
ಆಶಾ ಭೋಸ್ಲೆ, ಭಾರತೀಯ ಸ್ವರಲೋಕದ ದಂತಕಥೆ. 8 ದಶಕಗಳ ಸಂಗೀತವನ್ನೇ ಉಸಿರಾಡಿ ಸಾವಿರಾರು ಹಾಡುಗಳಿಗೆ ಧ್ವನಿಯಾಗಿದ್ದ ಕೋಗಿಲೆ. ಆಶಾ ಜಿ, ಆಶಾ ತಾಯ್ ಅಂತಲೇ ಸ್ವರ ಲೋಕದಲ್ಲಿ ಕರೆಸಿಕೊಳ್ಳುತ್ತಿದ್ದ ಅವರೀಗ ಶಾಶ್ವತವಾಗಿ ಹಾಡು ನಿಲ್ಲಿಸಿ ಚಿರನಿದ್ರೆಗೆ ಜಾರಿದ್ದಾರೆ. 20 ಭಾಷೆಗಳಲ್ಲಿ 12,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದ ಆಶಾ ಭೋಸ್ಲೆ 92 ವರ್ಷಗಳ ತುಂಬು ಜೀವನ ನಡೆಸಿ ಅಗಲಿದ್ದಾರೆ. ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ನೋವುಂಡಿದ್ದ ಆಶಾ ಫೀನಿಕ್ಸ್ ಹಕ್ಕಿಯಂತೆ ಬಂದು ಕ್ವೀನ್ ಆಫ್ ಇಂಡಿಪಾಪ್ ಆಗಿ ಬೆಳೆದರು. ಹೀಗಾಗಿ ಸಂಗೀತದ ಪಯಣದಾಚೆಗೂ, ಸಂಕಷ್ಟದಲ್ಲೂ ಬದುಕುವ, ಕಷ್ಟಗಳನ್ನೇ ಮೆಟ್ಟಿನಿಂತು ಬದುಕು ಕಟ್ಟಿಕೊಂಡ ಮತ್ತು ಸಂರ್ಘಷದ ಹಾದಿಯನ್ನೇ ಶಕ್ತಿಯನ್ನಾಗಿ ಮಾಡಿಕೊಂಡು ಸಾಧಿಸಿದ ಪಯಣದ ಕಥನವೂ ಹೌದು.
ಆಶಾ ಭೋಸ್ಲೆ ಎಂಬ ಸಂಗೀತ ಸಾಮ್ರಾಜ್ಞಿ ಜನಿಸಿದ್ದು ಆಗಿನ ಬಾಂಬೆ ಪ್ರಾಂತ್ಯ ಈಗಿನ ಮಹಾರಾಷ್ಟ್ರದ ಸಾಂಗ್ಲಿಯ ಗೋರ್ ಎಂಬ ಹಳ್ಳಿಯಲ್ಲಿ. ಸೆ.8, 1933ರಂದು. ಮರಾಠಿ ಮಾತನಾಡುವ ಕುಟುಂಬದ ಕುಡಿ. ತಂದೆ ಮಾಸ್ಟರ್ ದೀನಾನಾಥ್ ಮಂಗೇಶ್ಕರ್. ತಾಯಿ ಸೇವಂತಿ. ಅಪ್ಪ ರಂಗಭೂಮಿ ಕಲಾವಿದ ಜತೆಗೆ ಶಾಸ್ತ್ರೀಯ ಸಂಗೀತ ಗಾಯಕರು. 4 ಹೆಣ್ಣು, ಒಬ್ಬ ಮಗನಿರುವ ಸುಂದರ ಕುಟುಂಬ. ಆಶಾ ಅದರಲ್ಲಿ 3ನೇ ಮಗಳು. ಇವರದ್ದು ಸಂಗೀತವನ್ನೇ ಉಸಿರಾಡಿದ್ದ ಮನೆತನ. ತಂದೆ ಮಾತ್ರವಲ್ಲ ಸೋದರ, ಸೋದರಿಯರು ಎಲ್ಲರೂ ಸಂಗೀತ ಸಾಧಕರೇ.
ಆಶಾ ಭೋಸ್ಲೆ ಬಾಲ್ಯದ ಹೆಸರು ಆಶಾ ಮಂಗೇಶ್ಕರ್. ಇವರಿಗೆ ಮೂವರು ಸಹೋದರಿಯರು, ಒಬ್ಬ ಸಹೋದರ. ಅದರಲ್ಲಿ ಒಬ್ಬಾಕೆ ಕ್ವೀನ್ ಆಫ್ ಮೆಲೋಡಿ ಎಂದೇ ಖ್ಯಾತಿ ಗಳಿಸಿದ್ದ ಲತಾ ಮಂಗೇಶ್ಕರ್. ಆಶಾರ ಕಿರಿಯ ಸಹೋದರಿ ಮೀನಾ ಕಾರ್ಡಿಕರ್ ಮರಾಠಿ ಮತ್ತು ಹಿಂದಿ ಚಿತ್ರರಂಗದ ಹಿನ್ನೆಲೆ ಗಾಯಕಿ.
ಮತ್ತೋರ್ವ ತಂಗಿ ಉಷಾ ಮಂಗೇಶ್ಕರ್ ಮರಾಠಿ, ಹಿಂದಿ, ಬೆಂಗಾಲಿ, ನೇಪಾಳಿ, ಕನ್ನಡ, ಭೋಜ್ಪುರಿ, ಅಸ್ಸಾಮಿ, ಗುಜರಾತಿ ಭಾಷೆಯಲ್ಲಿ ಕೆಲವು ಹಾಡುಗಳನ್ನು ಹಾಡಿದ್ದಾರೆ. ಲತಾ ಮಂಗೇಶ್ಕರ್ ಅವರ ಸೋದರ ಹೃದಯನಾಥ್ ಮಂಗೇಶ್ಕರ್ ಕೂಡ ಹಿನ್ನೆಲೆ ಗಾಯಕ ಹೀಗೆ ಇವರ ಇಡೀ ಕುಟುಂಬ ಸಂಗೀತವನ್ನೇ ಉಸಿರಾಡಿತ್ತು. ಸಂಗೀತ ಕುಟುಂಬದಲ್ಲೇ ಜನಿಸಿದ್ದ ಇವರಿಗೆ ಸುಲಭವಾಗಿಯೇ ಅದೆಲ್ಲ ಕರಗತವಾಯಿತು.
ಆಶಾ ಭೋಸ್ಲೆ ಸಂಗೀತದಲ್ಲಿ ಔಪಚಾರಿಕ ಶಿಕ್ಷಣ ಪಡೆದಿರಲಿಲ್ಲ. ಬಹಳ ಬೇಗ ಶಾಲೆ ತೊರೆದರು. 10ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡಿದ್ದ ಕುಟುಂಬ ಸಾಂಗ್ಲಿಯಿಂದ ಪುಣೆ, ಕೊಲ್ಹಾಪುರಕ್ಕೆ ಬಳಿಕ ಮುಂಬೈಗೆ ಸ್ಥಳಾಂತರವಾಯಿತು. ಆಗ ಅಕ್ಕ ಲತಾ ಮತ್ತು ಆಶಾ ಕುಟುಂಬ ನಿರ್ವಹಣೆಗೆಂದು ಸಿನಿಮಾದಲ್ಲಿ ಹಾಡಲು ಆರಂಭಿಸಿದರು. ಅದು ಮುಂದೆ ಕುಟುಂಬದ ದಿಕ್ಕನ್ನೇ ಬದಲಿಸಿತು. 1943ರಲ್ಲಿ ಆಶಾರ ಮೊದಲ ಹಾಡು ರೆಕಾರ್ಡ್ ಮಾಡಲಾಯಿತು. ಮರಾಠಿ ಚಿತ್ರ ಮಾಝಾ ಬಾಲ್ ನಲ್ಲಿ ''ಚಲಾ ಚಲಾ ನವ ಬಾಲಾ'' ಹಾಡುವ ಮೂಲಕ ವೃತ್ತಿ ಬದುಕು ಆರಂಭಿಸಿದರು. ಹಿಂದಿ ಚಿತ್ರದಲ್ಲಿ 1948ರಲ್ಲಿ ''ಸಾವನ್ ಆಯಾ'' ಮೂಲಕ ಪ್ರವೇಶಿಸಿದರು. ಆ ಬಳಿಕ ಕನ್ನಡ ಸೇರಿ 20 ಭಾಷೆಗಳಲ್ಲಿ ತಮ್ಮ ಗಾಯನದ ಛಾಪು ಮೂಡಿಸಿದ್ದಾರೆ.
