ಕೊರೋನಾ ಕಾಲದಲ್ಲಿ ಫೇಕ್‌ನ್ಯೂಸ್‌ ಎಂಬ ಬಿಜಿನೆಸ್‌! ಸುದ್ದಿಯಷ್ಟೇ ಸುದ್ದಿಮೂಲವೂ ಮುಖ್ಯ

By Kannadaprabha News  |  First Published Apr 19, 2020, 8:31 AM IST

ಹಲವಾರು ಪತ್ರಿಕೆಗಳನ್ನು ತರಿಸಿ ಓದುತ್ತಿದ್ದ ಹಿರಿಯ ಮಿತ್ರರೊಬ್ಬರು ಒಂದೆರಡು ವಾರಗಳ ಕೆಳಗೆ ಫೋನ್‌ ಮಾಡಿ, ತಾನು ಪತ್ರಿಕೆಗಳನ್ನು ನಿಲ್ಲಿಸುತ್ತಿದ್ದೇನೆಂದು ಹೇಳಿದರು. ಪತ್ರಿಕೆಗಳಿಂದ ಕೊರೋನಾ ಬರೋಲ್ಲ ಮಾರಾಯರೇ ಅಂತ ನಾನು ತಮಾಷೆಯಾಗಿಯೂ ಗಂಭೀರವಾಗಿಯೂ ಅವರಿಗೆ ಹೇಳಿದ್ದೆ. ಅದಕ್ಕವರು ‘ಕೊರೋನಾ ಭಯದಿಂದ ನಮ್ಮ ಅಪಾರ್ಟ್‌ ಮೆಂಟಿನ ಮಂದಿ ಪತ್ರಿಕೆ ನಿಲ್ಲಿಸುತ್ತಿದ್ದಾರೆ. ನನಗೆ ಆ ಭಯವಿಲ್ಲ. ಪತ್ರಿಕೆಗಳಿಂದ ಕೊರೋನಾ ವೈರಸ್‌ ಹಬ್ಬೋದಿಲ್ಲ ಅಂತ ನನಗೆ ಚೆನ್ನಾಗಿ ಗೊತ್ತು. ಆದರೆ ಪತ್ರಿಕೆಗಳ ಅಗತ್ಯ ಕಾಣಿಸುತ್ತಿಲ್ಲ. ಸುದ್ದಿಗಳು ನನಗೀಗ ಟೀವಿಯಲ್ಲೇ ಸಿಗುತ್ತಿವೆ. ಮೊಬೈಲಿನಲ್ಲೂ ಬರುತ್ತಿವೆ. ನಾನು ಹತ್ತು ಪತ್ರಿಕೆಗಳಲ್ಲಿ ಓದುವಷ್ಟುಸುದ್ದಿ ನನ್ನ ವಾಟ್ಸಪ್‌ ಗ್ರೂಪುಗಳಿಗೇ ಬಂದು ಬೀಳುತ್ತಿದೆ. ಅಷ್ಟುಸಾಕಲ್ಲವೇ ’ ಅಂದರು.


- ಜಯರಾಮ

ನಿನ್ನೆ ಅವರು ಮತ್ತೆ ಫೋನ್‌ ಮಾಡಿದ್ದರು. ‘ಮತ್ತೆ ಪತ್ರಿಕೆ ಕೊಳ್ಳಲು ಆರಂಭಿಸಿದ್ದೇನೆ. ಬೇರೆ ಸುದ್ದಿಗಳ ಸಹವಾಸ ಸಾಕಾಯಿತು. ಯಾವುದು ಸತ್ಯ, ಯಾವುದು ಸುಳ್ಳು ಅನ್ನುವುದೇ ಗೊತ್ತಾಗುತ್ತಲೇ ಇಲ್ಲ. ಪ್ರತಿಯೊಬ್ಬರೂ ಸುದ್ದಿ ಶೂರರೇ ಆಗಿಬಿಟ್ಟಿದ್ದಾರೆ. ಅವನ್ನೇ ನೋಡುತ್ತಿದ್ದರೆ ಸುಳ್ಳು ಸುದ್ದಿಗಳನ್ನು ಸತ್ಯ ಅಂತಲೂ ಸತ್ಯ ಸುದ್ದಿಯನ್ನು ಸುಳ್ಳು ಅಂತಲೂ ನಂಬಲು ಶುರುಮಾಡುತ್ತೇನೆಂದು ಭಯವಾಗುತ್ತಿದೆ. ಅಲ್ಲದೇ, ಆ ಸುದ್ದಿಗಳೆಲ್ಲ ಸುದ್ದಿಗಳೇ ಅಲ್ಲ. ಅವು ಯಾರನ್ನೋ ಗುರಿಯಾಗಿಸಿ ಬಿಟ್ಟಬಾಣಗಳು ಅನ್ನುವುದು ಒಂದೇ ವಾರಕ್ಕೆ ಅರ್ಥವಾಗಿಹೋಯಿತು. ನಾನು ನನ್ನ ಮನಸ್ಸಿನ ಬ್ಯಾಲೆನ್ಸ್‌ ಕಳೆದುಕೊಂಡು ಬಿಟ್ಟೆ’ ಅಂದರು.

