
ಆಪಲ್ ಕಂಪನಿಯ ಭಾರತ ಉತ್ಪಾದನೆಗೆ ಅಡ್ಡಗಾಲು ಹಾಕಲು ಚೀನಾ ತಂತ್ರ ಹೆಣೆದಿದೆ. ಆಪಲ್‌ನ ಪ್ರಮುಖ ಐಫೋನ್ ತಯಾರಕ ಕಂಪನಿ ಫಾಕ್ಸ್‌ಕಾನ್, ತನ್ನ ಭಾರತೀಯ ಉತ್ಪಾದನಾ ಘಟಕಗಳಲ್ಲಿ ದುಡಿಯುತ್ತಿರುವ 300 ಕ್ಕೂ ಹೆಚ್ಚು ಚೀನೀ ಇಂಜಿನಿಯರ್‌ಗಳು ಮತ್ತು ತಂತ್ರಜ್ಞರನ್ನು ತನ್ನ ದೇಶಕ್ಕೆ ಕರೆಸಿಕೊಂಡಿದೆ. ಕಂಪನಿ ಹೊಸ ಐಫೋನ್ 17 ಉತ್ಪಾದನೆಗೆ ತಯಾರಿ ನಡೆಸುತ್ತಿರುವ ಸಮಯದಲ್ಲೇ ಈ ಬೆಳವಣಿಗೆ ನಡೆದಿದೆ. ಇದು ಹೊಸ ಉತ್ಪಾದನೆಗೆ ಗಮನಾರ್ಹ ಸವಾಲುಗಳನ್ನು ತಂದೊಡ್ಡಲಿದೆ ಎಂದು ಬ್ಲೂಂಬರ್ಗ್ ವರದಿ ಮಾಡಿದೆ. ಸುಮಾರು ಎರಡು ತಿಂಗಳ ಹಿಂದೆಯಿಂದಲೇ ತನ್ನ ನೌಕರರನ್ನು ಹಿಂದಕ್ಕೆ ತೆಗೆದುಕೊಳ್ಳುವ ಕಾರ್ಯ ಆರಂಭಿಸಿದೆ. ಈಗ ಫಾಕ್ಸ್‌ಕಾನ್‌ನ ದಕ್ಷಿಣ ಭಾರತದ ಘಟಕಗಳಲ್ಲಿ ತೈವಾನೀಸ್ ಸಿಬ್ಬಂದಿ ಮಾತ್ರ ಉಳಿದಿದ್ದಾರೆ.
ಚೀನಾದ ಈ ನಿರ್ಧಾರದಿಂದ ಆಪಲ್‌ನ ಭಾರತದಲ್ಲಿ ತನ್ನ ಉತ್ಪಾದನಾ ಚಟುವಟಿಕೆಗಳನ್ನು ವಿಸ್ತರಿಸುವ ಯತ್ನಕ್ಕೆ ದೊಡ್ಡ ಅಡ್ಡಿಯಾಗಿದ್ದು, ಫಾಕ್ಸ್‌ಕಾನ್ ಈ ಪ್ರದೇಶದಲ್ಲಿ ಹೊಸ ಐಫೋನ್ ಅಸೆಂಬ್ಲಿ ಘಟಕ ನಿರ್ಮಿಸುತ್ತಿದೆ. ಉತ್ಪನ್ನದ ಗುಣಮಟ್ಟಕ್ಕೆ ಇದರಿಂದ ತಕ್ಷಣದ ಪರಿಣಾಮವಿಲ್ಲದಿದ್ದರೂ, ಭವಿಷ್ಯದಲ್ಲಿ ಐಫೋನ್ ತಯಾರಿಕೆಗೆ ಅಗತ್ಯವಿರುವ ದಕ್ಷತೆಯಿಂದ ಅಸೆಂಬ್ಲಿ ಲೈನ್ ಕಾರ್ಯನಿರ್ವಹಿಸುವಲ್ಲಿ ಅಡೆತಡೆಯಾಗುವ ಸಾಧ್ಯತೆ ಇದೆ ಹೆಚ್ಚಿದೆ
ಭಾರತ ಮತ್ತು ಆಗ್ನೇಯ ಏಷ್ಯಾ ಪ್ರದೇಶಗಳಿಗೆ ತಂತ್ರಜ್ಞಾನ ವರ್ಗಾವಣೆ ಹಾಗೂ ಪರಿಣತಿತ ಕಾರ್ಮಿಕರ ರಫ್ತನ್ನು ತಡೆಯಲು ಚೀನಾದ ಅಧಿಕಾರಿಗಳು ತಮ್ಮ ನಿಯಂತ್ರಣ ಸಂಸ್ಥೆಗಳು ಮತ್ತು ಸ್ಥಳೀಯ ಆಡಳಿತಗಳ ಮೇಲೆ ಸದ್ದಿಲ್ಲದೆ ಒತ್ತಡ ಹಾಕುತ್ತಿದ್ದಾರೆ ಎಂದು ಬ್ಲೂಂಬರ್ಗ್ ವರದಿ ತಿಳಿಸಿದೆ. ಹೆಚ್ಚುತ್ತಿರುವ ಅಮೆರಿಕಾ-ಚೀನಾ ವ್ಯಾಪಾರ ಉದ್ವಿಗ್ನತೆಯ ನಡುವೆ, ಚೀನಾದ ಕಂಪನಿಗಳು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಇತರ ಸ್ಪರ್ಧಾತ್ಮಕ ದೇಶಗಳಿಗೆ ಸ್ಥಳಾಂತರಿಸುವುದನ್ನು ತಡೆಯುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಕಾರ್ಯತಂತ್ರವು ಕೇವಲ ಸಿಬ್ಬಂದಿಗೆ ಸೀಮಿತವಾಗಿಲ್ಲ, ಇದರ ಜೊತೆಗೆ ಹೈ-ಟೆಕ್ ಉತ್ಪಾದನೆಗೆ ಅಗತ್ಯವಿರುವ ವಿಶೇಷ ಉಪಕರಣಗಳು ಮತ್ತು ತಾಂತ್ರಿಕ ಜ್ಞಾನವನ್ನೂ ಒಳಗೊಂಡಿದೆ.
ಭಾರತ ಮತ್ತು ವಿಯೆಟ್ನಾಂ ದೇಶಗಳು, ತಮ್ಮ ಪೂರೈಕೆ ಸರಪಳಿಗಳನ್ನು ಚೀನಾದ ಅವಲಂಬನೆಯಿಂದ ಮುಕ್ತಗೊಳಿಸಲು ಬಯಸುತ್ತಿರುವ ಜಾಗತಿಕ ತಂತ್ರಜ್ಞಾನ ಕಂಪನಿಗಳಿಗೆ ಬಲವಾಗಿ ಬೆಂಬಲ ನೀಡುತ್ತಿವೆ. ಆಪಲ್ ಸಿಇಒ ಟಿಮ್ ಕುಕ್, ಚೀನಾದ ಅಸೆಂಬ್ಲಿ ಕಾರ್ಮಿಕರ ಕೌಶಲ್ಯವನ್ನು ಮನಬಂದಂತೆ ಹೊಗಳಿ ಅಟ್ಟಕ್ಕೇರಿಸಿದ್ದು, ಅವರ ಕೌಶಲ್ಯಗಳು ಕೇವಲ ಕಡಿಮೆ ವೆಚ್ಚದ ಪರಿಣತಿಯನ್ನು ಮೀರಿಸಿ, ಉತ್ಪಾದನಾ ಗುಣಮಟ್ಟ ಕಾಯ್ದುಕೊಳ್ಳಲು ಅತೀವ ಅಗತ್ಯವೆಂದು ಹೇಳಿದ್ದಾರೆ.
ಭಾರತವು ಈಗ ಜಾಗತಿಕ ಐಫೋನ್ ಉತ್ಪಾದನೆಯ ಐದನೇ ಭಾಗವನ್ನು ಒದಗಿಸುತ್ತಿದೆ. ಕೇವಲ ನಾಲ್ಕು ವರ್ಷಗಳ ಹಿಂದೆ ಆರಂಭವಾದ ದೊಡ್ಡ ಪ್ರಮಾಣದ ಒಗ್ಗಟ್ಟಿನ ಚಟುವಟಿಕೆಯನ್ನು ಪರಿಗಣಿಸಿದರೆ, ಇದು ಮಹತ್ವದ ಸಾಧನೆಯಾಗಿದೆ. ಆಪಲ್ 2026ರ ಅಂತ್ಯದ ವೇಳೆಗೆ ಯುಎಸ್ ಗೆ ರಫ್ತು ಮಾಡುವ ಹೆಚ್ಚಿನ ಐಫೋನ್‌ಗಳನ್ನು ಭಾರತದಲ್ಲಿ ತಯಾರಿಸಲು ಯೋಜಿಸಿತ್ತು. ಆದರೆ, ತಂತ್ರಜ್ಞರ ಕೊರತೆಯ ಕಾರಣದಿಂದಾಗಿ ಈಗ ಈ ಗುರಿಗೆ ತಲುಪುವಲ್ಲಿ ವಿಳಂಬದ ಸಾಧ್ಯತೆ ಇದೆ.
