ತಪಸ್ಸಿನಂತೆ ಕಲಿಯದಿದ್ದರೆ ಸಾರಂಗಿ ವಾದ್ಯ ಒಲಿಯುವುದಿಲ್ಲ: ಫಯಾಜ್

By Kannadaprabha News  |  First Published Jan 26, 2020, 1:21 PM IST
ಕರ್ನಾಟಕ ಸಂಗೀತ ಲೋಕದಲ್ಲಿ ಉಸ್ತಾದ್ ಫಯಾಜ್ ಖಾನ್ ಅವರದ್ದು ಖ್ಯಾತ ನಾಮ. ಅವರ ಸಾರಂಗಿ ಕೇಳಿದರೆ ಸಂಗೀತದಲ್ಲಿ ಆಸಕ್ತಿ ಇರದವನೂ ಭಾವಪರವಶನಾಗುತ್ತಾನೆ. ಇಂಥ ಸಂಗೀತದ ದಿಗ್ಗಜನಿಗೆ ನಿರ್ಮಾಣ್ ಪುರಂದರ ರತ್ನ ಪ್ರಶಸ್ತಿ ಒಲಿಲಿದೆ. ಬದುಕು, ಸಂಗೀತದ ಬಗ್ಗೆ ಫಯಾಜ್ ಹೇಳಿದ್ದೇನು?

ಶ್ರೀಕಾಂತ್‌ ಎನ್‌.ಗೌಡಸಂದ್ರ

ಭಾರತೀಯ ಸಂಗೀತ ಕ್ಷೇತ್ರದ ದಿಗ್ಗಜರಲ್ಲಿ ಉಸ್ತಾದ್‌ ಫಯಾಜ್‌ ಖಾನ್‌ ಸಹ ಒಬ್ಬರು. ಈ ಹೆಸರು ಕೇಳಿದರೆ ಸಾಕು ಶಾಸ್ತ್ರೀಯ ಸಂಗೀತ ಪ್ರಿಯರ ಮನಸ್ಸು ಉಲ್ಲಾಸಗೊಂಡು ಕಿವಿಗಳು ಒಮ್ಮೆ ನೆಟ್ಟಗಾಗುತ್ತವೆ. ಹಿಂದೂಸ್ತಾನಿ ಸಂಗೀತ ಆಸ್ವಾದಕರ ಕಿವಿಗಳಂತೂ ಒಮ್ಮೆ ಕೀಲಿ ಕೊಟ್ಟಂತಾಗಿ ಹಳೆಯ ಕಾಲಕ್ಕೆ ಹೊರಳುತ್ತವೆ. ಅಂತಹ ಗಾನ ದಿಗ್ಗಜ ಉಸ್ತಾದ್‌ ಫಯಾಜ್‌ ಖಾನ್‌ ಅತ್ಯಪರೂಪದ ಸಾರಂಗಿಯ ಅಪ್ರತಿಮ ವಾದಕ, ಸುಮಧುರ ಗಾಯಕ. ಜತೆಗೆ ತಬಲಾ ವಾದಕರಾಗಿಯೂ ಪಳಗಿದವರು.

