25 ವರ್ಷಗಳಲ್ಲಿ ಏನೇನ್‌ ಆಯ್ತು ಗೊತ್ತಾ? 21ನೇ ಶತಮಾನದ ಕಾಲು ಶತಮಾನಕ್ಕೆ ತೆರೆ, ಶರವೇಗದಲ್ಲಿ ಬದಲಾಗಿದೆ ಕಾಲ

Mahmad Rafik   | Kannada Prabha
Published : Jan 01, 2026, 08:21 AM IST
happy new year

ಸಾರಾಂಶ

ಕಳೆದ ಕಾಲು ಶತಮಾನದಲ್ಲಿ ಭಾರತವು ತಂತ್ರಜ್ಞಾನ, ಆರ್ಥಿಕತೆ, ಮತ್ತು ಮೂಲಸೌಕರ್ಯದಲ್ಲಿ ಅದ್ಭುತ ಬದಲಾವಣೆಗಳನ್ನು ಕಂಡಿದೆ. ಸ್ಮಾರ್ಟ್‌ಫೋನ್‌ ಕ್ರಾಂತಿಯಿಂದ ಹಿಡಿದು ಇಸ್ರೋದ ಬಾನಂಗಳದ ಸಾಧನೆಗಳವರೆಗೆ, ದೇಶದ ಪ್ರತಿಯೊಂದು ಕ್ಷೇತ್ರದಲ್ಲೂ ಆದ ಮಹತ್ವದ ಪರಿವರ್ತನೆಗಳನ್ನು ಈ ಲೇಖನ ವಿವರಿಸುತ್ತದೆ.

ಫೋನ್‌ನಿಂದ ಎಲ್ಲರೂ ಸ್ಮಾರ್ಟ್‌

21ನೇ ಶತಮಾನಕ್ಕೆ ಕಾಲಿಟ್ಟಾಗ ಮೊಬೈಲ್‌ ಎಂಬುದು ಶ್ರೀಮಂತಿಕೆಯ ಸಂಕೇತವಾಗಿತ್ತು. ಕೀ ಪ್ಯಾಡ್‌ ಮೊಬೈಲ್‌ ಖರೀದಿ, ಅದಕ್ಕೆ ರೀಚಾರ್ಜ್‌ ಮಾಡಿಸುವುದು, ಕರೆ ಮಾಡುವುದು ಹಣವಂತರಿಗಷ್ಟೇ ಸಾಧ್ಯವಿತ್ತು. ಆದರೆ ಈಗ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್‌ಫೋನ್‌ ಇವೆ.

ಡೂಮ್‌ ಟೀವಿಗಳು ಢಂ

ಕಪ್ಪು ಬಿಳುಪಿನ ಅಥವಾ ಬಣ್ಣದ ಡೂಮ್‌ ಟೀವಿಗಳು ಮನೆಗಳನ್ನು ಆಳುತ್ತಿದ್ದ ಕಾಲವದು. ಈ ಕಾಲು ಶತಮಾನದಲ್ಲಿ ತೆಳು ಪರದೆಯ ಟೀವಿಗಳು ಬಂದವು. ಎಲ್‌ಸಿಡಿ, ಪ್ಲಾಸ್ಮಾ, ಎಲ್‌ಇಡಿ ಬಳಿಕ ಸ್ಮಾರ್ಟ್‌ ಟೀವಿಗಳು ಬಂದವು. ಈಗ ಫ್ರೀ ಕೊಟ್ಟರೂ ಡೂಮ್‌ ಟೀವಿಗಳನ್ನು ಕೇಳುವವರಿಲ್ಲ.

ಅಂಗೈಯಲ್ಲೇ ಬ್ಯಾಂಕು

ಬ್ಯಾಂಕ್‌ ಖಾತೆಗೆ ಹಣ ತುಂಬಲು, ತೆಗೆಯಲು ಬ್ಯಾಂಕುಗಳ ಮುಂದೆ ಕ್ಯೂ ನಿಲ್ಲಬೇಕಿತ್ತು. ರಜಾ ದಿನ ಬಂತೆಂದರೆ ಕ್ಯೂ ಹೆಚ್ಚಾಗುತ್ತಿತ್ತು. ಆದರೆ ಈಗ ಆ ಬವಣೆ ಇಲ್ಲ. ಮೊಬೈಲ್‌ನಲ್ಲೇ ಬ್ಯಾಂಕ್‌ ವ್ಯವಹಾರ ನಡೆಯುತ್ತಿವೆ. ಯುಪಿಐ ಬಂದಿದೆ. ಹಣ ವರ್ಗಾವಣೆ, ಸ್ವೀಕಾರ ಸುಲಭ.