ಈ ಬೆಳವಣಿಗೆ, ಪೂರೈಕೆ ಸರಪಳಿಗಳನ್ನು ವೈವಿಧ್ಯಗೊಳಿಸಲು ಯತ್ನಿಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳು ಭೌಗೋಳಿಕ ರಾಜಕೀಯ ಪೈಪೋಟಿಯಲ್ಲಿ ಎದುರಿಸುತ್ತಿರುವ ಸವಾಲುಗಳ ಕುರಿತು ಬೆಳಕು ಚೆಲ್ಲುತ್ತದೆ. ಅಧ್ಯಕ್ಷ ಟ್ರಂಪ್, ಆಪಲ್‌ನ ಹೊರ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಉತ್ಪಾದನಾ ಯೋಜನೆಗಳನ್ನು ವಿರೋಧಿಸಿ, ಅಮೆರಿಕದಲ್ಲೇ ಉತ್ಪಾದನೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಇತ್ತೀಚಿನ ರಾಜತಾಂತ್ರಿಕ ಸಂವಾದಗಳ ನಡುವೆಯೂ, ಚೀನಾ-ಭಾರತ ಸಂಬಂಧಗಳು ಇನ್ನೂ ಬಿಗಡಾಯಿಸುತ್ತಲೇ ಇವೆ.
ಇತ್ತೀಚಿಗೆ, ಚೀನಾ ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸುವ ಅಪರೂಪದ ಮ್ಯಾಗ್ನೆಟ್‌ಗಳ ರಫ್ತಿಗೆ ನಿರ್ಬಂಧ ಹೇರಿದೆ. ವಿಶೇಷ ರಸಗೊಬ್ಬರ ಪೂರೈಕೆಯನ್ನು ಭಾರತಕ್ಕೆ ನಿಲ್ಲಿಸಿದೆ. ಈಗ ಫಾಕ್ಸ್‌ಕಾನ್‌ನ ಮೇಲೆ ತನ್ನ ಹಿಡಿತ ಬಳಸಿಕೊಂಡು, ಭಾರತೀಯ ಐಫೋನ್ ಉತ್ಪಾದನೆಗೂ ಬ್ರೇಕ್ ಹಾಕಲು ಮುಂದಾಗಿದೆ. ಇದರಿಂದ ಭಾರತ-ಚೀನಾ ನಡುವಿನ ವ್ಯಾಪಾರ ಸಂಘರ್ಷ ಇನ್ನೊಂದು ಹಂತಕ್ಕೆ ತಲುಪಿದೆ.
ಚೀನಾದಲ್ಲಿ ಹೆಚ್ಚಿನ ಐಫೋನ್‌ಗಳನ್ನು ಉತ್ಪಾದಿಸುತ್ತಿರುವ ಫಾಕ್ಸ್‌ಕಾನ್, ಕಳೆದ ನಾಲ್ಕು ವರ್ಷಗಳಲ್ಲಿ ಭಾರತದಲ್ಲಿ ಭಾರೀ ಹೂಡಿಕೆ ಮಾಡಿದ್ದು, ದೊಡ್ಡ ಪ್ರಮಾಣದಲ್ಲಿ ಐಫೋನ್‌ಗಳ ತಯಾರಿಕೆಯನ್ನು ನಡೆಸುತ್ತಿದೆ. ಭಾರತದಲ್ಲಿಯೇ ಅಸೆಂಬ್ಲಿ ಘಟಕಗಳನ್ನು ಸ್ಥಾಪಿಸಿದೆ. 2024ರಲ್ಲಿ, 10 ಬಿಲಿಯನ್ ಡಾಲರ್‌ಕ್ಕಿಂತ ಅಧಿಕ ಮೌಲ್ಯದ ಐಫೋನ್‌ಗಳನ್ನು ಭಾರತದಲ್ಲಿ ಅಸೆಂಬಲ್ ಮಾಡಿದ್ದು, ಅದರಲ್ಲಿ 7 ಬಿಲಿಯನ್ ಡಾಲರ್ ಮೌಲ್ಯದ ಐಫೋನ್‌ಗಳನ್ನು ಅಮೆರಿಕಕ್ಕೆ ರಫ್ತು ಮಾಡಲಾಗಿದೆ. ಸದ್ಯ, ಆಪಲ್‌ನ ಜಾಗತಿಕ ಐಫೋನ್ ಉತ್ಪಾದನೆಯಲ್ಲಿ ಭಾರತ ಶೇ. 20ರಷ್ಟು ಪಾಲು ಹೊಂದಿದೆ. ಐಫೋನ್ 17 ಬಿಡುಗಡೆಗೆ ತಯಾರಿ ನಡೆಸುತ್ತಿರುವ ಆಪಲ್ ಗೆ ಚೀನಾದ ನೀತಿ ಸಂಕಷ್ಟ ತಂದಿಟ್ಟಿದೆ
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.