ಯೌವ್ವನದಲ್ಲಿಯೇ ಆಶಾ ತನಗಿಂತ 20 ವರ್ಷ ದೊಡ್ಡವರಾಗಿದ್ದ ಗಣಪತ್ರರಾವ್ ಭೋಸ್ಲೆ ಎನ್ನುವವರ ಪ್ರೀತಿಯಲ್ಲಿ ಬಿದ್ದರು. ರಾವ್, ಅಕ್ಕ ಲತಾರ ಆಪ್ತ ಕಾರ್ಯದರ್ಶಿಯಾಗಿದ್ದರು. ಅವರ ಮದುವೆಗೆ ಆಶಾ ಕುಟುಂಬ ಒಪ್ಪಲಿಲ್ಲ. ಅದನ್ನೂ ಧಿಕ್ಕರಿಸಿ 16 ವರ್ಷವಿದ್ದಾಗ ಮನೆ ಬಿಟ್ಟು ಹೋಗಿ ಮದುವೆ ಆದರು. ಆದರೆ ದಾಂಪತ್ಯ ಅಂದುಕೊಂಡಷ್ಟು ಸಿಹಿ ಆಗಿರಲಿಲ್ಲ. ಸಂಸಾರ ಹಳಿ ತಪ್ಪಿತ್ತು. ಪತಿ ಕೋಪಿಷ್ಠ, ಜತೆಗೆ ಅನುಮಾನದ ಸ್ವಭಾವದವ.
ಸಂಪ್ರದಾಯಸ್ಥ ಕುಟುಂಬಸ್ಥರಾಗಿದ್ದ ಪತಿ ಮನೆಯವರು ಅವರ ಗಾಯನಕ್ಕೆ ಸಾಥ್ ನೀಡಲಿಲ್ಲ. ಜೊತೆಗೆ ಪತಿಯಿಂದ ಹಿಂಸೆ. ಹಲವು ಸಂದರ್ಶನಗಳಲ್ಲಿ ಆಶಾ ಈ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ‘ನನ್ನ ಪತಿ ತುಂಬಾ ಕೋಪಿಷ್ಠನಾಗಿದ್ದರು. ಇತರರನ್ನು ಹಿಂಸಿಸುವುದನ್ನು ಆನಂದಿಸುತ್ತಿದ್ದರು. ಬಹುಶಃ ಅವರು ''ಸ್ಯಾಡಿಸ್ಟ್'' ಆಗಿರಬಹುದು. ಆದರೆ ನಾನು ಅದನ್ನು ಯಾರಿಗೂ ತಿಳಿಸದೆ ನನ್ನ ಪತ್ನಿ ಧರ್ಮದ ಕರ್ತವ್ಯ ಪಾಲಿಸುತ್ತಿದೆ’ ಎಂದಿದ್ದಾರೆ.
ಅವರ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ. 1960ರಲ್ಲಿ ದೂರವಾದರು. ಆ ವೇಳೆ ಅವರು 3ನೇ ಮಗುವಿನ ಗರ್ಭಿಣಿಯಾಗಿದ್ದರು. ಅವರಿಗೆ ಮೊದಲ ಮದುವೆಯಿಂದ ಹೇಮಂತ್, ವರ್ಷ ಮತ್ತು ಆನಂದ್ ಎನ್ನುವ ಮೂವರು ಮಕ್ಕಳಿದ್ದರು.
