ಚೊಕ್ಕಾಡಿ; ಬಂಟಮಲೆಯ ತಪ್ಪಲಲ್ಲಿ ಒಂಟಿ ಕವಿ

By Kannadaprabha NewsFirst Published Feb 21, 2021, 9:41 AM IST
Highlights

ದಕ್ಷಿಣಕನ್ನಡದ ಮೌನ ಮತ್ತು ಧ್ಯಾನ ಎಂಬಂತೆ ಬದುಕುತ್ತಿರುವ ಕವಿ ಸುಬ್ರಾಯ ಚೊಕ್ಕಾಡಿ ಎಂಬತ್ತೆರಡರ ಅಂಚಲ್ಲಿ ತಮ್ಮ ಬದುಕಿನ ಯಾನವನ್ನು ದಾಖಲಿಸಿದ್ದಾರೆ. ಅಂಜನಾ ಹೆಗಡೆ ನಿರೂಪಿಸಿರುವ ಚೊಕ್ಕಾಡಿ ಕಥನದ ಐದು ಚಿತ್ರಗಳು ಇಲ್ಲಿವೆ.

ಮತ್ತೆ ಮಳೆ ಹೊಯ್ಯುತಿದೆ ಎಲ್ಲ ನೆನಪಾಗುತಿದೆ

ಸುಖ ದುಃಖ ಬಯಕೆ ಭಯ ಒಂದೆ ಎರಡೇ

ಮನೆಯ ಮೇಲಿನ ಟೆರೆಸಿನಲ್ಲಿ ನನ್ನ ಬಾಳಿನ ಇಳಿಸಂಜೆಯಲ್ಲಿ ಕುಳಿತು ಯೋಚಿಸುತ್ತಿರುವಾಗ ಅನಂತಮೂರ್ತಿಯವರ ಈ ಪದ್ಯದ ಸಾಲುಗಳು ನೆನಪಾಗುತ್ತವೆ. ಇಲ್ಲಿ ಸುರಿಯುವುದು ಮಳೆಯ ಬದಲಾಗಿ ನೆನಪುಗಳ ಅಜಸ್ರ ಧಾರೆ. ಈ ಟೆರೆಸಿನಲ್ಲಿ ಕುಳಿತು ನಾನು ಎಷ್ಟೋ ಮುಂಜಾವು ಮತ್ತು ಸಂಜೆಗಳನ್ನು ಕಳೆದಿದ್ದೇನೆ. ಸೂರ್ಯೋದಯದ ವಿಶಿಷ್ಟವಾದ ದೃಶ್ಯ ಇಲ್ಲಿ ಸದಾಕಾಲ ನನಗೆ ಸಿಗುತ್ತಿತ್ತು. ಅದಕ್ಕಾಗಿ ಕಾದು ಬೆಳಗಿನ ಹೊತ್ತು ಇಲ್ಲಿ ಬಂದು ಕುಳಿತುಕೊಳ್ಳುತ್ತಿದ್ದೆ. ಆಗ ನಮ್ಮ ತೋಟ ಇರದಿದ್ದ ಕಾರಣ ನನ್ನ ಕಣ್ಣೆದುರಿಗೆ ಬಂಟಮಲೆ ಕಾಣಿಸುತ್ತಿತ್ತು. ಮುಂಜಾನೆಯ ಬೆಳಕಿನಲ್ಲಿ ಬಂಟಮಲೆಯ ಮುಡಿಯಲ್ಲಿ ಬೆಳಕು ಕಾಣಿಸಿಕೊಳ್ಳುತ್ತಿತ್ತು. ಅದು ಇನ್ನಷ್ಟುತೀಕ್ಷ$್ಣವಾಗಿ ಅರ್ಧಚಂದ್ರಾಕೃತಿಯ ಒಂದು ಆಕೃತಿ ಕಾಣಿಸುತ್ತಿತ್ತು. ಅದು ಆಮೇಲೆ ಪೂರ್ತಿಯಾಗಿ ಒಂದು ಹೊಂಬಣ್ಣದ ಹರಿವಾಣವಾಗಿ, ಬೆಡಗಾಗಿ, ಬೆರಗಾಗಿ ಒಂದು ಬೆಳಗಿನ ಸೌಂದರ್ಯದ ದೃಶ್ಯ ನನ್ನೆದುರಿಗೆ ನಿಧಾನವಾಗಿ ಅನಾವರಣಗೊಳ್ಳುತ್ತಿತ್ತು. ಹಾಗೆ ಕಾಣಿಸಿಕೊಂಡ ನೇಸರು ನನ್ನ ಮನೆಯೆದುರಿಗಿನ ಮಾವಿನಮರದ ಎಲೆಗಳೊಂದಿಗೆ ಕಣ್ಣುಮುಚ್ಚಾಲೆಯಾಡುತ್ತ ನನ್ನಲ್ಲಿ ಪುಳಕಗಳನ್ನು ಹುಟ್ಟಿಸುತ್ತಿದ್ದ ದೃಶ್ಯವನ್ನು ನಾನು ಯಾವತ್ತಿಗೂ ಮರೆಯುವುದಿಲ್ಲ. ಪಂಜೆಯವರು ಹೇಳಿದಂತೆ, ಬಂಗಾರದ ಚೆಲು ಬಿಸಿಲ ಕಿರೀಟವ ಹೊತ್ತ ನೇಸರು ತನ್ನ ಪಯಣವನ್ನು ಆರಂಭಿಸಿ, ತೆಂಗಿನ ಕಂಗಿನ ತಾಳೆಯ ಬಾಳೆಯ ಅಂಗಕೆ ರಂಗನ್ನು ಮೆತ್ತುತ್ತ ಮೇಲೇರಿ, ಬಿಸಿಯಾಗಿ ಪಶ್ಚಿಮದತ್ತ ಸಾಗಿ ಮರೆಯಾಗುವ ಈ ಚಲನಾಕ್ರಮ ಅದ್ಭುತವಾದದ್ದು. ಪ್ರತಿ ಬೆಳಗೂ ಒಂದರಂತೆ ಇನ್ನೊಂದಿರದೆ, ಹೊಸದೇ ಅನಿಸುವ, ಬಿಸಲ ಕೋಲಿನ ಮಾಯಾದಂಡ ಬೀಸಿ ಸಕಲ ಜೀವಿಗಳಿಗೆ ಚೈತನ್ಯವನ್ನು ನೀಡುವಂತಹ ರೀತಿ ರೋಮಾಂಚನಗೊಳಿಸುವಂಥದು. ನನ್ನ ಬದುಕಿನ ಪಯಣವೂ ಇದನ್ನು ಹೇಳುತ್ತಿದೆಯಾ? ಗೊತ್ತಿಲ್ಲ.

