ಎಸ್‌ ಕೆ ಶಾಮಸುಂದರ

1. ಬದಲಾಗುತ್ತಿರುವ ಕಾಲದಲ್ಲಿ ಕಾವ್ಯ/ಕಾವ್ಯ ಪರಂಪರೆ ಹೇಗೆ ಬದಲಾಯಿತು? ಯಾವ ರೂಪದಲ್ಲಿ ಉಳಿದು ಬೆಳೆದೀತು?

ಕಾವ್ಯ,ಸಾಹಿತ್ಯ ಮೊದಲಾದ ಎಲ್ಲ ಸೃಷ್ಟಿ ಶೀಲ ಕಲೆಗಳು ಮೂಲತಃ ಕಾಲದ ಪ್ರತಿ ಸೃಷ್ಟಿಗಳು.ಕವಿ,ಕಲಾವಿದರು ತನ್ನ ಕಾಲವನ್ನು ತನ್ನ ಕೃತಿಗಳಲ್ಲಿ ವ್ಯಾಖ್ಯಾನಿಸುತ್ತಾ ಹೋಗುತ್ತಾನೆ.ಹಾಗಾಗಿ ಕಾಲ ಬದಲಾದಂತೆ ಕಾವ್ಯವೂ ಬದಲಾಗುತ್ತಾ ಪರಂಪರೆಯನ್ನು ಸೃಷ್ಟಿಸುತ್ತದೆ.ಇದು ಸಾಧ್ಯವಾಗದಾಗ ಅಥವಾ ಇದರ ಅರಿವಿಲ್ಲದಾಗ ಕವಿ/ಕಲಾವಿದ ಅಪ್ರಸ್ತುತನಾಗುತ್ತಾನೆ.ಹಾಗಾಗಿ ಕಾಲದ ಬೆಳಕಿನಲ್ಲಿ ಇದನ್ನು ಗಮನಿಸುತ್ತಾ ಪರಂಪರೆಗೆ ತನ್ನದನ್ನು ಕವಿ ಸೇರಿಸುತ್ತಾ ಹೋಗಬೇಕಾಗುತ್ತದೆ.

ಥ್ಯಾಂಕ್ಯೂ ಕೋರೋನ : ಸುವರ್ಣ ಸಂಪಾದಕ ಶ್ಯಾಮಸುಂದರ್ ಟಿಪ್ಪಣಿಗಳು

2. ನಿನ್ನೆ ನಿನ್ನೆಗೆ, ನಾಳೆ ನಾಳೆಗೆ, ಆಯಾ ಕ್ಷಣದ ಅನುಭವ ಆಯಾ ಕ್ಷಣಕ್ಕೆ. ಈ ಬಗ್ಗೆ ನಿಮ್ಮ ನಿಲುವು?

ಕಳೆದ ನಿನ್ನೆಗಳ ಅನುಭವದ ಭಾರ ಖಂಡಿತವಾಗಿಯೂ ನಮ್ಮ ಮೇಲಿರುತ್ತದೆ.ಆದರೆ ನಾನು ಕಳೆದ ನಿನ್ನೆಗಳ  ಬಗ್ಗೆ, ಬರುವ ನಾಳೆಗಳ ಬಗ್ಗೆ ಹೆಚ್ಚಿಗೆ ಯೋಚಿಸುವವನಲ್ಲ.ನನಗೆ ನಾನು ಬದುಕಿರುತ್ತೇನೆಂದು ಭಾವಿಸುವ ಇಂದು,ಈ ಕ್ಷಣ ಮುಖ್ಯ.ಈ ಕ್ಷಣವನ್ನು ಸೃಷ್ಟಿಶೀಲಗೊಳಿಸುವುದರ ಬಗ್ಗೆಯೇ ನನ್ನ ಗಮನ.



3. ನಿಮ್ಮ "ಎಷ್ಟೋ ಕಾಲ ಹಂಬಲಿಸಿ ಬರದೆ ಹೋದೆ ಓ ಸಖೀ" ಕವನ ಹುಟ್ಟಿದ ಗಳಿಗೆ ಯಾವುದು ? ಆ ಸಖಿ ಯಾರು?

ಆ ಸಖಿ ಯಾರು ಅನ್ನುವ ಕೆಟ್ಟ ಕುತೂಹಲ ಬೇಕಾಗಿಲ್ಲ ಶ್ಯಾಮಲಾ.ಬೇಕಿದ್ದರೆ,ನಿಮಗೆ ಸಂತೋಷವಾಗುವುದಾದರೆ, ಆ ಸಖಿ ನನ್ನ ಯೌವನ ಕಾಲದಲ್ಲಿ ನನ್ನನ್ನು  ಪ್ರೀತಿಸಿ ಕೈಕೊಟ್ಟವಳು ಅಂತ ಅಂದುಕೊಳ್ಳಿ! ನಿಜ ಹೇಳುವುದಾದರೆ ಆ ಹಾಡನ್ನು ನಾನು ಬರೆದುದು ನನ್ನದೇ "ಮಿಲನ ಮುಹೂರ್ತ"ಅನ್ನುವ ನಾಟಕವೊಂದಕ್ಕಾಗಿ.ಅದರಲ್ಲಿ ಅದು "ಸಖಿ"ಆಗಿರಲಿಲ್ಲ."ಸಖ"ಆಗಿತ್ತು! ವಾಸವದತ್ತೆ ಅನ್ನುವ ಶ್ರೀಮಂತ ವೇಶ್ಯೆಯೊಬ್ಬಳು ಉಪಗುಪ್ತ ಎನ್ನುವ ಬೌದ್ಧ ಭಿಕ್ಷುವನ್ನು ಪ್ರೇಮಿಸಿ,ತನ್ನಲ್ಲಿಗೆ ಆಮಂತ್ರಿಸುತ್ತಾಳೆ.ಆದರೆ ಉಪಗುಪ್ತ "ಕಾಲಬಂದಾಗ ಬರುತ್ತೇನೆ"ಎಂದು ಹೇಳಿ  ಹೊರಟು ಹೋಗುತ್ತಾನೆ.ಎಷ್ಟೋ ಕಾಲಕಳೆದು ಉಪಗುಪ್ತ ವಾಸವದತ್ತೆಯಲ್ಲಿಗೆ ಬಂದಾಗ ಆಕೆಯ ಯೌವನದ ಬಯಕೆಯೆಲ್ಲ ಮಾಯವಾಗಿ ಮುದುಕಿಯಾಗಿರುತ್ತಾಳೆ.ಆ ಸಂದರ್ಭಕ್ಕಾಗಿ ಬರೆದ ಹಾಡು ಅದು. ಆಮೇಲೆ ಅದನ್ನು ಒಂದು ಹಾಡಷ್ಟೇ ಆಗಿ ಗಂಡಸರು ಹಾಡುವ ಸಂದರ್ಭ ಬಂದಾಗ ಸಖ ಎಂಬುದನ್ನು ಸಖಿ ಎಂದು ಬದಲಿಸಿಕೊಳ್ಳಲಾಯಿತು.
ಈಗ ನಿಮ್ಮ ಕುತೂಹಲ ಠುಸ್ ಆಗಿರಬಹುದಲ್ಲವೇ?

4. ಕತೆ ನನಗೆ ಒಲಿಯಲಿಲ್ಲ ಅದಕ್ಕೆ ಕವಿತೆಗೆ ಬಂದೆ ಎಂದು ಹಿಂದೊಮ್ಮೆ ಹೇಳಿದ್ದಿರಿ. ನಮಗೆಲ್ಲ ಇದೊಂದು ವಿಸ್ಮಯ..