Latest Videos

undefined

ಸುದ್ದಿಯಷ್ಟೇ ಸುದ್ದಿ ಮೂಲವೂ ಮುಖ್ಯ ಅನ್ನುವುದು ಅವರಿಗೆ ಹದಿನೈದು ದಿನಗಳಲ್ಲಿ ಅರ್ಥವಾಗಿಬಿಟ್ಟಿತ್ತು. ಮುದ್ರಣ ಮಾಧ್ಯಮಗಳಿಗೆ ಭವಿಷ್ಯ ಇದೆಯೇ ಎಂಬ ಪ್ರಶ್ನೆ ಕೇಳಿಬರುತ್ತಿರುವ ದಿನಗಳಲ್ಲಿ ಅವರ ಅನುಭವ ಮುದ್ರಣ ಮಾಧ್ಯಮದ ಪಾಲಿಗೆ ಆಹ್ಲಾದಕರ ಸುದ್ದಿ ಎನ್ನಬಹುದು, ಆದರೆ ಅವರ ಹಾಗೆ ಸುಳ್ಳು ಸುದ್ದಿಗಳ ಪ್ರವಾಹದಿಂದ ಕಂಗೆಟ್ಟವರು ಎಷ್ಟುಮಂದಿ ಇದ್ದಾರೆ ಅನ್ನುವುದು ಕೂಡ ಮುಖ್ಯ.

ಕ್ವಾರಂಟೈನ್ ಪಿಲ್ಲೋ ಚಾಲೆಂಜ್‌ನಲ್ಲಿ ನೀವಿಲ್ವಾ? .

ಹಾಗೆ ನೋಡಿದರೆ ಸುದ್ದಿಯನ್ನು ಯಾರು ನಿಯಂತ್ರಿಸುತ್ತಾರೆ ಅನ್ನುವುದನ್ನೇ ನೋಡೋಣ. ಸುದ್ದಿಯ ಮೂಲ ವರದಿಗಾರ. ಆತ ಪತ್ರಿಕಾಗೋಷ್ಠಿಗಳಿಗೆ ಹೋಗಿ, ಅಲ್ಲಿ ಪತ್ರಿಕಾಗೋಷ್ಠಿ ನಡೆಸುವವರು ಹೇಳಿದ ಮಾತುಗಳನ್ನು ದಾಖಲಿಸಿದರೆ ಅದು ಸುದ್ದಿ. ವರದಿಗಾರ ತಾನೇ ಘಟನೆ ನಡೆದ ಸ್ಥಳಕ್ಕೆ ಹೋಗಿ ಸಂಗ್ರಹಿಸಿದ ಸುದ್ದಿಯನ್ನೂ ಬರೆಯಬಹುದು. ಸುದ್ದಿಯನ್ನು ವಿಶ್ಲೇಷಣೆ ಮಾಡುವವನು ಪರಿಸ್ಥಿತಿಯನ್ನು ಅವಲೋಕಿಸಿ ಸುದ್ದಿ ಮಾಡಿದರೂ ಅದೂ ಒಂದು ಅರ್ಥದಲ್ಲಿ ಸುದ್ದಿಯೇ. ಇದರ ಜೊತೆಗೇ ಪತ್ರಿಕಾ ಹೇಳಿಕೆಗಳೂ ಇರುತ್ತಿದ್ದವು. ಸುದ್ದಿ ಸಂಗ್ರಹ ಒಂದು ಕಾಲದಲ್ಲಿ ಈ ನಾಲ್ಕು ಮೂಲಗಳನ್ನು ಮುಖ್ಯವಾಗಿ ಅವಲಂಬಿಸಿತ್ತು.