ಆನ್‌ಲೈನ್‌ ಶಾಪಿಂಗ್‌

ಹಬ್ಬಕ್ಕೆ ಬಟ್ಟೆ ಖರೀದಿಸಲು, ದಿನಸಿ, ಸಾಮಗ್ರಿ ಖರೀದಿಸಲು ಪೇಟೆಗೇ ಹೋಗಬೇಕಿತ್ತು. ಆದರೆ ಈಗ ಮನೆಯಲ್ಲೇ ಕುಳಿತು ಬೇಕಾದ್ದನ್ನು ಖರೀದಿಸಲು ಆನ್‌ಲೈನ್‌ ಶಾಪಿಂಗ್‌ ಇದೆ. ಊಟ ಕೂಡ ಮನೆ ಬಾಗಿಲಿಗೆ ಬರುತ್ತಿದೆ. ಮನೆಯಿಂದ ಹೊರಗೆ ಹೋಗದೆ ಎಲ್ಲವನ್ನೂ ಮನೆಗೆ ತರಿಸಿಕೊಳ್ಳಬಹುದು.

ನರೇಂದ್ರ ಮೋದಿ

ನರೇಂದ್ರ ಮೋದಿ ಎಂದರೆ ದೇಶದ ಬಹುಪಾಲು ಜನರಿಗೇ ಗೊತ್ತೇ ಇರಲಿಲ್ಲ. ಆದರೆ ಈಗ ದೇಶ- ವಿದೇಶಗಳಲ್ಲೂ ‘ಮೋದಿ’ ಎಂದರೆ ಗೊತ್ತೇ ಇಲ್ಲದವರು ಇಲ್ಲ ಎನ್ನುವಂತಹ ಕಾಲ. ಅವರು ವಿಶ್ವದ ಪ್ರಭಾವಿ ನಾಯಕರಾಗಿದ್ದಾರೆ. ಅಪ್ಪುಗೆಯ ರಾಜತಾಂತ್ರಿಕ, ವಾಗ್ಝರಿಯಿಂದ ಪ್ರಸಿದ್ಧರಾಗಿದ್ದಾರೆ.

ಬಾಲ ಬಿಚ್ಚಿದ ಉಗ್ರವಾದ

ಸಂಸತ್‌ ಮೇಲೆ ದಾಳಿ, ಮುಂಬೈ ರೈಲು ಸ್ಫೋಟ, 26/11 ಅಟ್ಟಹಾಸ, ಪುಲ್ವಾಮಾದಲ್ಲಿ ಯೋಧರ ಸಂಹಾರ, ಪಹಲ್ಗಾಂ ನರಮೇಧಗಳನ್ನು ಭಾರತ ಕಾಣುವಂತಾಯಿತು. ಪಾಕಿಸ್ತಾನಕ್ಕೆ ಭಾರತವು ಸರ್ಜಿಕಲ್‌ ಸ್ಟ್ರೈಕ್‌, ಏರ್‌ಸ್ಟ್ರೈಕ್‌, ಆಪರೇಷನ್‌ ಸಿಂದೂರ ಹೆಸರಲ್ಲಿ ಭರ್ಜರಿ ತಿರುಗೇಟು ಕೊಟ್ಟಿತು.

ಬಾನೆತ್ತರಕ್ಕೆ ಇಸ್ರೋ

ಸೈಕಲ್‌ ಮೇಲೆ ರಾಕೆಟ್‌ ಸಾಗಿಸುತ್ತಿದ್ದ ಇಸ್ರೋ ಇಡೀ ವಿಶ್ವವೇ ತಿರುಗಿ ನೋಡುವಂತಹ ಸಾಧನೆ ಮಾಡಿತು. ಕಡಿಮೆ ಖರ್ಚಿನಲ್ಲಿ ಎರಡು ಬಾರಿ ಚಂದ್ರಯಾನ, ಮಂಗಳಯಾನ ನಡೆಸಿತು. ವಿದೇಶಿ ಉಪಗ್ರಹಗಳನ್ನು ಉಡಾಯಿಸಿತು. ಈಗ ಗಗನಯಾನಕ್ಕೆ ಸಜ್ಜಾಗುತ್ತಿದೆ ಇಸ್ರೋ.