ನನ್ನ ಅಭಿವ್ಯಕ್ತಿಯ ಮಾಧ್ಯಮ ಯಾವುದೆಂದು ನಾನು ಹುಡುಕಿಕೊಳ್ಳಬೇಕಿತ್ತು.ಹಾಗಾಗಿ ಕವಿತೆಯಲ್ಲದೆ ಕಥೆ, ಕಾದಂಬರಿ, ಹಾಸ್ಯ ಬರೆಹ, ವಿಮರ್ಶೆ, ಹೀಗೆ ಬರೆಯುತ್ತಾ ಬಂದೆ.ಸುಮಾರು ಇಪ್ಪತ್ತಕ್ಕೂ ಮಿಕ್ಕಿ ಕಥೆಗಳನ್ನು ಬರೆದೆ.ಅವುಗಳ ಪೈಕಿ ಕೆಲವನ್ನು ಮಾತ್ರ ಆರಿಸಿ ಪುಸ್ತಕರೂಪದಲ್ಲೂ ಹೊರತಂದೆ.ಆದರೆ ಅವು ಯಾವುವೂ ನನ್ನ ಮಾಧ್ಯಮ ಅಲ್ಲ ಅಂತ ಅನಿಸತೊಡಗಿತು.ನನ್ನಲ್ಲಿ ಹುಟ್ಟಿ ಅರಳಿಕೊಳ್ಳುತ್ತಿದ್ದ ಅಮೂರ್ತ ಭಾವಗಳ ಪ್ರಕಟಣೆಗೆ ಕವಿತೆಯೇ ಸೂಕ್ತ ಅಂತ ಅನಿಸತೊಡಗಿತು.ಕವಿತೆಯಲ್ಲಿ ಎಂಥ ಪ್ರತಿಭಟನೆಯನ್ನೂ ಹುದುಗಿಸಿಡಬಹುದು.ಆದರೆ ಕತೆ ಕಾದಂಬರಿಗಳಲ್ಲಿ ಅದು ಕಷ್ಟ .ಅಲ್ಲದೆ ಸಮಾಜವನ್ನು ನೇರವಾಗಿ ಎದುರಿಸಬೇಕಾಗುತ್ತದೆ ಎನ್ನುವ ಆತಂಕ ನನ್ನಲ್ಲಿತ್ತು.ಅಲ್ಲದೆ ನನಗೆ ಆಗ ಇದ್ದ ಸಮಯದ ಅಭಾವವೂ ಕಾರಣವಾಗಿತ್ತು.ಬೆಳಗ್ಗೆ ಆರುಗಂಟೆಗೆ ಮನೆ ಬಿಟ್ಟರೆ ರಾತ್ರಿ ಏಳುಗಂಟೆಗೆ ಮನೆ ಸೇರುತ್ತಿದ್ದ ಕಾರಣ ದೀರ್ಘ ಬರವಣಿಗೆಗೆ ಸಮಯ ಸಿಗದೆ ಕಷ್ಟವಾಗುತ್ತಿತ್ತು.ಕವಿತೆಯಾದರೆ ಹೆಚ್ಚು ಸಮಯ ಬೇಕಾಗಿರಲಿಲ್ಲ. ದಾರಿಯಲ್ಲಿಹೋಗುತ್ತಿರುವಾಗಲೂ ಕವಿತೆ ಹೊಳೆದರೆ ಕಿಸೆಯಲ್ಲಿದ್ದ ಕಾಗದದ ಚೂರಿನಲ್ಲಿ ಬರೆದು ಹಾಕುತ್ತಿದ್ದೆ.ರಾತ್ರಿ ಮನೆಗೆ ಬಂದ ಮೇಲೆ ಪರಿಷ್ಕರಿಸಿ ಸ್ಪಷ್ಟ ರೂಪ ಕೊಡುತ್ತಿದ್ದೆ.ಹಾಗಾಗಿ ಕಥೆ ಕೊನೆಗೂ ನನ್ನಲ್ಲಿ ಮುನಿಸಿಕೊಂಡು  ನನ್ನಿಂದ ದೂರವಾಯಿತು.ಕವಿತೆ ಅನಿವಾರ್ಯವಾಗಿ ನನ್ನ ಕೈ ಹಿಡಿಯಿತು.



5. ಹೊಸಕಾಲದ ಬರಹಗಾರರ ಅಪರೂಪದ ಒಡನಾಟವಿದೆ ನಿಮಗೆ. ಅವರ ಶಕ್ತಿ‌ ಮತ್ತು ವೀಕ್ನೆಸ್ ಗುರುತಿಸೋದಾದರೆ.