ಹಾಡಿನ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದ ಆಶಾ ಒಂದು ಕಾಲದಲ್ಲಿ ಸಾಯುವ ನಿರ್ಧಾರವನ್ನೂ ತೆಗೆದುಕೊಂಡಿದ್ದರು. ಹಳಿ ತಪ್ಪಿದ್ದ ಸಂಸಾರದಿಂದ ಮಾನಸಿಕವಾಗಿ ಜರ್ಜರಿತರಾಗಿದ್ದ ಪರಿಣಾಮ ಒಮ್ಮೆ ಆತ್ಮಹತ್ಯೆಗೂ ನಿರ್ಧರಿಸಿದ್ದರು. ಮೂರನೇ ಮಗುವನ್ನು ಹೊಟ್ಟೆಯಲ್ಲಿ ಹೊತ್ತುಕೊಂಡು 4 ತಿಂಗಳ ಗರ್ಭಿಣಿಯಾಗಿದ್ದಾಗ ಅವರ ಆರೋಗ್ಯ ಹದೆಗೆಟ್ಟಿತ್ತು. ಸಾಯುವ ಆಲೋಚನೆ ತಲೆ ಅಲ್ಲಿ ಬಂದಿತ್ತು. ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದರು. ಆದರೆ ದೇವರು ಕೈ ಬಿಡಲಿಲ್ಲ. ‘ ನನ್ನ ಹೊಟ್ಟೆಯಲ್ಲಿರುವ ನನ್ನ ಮಗು ನನ್ನನ್ನು ಸಾವಿನ ದವಡೆಯಿಂದ ಪಾರು ಮಾಡಿತು’ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಆಶಾ ಮತ್ತು ಲತಾ ಮಂಗೇಶ್ಕರ್ ಮದುವೆ ಕಾರಣಕ್ಕೆ ದೂರವಾಗಿದ್ದರು. ಹೀಗಿದ್ದರೂ ಇಬ್ಬರೂ ಹಲವು ಸಿನಿಮಾಗಳಲ್ಲಿ ಒಟ್ಟಾಗಿ ಹಾಡಿದ್ದರು. ಹಾಡುವ ವೇಳೆ ಲತಾ ಬಲಗೈಯಲ್ಲಿ ನೋಟ್‌ಬುಕ್ ಹಿಡಿದುಕೊಂಡಿದ್ದರೆ, ಆಶಾ ಎಡಗೈಯಲ್ಲಿ ಹಿಡಿದುಕೊಳ್ಳುತ್ತಿದ್ದರು ಎಂಬುದು ವಿಶೇಷ. ಆದರೆ ಮೊದಲ ಮದುವೆ ಮುರಿದು ಬಂದ ಬಳಿಕ ಲತಾ ತಂಗಿಗೆ ಆಸರೆಯಾಗಿದ್ದರು. ಕಾಲಕ್ರಮೇಣ ಸಂಬಂಧ ಸುಧಾರಿಸಿತು. ಲತಾರ ಕಡೆಯ ದಿನಗಳಲ್ಲಿ ಅಕ್ಕ- ತಂಗಿ ಇಬ್ಬರೂ ಆತ್ಮೀಯರಾಗಿದ್ದರು.
