಓಐಎಸ್ ಜೊತೆಗೆ ಹೊಂದಿದ್ದು, 8ಎಂಪಿ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 50ಎಂಪಿ ಮುಂಭಾಗದ ಕ್ಯಾಮೆರಾವನ್ನು ಒಳಗೊಂಡಿದೆ. ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾಗಳು 4ಕೆ ವೀಡಿಯೊವನ್ನು 60 ಎಫ್‌ಪಿಎಸ್‌ನಲ್ಲಿ ಬೆಂಬಲಿಸುತ್ತವೆ, ಎಛ್‌ಡಿಆರ್ ಮತ್ತು ಲೈವ್ ಫೋಟೋನಂತಹ ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ. ಸುಧಾರಿತ ಕ್ರಯೋ-ವೆಲಾಸಿಟಿ ತಂಪಾಗಿಸುವ ವ್ಯವಸ್ಥೆಯಿಂದಾಗಿ ಫೋನು ಬೇಗ ಬಿಸಿಯಾಗುವುದಿಲ್ಲ.
ಇದರ ಜತೆಗೇ ಬಂದಿರುವ, ವನ್‌ಪ್ಲಸ್ ನಾರ್ಡ್ ಸಿಇ 5 ಬೆಲೆಗೆ ತಕ್ಕ ಮೌಲ್ಯವನ್ನು ನೀಡುತ್ತದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 8350-ಎಐ ಚಿಪ್‌ಸೆಟ್‌ನಿಂದ ಸಜ್ಜುಗೊಂಡಿದ್ದು, AnTuTuನಲ್ಲಿ 1.47 ಮಿಲಿಯನ್‌ಗಿಂತಲೂ ಹೆಚ್ಚಿನ ಸ್ಕೋರ್‌ನೊಂದಿಗೆ ಈ ರೇಂಜಿನ ಫೋನುಗಳಲ್ಲೇ ಅಸಾಧಾರಣ ಅನ್ನಿಸಿಕೊಂಡಿದೆ. 6.77-ಇಂಚಿನ 120 ಹರ್ಟ್ಜ್ ಅಮೋಲ್ಡ್ ಡಿಸ್‌ಪ್ಲೇ, ದೊಡ್ಡ 5500 ಎಂಎಎಚ್ ಬ್ಯಾಟರಿ 100W SUPERVOOC ವೇಗದ ಚಾರ್ಜಿಂಗ್‌ನೊಂದಿಗೆ, ಮತ್ತು ಓಐಎಸ್ ಜೊತೆಗಿನ ಕ್ಯಾಮೆರಾ ಸೆಟಪ್ ಇದನ್ನು ದಿನಬಳಕೆಯ ಆಪ್ತಮಿತ್ರನನ್ನಾಗಿ ಮಾಡಿದೆ. ಇವೆಲ್ಲದರ ಜತೆಗೆ, ವನ್‌ಪ್ಲಸ್‌ನ ಎಐ ವೈಶಿಷ್ಟ್ಯಗಳು, ವೇಗದ ಚಾರ್ಜಿಂಗ್ ಮತ್ತು ಅತ್ಯುತ್ತಮ ಫೋನುಗಳಲ್ಲಿ ಕಂಡುಬರುವ ಬ್ಯಾಟರಿ ಸುರಕ್ಷತೆಯೂ ಇದರಲ್ಲಿದೆ.
ನಮಗನ್ನಿಸುವ ಪ್ರಕಾರ: ನಾರ್ಡ್ 5 ಮತ್ತು ನಾರ್ಡ್ ಸಿಇ 5ರೊಂದಿಗೆ, ವನ್‌ಪ್ಲಸ್ ಮಧ್ಯಮ ಶ್ರೇಣಿ ಮತ್ತು ಫ್ಲಾಗ್‌ಶಿಪ್ ನಡುವಿನ ಗೆರೆಯನ್ನು ಪರಿಣಾಮಕಾರಿಯಾಗಿ ಮಸುಕುಗೊಳಿಸಿದೆ. ನೀವು ಗೇಮಿಂಗ್ ಉತ್ಸಾಹಿಯಾಗಿರಲಿ, ಕಂಟೆಂಟ್ ಕ್ರಿಯೇಟರ್ ಆಗಿರಲಿ ಅಥವಾ ಕೇವಲ ವಿಶ್ವಾಸಾರ್ಹ, ಉನ್ನತ ಕಾರ್ಯಕ್ಷಮತೆಯ ಸ್ಮಾರ್ಟ್‌ಫೋನ್‌ಗಳನ್ನು ಬಯಸುವವರಾಗಿರಲಿ, ಈ ಎರಡು ಫೋನುಗಳನ್ನು ಗಮನಿಸಬಹುದು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.