ಜೀವನದ ದಿಂಡಿಯಾತ್ರೆ ಮುಗಿಸಿದ ಚಂದ್ರಕಾಂತ ಕುಸನೂರ

By Kannadaprabha News  |  First Published Apr 26, 2020, 8:50 AM IST

ಹೀಂಗ ಜೀವನದ ದಿಂಡಿಯಾತ್ರಾ ಮುಗಿಸಿ, ದಿನಾಂಕ. 18.04.2020ರಂದು ಗಂತವ್ಯದ ಕಡೀಗ - ಹಾಂಗಾದ್ರ ನಡೀ ಅಂದೊರಂತೆ ಕೃತಾರ್ಥತೆಯ ಭಾವದಲ್ಲಿ ಹೋಗೇಬಿಟ್ರು. ಅವರೇ ಸಾರಸ್ವತ ಲೋಕದ ಕವಿ, ಕಾದಂಬರಿಕಾರ, ಕಥೆಗಾರ, ನಾಟಕಕಾರ, ಚಿತ್ರಕಲಾವಿದ, ಚಿಂತಕ, ಚಂದ್ರಕಾಂತ ಕುಸನೂರ.


ಕುಸನೂರಕರ ಆಗಿದ್ದವರು ಕುಸನೂರ ಆದ ಕತೆ

- ಶ್ರೀಪತಿ ಮಂಜನಬೈಲು

Tap to resize

Latest Videos

undefined

‘ನಿನಗ ಹಾದಿ ಗೊತ್ತದೇನು?’

‘ಇಲ್ಲಾ... ನಿನಗ?’

‘ನನ್ಗೂ ಗೊತ್ತಿಲ್ಲಪ್ಪ ’

‘ಇರಲಿಲ್ಲಾ, ಇಲ್ಲಾ, ಹಿಂಗ ನಡ್ಕೋತಾ ಹೊಂಟ್ರಾತು, ಒಂದಿಲ್ಲಾ ಒಂದಿನ ಗಂತವ್ಯ ಸಿಕ್ಕೇ ಸಿಗ್ತದ - ಪಂಢರಪುರಕ್ಕ್ ಹೋಗೋ ವಾರಕರಿಗಳ ದಿಂಡಿ ಯಾತ್ರಾದ ಹಾಂಗ ನಮ್ಮ ಜೀವನ - ಹೋಗಬೇಕು, ಬರಬೇಕು ....... ಮತ್ತ ಹೋಗಬೇಕು.’

‘ಹಾಂಗಂತೀ - ಹಾಂಗಾದ್ರ ನಡೀ’

(ದಿಂಡಿ ನಾಟಕದ ಮಾತುಗಳು)

ಅಕ್ಟೋಬರ್‌ 21 ರ 1931ರಲ್ಲಿ ಕಲಬುರ್ಗಿಯಲ್ಲಿ ಜನಿಸಿದ ಇವರ ತಾಯಿಮಾತು ಕನ್ನಡವಾಗಿದ್ದರೂ, ಉಳಿದವರೆಲ್ಲ ಮನೆಯಲ್ಲಿ ಮಾತನಾಡುತ್ತಿದ್ದುದು ಉರ್ದುಭಾಷೆ. ಸರೋಜಿನಿ ಅವರು ಬಾಳಸಂಗಾತಿಯಾದ ನಂತರವೇ ಇವರ ಮನೆಯಲ್ಲಿ ಕನ್ನಡದ ವಾತಾವರಣ ಗಟ್ಟಿಯಾಗಿದ್ದು ಎಂದು ಅವರು ಹೇಳುತ್ತಿದ್ದರು. ಅವರ ಪ್ರಾಥಮಿಕ, ಮಾಧ್ಯಮಿಕ, ಕಾಲೇಜು ಶಿಕ್ಷಣವೆಲ್ಲಾ ಆಗಿದ್ದು ಉರ್ದು ಮಾಧ್ಯಮದಲ್ಲೇ. ಇವರ ಶಿಕ್ಷಣದ ಜೊತೆಗಾರರಾಗಿದ್ದವರು ಖ್ಯಾತ ಲೇಖಕ ಜಯತೀರ್ಥ ರಾಜಪುರೋಹಿತ, ಶಾಂತರಸ, ಸೇವಾ ಆಡಳಿತಗಾರರಾಗಿದ್ದ ಅನಿರುದ್ಧ ದೇಸಾಯಿ, ನಾ.ನಾ.ಕಟಾವಿ ಮುಂತಾದವರು.