-2-

ಬಂಟಮಲೆಯ ಸೂರ್ಯೋದಯದ ಅನುಭವದ ಆಕರ್ಷಣೆಯ ಕುರಿತಾಗಿ ಒಂದು ಸಂಗತಿಯನ್ನು ಉದಾಹರಿಸಬಹುದು. ನಮ್ಮ ಮನೆಗೆ ಲಕ್ಷ್ಮೇಶ ತೋಳ್ಪಾಡಿಯವರು ಬಂದಿದ್ದಾಗ ರಾತ್ರಿ ಸುಮಾರು ಒಂದು ಗಂಟೆಯವರೆಗೆ ಬೇರೆ ಬೇರೆ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತ ಕುಳಿತಿದ್ದೆವು. ಮಲಗುವ ಸಮಯದಲ್ಲಿ ‘ಬೆಳಗ್ಗೆ ಆರೂವರೆಗೆ ಬಸ್ಸಿದೆಯಲ್ಲವೇ, ಅದಕ್ಕೆ ಹೋಗಲೇಬೇಕು, ಹಾಗಾಗಿ ಆ ಹೊತ್ತಿಗೆ ನನ್ನನ್ನು ಎಬ್ಬಿಸಿಬಿಡಿ’ ಎಂದು ಅವರು ಹೇಳಿದ್ದರು. ಅವರನ್ನು ನಾನು ನಮ್ಮ ಮನೆಯ ಮೇಲೆ ಇರುವ ರೂಮಿನಲ್ಲಿ ಮಲಗಿಸಿದ್ದೆ. ನಾನು ಬೆಳಗ್ಗೆ ಸುಮಾರು ಆರು ಗಂಟೆಯ ಹೊತ್ತಿಗೆ ಎದ್ದು ತೋಳ್ಪಾಡಿಯವರನ್ನು ಎಬ್ಬಿಸಿ ಕರೆದುಕೊಂಡು ಬರಲು ಮೇಲೆ ಹೋದರೆ, ಅವರು ನಮ್ಮ ಟೆರೆಸಿನಲ್ಲಿ ಸೂರ್ಯನಿಗೆ ಅಭಿಮುಖವಾಗಿ ಪರವಶರಾಗಿ ನಿಂತಿದ್ದರು. ನಾನು ಕರೆದರೂ ಅವರು ಅದಕ್ಕೆ ಪ್ರತಿಕ್ರಿಯಿಸಲಿಲ್ಲ. ಸೂರ್ಯನ ಉದಯದ ಆ ಅಪೂರ್ವವಾದ ದೃಶ್ಯವನ್ನು ಅವರು ತಮ್ಮ ಒಳಗೆ ತುಂಬಿಸಿಕೊಳ್ಳುತ್ತಿದ್ದರು. ಆ ಕಾರಣದಿಂದಾಗಿ ಅವರಿಗೆ ಬೆಳಗ್ಗಿನ ಬಸ್ಸು ತಪ್ಪಿಹೋಯಿತು. ಆಮೇಲೆ ತಡವಾಗಿ ಒಂಬತ್ತೂವರೆಯ ಹೊತ್ತಿಗೆ ಅವರು ನಮ್ಮ ಮನೆಯನ್ನು ಬಿಡುವ ಪ್ರಸಂಗ ಬಂತು. ‘ನಾನು ಇಲ್ಲಿ ನಿಂತದ್ದು ಸಾರ್ಥಕವಾಯಿತು, ಇಂಥ ಒಂದು ಅಪೂರ್ವವಾದ ದೃಶ್ಯ ನೋಡಲು ಸಿಕ್ಕಿದ್ದು ತುಂಬಾ ಸಂತೋಷವಾಯಿತು’ ಎಂದು ಅವರು ಹೇಳಿದ್ದು ನನಗಿನ್ನೂ ನೆನಪಿನಲ್ಲಿದೆ. ಇಂತಹ ಒಂದು ಬಂಟಮಲೆ ನನ್ನ ಕಣ್ಣೆದುರಿಗಿದ್ದು, ಅದರಾಚೆಯ ಸೂರ್ಯ ಆಗಿಂದಾಗ್ಗೆ ಕಾಣಿಸಿಕೊಂಡು ನಗುತ್ತಿದ್ದ. ಈ ಬಂಟಮಲೆ ನನಗೆ ಸವಾಲು ಹಾಕುತ್ತ, ನನ್ನ ಕವಿತೆಗಳ ಶಕ್ತಿಕೇಂದ್ರವಾಗಿತ್ತು.