ಹೊಸ ಬರೆಹಗಾರರು ನನ್ನ ಮಟ್ಟಿಗೆ ಸದಾ ಬೆರಗು ಹಾಗೂ ಕುತೂಹಲ.ಅವರ ಲವಲವಿಕೆ,ಹೊಸತನ್ನು ಸೃಷ್ಟಿಸುವ ಉತ್ಸಾಹ,ಕನಸುಗಾರಿಕೆ..ಎಲ್ಲ ನನಗೆ ಇಷ್ಟ.ನಾನು ಈಗಾಗಲೇ ಕಳೆದುಕೊಂಡದ್ದು ಅವರಲ್ಲಿವೆ ಎಂಬ ಭಾವವು ಅವರನ್ನು ನನ್ನ ಹತ್ತಿರ ತರುತ್ತದೆ.ಇದು ಖುಶಿಯ ವಿಚಾರ ನನಗೆ.ಬಹಳ ಹಿಂದಿನಿಂದಲೂ ನನಗೆ ನನ್ನ ಹಿರಿಯರು ಹಾಗೂ ಸರೀಕರಿಗಿಂತ ನನಗಿಂತ ಕಿರಿಯರ ಒಡನಾಟವೇ ಹೆಚ್ಚು.ನನ್ನ ಸಂಪರ್ಕಕ್ಕೆ ಬಂದ ಎಲ್ಲ ಕಿರಿಯರ ಕನಸುಗಳಿಗೂ ನಮ್ಮ ಸುಮನಸಾದ ಮೂಲಕ ನೀರೆರೆಯುತ್ತಾ ಬಂದಿದ್ದೇನೆ.ಈ  ಕಿರಿಯರಲ್ಲಿಅಮಿತ ಉತ್ಸಾಹವಿದೆ. ಆದರೆ ಅನುಭವದ ಕೊರತೆ ಇದೆ.ಅಂದರೆ ಪರಂಪರೆಯ ಅರಿವು,ಅಧ್ಯಯನದ ಕೊರತೆ,ತಮ್ಮ ಸೃಷ್ಟಿಶೀಲತೆಯ ಬಗ್ಗೆ ಅವರಲ್ಲಿ  ಅತಿಯಾದ ವಿಶ್ವಾಸ ಇರುವಂತಿದೆ.ಅವರಿಗೆ ಓದಿನ ಹಸಿವೆಗಿಂತ ಬರೆಯುವ ಹಸಿವೇ ,-ಆ ಮೂಲಕ ಪ್ರಸಿದ್ಧಿಯ ಹಂಬಲವೇ-ಜಾಸ್ತಿ ಇರುವಂತಿದೆ.ಅವರ ಉತ್ಸಾಹ ಹಾಗೂ ಹಿರಿಯರ ಅನುಭವ ಮೇಳೈಸಿದಾಗ ಅಧ್ಭುತವಾದುದನ್ನು ಸೃಷ್ಟಿಸಬಹುದು ಎಂಬುದರ ಬಗ್ಗೆ ನಾನು ಆಶಾವಾದಿಯಾಗಿದ್ದೇನೆ.

6. ಬರೆಯುವುದು, ಓದುವುದು ಬಿಟ್ಟು ಅಷ್ಟೇ ಇಷ್ಟಪಡುವ ಬೇರೆ ಕೆಲಸ, ಹವ್ಯಾಸಗಳು ಯಾವುದು?