ಬಡಗು ತಿಟ್ಟಿನ ಚಂಡೆ ಮಾಂತ್ರಿಕ ಕೃಷ್ಣಯಾಜಿ ಇಡಗುಂಜಿ ನಿಧನ

ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಹಿಂದಿ ಭಾಷೆಯಲ್ಲಿ ಎಂ ಎ ಮತ್ತು ಬಿ.ಎಡ್‌. ಪದವಿಯ ನಂತರ, ನೈಜಾಂಶಾಹಿಯ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿ ಸೇವೆ ಆರಂಭಿಸಿದರು. ಮುಂದೆ ರಾಜ್ಯ ಪುನರ್‌ವಿಂಗಡನೆಯಾದ ನಂತರ ಕರ್ನಾಟಕದ ಶಿಕ್ಷಣ ಇಲಾಖೆಯಲ್ಲಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಎರವಲು ಸೇವೆಯಲ್ಲಿ ಬೆಳಗಾವಿಗೆ 1982ರಲ್ಲಿ ಸಹಾಯಕ ನಿರ್ದೇಶಕರಾಗಿ ವರ್ಗವಾಗಿ ಬಂದು, ಅಲ್ಲಿಯೇ ಉಪ-ನಿರ್ದೇಶಕರಾಗಿ 1991ರಲ್ಲಿ ನಿವೃತ್ತಿ ಹೊಂದಿದರು. ಅಲ್ಲದೇ ಬೆಳಗಾವಿಯಲ್ಲಿಯೇ ಸ್ಥಳೀಕರಾಗಿ, ಬೆಳಗಾವಿಯವರಾದರು.

ಚಂದ್ರಕಾಂತ ಕುಸನೂರ ಲೇಖಕರಾಗಿ, 1960ರ ದಶಕದಲ್ಲಿ ಗುರುತಿಸಿಕೊಂಡದ್ದು ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ. ಆ ಭಾಷೆಗಳ ನಿಯತಕಾಲಿಕೆಗಳಲ್ಲಿ, ಅವರ ಕವಿತೆ, ಗಜಲ್‌, ಕಥೆಗಳು, ಚಂದ್ರಕಾಂತ ಕುಸನೂರಕರ ಎಂಬ ನಾಮಾಂಕಿತದಿಂದ ಪ್ರಕಟವಾಗುತ್ತಿದ್ದವು. ಆ ಸಂದರ್ಭದಲ್ಲೇ ಅವರಿಂದ ‘ರೇಶಮ್‌ ಕಿ ಗುಡಿಯಾ’ ಕಥಾ ಸಂಕಲನ ಮತ್ತು ‘ಮಹಾಪುರುಷ’ ಎನ್ನುವ ನಾಟಕ ಪ್ರಕಟಗೊಂಡಿದ್ದವು. ಈ ಕೃತಿಗಳು ಹಿಂದಿ ಭಾಷಾ ವಲಯದಲ್ಲಿ ಅವರಿಗೆ ದೊಡ್ಡ ಹೆಸರನ್ನು ತಂದುಕೊಟ್ಟವು. ಕೆಲ ವರ್ಷಗಳ ನಂತರ ‘ರೇಶಮ್‌ ಕಿ ಗುಡಿಯಾ’ ಕೃತಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಯಿತು.