-3-

ನಾನು ಅಧ್ಯಾಪಕನಾಗಿದ್ದಾಗ ಮಕ್ಕಳೊಂದಿಗೆ ಆಗಾಗ್ಗೆ ಚಾರಣಕ್ಕೆ ಹೋಗುತ್ತಿದ್ದೆ. ಬೆಳಗ್ಗೆ ಏಳು ಗಂಟೆಗೆ ಮಕ್ಕಳನ್ನೆಲ್ಲ ಕೂಡಿಸಿಕೊಂಡು ಕುಕ್ಕುಜಡ್ಕ, ಮತ್ತೆ ಪೈಲಾರು ಶಾಲೆಯಿಂದ ಹೊರಟರೆ, ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ನಾವು ಬೆಟ್ಟದ ತುದಿಯನ್ನು ತಲುಪುತ್ತಿದ್ದೆವು. ಈ ಬಂಟಮಲೆಯು ದಟ್ಟಕಾಡನ್ನು ಹೊಂದಿರುವ, ಇನ್ನೂ ಮಾನವನ ದೌರ್ಜನ್ಯಕ್ಕೆ ಅಷ್ಟಾಗಿ ಒಳಗಾಗದ ಕಡಿದಾದ, ಹಿಂದೆ ಹುಲಿಗಳು ಓಡಾಡುತ್ತಿದ್ದ ಬೆಟ್ಟವಾಗಿದೆ. ತುಂಬಾ ಕಡಿದಾದ ಜಾಗಗಳಲ್ಲಿ ನಾವು ದೊಣ್ಣೆಯ ಸಹಾಯದಿಂದ, ಮರಗಳನ್ನು ಹಿಡಿದುಕೊಂಡು ಹತ್ತಿ ಹೋಗುತ್ತಿದ್ದೆವು. ಸಾಮಾನ್ಯವಾಗಿ ನಾವು ಫೆಬ್ರವರಿ ತಿಂಗಳಿನಲ್ಲಿ ಚಾರಣಕ್ಕೆ ಹೋಗುತ್ತಿದ್ದೆವು. ಅದಕ್ಕೆ ಮೊದಲು ಜಿಗಣೆಯ ಕಾಟವಿರುತ್ತಿತ್ತು ಹಾಗೂ ಚರ್ಮವನ್ನು ಕೊಯ್ಯುವಂತಹ ದರ್ಬೆಹುಲ್ಲು ಆಳೆತ್ತರಕ್ಕೆ ಬೆಳೆದಿರುತ್ತಿತ್ತು. ಇಪ್ಪತ್ತೈದು-ಮೂವತ್ತು ಮಕ್ಕಳನ್ನು ಕರೆದುಕೊಂಡು, ತಿಂಡಿಗಳನ್ನು ಕಟ್ಟಿಕೊಂಡು ನಾನು ಚಾರಣಕ್ಕೆ ಹೊರಡುತ್ತಿದ್ದೆ. ಬೆಟ್ಟದ ತುದಿಯಲ್ಲಿರುವ ನಿಶಾನೆ ಕಟ್ಟೆಯ ಮೇಲೆ ಶಾಲೆಯ ಧ್ವಜವನ್ನು ಹಾರಿಸಿ, ಅಲ್ಲಿಯೇ ಕುಳಿತುಕೊಂಡು ತಿಂಡಿ ತಿನ್ನುತ್ತಿದ್ದೆವು. ಅಲ್ಲಿಯೇ ಸ್ವಲ್ಪ ಕೆಳಗೆ ನೀರು ಹರಿಯುತ್ತಿರುತ್ತಿತ್ತು. ತಣ್ಣಗೆ ಹರಿಯುತ್ತಿದ್ದ ಆ ನೀರಿನಲ್ಲಿ ಆಟವಾಡುತ್ತ ಕಾಲ ಕಳೆಯುತ್ತಿದ್ದೆವು. ಗುಡ್ಡದ ತುದಿಯಲ್ಲಿ ಒಂದು ಗಂಟೆ ಕಾಲ ಕಳೆದು ಮನೆಗೆ ಮರಳುತ್ತಿದ್ದೆವು. ಇಂತಹ ಚಾರಣದ ಸಂದರ್ಭದಲ್ಲಿಯೇ ನನ್ನ ‘ಬೆಟ್ಟವೇರಿದ ಮೇಲೆ’ ಕವಿತೆ ಹುಟ್ಟಿಕೊಂಡದ್ದು. ಆ ಬೆಟ್ಟದ ಪಾದಪ್ರದೇಶದಲ್ಲಿ ನಾಯರ್‌ ಕಲ್ಲು ಪುಟ್ಟಣ್ಣಗೌಡ ಎನ್ನುವವರ ಮನೆಯಿತ್ತು. ಅವರು ನಮಗೆಲ್ಲ ತುಂಬಾ ಆತ್ಮೀಯರಾಗಿದ್ದವರು. ನಾವು ಬೆಟ್ಟದಿಂದ ಇಳಿದ ತಕ್ಷಣ ಅರ್ಧಗಂಟೆ ಅವರಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದೆವು. ಆ ಸಮಯದಲ್ಲಿ ಅವರು ನಮಗೆ ಅವಲಕ್ಕಿ ಮಾಡಿಕೊಡುತ್ತಿದ್ದರು; ಕುಡಿಯಲಿಕ್ಕೆ ಎಳನೀರು ಕೊಡುತ್ತಿದ್ದರು ಅಥವಾ ಕಾಫಿ ಮಾಡಿಕೊಡುತ್ತಿದ್ದರು. ಹೀಗೆ ಸುಮಾರು ಮೂವತ್ತು ಜನರಿದ್ದರೂ ಏನೂ ತೊಂದರೆಯಾಗದಂತೆ ಅತ್ಯಂತ ಪ್ರೀತಿಯಿಂದ ನಮ್ಮನ್ನು ನೋಡಿಕೊಳ್ಳುತ್ತಿದ್ದರು. ಹಾಗಾಗಿ ಬಂಟಮಲೆ ಒಂದಲ್ಲ ಒಂದು ವಿಧದಲ್ಲಿ ಸದಾಕಾಲ ನನ್ನನ್ನು ಕೆಣಕುತ್ತಿತ್ತು ಹಾಗೂ ನನ್ನ ಜ್ಞಾನದ ಕೇಂದ್ರವಾಗಿತ್ತು. ಈ ಬಂಟಮಲೆಯ ನೆರಳಿನಲ್ಲಿ ನನ್ನ ಬದುಕಿನ ಸುದೀರ್ಘ ಪ್ರಯಾಣ ಆರಂಭವಾಯಿತು ಮತ್ತು ಅಂತ್ಯವೂ ಆಗುತ್ತಿದೆ.