ತಂದೆ ಉಸ್ತಾದ್‌ ಅಬ್ದುಲ್‌ ಖಾದರ್‌ ಖಾನ್‌ ಇವರ ಮೊದಲ ಗುರು. ಫಯಾಜ್‌ ಖಾನ್‌ರ ತಾತ ಉಸ್ತಾದ್‌ ಷೇಕ್‌ ಅಬ್ದುಲ್‌ ಹೈದರಾಬಾದಿನ ನವಾಬರ ಆಸ್ಥಾನದಲ್ಲಿ ಸಾರಂಗಿ ವಾದಕರಾಗಿದ್ದವರು. ಅವರಿಗಿಂತ ಹಿಂದಿನ ಆರು ತಲೆಮಾರುಗಳು ಕೂಡ ವಿವಿಧ ರಾಜಮನೆತನಗಳಲ್ಲಿ ಸಂಗೀತ ವಿದ್ವಾಂಸರಾಗಿದ್ದವರು. ಅಂತಹ ಪ್ರಖ್ಯಾತ ಸಂಗೀತ ಪರಂಪರೆಯ ಉಸ್ತಾದ್‌ ಫಯಾಜ್‌ ಖಾನ್‌ ಇಂದಿನ ಆಧುನಿಕ ದಿನದಲ್ಲೂ ಪಾರಂಪರಿಕ ಸಾರಂಗಿ ವಾದನ ಕಲೆಯನ್ನು ಜೀವಂತವಾಗಿರಿಸಿದ್ದಾರೆ. ಮುಂದಿನ ಪೀಳಿಗೆಗೂ ಪಾರಂಪರಿಕ ಸಂಗೀತ ವಾದ್ಯವನ್ನು ದಾಟಿಸಲು ತಮ್ಮ ಪುತ್ರ ಸರ್ಫರಾಜ್‌ ಖಾನ್‌ಗೂ ಕಲಿಸಿಕೊಡುತ್ತಿದ್ದಾರೆ. ಸಂಗೀತ ಪರಿಶುದ್ಧತೆ ಹಾಳು ಮಾಡುವವರ ವಿರುದ್ದ ಬಹಿರಂಗವಾಗಿಯೇ ಗುಡುಗುತ್ತಿರುತ್ತಾರೆ.

Tap to resize

Latest Videos

undefined

ಆಪರೇಷನ್ ಥಿಯೇಟರ್‌ನಲ್ಲಿಯೇ ಸಂಗೀತ ಕೇಳಿದ ರೋಗಿ

ಇಂತಹ ಫಯಾಜ್‌ ಖಾನ್‌ ಅವರು ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಗುರುತಿಸಿ ವೀಯೆಲ್ಲೆನ್‌-ನಿರ್ಮಾಣ್‌-ಪುರಂದರ ಪ್ರತಿಷ್ಠಾನವು ಪ್ರಸಕ್ತ ಸಾಲಿನ ಪ್ರತಿಷ್ಠಿತ ‘ನಿರ್ಮಾಣ್‌ ಪುರಂದರ ಸಂಗೀತ ರತ್ನ ಪ್ರಶಸ್ತಿ- 2020’ ನೀಡಿ ಗೌರವಿಸುತ್ತಿದೆ. ಜ.26 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಈ ಸಂತಸದ ಸಮಯದಲ್ಲಿ ಉಸ್ತಾದ್‌ ಫಯಾಜ್‌ ಖಾನ್‌ ‘ಕನ್ನಡಪ್ರಭ’ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ.

* ಮೂರು ದಶಕಗಳಿಗೂ ಹೆಚ್ಚು ಕಾಲ ಸಂಗೀತ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ್ದೀರಿ. ನಿಮ್ಮ ಸಂಗೀತಯಾನದ ಬಗ್ಗೆ ಹೇಳಿ.

ನಮ್ಮ ಕುಟುಂಬ ಸಂಗೀತ ಪರಂಪರೆಯ ಕುಟುಂಬ. ಹೀಗಾಗಿ ನಾನು ಸಹ ಬಹಳ ಚಿಕ್ಕ ವಯಸ್ಸಿನಲ್ಲೇ ಸಂಗೀತ ಅಧ್ಯಯನ ಶುರುಮಾಡಿದೆ. ಸುಮಾರು ನಾಲ್ಕೈದು ವರ್ಷ ವಯಸ್ಸಿನಿಂದಲೇ ತಂದೆಯಿಂದ ಸಾರಂಗಿ ವಾದನ, ಗಾಯನ ತರಬೇತಿ ಶುರುವಾಯಿತು. ತಬಲ ವಾದನ ಗುರುಗಳ ಬಳಿ ಕಲಿತಿದ್ದೇನೆ. ನನ್ನ ಸಂಗೀತಯಾನದಲ್ಲಿ ಸಾಕಷ್ಟುಪ್ರೋತ್ಸಾಹ ಹಾಗೂ ನಿರುತ್ಸಾಹ ಮೂಡಿಸಿದ ಘಟನೆಗಳು ನಡೆದಿವೆ. ವೃತ್ತಿ ವೈಷಮ್ಯಗಳು ಎಲ್ಲಾ ಕಡೆ ಇದ್ದ ರೀತಿ ಇಲ್ಲೂ ಇವೆ. ಅವಕಾಶಗಳಿಗೆ ಕತ್ತರಿ ಹಾಕುವುದು, ಸಂಗೀತ ಕಾರ್ಯಕ್ರಮಗಳಿಗೆ ಅವರಿಗೆ ಆಹ್ವಾನ ನೀಡಬೇಡಿ ಎನ್ನುವವರೂ ಇದ್ದರು. ಸಂಗೀತ ಕ್ಷೇತ್ರದವರೇ ಆದ ಅಂತಹವರ ನಡೆಗಳಿಂದ ಕುಗ್ಗಿದ್ದು ಇದೆ. ಆದರೆ, ನಾವು ಸರಸ್ವತಿಯನ್ನು ನಂಬಿದವರು. ಹೀಗಾಗಿ ನಿರಂತರ ಅಭ್ಯಾಸ, ಗುರುಗಳಲ್ಲಿ ವಿಶ್ವಾಸ ಇಟ್ಟು ಮುಂದೆ ಹೋದೆವು. ಹೀಗಾಗಿ ಈ ಹಂತ ಮುಟ್ಟಿದ್ದೇವೆ.