ಚಿನ್ನ, ಬೆಳ್ಳಿ ಭಾರಿ ಜಿಗಿತ

2000ನೇ ಇಸ್ವಿಯಲ್ಲಿ ಚಿನ್ನದ ಬೆಲೆ 10 ಗ್ರಾಂ 4400 ರು. ಇತ್ತು. 8000 ರು. ಕೊಟ್ಟರೆ 1 ಕೇಜಿ ಬೆಳ್ಳಿಗಟ್ಟಿ ಸಿಗುತ್ತಿತ್ತು. ಆಗ ನೀವು 10 ಗ್ರಾಂ ಚಿನ್ನ ಖರೀದಿಸಿದ್ದರೆ ಅದರ ಮೌಲ್ಯ ಈಗ 1.36 ಲಕ್ಷ ರು., 1 ಕೇಜಿ ಬೆಳ್ಳಿ ಬೆಲೆ ಕೊಂಡಿದ್ದರೆ ಈಗ 2.40 ಲಕ್ಷ ರು. ಆಗಿರುತ್ತಿತ್ತು!

ಸೆನ್ಸೆಕ್ಸ್ ನಾಗಾಲೋಟ

2000ನೇ ಇಸ್ವಿಯಲ್ಲಿ ಸೆನ್ಸೆಕ್ಸ್‌ 6000 ಅಂಕಗಳ ಆಸುಪಾಸಿನಲ್ಲಿತ್ತು. ಈಗ 85 ಸಾವಿರಕ್ಕೇರಿದೆ. ಷೇರು ವ್ಯವಹಾರ, ಮ್ಯೂಚುಯಲ್‌ ಫಂಡ್‌ ಈಗ ಬಹುತೇಕ ಜನರಿಗೆ ಗೊತ್ತಿದೆ. ಹೂಡಿಕೆ ಬಗ್ಗೆ ಹಿಂದೆಂದಿಗಿಂತ ಹೆಚ್ಚಿನ ಜಾಗೃತಿ ಮೂಡಿದೆ.

ರಸ್ತೆಗಳಿಗೆ ಹೊಸ ಲುಕ್‌

ದೇಶದಲ್ಲಿ ಸರಿಯಾದ ಹೆದ್ದಾರಿಗಳೇ ಇರಲಿಲ್ಲ. ಈ ಶತಮಾನದಲ್ಲಿ ದೇಶದ ನಾಲ್ಕೂ ದಿಕ್ಕು ಸಂಪರ್ಕಿಸುವ ಸುವರ್ಣ ಚತುಷ್ಪಥ ಯೋಜನೆ ಆಯಿತು. ಈಗ ಎಕ್ಸ್‌ಪ್ರೆಸ್‌ವೇಗಳ ಯುಗ. ದೇಶದ ಉದ್ದಗಲಕ್ಕೂ ಸಂಚರಿಸಲು ಯಾವುದೇ ಸಮಸ್ಯೆ ಇಲ್ಲ.

ವಿಮಾನಗಳ ‘ಹಾರಾಟ’

ವಿಮಾನ ಹಾರಾಟ ಎಂಬುದು ಕೆಲವೇ ವರ್ಗಕ್ಕೆ ಸೀಮಿತವಾಗಿದ್ದ ಕಾಲ ಬದಲಾಗಿದೆ. ಹವಾಯಿ ಚಪ್ಪಲಿ ಧರಿಸುವವರೂ ವಿಮಾನ ಏರುವಂತಾಗಿದೆ. ದೇಶದ ಉದ್ದಗಲಕ್ಕೂ ವಿಮಾನ ಸೇವೆ ಇದೆ. ಬೆಂಗಳೂರು ಏರ್‌ಪೋರ್ಟ್‌ ಸೇರಿ ಹಲವು ವಿಮಾನ ನಿಲ್ದಾಣಗಳು ಆರಂಭವಾಗಿವೆ.

ಸಾರಿಗೆ ಕ್ರಾಂತಿ

ಐಷಾರಾಮಿ ಬಸ್‌ಗಳ ಸಂಚಾರ ಹೆಚ್ಚಾಗಿವೆ. ಕರ್ನಾಟಕದಲ್ಲಿ ವೋಲ್ವೋ ಬಸ್‌ಗಳ ಸಂಖ್ಯೆ ಹೆಚ್ಚಿದೆ. ಎಲೆಕ್ಟ್ರಿಕ್‌ ಬಸ್‌ಗಳು ಅಡ್ಡಾಡುತ್ತಿವೆ. ಎಲೆಕ್ಟ್ರಿಕ್‌ ಬೈಕ್‌, ಕಾರುಗಳ ಭರಾಟೆ ಹೆಚ್ಚಾಗಿದೆ. ಹೊಸ ಹೊಸ ಕಾರುಗಳು ಬಂದಿವೆ. ಮೆಟ್ರೋ, ವಂದೇ ಭಾರತ್‌ನಂತಹ ರೈಲುಗಳು ಬಂದಿವೆ.

