ನಿಮ್ಮ ಮೊಬೈಲ್‌ ಕಳ್ಕೊಂಡ್ರೆ ಚಿಂತೆ ಬೇಡ: ದೇಶಾದ್ಯಂತ ಜಾರಿಯಾಗ್ತಿದೆ ಸಿಇಐಆರ್‌ ವ್ಯವಸ್ಥೆ

By Kannadaprabha NewsFirst Published May 15, 2023, 2:59 PM IST
Highlights

‘ಸಿಇಐಆರ್‌’ ಹೆಸರಿನ ಸಿಸ್ಟಂ ಅನ್ನು ಈಗಾಗಲೇ ದಿಲ್ಲಿ, ಕರ್ನಾಟಕ ಹಾಗೂ ಈಶಾನ್ಯ ಭಾರತದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಈಗ ಭಾರತದಾದ್ಯಂತ ಈ ವ್ಯವಸ್ಥೆಯು ಜಾರಿಗೆ ಬರಲು ಸಿದ್ಧವಾಗಿದೆ. 

ನವದೆಹಲಿ (ಮೇ 15, 2023): ಒಂದು ವೇಳೆ ಮೊಬೈಲ್‌ ಫೋನ್‌ ಕಳೆದು ಹೋದರೆ ಅಥವಾ ಕಳವಾದರೆ ಜನರು ಚಿಂತಿಸಬೇಕಿಲ್ಲ. ಆ ಮೊಬೈಲ್‌ ಅನ್ನು ಪತ್ತೆ ಮಾಡಿ, ಅದು ದುರ್ಬಳಕೆ ಆಗದಂತೆ ಬ್ಲಾಕ್‌ ಮಾಡುವ ತಂತ್ರಜ್ಞಾನ ಮೇ 17ರಿಂದ ಭಾರತದಾದ್ಯಂತ ಜಾರಿಗೆ ಬರಲಿದೆ. ಅಂದು ಸಕಾರವು ಮೊಬೈಲ್‌ ಫೋನ್‌ ಟ್ರಾಕಿಂಗ್‌ ವ್ಯವಸ್ಥೆಯನ್ನು ಲೋಕಾರ್ಪಣೆಗೊಳಿಸಲಿದೆ.
‘ಸಿಇಐಆರ್‌’ ಹೆಸರಿನ ಸಿಸ್ಟಂ ಅನ್ನು ಈಗಾಗಲೇ ದಿಲ್ಲಿ, ಕರ್ನಾಟಕ ಹಾಗೂ ಈಶಾನ್ಯ ಭಾರತದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಈಗ ಭಾರತದಾದ್ಯಂತ ಈ ವ್ಯವಸ್ಥೆಯು ಜಾರಿಗೆ ಬರಲು ಸಿದ್ಧವಾಗಿದೆ. ಮೇ 17ರಂದು ದೇಶಾದ್ಯಂತ ಇದು ಜಾರಿಗೆ ಬರಲಿದೆ ಎಂದು ದೂರಸಂಪರ್ಕ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಳೆದು ಹೋದ ಮೊಬೈಲ್‌ ಪತ್ತೆ ಹೇಗೆ?:
ಟೆಲಿಮ್ಯಾಟಿಕ್ಸ್‌ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರ (ಸಿ ಡಾಟ್‌), ಕಳೆದು ಹೋದ ಮೊಬೈಲ್‌ ಟ್ರಾಕ್‌ ಮಾಡಲು ಹಾಗೂ ಕ್ಲೋನ್‌ ಮಾಡಿದ ಮೊಬೈಲ್‌ಗಳನ್ನು ಪತ್ತೆ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಮೊಬೈಲ್‌ ಫೋನ್‌ ಸಿದ್ಧಪಡಿಸುವ ಕಂಪನಿಗಳು, ಫೋನ್‌ನಲ್ಲಿರುವ 15 ಅಂಕಿಗಳ ಐಎಂಇಐ ಸಂಖ್ಯೆಯನ್ನು ದೂರಸಂಪರ್ಕ ಕಂಪನಿಗಳೊಂದಿಗೆ ಹಾಗೂ ಸಿಇಐಆರ್‌ ವ್ಯವಸ್ಥೆಯೊಂದಿಗೆ ಹಂಚಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ. ಇದರಿಂದಾಗಿ ಟೆಲಿಕಾಂ ಕಂಪನಿಗಳು ಹಗೂ ಸಿಇಐಆರ್‌ ವ್ಯವಸ್ಥೆಗೆ ಐಎಂಇಐ ನಂಬರ್‌ ಹಾಗೂ ಅದಕ್ಕೆ ಲಿಂಕ್‌ ಆಗಿರುವ ಮೊಬೈಲ್‌ ಅನ್ನು ಪತ್ತೆ ಮಾಡಲು ಸಾಧ್ಯವಾಗುತ್ತದೆ.