ಕೊಲ್ಲೂರಿನಲ್ಲಿ ಹುಟ್ಟಿದಬ್ಬ ಆಚರಿಸಿಕೊಂಡ ಸಂಗೀತ ಮಾಂತ್ರಿಕ ಯೇಸುದಾಸ್

* ಈ ನಿಮ್ಮ ಸಂಗೀತ ಸೇವೆಗೆ ಪ್ರತಿಷ್ಠಿತ ‘ನಿರ್ಮಾಣ್‌ ಪುರಂದರ ಸಂಗೀತ ರತ್ನ ಪ್ರಶಸ್ತಿ’ ಒಲಿದಿದೆ. ಈ ಬಗ್ಗೆ ಏನು ಹೇಳಲು ಇಚ್ಛಿಸುತ್ತೀರಿ?

ಇಂತಹ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನನಾಗಿರುವುದು ಸಹಜವಾಗಿಯೇ ಸಂತಸ ತಂದಿದೆ. ಪ್ರತಿಷ್ಠಾನದವರು ಉತ್ತಮ ಹಾಗೂ ಅರ್ಹರನ್ನೇ ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುತ್ತಾರೆ. ಆ ಸಾಲಿನಲ್ಲಿ ನನ್ನನ್ನು ಗುರುತಿಸಿರುವುದು ಹೆಮ್ಮೆ ಮೂಡಿಸಿದೆ.

* ಪಾಶ್ಚಿಮಾತ್ಯ ಸಂಗೀತ ಕೇಳುವ ಈ ಹೊತ್ತಿನಲ್ಲಿ ಪಾರಂಪರಿಕ ವಾದ್ಯ. ಅದರಲ್ಲೂ ಸಾರಂಗಿಯನ್ನು ಕೇಳುವ ಯುವಕರು ಇದ್ದಾರೆಯೇ?

ಯುವಕರ ಅಭಿರುಚಿಯನ್ನು ಸಂಗೀತ ನಿರ್ದೇಶಕರೇ ತೀರ್ಮಾನಿಸಿಬಿಟ್ಟಿರುವುದರ ಫಲ ಇದು. ಸಾರಂಗಿಯ ಗುಣವೇ ಬೇಗ ಸೆಳೆಯುವಂಥದ್ದು. ಹಾಗಾಗಿ ಈ ಹೊತ್ತಿಗೂ ಸಾರಂಗಿಯನ್ನು ಕೇಳುವಂತಹ ಜನ ಇದ್ದಾರೆ. ಯುವಕರೂ ಸಹ ಬಹಳಷ್ಟುಆಕರ್ಷಿತರಾಗುತ್ತಾರೆ. ಆದರೆ, ಅಂತಹ ವಾತಾವರಣ ಸೃಷ್ಟಿಸಬೇಕಾದ ಅನಿವಾರ್ಯತ ಇದೆ.