ಕೇಂದ್ರದ ಮಾಜಿ ಸಚಿವ M V ರಾಜಶೇಖರನ್ ಇನ್ನಿಲ್ಲ

ಹೀಗಿರಲಾಗಿ ಆಗ ಧಾರವಾಡದಲ್ಲಿ ಹಿಂದಿ ಪ್ರಚಾರಸಭಾ ಆಶ್ರಯದಲ್ಲಿ ಬಹು ಭಾಷಾ ಕವಿ ಸಮ್ಮೇಳನ ಆಯೋಜಿಸಲ್ಪಟ್ಟಿತ್ತು. ಸಮ್ಮೇಳನದ ಅಧ್ಯಕ್ಷರಾಗಿದ್ದವರು ವರಕವಿ ದ.ರಾ.ಬೇಂದ್ರೆಯವರು. ಇವರಿಂದ ಹಿಂದಿ ಕಾವ್ಯವಾಚನ ಕೇಳಿಸಿಕೊಂಡ ಬೇಂದ್ರೆಯವರು, ಮೆಚ್ಚಿ, ಕರೆದು ಕೇಳಿದರಂತೆ, ‘ನಿಮ್ಮ ಮನೆ ಭಾಷೆ ಯಾವುದು?’ ಇವರು ‘ಕನ್ನಡ’ ಅಂದಾಗ ಬೇಂದ್ರೆಯವರು, ‘ಕುಸನೂರಕರ, ನಿಮ್ಮ ಈ ಕರ ಕನ್ನಡದ ಕರವಾಗಲಿ, ಇನ್ನ ಮ್ಯಾಲ ನೀವು ಬರೆಯೋದೆಲ್ಲ ಕನ್ನಡ ಆಗಿರ್ತದ’ ಅಂತ ಅಪ್ಪಣೆ ಕೊಟ್ಟರಂತ. ಅವರ ಮನಸ್ಸನ್ನು ನಾಟಿತು ಬೇಂದ್ರೆಯವರ ಈ ನುಡಿ. ಮುಂದೆ ಅವರು ಬರೆದದ್ದೆಲ್ಲ ಕನ್ನಡ. ಹಿಂದಿ, ಉರ್ದು, ಮರಾಠಿಯನ್ನು ಅವರ ಉಳಿಸಿಕೊಂಡದ್ದು ಕೇವಲ ಭಾಷಾಂತರಕ್ಕೆ ಮಾತ್ರ. ಇವರ ಕರಗಳು ಕನ್ನಡದ್ದಾದ ಮೇಲೆ, ಅವರ ಕೃತಿನಾಮ ಚಂದ್ರಕಾಂತ ಕುಸನೂರ ಆಯಿತು ಎಂದು ಅವರು ಆಗಾಗ ನೆನಪಿಸಿಕೊಳ್ಳುತ್ತಿದ್ದರು. ನಂತರದಲ್ಲಿ ಅವರ ಕೃತಿ ರಚನೆಯ ಪ್ರಕಾರಗಳ ಮತ್ತು ರೇಖಾ ಚಿತ್ರಗಳ, ತೈಲ ಚಿತ್ರಗಳ ಕುಟುಂಬ; ಬೃಹತ್‌ ಆಗಿ ಬೆಳೆದದ್ದು ಒಂದು ವಿಸ್ಮಯ. ಒಂದಂತೂ ನಿಜ, ನಾಟಕಕಾರರಾಗಿ ಮತ್ತು ಭಾಷಾಂತರಕಾರರಾಗಿ ಕುಸನೂರರನ್ನು ಗುರುತಿಸಿದಷ್ಟು, ಕಾವ್ಯ, ಕಾದಂಬರಿ, ಕಥೆಗಾರರಾಗಿ, ಚಿತ್ರಕಲಾವಿದರಾಗಿ ಗುರುತಿಸಿದ್ದು ಕ್ವಚಿತ್ತವೆಂದೇ ಹೇಳಬಹುದು. ಪ್ರಯೋಗಶೀಲ ಭಾಷೆ ಮತ್ತು ಸಮಷ್ಠಿ ದರ್ಶನÜ ಬರಹದ ವಿಶಿಷ್ಟತೆಯೇ ಅವರ ಕೃತಿಗಳ ವಿಶೇಷತೆಯಾಗಿದೆ. ಸಾಮಾಜಿಕ ನೆಲೆಯ ವೈರುಧ್ಯಗಳ ವಿಡಂಬನೆಗಳನ್ನು ಓದುಗನಲ್ಲಿ ನೈಜವಾಗಿಸುವ ಕ್ರಿಯಾತ್ಮಕ ಆಯಾಮಗಳೊಂದಿಗೆ; ಜೀವನ ದರ್ಶನ ಮಾಡಿಸುವ ಕ್ರಿಯೆ ಇವರ ಎಲ್ಲಾ ತರಹದ ಕೃತಿಗಳಲ್ಲಿ ಕಾಣಬಹುದು. ಅಲ್ಲದೆ ಇವೆಲ್ಲವನ್ನು ತಿಳವಳಿಕೆಯ ಸುಲಭತೆಗೆ ಸಾದರಗೊಳಿಸುವ ಶ್ರೇಷ್ಠತೆಯೂ ಇವರ ಕೃತಿಗಳಲ್ಲಿವೆ.