ನನ್ನ ಅಭಿವ್ಯಕ್ತಿಯ ಮಾಧ್ಯಮದ ಹುಡುಕಾಟದ ಕಾಲ ಅದು.ಫೊಟೋಗ್ರಫಿ,ಪೈಂಟಿಂಗ್,ನಾಟಕ ,ಅಭಿನಯ,ಯಕ್ಷಗಾನ,ಸಂಗೀತ..ಹೀಗೆ ವಿವಿಧ ಆಸಕ್ತಿಗಳಲ್ಲಿ ಹೊಕ್ಕು ಹೊರಟದ್ದಿದೆ.ಅವೆಲ್ಲ ಆಮೇಲೆ  ತುಂಬ ಖರ್ಚಿನ ಬಾಬತ್ತಿನದೆಂದು ಹಾಗೂ ದೈಹಿಕ ಶ್ರಮವನ್ನು ಬೇಡುವಂಥದೆಂದು ಒಂದೊಂದಾಗಿ ಕೈ ಬಿಡುತ್ತಾ ಬಂದು ಕೊನೆಗೆ  ಹೆಚ್ಚು ಖರ್ಚನ್ನು ಬೇಡದ ಒಂದು ಅಗ್ಗದ ಪೆನ್ನು ಹಾಗೂ ಕಾಗದದ ಚೂರಷ್ಟೇ ಸಾಕಾಗುವ  ಬರವಣಿಗೆಯನ್ನು ಹಿಡಿದುಕೊಂಡೆ.!ಬರೆವಣಿಗೆ ಬಿಟ್ಟರೆ ಈಗಲೂ ಸಂಗೀತ ಹಾಗೂ ಸಾವಯವ ಕೃಷಿಯ ಆಸಕ್ತಿ ನನ್ನ  ಜತೆಗಿದೆ.ಉಳಿದವುಗಳ ಬಗ್ಗೆ ಸದ್ಯ ದೂರದಿಂದ ನೋಡುವ ಆಸಕ್ತಿಯಷ್ಟನ್ನೇ ಉಳಿಸಿಕೊಂಡಿದ್ದೇನೆ.

7. ನೀವು ಭಯಂಕರ ತುಂಟ ಕವಿ. ಈ ಬಿರುದು ನಿಮಗೇಕೆ  ಸಿಗಲಿಲ್ಲಾ ಅನ್ನೋದು ನನ್ನ ಪ್ರಶ್ನೆ .

ನೀವೊಬ್ಬರೇ ನೋಡಿ ನನ್ನನ್ನೂ ತುಂಟ ಕವಿ ಅಂದದ್ದು!ಆ ಬಿರುದನ್ನು ಈಗಾಗಲೇ ನಾವೆಲ್ಲಾ ಸೇರಿ ಸರ್ವಾನುಮತದಿಂದ ಬೇಷರತ್ತಾಗಿ ಲಕ್ಷ್ಮಣ ರಾಯರಿಗೆ ಅರ್ಪಿಸಿ ಆಗಿದೆ.ಅವರಿಗೆ ಪ್ರತಿಸ್ಪರ್ಧಿಯಾಗಲು ನನಗಿಷ್ಟವಿಲ್ಲ.!ಹಿಂದೆ ತಿರುಮಲೇಶರು "ಕನ್ನಡದ ಮೂವರು ಕಾಮುಕ ಕವಿಗಳ ಪೈಕಿ ಚೊಕ್ಕಾಡಿ ಒಬ್ಬರು"ಅಂತ ಹೇಳಿದ್ದರು!(ಉಳಿದಿಬ್ಬರೆಂದರೆ ಕೃಷ್ಣ ಆಲನಹಳ್ಳಿ ಹಾಗೂ ಎಚ್.ಎಂ.ಚೆನ್ನಯ್ಯ.ಗಾಬರಿಯಾಗಬೇಡಿ.ಕಾಮುಕ ಅಂದರೆ ಮಲೆಯಾಳಿ ಭಾಷೆಯಲ್ಲಿ ಶೃಂಗಾರ ಎಂದರ್ಥ!ಕಾಸರಗೋಡಿನ ತಿರುಮಲೇಶ್  ಆ ಪದ ಬಳಸಿದ್ದು ಸಹಜ) ನಿಜಹೇಳುವುದಾದರೆ ನನ್ನ ಈ ತುಂಟತನ,ತಮಾಷೆ ಇತ್ಯಾದಿಗಳೆಲ್ಲ ನನ್ನೊಳಗಿನ ದುಗುಡ, ತಳಮಳ,ಖಾಲಿತನ,ಏಕಾಂಗಿತನವು  ಹೊರಗೆ ಕಾಣಿಸದಂತೆ ಹಾಕಿಕೊಂಡ ಮುಸುಕು ಅಥವಾ ಮುಖವಾಡ.