* ಹೀಗಿದ್ದರೂ ಸಾರಂಗಿ ಮುಖ್ಯ ವಾಹಿನಿಗೆ ಏಕೆ ಬರಲಿಲ್ಲ?

ಸಾರಂಗಿ ಎಂಬುದು ತುಂಬಾ ಕಠಿಣ ವಾದ್ಯ. ಹೀಗಾಗಿ ಕಲಿಯುವವರ ಸಂಖ್ಯೆ ಬಹಳ ಕಡಿಮೆ. ಕನಿಷ್ಠ 15 ವರ್ಷಗಳ ಕಾಲ ತಪಸ್ಸಿನಂತೆ ಕುಳಿತು ಜೀವನ ವ್ಯಯಿಸಬೇಕು. ಇಲ್ಲದಿದ್ದರೆ ಸಾರಂಗಿ ವಾದ್ಯ ಒಲಿಯುವುದಿಲ್ಲ. ಜನರ ಬಳಿ ಅಷ್ಟುಸಮಯವಿಲ್ಲ. 2-3 ವರ್ಷದಲ್ಲಿ ಕಲಾವಿದರಾಗಿ ಸೆಲೆಬ್ರೆಟಿಗಳಾಗಿ ಟಿವಿಗಳಲ್ಲಿ ಬರಬೇಕು. ಹೀಗಾಗಿ ಸಾರಂಗಿಯಂತಹ ಕಷ್ಟಕರ, ಕಠಿಣ ವಾದ್ಯಗಳು ಹಿಂದೆ ಬಿದ್ದಿವೆ.

* ಫ್ಯೂಷನ್ ಸಂಗೀತದ ಬಗ್ಗೆ ಏನು ಹೇಳುತ್ತಿರಿ?

ಫ್ಯೂಷನ್ ಎಂದರೆ ಕನ್ಫ್ಯೂಷನ್‌ ಸಂಗೀತ. ಪ್ರಸ್ತುತ ಯುವಕರೂ ಸಹ ಗೊಂದಲ (ಕನ್ಫ್ಯೂಷನ್‌) ಕಾಲಘಟ್ಟದಲ್ಲಿ ಇದ್ದಾರೆ. ಹೀಗಾಗಿ ಅವರಿಗೆ ಫ್ಯೂಷನ್ ಇಷ್ಟವಾಗುತ್ತದೆ. ಪಾರಂಪರಿಕ ವಾದ್ಯ ಮತ್ತು ಸಂಗೀತದ ಜತೆ ಮತ್ತೊಂದು ಪಾರಂಪರಿಕ ವಾದ್ಯ ಮತ್ತು ಸಂಗೀತ ಸೇರಿಸಿದರೆ ಸಂತೋಷ. ಅದೇ ಪಾಶ್ಚಿಮಾತ್ಯ ಸಂಗೀತದ ಜತೆ ಬೆರೆಸಿದರೆ ಸ್ವಲ್ಪ ಬೇಸರ ಆಗುತ್ತದೆ. ಶಾಸ್ತ್ರಬದ್ಧ ಹಾಗೂ ಶುದ್ಧ ಸಂಗೀತ ಆಧ್ಯಾತ್ಮಿಕ ದಾರಿ. ಮನೆಯಲ್ಲಿ ಆ ಸಂಸ್ಕಾರ ಇದ್ದರೆ ಎಲ್ಲರೂ ಅದನ್ನೇ ಇಷ್ಟಪಡುತ್ತಾರೆ.