-4-

ಈ ಒಂದು ಸುದೀರ್ಘವಾದಂತಹ ಪಯಣ ನೆಮ್ಮದಿಯ ಪಯಣವೆಂದು ಹೇಳಲಾಗದು. ಚೊಕ್ಕಾಡಿಯೆನ್ನುವ ಹಳ್ಳಿಯಲ್ಲಿ ಆರಂಭವಾಗಿ ಚೊಕ್ಕಾಡಿಯಲ್ಲೇ ಉಳಿದಿರುವ ಪಯಣ ಇದು. ಭೂಮಿ ತನ್ನ ಅಕ್ಷದಲ್ಲಿ ಸುತ್ತುತ್ತ ಮತ್ತೆ ಮೊದಲಿನ ಜಾಗವನ್ನೇ ತಲುಪುವ ಹಾಗೆ ನನ್ನ ಪಯಣವೂ ಎಲ್ಲ ಕಡೆ ಸುತ್ತಾಡಿ ಕೊನೆಗೆ ಇಲ್ಲಿಗೇ ಬಂದು ತಲುಪಿದೆ. ಇದು ಸುಲಭವಾದಂತಹ ಸೊಗಸಾದ ಪಯಣವಂತೂ ಆಗಿರಲಿಲ್ಲ.‘ಅನಾಥೋ ದೈವ ರಕ್ಷಕ:’ ಎನ್ನುವಂತೆ ಆಗ ನನಗೆ ಒಬ್ಬ ದೇವ ಅಥವಾ ಗುರುವಿನ ನೆರವು ಬೇಕಿತ್ತು. ಹಾಗಾಗಿ ನಾನು ಅನೇಕ ದೇವಾಲಯಗಳಿಗೆ ಸುತ್ತಿ ಬಂದೆ. ನನ್ನ ಸಮಸ್ಯೆಗಳಿಗೆ ಅಲ್ಲಿಯೂ ಪರಿಹಾರ ಸಿಗದ ಕಾರಣ ಒಬ್ಬ ಗುರುವನ್ನು ಹುಡುಕಾಡುತ್ತ ಮುಂದೆ ಸಾಗಿದೆ. ಅನೇಕ ರೀತಿಯಲ್ಲಿ ನಾನು