ಒಂದು ಕಾಲದಲ್ಲಿ ಅಬ್ಸರ್ಡ್‌ ನಾಟಕಗಳ ಫಸಲು ಹುಲಸಾಗಿತ್ತು. ಅದರಲ್ಲಿ ಹೆಚ್ಚು ಫಸಲು ಬೆಳೆದು, ಅಂತಹ ನಾಟಕಗಳನ್ನು ಅಸಂಗತ ಎಂಬ ಹೆಸರಿನಿಂದ ಹೆಚ್ಚು ಪ್ರಚುರಗೊಳಿಸಿದ ಕೀರ್ತಿ ಸಲ್ಲುವುದು ಕುಸನೂರರಿಗೆ. ಅವರು ಬರೆದ ಅಸಂಗತ ಏಕಾಂಕಗಳ ಸಂಖ್ಯೆ ಹದಿನೈದಕ್ಕೂ ಹೆಚ್ಚು. ವಿದೂಷಕ, ಆನಿಬಂತಾನಿ, ರತ್ತೋ ರತ್ತೋ ರಾಯನ ಮಗಳೇ, ಅಂಟಿಮಿಂಟಿ ಚಾವಲ್‌ ಚಿಂಟಿ, ಕನಸು ಮುಂತಾದವುಗಳು. ಆ ಕಾಲದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಕುಸನೂರರ ಈ ಏಕಾಂಕಗಳನ್ನು ಸ್ಪರ್ಧೆಗೆ ಆಯ್ದುಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು.

ಅವರ ಪೂರ್ಣಾವಧಿ ನಾಟಕಗಳು ಸಹಿತ ಬಹಳಷ್ಟಿವೆ. ಪಾರ್ಟಿ, ಮಹಾನಿರ್ವಾಣ, ದಿಂಡಿ, ಸೆಳೆತ, ಹುಟ್ಟು ಸಾವುಗಳ ನಡುವೆ, ರಿಹರ್ಸಲ್‌, ಮೃಗಜಲ, ಸುರೇಖಾ ಮೇಡಂ, ಗ್ರಹಣ, ಒಂದು ಮನೆಯ ಸುತ್ತ, ಹೀಗೊಂದೂರಾಗ, ಎಸ್‌ ಮಿ.ಪಂಡಿತರಾವ್‌ ಮುಂತಾದವುಗಳು. ದಿಂಡಿ, ರಿಹರ್ಸಲ್‌ ನಾಟಕಗಳು, ನಾಡಿನ ಬೇರೆ ಬೇರೆ ತಂಡಗಳಿಂದ ಹಲವಾರು ಪ್ರದರ್ಶನಗಳು ಕಂಡಿವೆ. ಅಲ್ಲದೆ ಇವರ ಹೆಚ್ಚಿನ ನಾಟಕಗಳನ್ನು ರಂಗಸಂಪದ ಬೆಳಗಾವಿ ತಂಡ ಸಾದರ ಪಡಿಸಿರುವುದಲ್ಲದೇ, ಹೊರರಾಜ್ಯದ ಪ್ರಮುಖ ನಗರಗಳಾದ ಪಣಜಿ, ವಾಸ್ಕೊ, ಮಡಗಾಂವ್‌, ಸಾಂಗ್ಲಿ, ಪುಣೆ, ಮುಂಬಯಿ ಮುಂತಾದ ಕಡೆಗಳಲ್ಲಿ ಪ್ರದರ್ಶಿಸಿದೆ. ಈ ಎಲ್ಲ ನಾಟಕಗಳಲ್ಲಿ ನಾವು ಕಾಣುವ ಸಾಮಾನ್ಯ ಅಂಶವೆಂದರೆ, ಅದು ಸಣ್ಣ ಸಣ್ಣ ಘಟನೆಗಳಲ್ಲಿ ಪ್ರೇಕ್ಷಕ ತೊಡಗಿಕೊಳ್ಳುವಂತೆ ಅನುಭವಿಸುವ ಕ್ರಿಯೆ.

ಕನ್ನಡ ಚಿತ್ರರಂಗದ ಹಾಸ್ಯ ನಟ ಬುಲೆಟ್ ಪ್ರಕಾಶ್‌ ಇನ್ನಿಲ್ಲ!