ಸಾಂಸರಿಕ ಜೀವನದಿಂದ ನೊಂದಿದ್ದ ಆಶಾಗೆ ಸಂಗೀತವೊಂದೇ ಆಸರೆಯಾಗಿತ್ತು. ಮದುವೆ ಬಂಧ ಕಳೆದುಕೊಂಡ ಮೇಲೆ ಸತತವಾಗಿ ಸಿನಿಮಾಗಳಿಗೆ ಹಾಡಿದರು. ಮನೆ, ಮಕ್ಕಳು, ಅವರ ವಿಧ್ಯಾಭ್ಯಾಸಕ್ಕಾಗಿ ದಿನ ನಿತ್ಯ ಗಾಯನದಲ್ಲಿಯೇ ತೊಡಗಿಕೊಂಡಿದ್ದರು. ಯಾವ ಮಟ್ಟಿಗೆಂದರೆ ಒಂದು ವರ್ಷ ಅಕ್ಕ ಲತಾ ಮಂಗೇಶ್ಕರ್ ಅವರಿಗಿಂತಲೂ ಹೆಚ್ಚು ಹಾಡುಗಳನ್ನು ಹಾಡಿದರು. ಅದಾಗಲೇ ಗಾಯನ ಲೋಕದಲ್ಲಿ ಅನಭಿಷಿಕ್ತ ರಾಣಿಯಂತೆ ಮೆರೆಯುತ್ತಿದ್ದ ಅಕ್ಕ ಲತಾ ಅವರು ಹಾಡದೆ ಬಿಟ್ಟ ಚಿತ್ರಗಳಿಗೆ ಅವರು ಧ್ವನಿಯಾಗುತ್ತಿದ್ದರು. ಅವರಿಗೆ ಶೇ.20ರಷ್ಟು ಕಡಿಮೆ ಸಂಭಾವನೆ ಪಡೆಯುತ್ತಿದ್ದ ಆಶಾ ಒಂದೇ ಮಾದರಿಗೆ ಹಾಡಿಗೆ ಸೀಮಿತವಾಗದೇ ಎಲ್ಲದರಲ್ಲಿಯೂ ಆದೃಷ್ಟ ಪರೀಕ್ಷೆ ನಡೆಸಿದರು. ಅದು ಟೀಕೆಗಳ ನಡುವೆಯೂ ಅವರ ಕೈ ಹಿಡಿಯಿತು. ಆಶಾ ಮಂಗೇಶ್ಕರ್ ಅವರ ಹೆಸರಿನ ಜತೆಗೆ ಅವರ ಮೊದಲ ಪತಿಯ ಹೆಸರು ಸೇರಿತ್ತು. ಅವರಿಂದ ದೂರವಾದ ಬಳಿಕವೂ ಆಶಾ ಭೋಸ್ಲೆ ಎಂದೇ ತಮ್ಮನ್ನು ಕರೆಸಿಕೊಳ್ಳುತ್ತಿದ್ದರು. ಅದಾಗಲೇ ಆಶಾ ಭೋಸ್ಲೆ ಹೆಸರಿನಿಂದ ಜನಪ್ರಿಯರಾಗಿದ್ದ ಅವರು ಅದನ್ನು ಬಿಡಲಿಲ್ಲ. ಕೊನೆ ತನಕವೂ ಅದೇ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದರು.
ಮೊದಲ ಮದುವೆಯಿಂದಲೇ ನೊಂದಿದ್ದ ಆಶಾ ಆ ಬಳಿಕ ಒಂಟಿಯಾಗಿಯೇ ಉಳಿದರು. 2 ದಶಕ ಏಕಾಂಗಿ ಜೀವನ ನಡೆಸಿದ್ದ ಅವರು 47 ನೇ ವಯಸ್ಸಿನಲ್ಲಿ ಅಂದರೆ 1980 ರಲ್ಲಿ ಆರ್.ಡಿ.ಬರ್ಮನ್ ಅವರನ್ನು 2ನೇ ವಿವಾಹವಾದರು. ಬರ್ಮನ್ 1994ರಲ್ಲಿ ಸಾವನ್ನಪ್ಪಿದರು.
ಆಶಾ ಭೋಸ್ಲೆ ಅವರಿಗೆ ಮೊದಲ ಮದುವೆಯಿಂದ ಮೂವರು. ಮೊದಲ ಮಗ ಹೇಮಂತ್ ಭೋಸ್ಲೆ ಪೈಲಟ್ ಆಗಿದ್ದರು ಬಳಿಕ ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. ಆದರೆ ಅವರು 2015 ರಲ್ಲಿ ಕ್ಯಾನ್ಸರ್ನಿಂದ ನಿಧನ ಹೊಂದಿದರು. ಮಗಳು ವರ್ಷಾ ಪತ್ರಕರ್ತೆ, ಸಂಗೀತಗಾರ್ತಿಯಾಗಿದ್ದರು. 2012 ರಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಇದೂ ಅವರನ್ನು ಮಾನಸಿಕವಾಗಿ ಕಾಡಿತ್ತು. ಆಶಾ ಅವರ ಕೊನೆಯ ಪುತ್ರ ಆನಂದ್ ಭೋಸ್ಲೆ. ಇವರು ಕೊನೆಯವರೆಗೂ ಅಮ್ಮನ ಜೊತೆಗಿದ್ದರು.