8. ನಿಮ್ಮ ಕವಿತೆಗಳಲ್ಲಿ ಬೇರಾರ ಕವಿಗಳ ನೆರಳು -ಬೆಳಕು ಇದೆಯೋ ?

ಬೇರೆ ಕವಿಗಳ ನೆರಳು ಬೆಳಕುಗಳುಖಂಡಿತವಾಗಿಯೂ ನನ್ನ ಕವಿತೆಗಳಲ್ಲಿ  ಇರಬಹುದು ಯಾಕೆಂದರೆ ನಾನು ಬಳಸುವ ಪದಗಳು,ರೂಪಕಗಳು,ಛಂದೋಲಯಗಳು ನನ್ನವೇ ಅಲ್ಲ.ನನ್ನ ಹಿಂದಿನ ಮಹನೀಯರು ಬಳಸಿದ್ದನ್ನೇ ನಾನೂ ಬಳಸುತ್ತಿದ್ದೇನೆ. ಕೆಲವೊಮ್ಮೆ ಹಾಗೆಯೇ ಕಾಣಿಸಬಹುದು.ಇನ್ನು ಕೆಲವು ಸಲ ನಾನು ಪಾಲಿಶ್ ಮಾಡಿ ಹೊಸ ಬಗೆಯಲ್ಲಿ,ಹೊಸ ಅರ್ಥದಲ್ಲಿ ಬಳಸಿದ  ಪರಿಣಾಮವಾಗಿ ಅದು  ಬೇರೆಯ ರೀತಿಯಲ್ಲಿ ಕಾಣಿಸಬಹುದು.ಮೊದಮೊದಲು ಅಡಿಗರ ಪ್ರಭಾವ ನನ್ನ ಕವಿತೆಗಳಲ್ಲಿ ಗಾಢವಾಗಿ ಕಾಣಿಸುತ್ತಿತ್ತು ಈಗ ಕಡಿಮೆಯಾಗಿದ್ದರೂ ಅಡಿಗರು ಹಾಗೂ ರಾಮಾನುಜನ್ನರ ಛಾಯೆ ಆಗೀಗ ನನ್ನ ಕವಿತೆಗಳಲ್ಲಿ  ಕಾಣಿಸಿಕೊಂಡಿರಬಹುದು.ಅದು ಬಿಟ್ಟರೆ ಯಕ್ಷಗಾನದ ಹಾಡುಗಳ ಮಟ್ಟುಗಳನ್ನೂ ನನ್ನ ಕವಿತೆಗಳಲ್ಲಿ ಕಾಣಬಹುದು.

9. ಸದಾ ಕಾಡುವ ಕವಿ, ಅವನ/ ಅವಳ ಸಾಲು. ಒಂದು ಪಂಕ್ತಿ ಹೇಳಿ, ಇಲ್ಲೇ- ಈಗಲೇ !

ನನ್ನನ್ನು ಸದಾ ಕಾಡುತ್ತಿರುವ  ಕವಿಯೆಂದರೆ ಅಡಿಗರು.ತಕ್ಷಣ ನೆನಪಾಗುವ ಅವರ ಕವಿತೆಗಳ ಸಾಲುಗಳೆಂದರೆ: ಕಲಿಸು ಬಾಗದೆ ಸೆಟೆವುದನ್ನು,ಬಾಗುವುದನ್ನು ಹೊತ್ತಿನ ಮುಖಕ್ಕೆ ಶಿಖೆ ತಿವಿವುದನ್ನೂ, ಹಾಗೆ ಗಾಳಿಗಲ್ಲಾಡಿ,ಬಳುಕಾಡಿ ತಾಳುವುದನ್ನು..(ಪ್ರಾರ್ಥನೆ). ಅಥವಾ, ಬಿತ್ತಕ್ಕೆ ಬೇರಿನ ಚಿಂತೆ ಇಲ್ಲ.ಆದಷ್ಟು ದೂರ ಠಣ್ಣೆಂದೆಗರಿ,ಬಿಚ್ಚುವುದು ತನ್ನ ಮಾಯಾಪಟವ..(ವರ್ಧಮಾನ)

-ಈ ಸಾಲುಗಳು ನನ್ನ ಬದುಕಿನ ರೀತಿಯನ್ನು ತೋರಿಸಿದ,ನಿರ್ಧರಿಸಿದ,ನಿರ್ದೇಶಿಸಿದ ಸಾಲುಗಳೂ ಹೌದು.