ಐಟಿ, ಎಐ ಕ್ರಾಂತಿ

ಐಟಿ ಕಂಪನಿಗಳು ಹೊಸ ಎತ್ತರಕ್ಕೆ ಏರಿ ಆರ್ಥಿಕತೆಗೆ ಭಾರಿ ಕೊಡುಗೆ ನೀಡಿದವು. ಯುವಕರಿಗೆ ಉದ್ಯೋಗ ಸಿಕ್ಕಿತು. ಸ್ಟಾರ್ಟಪ್‌ ಕ್ರಾಂತಿಯಿಂದಾಗಿ ರೂಂ, ಫುಡ್‌ ಡೆಲಿವರಿ, ಕ್ಯಾಬ್‌, ಆಟೋ ಸೇವೆ ಸುಲಭವಾದವು. ಡ್ರೋನ್‌ಗಳು ಆಳುತ್ತಿವೆ. ಈಗ ಎಐ ಕ್ರಾಂತಿಯೇ ನಡೆಯುತ್ತಿದೆ.

ಗಡ್ಡ ಬಿಡುವ ಸ್ಟೈಲ್‌

ಮದುವೆ ಬಂತೆಂದರೆ ಯುವಕರು ನೀಟಾಗಿ ಶೇವ್ ಮಾಡಿಸಿಕೊಳ್ಳುತ್ತಿದ್ದರು. ಈಗ ಯುವಕರಿಗೆ ಗಡ್ಡ ಬಿಡುವುದೇ ಟ್ರೆಂಡ್‌. ಮದುವೆಗಳಲ್ಲೂ ಯುವಕರು ಗಡ್ಡಧಾರಿಗಳಾಗಿಯೇ ತಾಳಿ ಕಟ್ಟುತ್ತಿದ್ದಾರೆ. ಸಿನಿಮಾಗಳಲ್ಲೂ ಹೀರೋಗಳು ಗಡ್ಡಧಾರಿಗಳಾಗಿ ಕಾಣಿಸಿಕೊಳ್ಳುವ ಟ್ರೆಂಡ್‌ ನಡೆಯುತ್ತಿದೆ.

ಪ್ರತಿಯೊಬ್ಬರಿಗೂ ಆಧಾರ್‌

ದೇಶದ ಜನರ ಬಳಿ ರೇಷನ್‌ ಕಾರ್ಡ್‌, ವೋಟರ್ ಐಡಿ ಇತ್ತು. ಗುರುತಿನ ಪುರಾವೆ ಎಂದು ಇರಲಿಲ್ಲ. ಈ ಕಾಲು ಶತಮಾನದಲ್ಲಿ ಆಧಾರ್‌ ಎಂಬ 12 ಅಂಕಿಗಳ ವಿಶಿಷ್ಟ ಸಂಖ್ಯೆಯ ಗುರುತಿನ ಐಡಿಯನ್ನು ಪ್ರತಿಯೊಬ್ಬರಿಗೂ ನೀಡಲಾಯಿತು. ಆಧಾರ್‌ ಇಲ್ಲದಿದ್ದರೆ ಈಗ ನಿಮಗೆ ಆಧಾರವೇ ಇಲ್ಲ!

ಮೊಬೈಲ್‌ ಕೆಮೆರಾ ಯುಗ

ಫೋಟೋ ತೆಗೆಸಿಕೊಳ್ಳಲು ಸ್ಟುಡಿಯೋಗೆ ಹೋಗಬೇಕಿತ್ತು. ಸ್ವಂತ ಕ್ಯಾಮೆರಾ ಖರೀದಿಸಿದರೆ ರೀಲ್‌ ಲೆಕ್ಕ ಹಾಕಿ ಫೋಟೋ ತೆಗೆಯಬೇಕಿತ್ತು. ಬಳಿಕ ಡಿಜಿಟಲ್‌ ಕ್ಯಾಮೆರಾಗಳು ಪ್ರವೇಶಿಸಿ ಕ್ರಾಂತಿ ಮಾಡಿದವು. ಈಗ ಮೊಬೈಲ್‌ ಕ್ಯಾಮೆರಾಗಳು ಜಾದೂ ಮಾಡಿವೆ. ಎಲ್ಲರೂ ಫೋಟೋಗ್ರಾಫರ್‌ಗಳೇ!