ಆಧ್ಯಾತ್ಮಿಕ ನೆಲೆಯಲ್ಲಿ ಯಾರಾದರೂ ದಾರಿ ತೋರಿಸಬಹುದು ಎನ್ನುವ ನಿರೀಕ್ಷೆಯಲ್ಲಿ ಮುಂದುವರಿಯುತ್ತ ಹೋದೆ. ಆಧ್ಯಾತ್ಮಿಕ ಗುರು ಎಂದೇ ಆಗ ಕರೆಯಲ್ಪಡುತ್ತಿದ್ದ ಮಹೇಶ್‌ ಯೋಗಿ ಆಗ ಮೈಸೂರಿನಲ್ಲಿ ಅತೀಂದ್ರಿಯ ಧ್ಯಾನದ ಶಿಬಿರ ನಡೆಸಿದ್ದರು. ನಾನು ಅದಕ್ಕೆ ಹೋಗಿ ಹತ್ತು ದಿನ ಇದ್ದೆ. ಸಾಯಿಬಾಬಾ ಆಶ್ರಮಕ್ಕೆ ಎರಡೆರಡು ಸಲ ಹೋಗಿಬಂದೆ. ಜಿಡ್ಡು ಕೃಷ್ಣಮೂರ್ತಿ ಹಾಗೂ ಆಮೇಲೆ ಯು ಜಿ ಕೃಷ್ಣಮೂರ್ತಿಯವರ ಮಾತುಗಳನ್ನು ನನ್ನೊಳಗೆ ತುಂಬಿಸಿಕೊಳ್ಳುವ ಪ್ರಯತ್ನ ಮಾಡಿದೆ. ವಿನೋಬಾ ಭಾವೆಯವರೊಂದಿಗೆ ಹತ್ತು ದಿನಗಳ ಕಾಲ ಕಳೆದಿದ್ದೆ. ಹೀಗೆ ಅನೇಕ ಗುರುಗಳನ್ನು ಹುಡುಕುತ್ತ ಹೋದರೂ ಯಾರೂ ನನಗೆ ನೆಮ್ಮದಿಯನ್ನು ದೊರಕಿಸಿಕೊಡಲಿಲ್ಲ. ಆಗ ನನಗೆ ಗುರು ಎನ್ನುವವ ನನ್ನ ಹೊರಗಡೆ ಇಲ್ಲ, ಆ ಗುರು ನನ್ನ ಒಳಗಡೆಯೇ ಇದ್ದಾನೆ ಎಂದು ಅನ್ನಿಸಿತು.

ಕವಿ ಸುಬ್ರಾಯ ಚೊಕ್ಕಾಡಿ 80 : ಹಕ್ಕಿಯ ಜತೆ ಸುವರ್ಣ ಚಿಲಿಪಿಲಿ! 