10. Sir, your favorite food and most desired drink?

ನನ್ನ ಫೇವರಿಟ್ ಫುಡ್:ಕುಚ್ಚಲಕ್ಕಿಯ ಬಿಸಿ  ಗಂಜಿ+ಮೊಸರು+  ಮಾವಿನ ಮಿಡಿ ಉಪ್ಪಿನಕಾಯಿ+ಮಾವಿನಕಾಯಿ ಚಟ್ನಿ.! ಮೋಸ್ಟ್ ಡಿಸಾಯರ್ಡ್ ಡ್ರಿಂಕ್:ಒಳ್ಳೆ ಬಿಸಿಯಾಗಿರುವ ಸ್ಟ್ರಾಂಗ್ ಕಾಫಿ ! ಇದಕ್ಕಿಂತ ಮಿಗಿಲಾದ ಸ್ವರ್ಗಬೇರಿಲ್ಲ!ವೈಯೆನ್ಕೆ ಹೇಳಿದಂತೆ:ಕೊಟ್ಟರೆ ಒಳ್ಳೆಯ ಕಾಫಿ ಎಂತಹ ಪದ್ಯಕೂ ಮಾಫಿ!

11. ಅಮ್ಮನ ಪ್ರಭಾವವೆಷ್ಟು ನಿಮ್ಮ ಮೇಲೆ?

ಅಮ್ಮನ ಪ್ರಭಾವ ನನ್ನ ಮೇಲೆ ಎಷ್ಟಿದೆ ಎಂಬುದನ್ನು ಖಚಿತವಾಗಿ ಹೇಳಲಾರೆ.ಆದರೆ ಅವರು ಪಟ್ಟ ಕಷ್ಟಗಳ ನೆನಪು  ನನ್ನ ಬದುಕಿನಲ್ಲಿನ "ಮೀರುವಿಕೆ"ಯ ಹಿಂದೆ ಬಲವಾಗಿ ಕೆಲಸ ಮಾಡಿತ್ತು ಅಂತ ಹೇಳಬಲ್ಲೆ.

12. ಬೆಂಗಳೂರಿನಂಥಾ ಶಕ್ತಿಕೇಂದ್ರದಿಂದ ದೂರವುಳಿದಿರಿ. ಅದರಿಂದ ನೀವು ಗಳಿಸಿದ್ದೇನು, ಕಳೆದುಕೊಂಡಿದ್ದೇನು? ನಿಮ್ಮ ನಿರ್ದಾಕ್ಷಿಣ್ಯ ನಿಲುವು?

ಬೆಂಗಳೂರಿನಂಥ ಶಕ್ತಿ ಕೇಂದ್ರದಿಂದ ದೂರವಾಗಿಯೇ ಉಳಿದುದಕ್ಕೆ ನನಗೇನೂ ಬೇಸರವಿಲ್ಲ.ನನ್ನ ಈ ಪುಟ್ಟ ಹಳ್ಳಿಯಲ್ಲಿರುವುದರಿಂದ ,ಹೆಚ್ಚಿನದಾಗಿ  ಪಡಕೊಂಡುದರ ಅಥವಾ ಕಳಕೊಂಡುದರ ಬಗ್ಗೆ ನಾನು ಯೋಚಿಸಿಯೇ ಇಲ್ಲ.ನಾನು ಇಲ್ಲಿ ಇರುವುದು ನನ್ನ ಆಯ್ಕೆ .ಬೇರೆಡೆ ಹೋಗುವ ಅವಕಾಶವಿದ್ದರೂ ಹೋಗದೇ ಇಲ್ಲಿಯೇಉಳಿದು ಬಿಡುವ ಆಯ್ಕೆನಾನು ಏನನ್ನು ಕಳೆದುಕೊಂಡಿದ್ದೆನೋ ಅದನ್ನು ಕಳೆದುಕೊಂಡಲ್ಲೆ ಪಡೆದುಕೊಳ್ಳುವುದಕ್ಕಾಗಿ ಈ ಆಯ್ಕೆ.ಇಲ್ಲಿ ನನಗೆ ನೆಮ್ಮದಿಯ ಬದುಕು ಸಿಕ್ಕಿದೆ.ಉಳಿದುದು ಗೌಣ ನನ್ನ ಪಾಲಿಗೆ.

