
ಮೊನ್ನೆ, ಏಪ್ರಿಲ್ 5ರಂದು, ಮಾರುಕಟ್ಟೆಗೆ ಬಂದ ವನ್‌ಪ್ಲಸ್ 10 ಪ್ರೋ 5ಜಿ, ವನ್‌ಪ್ಲಸ್ ಕಂಪೆನಿಯ ಬಹುನಿರೀಕ್ಷಿತ ಫೋನ್ ಎನ್ನಬಹುದು. ವನ್‌ಪ್ಲಸ್ 9ಪ್ರೋ ಬಂದ ನಂತರ ನಾರ್ಡ್ ವರ್ಷನ್‌ಗಳನ್ನೇ ಬಿಡುಗಡೆ ಮಾಡುತ್ತಿದ್ದ ವನ್‌ಪ್ಲಸ್ ಕೊನೆಗೂ ವನ್‌ಪ್ಲಸ್ 10 ಪ್ರೋ ಎಂಬ ಆಕರ್ಷಕ ತಳಿಯನ್ನು ಭಾರತದಲ್ಲೂ ಬಿಡುಗಡೆ ಮಾಡಿದೆ. ಇದರಲ್ಲೇನಿದೆ ಅಂತ ಥಟ್ಟನೆ ಕೇಳಿದರೆ, ವನ್‌ಪ್ಲಸ್ 9ಪ್ರೋ ನೋಡಿ ಅಂತ ಹೇಳಿಬಿಡಬಹುದು. ಒಳಗಿನ ಹೂರಣ ಅದೇ. ಆದರೂ ಸಣ್ಣಪುಟ್ಟಬದಲಾವಣೆಗಳೂ ಅಭಿವೃದ್ಧಿಗಳೂ ನಡೆದಿವೆ. ಎರಡು ಕ್ಯಾಮರಾ ಇದ್ದ ಜಾಗಕ್ಕೆ ಮೂರು ಕ್ಯಾಮರಾ ಬಂದಿದೆ. ಬ್ಯಾಟರಿಯ ಪವರ್ ಹೆಚ್ಚಾಗಿದೆ. ಹೊರಮೈ ಚಂದವಾಗಿದೆ. ಬೆಲೆಯೂ ಹೆಚ್ಚಾಗಿದೆ.
ಯಾವುದೇ ಹೊಸ ಮಾಡೆಲ್ ಫೋನು ಬಂದಾಗ, ಕುತೂಹಲಕ್ಕಾದರೂ, ಅದರಲ್ಲಿ ಏನೇನು ಹೊಸದಾಗಿದೆ ಎಂದು ನೋಡುವ ಕುತೂಹಲ ಇರುತ್ತದೆ. ಕ್ರಮೇಣ ಅಂಥ ಕುತೂಹಲವನ್ನು ಕಡಿಮೆ ಮಾಡುವಷ್ಟುವೇಗವಾಗಿ ಹೊಸ ಮಾಡೆಲ್‌ಗಳು ಬರುತ್ತಿವೆ. ಒಂದಕ್ಕೂ ಮತ್ತೊಂದಕ್ಕೂ ಅಂಥ ದೊಡ್ಡ ವ್ಯತ್ಯಾಸವೇನೂ ಕಾಣಿಸುವುದಿಲ್ಲ. ಆದರೆ ಈ ಬಾರಿ, ಎರಡನೆಯ ಬಾರಿ, ಸೆಕೆಂಡ್ ಜನರೇಷನ್ ಹ್ಯಾಸಲ್‌ಬ್ಲಾಡ್ ಕೆಮರಾದೊಂದಿದೆ ವನ್‌ಪ್ಲಸ್ 10 ಬಂದಿದೆ. ಕ್ರಮವಾಗಿ 38, 8 ಮತ್ತು 15 ಮೆಗಾಪಿಕ್ಸೆಲ್ ಕೆಮರಾಗಳಲ್ಲಿ ದೂರ, ಅಗಲ ಮತ್ತು ಕರಾರುವಾಕ್ಕು ಬಣ್ಣದ ಫೋಟೋಗಳನ್ನು ಕ್ಲಿಕ್ಕಿಸಬಹುದು. ಅದನ್ನೇ ಈ ಮಾಡೆಲ್ಲಿನ ವಿಶೇಷ ಎಂದು ವನ್‌ಪ್ಲಸ್ ಹೇಳುತ್ತಿದೆಯೇನೋ ಎಂಬಂತೆ ಶಾಟ್ ಆನ್ ವನ್‌ಪ್ಲಸ್ 10 ಪ್ರೋ ಎಂದು ಬರೆಸಿಕೊಂಡ ಅನೇಕ ಫೋಟೋಗಳನ್ನು ಕೂಡ ವನ್‌ಪ್ಲಸ್ ಜಾಹೀರಾತಿನಲ್ಲಿ ಬಳಸಿಕೊಂಡಿತ್ತು.
