
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು ಮಂಡ್ಯ ಜಿಲ್ಲೆಯ ಜೀವನಾಡಿ ಕೃಷ್ಣರಾಜ ಸಾಗರ (KRS) ಜಲಾಶಯವು 'ಶತಕ' ಬಾರಿಸಿದೆ. ಭಾನುವಾರ ಜಲಾಶಯದ ನೀರಿನ ಮಟ್ಟ 100 ಅಡಿ ತಲುಪುವ ಮೂಲಕ ಕಾವೇರಿ ಕೊಳ್ಳದ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.
ಕಳೆದ ಕೆಲವು ದಿನಗಳಿಂದ ಕೊಡಗು ಮತ್ತು ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೆಆರ್‌ಎಸ್ ಅಣೆಕಟ್ಟಿಗೆ ಒಳಹರಿವು ಗಣನೀಯವಾಗಿ ಏರಿಕೆಯಾಗಿದೆ. ಕೇವಲ ಮೂರು ದಿನಗಳ ಅಂತರದಲ್ಲಿ ಜಲಾಶಯದ ನೀರಿನ ಮಟ್ಟದಲ್ಲಿ ಬರೋಬ್ಬರಿ 8 ಅಡಿಗಳಷ್ಟು ಏರಿಕೆಯಾಗಿರುವುದು ವಿಶೇಷ.
ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 49.452 ಟಿಎಂಸಿ ಆಗಿದ್ದು, ಸದ್ಯ 23.079 ಟಿಎಂಸಿ ನೀರು ಸಂಗ್ರಹವಾಗಿದೆ. ಅಂದರೆ ಜಲಾಶಯವು ಸದ್ಯ ಅರ್ಧದಷ್ಟು ಭರ್ತಿಯಾದಂತಾಗಿದೆ. ಪ್ರಸ್ತುತ ಜಲಾಶಯಕ್ಕೆ 32 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರು ಹರಿದು ಬರುತ್ತಿದೆ. ಇದೇ ರೀತಿ ಮುಂದಿನ 10 ರಿಂದ 15 ದಿನಗಳ ಕಾಲ ಒಳಹರಿವು ಮುಂದುವರಿದರೆ ಕೆಆರ್‌ಎಸ್ ಜಲಾಶಯ ಈ ಬಾರಿ ಸಂಪೂರ್ಣ ಭರ್ತಿಯಾಗುವ ಸಾಧ್ಯತೆಯಿದೆ.
ಕಳೆದ ಕೆಲವು ತಿಂಗಳುಗಳಿಂದ ನೀರಿನ ಕೊರತೆಯಿಂದಾಗಿ ಕಾವೇರಿ ಹೋರಾಟ ತೀವ್ರಗೊಂಡಿತ್ತು. ಆದರೆ ಈಗ ಮಳೆಯ ಕೃಪೆಯಿಂದಾಗಿ ಜಲಾಶಯದ ಮಟ್ಟ ಏರುತ್ತಿರುವುದು ಮತ್ತು ಉತ್ತಮ ಮಳೆಯಾಗುತ್ತಿರುವುದರಿಂದ ಕಾವೇರಿ ಹೋರಾಟದ ಕಾವು ಸದ್ಯಕ್ಕೆ ತಣ್ಣಗಾಗಿದೆ.
ಜಲಾಶಯಕ್ಕೆ ಒಳಹರಿವು ಹೆಚ್ಚುತ್ತಿರುವುದರಿಂದ ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ರೈತರು ಈ ಬೆಳವಣಿಗೆಯಿಂದ ಸಂಸತಗೊಂಡಿದ್ದು, ಕೃಷಿ ಚಟುವಟಿಕೆಗಳಿಗೆ ಮರುಚಾಲನೆ ನೀಡುವ ನಿರೀಕ್ಷೆಯಲ್ಲಿದ್ದಾರೆ.