ಫೇಸ್ಬುಕ್‌, ಇನ್ಸ್ಟಾ ರೀಲ್ಸ್‌

ಫೇಸ್‌ಬುಕ್‌, ಇನ್‌ಸ್ಟಾ ಗ್ರಾಂ, ವಾಟ್ಸಾಪ್‌ ಸೇರಿ ಈಗ ಬಳಸುತ್ತಿರುವ ಅಷ್ಟೂ ಸೋಷಿಯಲ್‌ ಮೀಡಿಯಾಗಳು ಬಂದಿದ್ದೇ ಈ ಕಾಲು ಶತಮಾನದಲ್ಲಿ. ಇ-ಮೇಲ್‌ಗಳು ಜನಪ್ರಿಯವಾಗಿದ್ದು ಈ ಕಾಲದಲ್ಲೇ.

ಭಾರತದ ಪ್ರಾಬಲ್ಯ

ಭಾರತದ ಬಗ್ಗೆ ವಿಶ್ವಕ್ಕೆ ಇದ್ದ ಕಲ್ಪನೆಯನ್ನೇ ಬದಲಿಸಿದ ಸಮಯ ಇದು. ಭಾರತ ಈಗ ವಿಶ್ವದ ಪವರ್‌ಫುಲ್‌ ದೇಶ. ಉತ್ಪಾದನೆ, ರಕ್ಷಣೆ, ಐಟಿ, ವ್ಯಾಪಾರ ಎಲ್ಲ ವಲಯದಲ್ಲೂ ಭಾರತದ ಸಾಧನೆ ಅಮೋಘ. ಭಾರತ ನೀತಿ ನಿರೂಪಣೆಯಲ್ಲಿ ಈಗ ಪ್ರಮುಖ ಪಾತ್ರ ವಹಿಸುವಂತಾಗಿದೆ.

ಯುದ್ಧ ಕಾಲ

ಅಪಘಾನಿಸ್ತಾನ, ಇರಾಕ್‌, ಲಿಬಿಯಾ, ಸಿರಿಯಾ, ಉಕ್ರೇನ್‌, ಇಸ್ರೇಲ್‌, ಪ್ಯಾಲೆಸ್ತೀನ್‌ನಂತಹ ಘೋರ ಯುದ್ಧಗಳನ್ನು ಈ ಕಾಲು ಶತಮಾನ ಕಂಡಿದೆ.

ಜನಸಂಖ್ಯೆ ಹೆಚ್ಚಳ

ಭಾರತದ ಜನಸಂಖ್ಯೆ 1.05 ಕೋಟಿ ಇತ್ತು. ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿತ್ತು. ಈಗ ದೇಶವಾಸಿಗಳ ಸಂಖ್ಯೆ 140 ಕೋಟಿಯನ್ನು ದಾಟಿದೆ. ಚೀನಾವನ್ನು ಹಿಂದಿಕ್ಕಿ ವಿಶ್ವದಲ್ಲೇ ಮೊದಲ ಸ್ಥಾನಕ್ಕೇರಿದೆ.

ವಿಕಾಸಸೌಧ, ಸುವರ್ಣಸೌಧ

ಬೆಂಗಳೂರಿನ ವಿಧಾನಸೌಧ ಪಕ್ಕ ವಿಕಾಸಸೌಧ ತಲೆ ಎತ್ತಿದೆ. ಬೆಳಗಾವಿಯಲ್ಲಿ ಪ್ರತಿ ವರ್ಷ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಅದಕ್ಕಾಗಿ ಅಲ್ಲೊಂದು ಸುವರ್ಣಸೌಧವನ್ನೂ ನಿರ್ಮಿಸಲಾಗಿದೆ. ದೇಶದಲ್ಲಿ ಹೊಸ ಸಂಸತ್‌ ಭವನ ಎಲೆ ಎತ್ತಿದೆ.