ಒಳ್ಳೆಯ ಕ್ಯಾಮರಾ ಇರಬೇಕು, ಭಯಂಕರ ಸ್ಪೀಡು ಬೇಕು, ಬ್ಯಾಟರಿ ಬೇಗ ಚಾಜ್‌ರ್ ಆಗಬೇಕು ಎನ್ನುವವರಿಗೆ ವನ್‌ಪ್ಲಸ್ ಹೇಳಿ ಮಾಡಿಸಿದ ಫೋನು. ಕೇವಲ 32 ನಿಮಿಷದಲ್ಲಿ ಇದು ಝೀರೋದಿಂದ 100 ಪರ್ಸೆಂಟ್ ಚಾಜ್‌ರ್ ಆಗುತ್ತದೆ. ಇಡೀ ದಿನಕ್ಕೆ ಸಾಕಾಗುವಷ್ಟು, 5000 ಎಂಎಎಚ್, ಬ್ಯಾಟರಿಯೂ ಇದೆ. ಅಲ್ಲಿಗೆ ಮೂಲ ಅಗತ್ಯಗಳು ಸರಿಯಾಗಿವೆ ಎನ್ನಬಹುದು.
ವನ್‌ಪ್ಲಸ್ ನಿಧಾನವಾಗಿ ಐ ಫೋನ್ ಸಮೀಪಕ್ಕೆ ಬರಲು ಹವಣಿಸುತ್ತಿದೆ ಎಂದು ಹೇಳಲಾಗುತ್ತಿತ್ತು. ಈಗ ಅದರಲ್ಲಿ ಯಶಸ್ವಿಯೂ ಆಗಿದೆ ಎನ್ನಬಹುದು. ವನ್‌ಪ್ಲಸ್ 10 ಪ್ರೋ 128 ಜಿಬಿಯ ಬೆಲೆ 66,999. 256ಜಿಬಿ ಬೇಕಿದ್ದರೆ 71,999. ವೋಲ್ಕಾನಿಕ್ ಬ್ಲಾಕ್ ಮತ್ತು ಎಮೆರಾಲ್ಡ್ ಗ್ರೀನ್- ಎರಡು ಬಣ್ಣಗಳಲ್ಲಿ ಈ ಫೋನ್ ಲಭ್ಯ. ಎಮೆರಾಲ್ಡ್ ಗ್ರೀನ್ ಕಣ್ಣಿಗೆ ತಂಪು.
ಫೋನಿನ ಹಿಂಭಾಗದಲ್ಲಿ ಕ್ಯಾಮರಾ ಲೇಔಟ್ ಹೊಸದಾಗಿದೆ. ಚೆನ್ನಾಗಿದೆ ಅಂತ ಹೇಳುವಂತಿಲ್ಲ. ಕೊಂಚ ಉಬ್ಬಿದಂತಿರುವ ಹಿಂಬದಿಯ ಫೋನಿನ ವಿನ್ಯಾಸ ಅಡುಗೆ ಮನೆಯಲ್ಲಿರುವ ಚೆಂದದ ಗ್ಯಾಸ್ ಸ್ಟೋವಿನಂತೆ ಕಾಣುತ್ತದೆ. ಅದು ಫೋನಿಗಿಂತ ಉಬ್ಬಿರುವುದರಿಂದ ಕೆಳಗಿಡುವಾಗ ನೆಲಕ್ಕೆ ಉಜ್ಜುವ ಭಯದಿಂದ ಪಾರಾಗಲು ಕವರ್ ಹಾಕಲೇಬೇಕು.
ಈ ಫೋನ್ ಸ್ಲಿಮ್ ಆಗಿದೆ. ಒಂದೇ ಕೈಯಲ್ಲಿ ಹಿಡಿದುಕೊಂಡು ಆಪರೇಟ್ ಮಾಡುವುದಕ್ಕೆ ಸರಿಯಾಗಿದೆ. ಆದರೆ ಎರಡೂ ಕೈಯಲ್ಲಿ ಹಿಡಕೊಂಡು ಟೈಪ್ ಮಾಡುವಾಗ ಕೈಯಿಂದ ಜಾರುವಷ್ಟುನಯವಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.