ಇವತ್ತು ಸುದ್ದಿಗಳ ಮೂಲ ಯಾವುದು? ಸಿನಿಮಾರಂಗವನ್ನು ತೆಗೆದುಕೊಂಡರೆ ಸಿನಿಮಾದ ಸುದ್ದಿಗಳನ್ನು ಇವತ್ತು ಟ್ವಿಟರ್‌ ಅಥವಾ ಇನ್‌ಸ್ಟಾಗ್ರಾಮುಗಳು ನಿಯಂತ್ರಿಸುತ್ತಿವೆ. ಒಬ್ಬ ನಟ ತನ್ನ ಹೊಸ ಚಿತ್ರದ ಪೋಸ್ಟರನ್ನೋ ಹಾಡನ್ನೋ ಮೊದಲು ಟ್ವಿಟ್ಟರಿನಲ್ಲಿ ಬಿಡುಗಡೆ ಮಾಡುತ್ತಾನೆ. ಆತ ಟ್ವಿಟ್ಟರಿನಲ್ಲಿ ಹೇಳಿದ ಮಾತನ್ನೇ ನಾವು ಆತನ ಅಧಿಕೃತ ಹೇಳಿಕೆ ಎಂದು ಪರಿಗಣಿಸಬೇಕು. ಆ ಟ್ವಿಟ್ಟರನ್ನು ನಡೆಸುವ ವ್ಯಕ್ತಿ ಮತ್ತಾರೋ ಆಗಿದ್ದರೆ, ನಟ ಹೇಳಿರುವುದಕ್ಕೂ ಆತ ಹಾಕಿರುವುದಕ್ಕೂ ವ್ಯತ್ಯಾಸ ಇರಬಹುದು. ಅಥವಾ ಕೆಲವು ವಿಚಾರಗಳ ಬಗ್ಗೆ ಮತ್ತಷ್ಟುಸ್ಪಷ್ಟೀಕರಣ ಬೇಕಾಗಬಹುದು. ಈ ಟ್ವಿಟ್ಟರ್‌ ಯುಗದಲ್ಲಿ ಅದ್ಯಾವುದಕ್ಕೂ ಅವಕಾಶ ಇಲ್ಲ. ನಾನು ಹೇಳಿದ್ದನ್ನು ಕೇಳಿ ಅನ್ನುವುದು ಇಂದಿನ ನೀತಿ.

ಸುದ್ದಿ ಬೇರೆ, ಸುದ್ದಿದಂಗೆ ಬೇರೆ!