ಉತ್ಸಾಹದ ಚಿಲುಮೆಯಂತಿದ್ದ ಆಶಾ ಇಳಿ ವಯಸ್ಸಿನಲ್ಲಿಯೂ ಸಂಗೀತ ಕಚೇರಿ ನಡೆಸುತ್ತಿದ್ದರು. 90ನೇ ವಯಸ್ಸಿನಲ್ಲಿಯೂ ಲೈವ್ ಕಚೇರಿ ನಡೆಸುತ್ತಿದ್ದರು, 2023ರಲ್ಲಿ ದುಬೈನಲ್ಲಿ ತಮ್ಮ 90ನೇ ಹುಟ್ಟುಹಬ್ಬದ ವಿಶೇಷ ಕಾರ್ಯಕ್ರಮ ನಡೆಸಿದ್ದರು. ಅದರಲ್ಲಿಯೂ ನಿರಂತರ 3 ಗಂಟೆಗಳ ಕಾಲ ನಿಂತು ಹಾಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. 2024ರಲ್ಲಿಯೂ ಮುಂಬೈನಲ್ಲಿ ಕಾರ್ಯಕ್ರಮ ನಡೆದಿತ್ತು. ಇದೇ ವರ್ಷ ಅವರ ಕೊನೆಯ ಹಾಡು ಕೂಡ ಬಿಡುಗಡೆ ಆಗಿತ್ತು. ಕಳೆದ ಫೆ.27ರಂದು ಬಿಡುಗಡೆಯಾದ ಗೊರಿಲಾಜ್ ಬ್ಯಾಂಡ್‌ನ ‘ದ ಶ್ಯಾಡೋಯಿ ಲೈಟ್’ನ ಹಿಂದಿ ಆವೃತ್ತಿಯು ಆಶಾರ ಕೊನೆಯ ಹಾಡಾಗಿದೆ.
ಆಶಾ ಭೋಸ್ಲೆ ಅವರನ್ನು ಅರಸಿ ಬರದ ಪ್ರಶಸ್ತಿಗಳೇ ಇಲ್ಲ. ಆದರೆ ಒಂದು ಹಂತದಲ್ಲಿ ಅವರು ಪ್ರಶಸ್ತಿಗಳನ್ನು ತಿರಸ್ಕರಿಸುತ್ತಿದ್ದರು. ‘ಪ್ರಶಸ್ತಿಗಳು ಹೆಚ್ಚಾಗಿ ನನಗೆ, ಸಹೋದರಿ ಲತಾ ,ಮಂಗೇಶ್ಕರ್‌ಗೆ ಹೋಗುತ್ತವೆ. ಇದರಿಂದ ಹೊಸ ಮಹಿಳಾ ಗಾಯಕಿಯರು ಪ್ರಶಸ್ತಿಗಳನ್ನು ತಪ್ಪಿಸಿಕೊಳ್ಳುತ್ತಿದ್ದರು. ಪ್ರಶಸ್ತಿ ಪಡೆಯುವುದರ ಹಿಂದೆ ಇಡೀ ತಂಡದ ಪರಿಶ್ರಮ ಇರುತ್ತದೆ. ಹೀಗಿದ್ದರೂ ಎಲ್ಲಾ ಕ್ರೆಡಿಟ್ ನಾನು ಪಡೆಯುವುದು ಅನ್ಯಾಯ’ ಎನ್ನುತ್ತಿದ್ದರು.
ಆಶಾ ಭೋಸ್ಲೆ ಸದಾ ಚುರುಕುತನ ಹೊಂದಿದ್ದರು. ಹಾಡಿನ ಜೊತೆಗೆ ಸಂಗೀತ ನಿರ್ದೇಶನ ಮಾಡಿದ್ದರು. ನಟನೆಯಲ್ಲಿಯೂ ಸೈ ಎನಿಸಿಕೊಂಡಿದ್ದರು, 2002ರಲ್ಲಿ ಆಪ್ ಕಿ ಆಸಾ ಎನ್ನುವ ಆಲ್ಬಮ್ ಹೊರ ತಂದಿದ್ದರು. ಮತ್ತೊಂದೆಡೆ ತಮ್ಮ 79ನೇ ವಯಸ್ಸಿನಲ್ಲಿ 2013ರಲ್ಲಿ ಮರಾಠಿ ಸಿನಿಮಾ ಮಾಯ್ ಅಭಿನಯಿಸಿದ್ದರು.