* ಖ್ಯಾತ ಸಂಗೀತ ನಿರ್ದೇಶಕರೊಂದಿಗೆ ಸಿನಿಮಾಗಳಿಗೂ ಕೆಲಸ ಮಾಡಿದ್ದೀರಿ. ಸಿನಿಮಾ ಸಂಗೀತದ ಬಗ್ಗೆ ನಿಮ್ಮ ಅಭಿಪ್ರಾಯ

ಸಿನಿಮಾ ಸಂಗೀತಕ್ಕೆ ಸಮಾಜದಲ್ಲಿ ಉತ್ತಮ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಇದೆ. ಹಿಂದಿನ ಚಲನಚಿತ್ರಗಳ ಕಥೆಯ ಎಳೆಯೇ ಅದ್ಭುತವಾಗಿತ್ತು. ಅದಕ್ಕೆ ಪೂರಕವಾಗಿ ಒಳ್ಳೆಯ ಸಾಹಿತ್ಯ, ಸಂಗೀತವೂ ನೀಡಲಾಗುತ್ತಿತ್ತು. ಇದೀಗ ಚಿತ್ರಕತೆಯೂ ಇರುವುದಿಲ್ಲ. ಅದಕ್ಕೆ ತಕ್ಕ ಸಾಹಿತ್ಯ ಹಾಗೂ ಸಂಗೀತದಿಂದಾಗಿ ಎಲ್ಲವೂ ಹಾಳಾಗುತ್ತಿದೆ.

* ಹೀಗಾಗಿಯೇ ಕೆಲ ಸಂಗೀತ ನಿರ್ದೇಶಕರ ಬಗ್ಗೆ ನಿಷ್ಠುರವಾಗಿಯೂ ಮಾತನಾಡಿದ್ದೀರಲ್ಲವೇ?

ಸಂಗೀತ ಹಾಳಾಗುತ್ತಿರುವಾಗ ಮಾತನಾಡುವುದು ನಮ್ಮ ಜವಬ್ದಾರಿ. ಉತ್ತಮ ಸಾಹಿತ್ಯ ಎಲ್ಲಿದೆ? ಒಳ್ಳೆಯ ಸಾಹಿತ್ಯ ಇಲ್ಲದಿದ್ದಾಗ ಉತ್ತಮ ಸಂಗೀತ ಹೇಗೆ ನಿರೀಕ್ಷಿಸಬೇಕು. ಸಾಹಿತ್ಯ ಹಾಗೂ ಸಂಗೀತ ಜೀವನದ ಎರಡು ಅನಿವಾರ್ಯ ಅಂಶಗಳು. ನಾನು ಯಾವುದರ ವಿರೋಧಿಯೂ ಅಲ್ಲ. ಆದರೆ, ಸಂಗೀತ ಹಾಳು ಮಾಡಲು ಯತ್ನಿಸಿದಾಗ ವಿರೋಧಿಸುತ್ತೇನೆ.

* ಹಾಗಂತ, ಉತ್ತಮ ಹಾಗೂ ಶಾಸ್ತ್ರೀಯ ಸಂಗೀತ ನೀಡಿದರೆ ಜನರು ಕೇಳುತ್ತಿದ್ದಾರಾ?

ಇಂತಹ ಪ್ರಶ್ನೆಗಳನ್ನು ಸಂಗೀತ ನಿರ್ದೇಶಕರೂ ಕೇಳುತ್ತಾರೆ. ಉತ್ತಮ ಸಂಗೀತ ನೀಡಿದರೆ ಜನ ಕೇಳುತ್ತಾರೆ. ಈಗಲೂ ನಾಲ್ಕೈದು ದಶಕಗಳ ಹಿಂದಿನ ಹಾಡುಗಳನ್ನು ಎಷ್ಟುಜನ ಇಷ್ಟಪಡುತ್ತಾರೆ. ಮತ್ತೆ ಮತ್ತೆ ಕೇಳುತ್ತಿರುತ್ತಾರೆ ಎಂಬುದನ್ನು ನಾವು ನೋಡಬೇಕು. ಈಗಿನ ಯುವಕರಿಗೆ ತಪ್ಪು ಹಾದಿ ಹಿಡಿಸುವ ಪ್ರಯತ್ನ ಉದ್ದೇಶಪೂರ್ವಕವಾಗಿ ನಡೆಯುತ್ತಿದೆ. ಉತ್ತಮ ಸಂಗೀತ ನೀಡಿದರೆ ಜನ ಈಗಲೂ ಕೇಳುತ್ತಾರೆ.

* ಸಿನಿಮಾ ಕ್ಷೇತ್ರ ನಿಮ್ಮನ್ನು ಸರಿಯಾಗಿ ಬಳಸಿಕೊಂಡಿಲ್ಲ ಎನಿಸಲ್ಲವೇ?