ಇತ್ತೀಚಿನ ಉದಾಹರಣೆ ತೆಗೆದುಕೊಂಡರೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗನ ಮದುವೆ ಸರಳವಾಗಿ ನಡೆಯಿತು ಎಂಬ ಸುದ್ದಿ ಪತ್ರಿಕೆಗಳಲ್ಲಿ ಬಂದಿತ್ತು. ಎಲ್ಲಾ ರೀತಿಯಿಂದಲೂ ಅದು ಸರಳ ಮದುವೆಯೇ. ಅಲ್ಲಿ ಜನಜಂಗುಳಿ ನೆರೆದಿತ್ತು ಎಂದು ಟ್ಟಿಟ್ಟರಿಗರು ಇಡೀ ದಿನ ಕುಮಾರಸ್ವಾಮಿಯವರನ್ನು ಜಾಲಾಡಿದರು ಎಂಬ ತುಣುಕು ಕೂಡ ಸುದ್ದಿಯ ಭಾಗವಾಗಿತ್ತು. ಹಾಗಿದ್ದರೆ ಸುದ್ದಿ ಯಾವುದು? ಸುದ್ದಿಯನ್ನು ಬಳಸಿಕೊಂಡು ದಂಗೆಯ ವಾತಾವರಣ ಉಂಟು ಮಾಡುವುದು ಯಾವುದು ಅನ್ನುವ ವ್ಯತ್ಯಾಸ ಗೊತ್ತಿರುವುದು ತುಂಬಾ ಮುಖ್ಯ. ಇವತ್ತು ಮೊದಲು ಸುದ್ದಿಯೊಂದು ತನ್ನ ಸರಳ, ಸ್ವಾಭಾವಿಕ, ಮೃದು ರೂಪದಲ್ಲಿ ಪ್ರಕಟಗೊಳ್ಳುತ್ತದೆ. ನಂತರ ಆ ಸುದ್ದಿಯನ್ನು ಒಬ್ಬ ವ್ಯಕ್ತಿಯ ಪರವಾಗಿಯೋ ವಿರೋಧವಾಗಿಯೋ ಬಳಸಿಕೊಳ್ಳುವ ರಾಜಕೀಯ ಹುನ್ನಾರ ಶುರುವಾಗುತ್ತದೆ. ಮುದ್ರಣ ಮಾಧ್ಯಮಗಳು ಸುದ್ದಿಯನ್ನು ಪ್ರಕಟಿಸುತ್ತವೆಯೇ ಹೊರತು, ಅದರ ಕಾರಣದಿಂದ ಎದ್ದ ದಂಗೆಯ ಸುದ್ದಿಯನ್ನಲ್ಲ.

ಸೋಶಿಯಲ್ ಮಿಡೀಯಾದಲ್ಲಿ ಪೋಸ್ಟ್‌ ಮಾಡಿದ್ರೂ ಸೆಲೆಬ್ರಿಟಿಗಳಿಗೆ ದುಡ್ಡು

ಈ ಸುದ್ದಿ ದಂಗೆ ಎಲ್ಲಾ ಸಂದರ್ಭದಲ್ಲೂ ನಿಜವಾಗಿರಬೇಕಾಗಿಲ್ಲ ಕೂಡ. ಸುದ್ದಿ ದಂಗೆಕೋರರ ಸಂಖ್ಯೆ ಯಾವ ಕಡೆಗೆ ಎಷ್ಟಿದೆ ಅನ್ನುವುದರ ಮೇಲೆ ಅದರ ಪರಿಣಾಮವೂ ನಿರ್ಧಾರವಾಗುತ್ತದೆ. ಒಂದು ಸುದ್ದಿ ಯಾರ ಪರವಾಗಿದೆ ಮತ್ತು ವಿರೋಧವಾಗಿದೆ ಅನ್ನುವುದರ ಮೇಲೂ ಅದರ ಭವಿಷ್ಯ ಅಡಗಿದೆ. ರಾಜಕೀಯವಾಗಿ ನಿರುಪಯುಕ್ತವಾದ ಸುದ್ದಿಯೊಂದು, ಅದೆಷ್ಟೇ ಒಳ್ಳೆಯ ಸುದ್ದಿಯೇ ಆಗಿದ್ದರೂ, ಬೇಗ ಸತ್ತು ಹೋಗುತ್ತದೆ. ರಾಜಕೀಯ ಪರಿಣಾಮಗಳನ್ನು ಬೀರಬಲ್ಲ ಸುದ್ದಿ ಮಾತ್ರ ನಾಲ್ಕೈದು ದಿನ ಜೀವಂತವಾಗಿರುತ್ತದೆ.