ಆಶಾ ಬೋಸ್ಲೆಗೆ ತಿನ್ನುವುದರೆಂದರೆ ಬಹು ಇಷ್ಟ. ಜತೆಗೆ ಅಡುಗೆ ಮಾಡುವುದೆಂದರೂ ಒಲವು ಜಾಸ್ತಿ. ಅದರಲ್ಲೂ ಕಪೂರ್ ಕುಟುಂಬಕ್ಕೆ ಆಶಾ ಮಾಡಿದ ಅಡುಗೆಗಳೆಂದರೆ ಬಹಳ ಇಷ್ಟವಾಗಿತ್ತು. ಅಡುಗೆಯನ್ನು ಪ್ರೀತಿಯಿಂದ ಮಾಡಿದರೆ ಮಾತ್ರ ಅದು ರುಚಿಯಾಗಿರುತ್ತದೆ, ಅದು ಹಾಡುಗಾರಿಕೆಯಂತೆಯೇ’ ಎಂದು ಅವರು ಹೇಳುತ್ತಿದ್ದರು.
ಅದನ್ನೇ ಉದ್ಯಮವನ್ನಾಗಿ ಬದಲಿಸಿದರು. ಆಶಾಸ್ ಎನ್ನುವ ಬ್ರ್ಯಾಂಡ್‌ನಲ್ಲಿ ವಿದೇಶಗಳಲ್ಲಿ ರೆಸ್ಟೋರೆಂಟ್ ಹೊಂದಿದ್ದಾರೆ. ದುಬೈ, ಬಹರೇನ್, ಅಬು ದಾಭಿ, ಕತಾರ್, ಕುವೈತ್ , ಬರ್ಮಿಂಗ್ ಹ್ಯಾಮ್‌ನಲ್ಲಿ , ಬ್ರಿಟನ್‌ನಲ್ಲಿ ಅವರ ರೆಸ್ಟೋರೆಂಟ್‌ಗಳಿವೆ. 15ಕ್ಕೂ ಹೆಚ್ಚು ಬ್ರ್ಯಾಂಚ್ ಹೊಂದಿ ಯಶಸ್ವಿ ಉದ್ಯಮಿಯಾಗಿದ್ದರು.
ಒಂದು ಕಾಲದಲ್ಲಿ ಕುಟುಂಬ ನಿರ್ವಹಣೆಗೆಂದು ಮೈಕ್ ಹಿಡಿದ ಆಶಾ ಇಂದು ಭಾರತದ ಅಗ್ರ 5 ಮಹಿಳಾ ಸಿರಿವಂತ ಸಿಂಗರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಹಾದಿಯಲ್ಲಿ ಅವರು ಅದೆಷ್ಟೋ ಕಷ್ಟ, ನಿದ್ದೆ ಇಲ್ಲದ ರಾತ್ರಿ, ಸಾಧಿಸುವ ಛಲ, ಭವಿಷ್ಯದ ಕನಸುಗಳ ಕನವರಿಕೆಯಲ್ಲಿ ಕಳೆದಿದ್ದಾರೆ. ತನ್ಮೂಲಕ 8 ದಶಕ ಸಂಗೀತ ಪ್ರೇಮಿಗಳಿಗೆ ಗಾನಸುಧೆ ಹರಿಸಿದ್ದು ಮಾತ್ರವಲ್ಲದೇ ಭಾರತದ ಸ್ವರ ಸಾಮ್ರಾಜ್ಯದಲ್ಲಿ ತಮ್ಮ ಹೆಸರನ್ನು ಅಚ್ಚೊತ್ತಿ ಹೋಗಿದ್ದಾರೆ.