ಇದನ್ನು ಓದಿ: ಬೆಂಗಳೂರಿನಲ್ಲಿ ಬೃಹತ್ ಪ್ರಮಾಣದ ಭೂಮಿ ಖರೀದಿಸಿದ ಐಫೋನ್‌ ತಯಾರಕ ಫಾಕ್ಸ್‌ಕಾನ್: 1 ಲಕ್ಷ ಉದ್ಯೋಗ ಸೃಷ್ಟಿ!

ಲಾಭ ಏನು?:
ಸಿಇಐಆರ್‌ನ ಮೂಲ ಉದ್ದೇಶವೆಂದರೆ ಕಳೆದು ಹೋದ ಮೊಬೈಲ್‌ ಪತ್ತೆ ಮಾಡಿ ಅದನ್ನು ಬ್ಲಾಕ್‌ ಮಾಡುವುದು. ಇದರಿಂದಾಗಿ ಮೊಬೈಲ್‌ ಫೋನ್‌ ಕಳವು ಕಡಿಮೆಯಾಗುತ್ತದೆ. ಪೊಲೀಸರಿಗೂ ಕಳೆದು ಹೋದ ಅಥವಾ ಕ್ಲೋನ್‌ ಮಾಡಿದ ಮೊಬೈಲ್‌ ಪತ್ತೆಗೆ ಇದು ಸಹಕಾರಿಯಾಗುತ್ತದೆ. ಜತೆಗೆ ಗ್ರಾಹಕರ ಮೊಬೈಲ್‌ ದತ್ತಾಂಶ ರಕ್ಷಣೆ ಸಾಧ್ಯವಾಗುತ್ತದೆ. ಮೊಬೈಲ್‌ ಕಳ್ಳಸಸಾಗಣೆಯೂ ನಿಲ್ಲುತ್ತದೆ.

ಇತ್ತೀಚೆಗೆ ಕರ್ನಾಟಕದಲ್ಲಿ ಇದೇ ಸಿಇಐಆರ್‌ ವಿಧಾನ ಬಳಸಿ 2500 ಕಳೆದು ಹೋದ ಮೊಬೈಲ್‌ ಪತ್ತೆ ಮಾಡಿ ಮಾಲೀಕರಿಗೆ ಮರಳಿಸಲಾಗಿತ್ತು. ಹೀಗಾಗಿ ಇಂಥ ಹೊಸ ತಂತ್ರಜ್ಞಾನವು ಮೊಬೈಲ್‌ ಕಳ್ಳರ ಮೂಲ ಉದ್ದೇಶವನ್ನೇ ಹೊಸಕಿ ಹಾಕುತ್ತದೆ.

ಇದನ್ನೂ ಓದಿ: ಸೋನಮ್ ವಾಂಗ್‌ಚುಕ್‌ ಆವಿಷ್ಕಾರ: ಹಿಮಾಲಯದಲ್ಲಿ ಅಂತರ್ಜಾಲ ಸಂಪರ್ಕ ಬದಲಾಯಿಸಿದ 'ಲೈಫೈ'!

ಐಎಂಇಐ ನಂಬರ್‌ ತಿರುಚಲು ಬ್ರೇಕ್‌:
ಇದೇ ವೇಳೆ, ‘ಕಳವಾದ ಮೊಬೈಲ್‌ ಫೋನ್‌ನ ಐಎಂಇಐ ನಂಬರ್‌ ಬದಲಿಸಲು ಕಿಡಿಗೇಡಿಗಳು ಯತ್ನಿಸುತ್ತಾರೆ. ಇದು ಕಳೆದು ಹೋದ ಮೊಬೈಲ್‌ ಪತ್ತೆಗೆ ಸವಾಲಿನ ಸಂಗತಿ ಆದರೆ ವಿವಿಧ ದತ್ತಾಂಶಗಳ ಮೂಲಕ ಕ್ಲೋನ್‌ ಆಗಿರುವ ಮೊಬೈಲ್‌ ಅನ್ನು ಸಿಇಐಆರ್‌ ಪತ್ತೆ ಮಾಡಿ ಅದನ್ನು ಬ್ಲಾಕ್‌ ಮಾಡುತ್ತದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ಕೃತಕ ಬುದ್ಧಿಮತ್ತೆಯಿಂದ ಉದ್ಯೋಗ, ಮಾನವೀಯತೆಗೆ ಡೇಂಜರ್‌ : ಗೂಗಲ್‌ನಿಂದ ಹೊರಬಂದ AI ಜನಕ

click me!