ವೈರಲ್‌ ಎಂಬ ವೈರಸ್‌

ಒಂದು ಸುದ್ದಿ ವೈರಲ್‌ ಆಗುವುದೇ ಆ ಸುದ್ದಿ ಪೂರ್ವಗ್ರಹಪೀಡಿತ ಅನ್ನುವುದನ್ನು ತೋರಿಸುತ್ತದೆ. ವೈರಲ್‌ ಆಗಲಿಲ್ಲ ಎಂದರೆ ಆ ಸುದ್ದಿ ಮಹತ್ವದ್ದಲ್ಲ ಎಂದು ಭಾವಿಸಬೇಕಾಗಿಲ್ಲ. ವೈರಲ್‌ ಆಗದ ಸುದ್ದಿಗೆ ರಾಜಕೀಯ ಲಾಭವಿಲ್ಲ ಅಷ್ಟೇ. ಪೊಲಿಟಿಕಲೀ ಬೆನಿಫಿಷಿಯರಿ ಅಲ್ಲದ ಸುದ್ದಿಗಳನ್ನು ಪ್ರಕಟಿಸುವುದು ಮುದ್ರಣ ಮಾಧ್ಯಮ ಮಾತ್ರ. ಯಾಕೆಂದರೆ ಮುದ್ರಣ ಮಾಧ್ಯಮ ತಾನು ಪ್ರಕಟಿಸುವ ಪ್ರತಿಯೊಂದು ಸುದ್ದಿಯನ್ನು ಲಾಭದಾಯಕ ಸುದ್ದಿಯನ್ನಾಗಿ ಪರಿವರ್ತಿಸಿಕೊಳ್ಳುವ ಉದ್ದೇಶ ಹೊಂದಿರುವುದಿಲ್ಲ. ಆದರೆ ಮಿಕ್ಕೆಲ್ಲ ಮಾಧ್ಯಮಗಳಿಗೂ ತಾವು ಪ್ರಕಟಿಸುವ ಸುದ್ದಿ ಇಂತಿಷ್ಟುಮಂದಿಯನ್ನು ತಲುಪಿದರೆ, ಅದರಿಂದ ಇಂತಿಷ್ಟುಲಾಭವಾಗುತ್ತದೆ ಎಂಬ ಲೆಕ್ಕಾಚಾರ ಇರುತ್ತದೆ. ಅಂಥದ್ದೊಂದು ವ್ಯವಹಾರದ ಲೆಕ್ಕ ಇದ್ದಾಗ, ಸುದ್ದಿ ಹೇಗಾದರೂ ಸರಿಯೇ ಹೆಚ್ಚು ಮಂದಿಯನ್ನು ತಲುಪುವುದೇ ಮುಖ್ಯವಾಗುತ್ತದೆ. ಹೆಚ್ಚು ಮಂದಿಯನ್ನು ತಲುಪುವುದಕ್ಕೆ ಹೊರಡುವ ಸುದ್ದಿ, ಹೇಗಾದರೂ ತಲುಪವೇ ಬೇಕಾದ ಅನಿವಾರ್ಯವನ್ನೂ ಮಡಿಲಲ್ಲಿ ಕಟ್ಟಿಕೊಂಡಿರುತ್ತದೆ. ಹೀಗಾಗಿ ವೈರಲ್‌ ಆಗುವುದು ವ್ಯಾಪಾರಕ್ಕೆ ತೀರಾ ಅನಿವಾರ್ಯ. ಯೂ ಟ್ಯೂಬ್‌ ಚಾನಲ್ಲುಗಳನ್ನು ಪದೇ ಪದೇ ನಮ್ಮ ಚಾನಲ್ಲನ್ನು ಸಬ್‌ಸ್ಕೆ್ರೖಬ್‌ ಮಾಡಿ ಅಂತ ಕೇಳಿಕೊಳ್ಳುವುದನ್ನು ನಾವು ನೋಡುತ್ತೇವಲ್ಲ? ಅವುಗಳ ಉದ್ದೇಶವನ್ನು ಈ ಬೇಡಿಕೆಯೇ ಸೂಚಿಸುತ್ತದೆ.