-5-

ನಾನು ತಕ್ಕಮಟ್ಟಿಗೆ ನೆಮ್ಮದಿಯಿಂದ ಬದುಕುತ್ತಿದ್ದ ಸಮಯದಲ್ಲಿ ನಮ್ಮ ಕುಟುಂಬದ ಒಳಗಡೆ ವೈಮನಸ್ಸುಗಳು ಬಂದವು. ಸರಸದಿಂದ ನಡೆಯುತ್ತಿದ್ದ ಕೌಟುಂಬಿಕ ವ್ಯವಹಾರಗಳಲ್ಲಿ ಕಾಣಿಸಿಕೊಂಡ ವಿರಸಗಳನ್ನು ದಾಟಿ ಒಂದು ಸಮರಸದ ಹಂತಕ್ಕೆ ತಲುಪಲು ಬಹಳಷ್ಟುಕಷ್ಟಪಡಬೇಕಾಯಿತು. ಎಲ್ಲವೂ ಆ ಕ್ಷಣಕ್ಕೆ ಬರಬಹುದಾದ ಸಂದರ್ಭಗಳು ಎಂದು ಭಾವಿಸಿಕೊಂಡು, ಅವನ್ನೆಲ್ಲ ಮರೆತು ಒಂದು ಸೌಹಾರ್ದದ ಬದುಕನ್ನು ಬಾಳುವ ಆಸಕ್ತಿಯನ್ನು ಹೊಂದಿದ್ದೆ. ನಮ್ಮ ಮನೆಯಲ್ಲಿ ನಡೆದ ಅಹಿತಕರ ಸಂಗತಿಗಳನ್ನು ಮರೆತಿದ್ದೇನೆ; ಅದಕ್ಕೆ ಕಾರಣರಾದ ವ್ಯಕ್ತಿಗಳ ಬಗ್ಗೆಯೂ ನನಗೆ ಗೌರವವಿದೆ; ನನ್ನ ತಮ್ಮಂದಿರು ಹಾಗೂ ಊರಿನ ಅನೇಕ ವ್ಯಕ್ತಿಗಳ ಜೊತೆಗೆ ಉಂಟಾಗಿದ್ದ ವೈಮನಸ್ಸುಗಳನ್ನು ಮರೆತು ಅವರೊಂದಿಗೆ ಸೌಹಾರ್ದದಿಂದ ಬಾಳುವ ನಿಶ್ಚಯ ಮಾಡಿಕೊಂಡು ಅದೇ ರೀತಿಯಲ್ಲಿ ಮುನ್ನಡೆಯುತ್ತಿದ್ದೇನೆ.

ಸುಬ್ರಾಯ ಚೊಕ್ಕಾಡಿ ಸೇರಿ 6 ಮಂದಿಗೆ ಮಾಸ್ತಿ ಪ್ರಶಸ್ತಿ 2020

ಬಂಟಮಲೆ ಈಗ ನನಗೆ ಕಾಣಿಸುತ್ತಿಲ್ಲ. ನನ್ನ ಮನೆಯ ಎದುರು ಈಗ ತೋಟ ಬೆಳೆದುಕೊಂಡಿದೆ. ಆದರೆ ನನ್ನ ಮನಸ್ಸಿನ ಒಳಗೆ ಮಾತ್ರ ಬಂಟಮಲೆಯ ಸ್ಥಿರಚಿತ್ರ ಹಾಗೆಯೇ ನೆಲೆಗೊಂಡುಬಿಟ್ಟಿದೆ.

(ಸುಬ್ರಾಯ ಚೊಕ್ಕಾಡಿಯವರ ಆತ್ಮಕತೆ ಕಾಲದೊಂದೊಂದೇ ಹನಿಯಿಂದ ಆಯ್ದಭಾಗ. ಮಾಚ್‌ರ್‍ 28, 2021ರಂದು ಈ ಕೃತಿ ಲೋಕಾರ್ಪಣೆ ಆಗುತ್ತಿದೆ)

click me!