ಹೌದು, ನಮ್ಮ ವಾದ್ಯ ಹಾಗೂ ಪ್ರತಿಭೆಗೆ ತಕ್ಕಂತ ಕೆಲಸಗಳು ನಿಜವಾಗಿಯೂ ಸಿಕ್ಕಿಲ್ಲ. ಅವಕಾಶ ಸಿಕ್ಕಿದ್ದರೆ ಇನ್ನೂ ಉತ್ತಮ ಕೆಲಸ ಮಾಡಬಹುದಿತ್ತು. ಸಂಗೀತ ನಿರ್ದೇಶಕರು ಈ ಜಾಗದಲ್ಲಿ ನಿಮ್ಮ ಕೊಡುಗೆ ಬೇಕು ಎಂದು ಕೇಳುತ್ತಿದ್ದರು. ಆದರೂ, ನಾವು ಸಿನಿಮಾ ಸಂಗೀತದಲ್ಲಿ ತೃಪ್ತಿ ಹುಡುಕಿಕೊಂಡು ಹೋಗಿಲ್ಲ. ಆರ್ಥಿಕ ಅಗತ್ಯತೆಗಳಿಗಾಗಿ ಮಾತ್ರ ಸಿನಿಮಾ ಸಂಗೀತ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ.

ಸಿಎಎ ವಿರುದ್ಧ ಪಲ್ಲವಿ ಗಾನಾ ಬಜಾನಾ

* ದಾಸ ಸಾಹಿತ್ಯ ಹಾಗೂ ದಾಸ ಸಂಗೀತದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಮನುಷ್ಯನ ಜೀವನಕ್ಕೆ ಬಹಳ ಹತ್ತಿರವಾದ ಸಾಹಿತ್ಯ ದಾಸ ಸಾಹಿತ್ಯ. ಹೀಗಾಗಿ ಬಾಲ್ಯದಿಂದಲೂ ಇಷ್ಟ. ನಾನೇ ಕೆಲವು ಸಾಹಿತ್ಯಕ್ಕೆ ಸಂಗೀತ ಸಂಯೋಜನೆ ಮಾಡಿಕೊಂಡೂ ಸಹ ಹಾಡಿದ್ದೇನೆ. ಮನುಷ್ಯ ಜೀವನಕ್ಕೆ ಸದಾ ಉಪಯೋಗಕಾರಿ ಸಾಹಿತ್ಯವದು.

* ಸಂಗೀತ ಕ್ಷೇತ್ರದಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿದ್ದರೂ ಆರ್ಥಿಕ ತೊಂದರೆಗಳಿಂದ ಮುಕ್ತರಾಗಿಲ್ಲ!

ಕರ್ನಾಟಕದಲ್ಲಿ ನಾನು ನೋಡಿದ ಹಾಗೆ ಕಲಾವಿದರಿಗೆ ಸರಿಯಾದ ಸಂಭಾವನೆ ಸಿಗುವುದಿಲ್ಲ. ನಮ್ಮಲ್ಲಿ ಅರ್ಹತೆ ಇದ್ದರೂ ಕಡಿಮೆ ಸಂಭಾವನೆಗಾಗಿಯೇ ನೋಡುತ್ತಾರೆ. ಅದೇ ಕೊಲ್ಕತ್ತಾ, ಮುಂಬೈ, ದೆಹಲಿಯಿಂದ ಬಂದವರಿಗೆ ಅವಶ್ಯಕತೆ, ಅರ್ಹತೆಗೆ ಮೀರಿ ಹಣ ನೀಡುತ್ತಾರೆ. ಪ್ರತಿಭೆ ಗುರುತಿಸುವುದರಲ್ಲೂ ತೋರುವ ಅಸಮಾನತೆಯ ಪರಿಣಾಮ ಇದು. ಆದರೂ, ಸರಸ್ವತಿ ತೊಟ್ಟಿಲು ತೂಗುತ್ತಲೇ ಇರುತ್ತೇವೆ ನಾವು.

click me!