ಸುದ್ದಿಯ ಮೇಲೆ ಗುದ್ದಾಟ

ಇವತ್ತು ಯಾವುದಾದರೊಂದು ಪತ್ರಿಕೆಯಲ್ಲಿ ಒಂದು ಸುದ್ದಿ ಪ್ರಕಟ ಆಗುತ್ತಿದ್ದಂತೆ, ಅದರ ಪರ ವಿರೋಧದ ಪಂಗಡಗಳು ಸಕ್ರಿಯವಾಗುತ್ತವೆ. ಆ ಸುದ್ದಿಯನ್ನು ಸುಳ್ಳು ಎಂದು ಸಾಬೀತು ಮಾಡಲು ಒಂದು ಪಂಗಡವೂ ಸತ್ಯಸ್ಯ ಸತ್ಯ ಎಂದು ನಿರೂಪಿಸಲು ಮತ್ತೊಂದು ಪಂಗಡವೂ ಹೆಣಗಾಡುತ್ತದೆ. ಈ ಹೆಣಗಾಟದಲ್ಲಿ ಎರಡೂ ಕಡೆಯ ಯೋಧರು ತಮ್ಮ ಟ್ವಿಟರ್‌, ಫೇಸ್‌ ಬುಕ್‌, ಇನ್‌ಸ್ಟಾಗ್ರಾಂ ಮತ್ತು ವಾಟ್ಸ್ಯಾಪ್‌ ಆಯುಧಗಳನ್ನು ಹಿಡಿದುಕೊಂಡು ಕಾದಾಟ ಆರಂಭಿಸುತ್ತಾರೆ. ಅವರ ವೈಯಕ್ತಿಕ ನಿಲುವುಗಳಿಗಿಂತ ತಮ್ಮ ಹೋರಾಟವೇ ಅವರಿಗೆ ಮುಖ್ಯವಾಗುತ್ತದೆ.

ಜರ್ಮನಿಯ ಬೆಡಗಿ ಬಾಯಲ್ಲಿ ಅರಳು ಹುರಿದಂತೆ ಕಸ್ತೂರಿ ಕನ್ನಡ, ಏನ್ ಚೆಂದ ಟಿಕ್ ಟಾಕ್ ನೋಡಾ

ಈ ಸುದ್ದಿಯನ್ನು ಸಮರ್ಥಿಸಿಕೊಳ್ಳುವ ಮತ್ತು ವಿರೋಧಿಸುವ ಸುದ್ದಿಗಳೇ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವುದರಿಂದಲೇ ಸುದ್ದಿಯ ಸತ್ಯಾಸತ್ಯತೆ ಅಲ್ಲಿ ಸಿಗುವುದು ಸಾಧ್ಯವಿಲ್ಲ. ಅಲ್ಲಿ ಸುದ್ದಿಯನ್ನು ಸುಳ್ಳಾಗಿಸುವ ಮತ್ತು ನಿಜವಾಗಿಸುವ ಹುನ್ನಾರಗಳಷ್ಟೇ ಮುಖ್ಯವಾಗುವುದರಿಂದ ಮೂಲ ಸುದ್ದಿ ಹಿನ್ನೆಲೆಗೆ ಸರಿಯುತ್ತದೆ. ಅಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ಹೇಗೆ ಅಂಕುಶವಿಲ್ಲವೋ ಹಾಗೆಯೇ ಕಡಿವಾಣವೂ ಇಲ್ಲದೇ ಇರುವುದರಿಂದ, ತಮಗಿಷ್ಟಬಂದ ಸುದ್ದಿಯನ್ನು ಯಾವ ಹಿಂಜರಿಕೆಯೂ ಇಲ್ಲದೇ ಯಾರು ಬೇಕಿದ್ದರೂ ಬರೆಯಬಹುದು. ಹೀಗಾಗಿ ಅಲ್ಲಿ, ಮೂವತ್ತು ವರುಷಗಳಿಂದ ವರದಿಗಾರಿಕೆ ಮಾಡುತ್ತಾ ಬಂದಿರುವ ರಾಜಕೀಯ ವಿಶ್ಲೇಷಕನೂ ಒಂದೇ, ಆಗಷ್ಟೇ ಸುದ್ದಿದಂಗೆಯ ಕಾರ್ಯಪಡೆಗೆ ಸೇರ್ಪಡೆಯಾಗಿರುವ ಹೊಸ ಸೈನಿಕನೂ ಒಂದೇ.

ಸತ್ಯ ಚಪ್ಪಲಿ ಹಾಕಿಕೊಳ್ಳುವ ಹೊತ್ತಿಗೆ, ಸುಳ್ಳು ಅರ್ಧ ಜಗತ್ತು ಸುತ್ತಿ ಬಂದಿರುತ್ತದೆ!

click me!