ಹೊಸ ಜಿಲ್ಲೆ, ರಾಜ್ಯ

ಕರ್ನಾಟಕದಲ್ಲಿ ರಾಮನಗರ, ಚಿಕ್ಕಬಳ್ಳಾಪುರ, ಯಾದಗಿರಿ, ವಿಜಯನಗರ ಜಿಲ್ಲೆಗಳು ಸೃಷ್ಟಿಯಾಗಿವೆ. ದೇಶದಲ್ಲಿ ಜಾರ್ಖಂಡ್‌, ಛತ್ತೀಸ್‌ಗಢ, ಉತ್ತರಾಖಂಡ, ತೆಲಂಗಾಣ ರಾಜ್ಯಗಳು ಅಸ್ತಿತ್ವಕ್ಕೆ ಬಂದಿವೆ. ರಾಜ್ಯವಾಗಿದ್ದ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿದೆ.

ವಿವಾದಗಳಿಗೆ ತೆರೆ

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್‌ 370 ರದ್ದಾಗಿದೆ. ಅಯೋಧ್ಯೆ ರಾಮಮಂದಿರ ನಿರ್ಮಾಣ ಸಂಪನ್ನಗೊಂಡಿದೆ. ಇದಕ್ಕಾಗಿ ದಶಕಗಳ ಕಾಲ ನಡೆದ ಹೋರಾಟಕ್ಕೂ ತೆರೆ ಬಿದ್ದಿದೆ.

ಐಪಿಎಲ್‌, ವಿಶ್ವಕಪ್‌

ಐಪಿಎಲ್‌ ಟೂರ್ನಿ ನಡೆಯುತ್ತಿದೆ. 1983ರಲ್ಲಿ ವಿಶ್ವಕಪ್‌ ಗೆದ್ದಿದ್ದ ಭಾರತ 2011ರಲ್ಲಿ ಮತ್ತೊಮ್ಮೆ ವಿಶ್ವಕಪ್‌ ಗೆದ್ದಿದೆ. ಟಿ20 ವಿಶ್ವಕಪ್‌ ಆರಂಭವಾಗಿದ್ದು, ಎರಡು ಬಾರಿ ಭಾರತಕ್ಕೆ ಒಲಿದಿದೆ. ವಿರಾಟ್‌ ಕೊಹ್ಲಿಯಂತಹ ಆಟಗಾರ 25 ವರ್ಷದಲ್ಲಿ ವಿಶ್ವ ಕ್ರಿಕೆಟ್‌ಗೆ ಸಿಕ್ಕ ದೊಡ್ಡ ಕೊಡುಗೆ

ಕೋವಿಡ್‌ ಮಾರಿ

ಮನುಕುಲವೇ ಎಂದೂ ಕಾಣದ, ಇಡೀ ದೇಶವನ್ನೇ 40 ದಿನಗಳ ಕಾಲ ಬಂದ್‌ ಮಾಡಿಸಿದ, ಪ್ರೀತಿ ಪಾತ್ರರನ್ನು ಬಲಿ ಪಡೆದ ಕೋವಿಡ್‌ನಂತಹ ಮಹಾ ಮಾರಿಯನ್ನು ಜನರು ನೋಡಿದ್ದಾರೆ. ಅದರಿಂದ ಈಗ ಹೊರಬಂದಿದ್ದಾರೆ.

2 ಮಹಿಳಾ ರಾಷ್ಟ್ರಪತಿ

ದೇಶದಲ್ಲಿ ಮಹಿಳಾ ರಾಷ್ಟ್ರಪತಿಯೇ ಇರಲಿಲ್ಲ. ಈ 25 ವರ್ಷಗಳಲ್ಲಿ ಇಬ್ಬರು ಮಹಿಳೆಯರು ರಾಷ್ಟ್ರಪತಿ ಹುದ್ದೆ ಅಲಂಕರಿಸಿದ್ದಾರೆ. 2007ರಲ್ಲಿ ಪ್ರತಿಭಾ ಪಾಟೀಲ್‌ ಆ ಹುದ್ದೆಗೇರಿದರೆ, ಈಗ ದ್ರೌಪದಿ ಮುರ್ಮು ದೇಶದ ಪ್ರಥಮ ಪ್ರಜೆಯಾಗಿದ್ದಾರೆ.

PREV
Read more Articles on
click me!

Recommended Stories

ಯಶಸ್ವಿ ಜನರು ಪಾಲಿಸುವ ದಿನಚರಿ: 2026ರಲ್ಲಿ ನೀವು ಕೂಡ ಅನುಸರಿಸಬಹುದಾದ 10 ದಾರಿಗಳು
ಮದುವೆ ಔಟ್‌ಡೇಟೆಡ್‌ ಆಗೋಯ್ತಾ!