ಇನ್ನು ಇವರ ಕಾದಂಬರಿಗಳು, ಗೊಹರ್‌ಜಾನ್‌ ಮಾಲತಿ ಮತ್ತು ನಾನು, ಯಾತನಾ ಶಿಬಿರ, ಕೆರೂರನಾಮಾ, ಒಂದು ಕೈಫಿಯತ್‌,ಮತ್ತು ಚಚ್‌ರ್‍ಗೇಟ್‌. ‘ಅವರ ಕಾದಂಬರಿಗಳೊಳಗಿನ ಕ್ರಿಯೆ, ಮನುಷ್ಯನ ಮನಸ್ಸಿಗೆ ಪಾತಾಳ ಗರಡಿ ಹಾಕಿ ಜಾಳಿಸಿದಂತೆ ಗಂಭೀರವಾದ, ತಳಮಳಗೊಳಿಸುವಂತಹ ಅನುಭವ ನೀಡುತ್ತದೆ’ ಎಂದು ಲೇಖಕ, ವಿಮರ್ಶಕ ಡಾ ರಾಜಶೇಖರ ಮಠಪತಿಯವರು ದಾಖಲಿಸುತ್ತಾರೆ. ಅಲ್ಲದೆ ಅವರಿಂದ ಮೂರು ಕಥಾ ಸಂಕಲನಗಳು, ಒಂದು ಕವನ ಸಂಕಲನ ಹೊರಬಂದಿವೆ. ಇವರು ಹಲವು ಕನ್ನಡದ ಕೃತಿಗಳನ್ನು ಹಿಂದಿಗೆ ಅನುವಾದಿಸಿದ್ದು, ಅವುಗಳಲ್ಲಿ ಅನಂತಮೂರ್ತಿಯವರ ಸಂಸ್ಕಾರಕ್ಕೆ ಕೇಂದ್ರ ಸರ್ಕಾರದ ಮತ್ತು ಉತ್ತರ ಪ್ರದೇಶ ಸರ್ಕಾರದ ಪ್ರಶಸ್ತಿಗಳು ಬಂದಿವೆ ಹಾಗೂ ಆಲನಹಳ್ಳಿಯವರ ಕಾಡುವಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿರುತ್ತದೆ. ರಾಜ್ಯದ ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿ ಗೌರವ ಪ್ರಶಸ್ತಿಗಳಲ್ಲದೆ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿರುತ್ತಾರೆ. ಚಿತ್ರಕಲಾವಿದರಾಗಿ ಅವರು ನಾಲ್ಕುನೂರಕ್ಕಿಂತ ಹೆಚ್ಚು ರೇಖಾಚಿತ್ರಗಳನ್ನು, ತೈಲಚಿತ್ರಗಳನ್ನು ಅಬಸ್ಟ್ರಾಕ್ಟ್ ಪೇಂಟಿಂಗ್‌ಗಳನ್ನು ಮುಂಬಯಿ, ಕೋಲ್ಕತ್ತಾ, ಬೆಂಗಳೂರು, ಮೈಸೂರು, ದೆಹಲಿ, ಗೋವಾ ಮುಂತಾದ ನಗರಗಳಲ್ಲಿ ಪ್ರದರ್ಶನ ನೀಡಿರುತ್ತಾರೆ. ಈ ವಿಷಯದ ಮೇಲೆ ಅವರಿಂದ ಪ್ರಕಟಿಸಲ್ಪಟ್ಟ

ಕೃತಿಗಳೆಂದರೆ- ಕಲೆ ಅನುಭವ ಮತ್ತು ಅನುಭಾವ, ಸಾಹಿತ್ಯ ಮತ್ತು ಚಿತ್ರ ಕಲೆ, ಕಲೆ ಮತ್ತು ಚಿಂತನೆ.

ಇಷ್ಟೆಲ್ಲಾ ಪ್ರತಿಭೆಯ ಕುಸನೂರರ ಕೃತಿಗಳು ಯಾಕೆ ಸಾಹಿತ್ಯಜನಪರಂಪರೆಯಲ್ಲಿ ಅಷ್ಟಾಗಿ ಚರ್ಚೆಗೆ ಒಳಪಡಲಿಲ್ಲ ಅನ್ನುವುದು ಒಂದು ಪ್ರಶ್ನೆ. ಬಹುಶಃ ಅವರು ರಚಿಸಿದ್ದನ್ನು ಮುಂದೆ ಪೋಷಿಸುತ್ತಿರಲಿಲ್ಲವೆಂದು ಭಾವಿಸಬಹುದೇ ಅಥವಾ ನಂಬಿಕೆ ಮತ್ತು ಅಪನಂಬಿಕೆಗಳ ಹುದಲಲ್ಲಿ ಸಿಕ್ಹಾಕಿಕೊಂಡಿದ್ದರೆ? ಇಂತಹ ಒಂದು ವಿಚಿತ್ರ ಸೆಳೆತಕ್ಕೆ ಈಡಾಗಿದ್ದರೆ? ಗೊತ್ತಿಲ್ಲ. ಅಂತೂ ಇಹದ ಯಾತ್ರೆ ಮುಗಿಸಿದ್ದಾರೆ. ಮುಂದೆ ಅವರ ಕೃತಿಗಳನ್ನು ಭವಿಷ್ಯದ ಭವನ ಎನ್ನೋಣವೇ!

click me!