ಆದರೂ ಹೇಳುವುದಾದರೆ ನಾನು ರಾಜಧಾನಿಯ ಸಾಹಿತ್ಯ ರಾಜಕಾರಣ ಹಾಗೂ ಗುಂಪುಗಾರಿಕೆಯಿಂದ ದೂರವೇ ಉಳಿದಿದ್ದೇನೆ ಎನ್ನುವ ಖುಶಿ ನನಗಿದೆ.ಹಾಗೇನೇ ಸಾಹಿತ್ಯಕ್ಕೆ ಸಂಬಂಧಿಸಿದ  ಸುದ್ದಿಗಳು,ಸಂಗತಿಗಳು  ನನಗೆ ಗೊತ್ತಾಗುತ್ತಿಲ್ಲ ಹಾಗೂ ಬೇಕಾದ ಪುಸ್ತಕಗಳು ಹಾಗೂ ಅವು ಪ್ರಕಟವಾದುದರ ಬಗ್ಗೆ ಗೊತ್ತಾಗುತ್ತಿಲ್ಲ ಎನ್ನುವ ಕೊರತೆ ಮಾತ್ರ ನನ್ನನ್ನುಬಾಧಿಸುತ್ತಿದೆ.ನನ್ನ ಪುಟ್ಟ ಜಗತ್ತನ್ನು ನನ್ನ ಮನೆಯಂಗಳಕ್ಕೇ ನಾನು ಬರಮಾಡಿಕೊಂಡಿರುವುದರಿಂದ  ಉಳಿದವುಗಳ ಬಗ್ಗೆ ನನಗೆ ಯಾವ ಯೋಚನೆಯೂ ಇಲ್ಲ,ಆಸಕ್ತಿಯೂ ಇಲ್ಲ.

13. What is common in well-written poems?

ಉತ್ತಮ ಕವಿತೆ/ಕಾವ್ಯವು ಸದಾ ನಮ್ಮನ್ನು ಕಾಡುವ, ಸಂತೈಸುವ ,ಬದುಕಿನ ಸಂದಿಗ್ಧ ಸಮಯದಲ್ಲಿ ಕೈ ಹಿಡಿದು ಮುನ್ನಡೆಸುವ ಗುಣವನ್ನು ಹೊಂದಿರುತ್ತದೆ.ಅಲ್ಲದೆ ಕಾಲ ಕಾಲಕ್ಕೆ ಹೊಸ ಅರ್ಥವನ್ನು ಹೊಮ್ಮಿಸುವ ಶಕ್ತಿಯನ್ನು ಹೊಂದಿರುತ್ತದೆ.ಕಾಲದ ಪರೀಕ್ಷೆಯಲ್ಲಿ ಗೆದ್ದು ನಿಲ್ಲುವುದೇ ಉತ್ತಮ ಕವಿತೆಯ ಲಕ್ಷಣ ಎಂದು ನಾನು ಭಾವಿಸಿದ್ದೇನೆ.

(ಮಾತುಕತೆಯಲ್ಲಿ ನಿರತರಾದವರು: ಮಧು ದೊಡ್ಡೇರಿ, ಗಣೇಶ್ ಐತಾಳ್, ಶ್ಯಾಮಲಾ ಭಟ್, ಭರತ್, ರಾಜೇಶ್ ಶೆಟ್ಟಿ, ಸಚಿನ್ ತೀರ್ಥಹಳ್ಳಿ, ಪಲ್ಲವಿ ಹೆಗ್ಡೆ, ಉಮಾ ಭಟ್)