ಬಪ್ಪಿ ಆನೆ ಮರಿಗೆ ಜಂಪ್‌ ಮಾಡೋಕೆ ಯಾಕೆ ಬರಲ್ಲ!

By Kannadaprabha NewsFirst Published Nov 13, 2022, 4:41 PM IST
Highlights

ಪಂಚರಂಗಿ ಅನ್ನೋ ಆನೆಗೆ ಬಪ್ಪಿ ಅನ್ನೋ ಮರಿ ಇದೆ. ಅದೆಷ್ಟುತುಂಟ ಅಂದ್ರೆ, ಬಪ್ಪಿ ಮರಿ ಮಾಡೋ ತುಂಟಾಟಕ್ಕೆ ಅಮ್ಮ ಪಂಚರಂಗಿಗೆ ರಾತ್ರಿ ನಿದ್ದೆನೇ ಬರೋದಿಲ್ಲ. ಕಾಡಿನಮಧ್ಯದ ಹೊಂಡದಲ್ಲಿ ನೀರಾಟ ಆಡಲು ಹೋಗಿ ಕೆಸರಲ್ಲಿ ಸಿಕ್ಕಾಕಿಕೊಳ್ಳೋದು, ಕಾಡಿನ ತುದಿಯಲ್ಲಿದ್ದ ಬೇಲಿಯನ್ನು ತುಳಿಯಲು ಹೋಗಿ ಮೈ ಪರಚಿಸಿಕೊಳ್ಳೋದು, ಸೊಂಡಿಲ ತುಂಬ ನೀರು ತುಂಬಿಸಿಕೊಂಡು ಎದುರು ಸಿಕ್ಕ ಪ್ರಾಣಿಗಳ ಮೇಲೆಲ್ಲ ಎರಚೋದು..

ಪಂಚರಂಗಿ ಅನ್ನೋ ಆನೆಗೆ ಬಪ್ಪಿ ಅನ್ನೋ ಮರಿ ಇದೆ. ಅದೆಷ್ಟುತುಂಟ ಅಂದ್ರೆ, ಬಪ್ಪಿ ಮರಿ ಮಾಡೋ ತುಂಟಾಟಕ್ಕೆ ಅಮ್ಮ ಪಂಚರಂಗಿಗೆ ರಾತ್ರಿ ನಿದ್ದೆನೇ ಬರೋದಿಲ್ಲ. ಕಾಡಿನಮಧ್ಯದ ಹೊಂಡದಲ್ಲಿ ನೀರಾಟ ಆಡಲು ಹೋಗಿ ಕೆಸರಲ್ಲಿ ಸಿಕ್ಕಾಕಿಕೊಳ್ಳೋದು, ಕಾಡಿನ ತುದಿಯಲ್ಲಿದ್ದ ಬೇಲಿಯನ್ನು ತುಳಿಯಲು ಹೋಗಿ ಮೈ ಪರಚಿಸಿಕೊಳ್ಳೋದು, ಸೊಂಡಿಲ ತುಂಬ ನೀರು ತುಂಬಿಸಿಕೊಂಡು ಎದುರು ಸಿಕ್ಕ ಪ್ರಾಣಿಗಳ ಮೇಲೆಲ್ಲ ಎರಚೋದು.. ಹೀಗೆ ದಿನಾ ಏನಾದ್ರೊಂದು ತರಲೆ ಮಾಡಿ ಕಂಪ್ಲೇಂಟು ಹೇಳಿಸಿಕೊಳ್ಳಲಿಲ್ಲ ಅಂದರೆ ಬಪ್ಪಿಗೆ ಸಮಾಧಾನ ಇಲ್ಲ. ಆದರೆ ಅವತ್ತು ಮಾತ್ರ ಅಮ್ಮನ ಜೊತೆಗೆ ಬಪ್ಪಿಗೂ ಸರಿ ನಿದ್ದೆ ಬರಲಿಲ್ಲ. ಆಗಾಗ ಅಳು ಬಂದ ಹಾಗಾಗುತ್ತಿತ್ತು. ಅಮ್ಮನ ಯಾವ ಮಾತೂ ಸಮಾಧಾನ

ಕೊಡ್ತಿರಲಿಲ್ಲ. ಅದಕ್ಕೆ ಜಿಂಕೆ ಮರಿ ಥರ ಜಿಗಿಯಲೇ ಬೇಕಿತ್ತು!

ಅದಾದದ್ದು ಹೀಗೆ. ಬೆಳಗಾಗ್ತನೇ ಬಪ್ಪಿ ಇನ್ನೂ ಮಲಗಿರುವಾಗ ಪಂಚರಂಗಿ ಎದ್ದು ಕಾಡಲ್ಲಿ ಬಿದಿರು ಮೆಳೆ ಎಲ್ಲಿ, ಪಕ್ಕದಲ್ಲೆಲ್ಲಾದ್ರೂ ಹಲಸಿನ ಹಣ್ಣು ಇದೆಯಾ ಅಂತ ಹುಡುಕಿಕೊಂಡು ಹೊರಡುತ್ತೆ. ದೇವ್ರೇ, ವಾಪಾಸ್‌ ಬರೋ ತನಕ ಬಪ್ಪಿ ಏಳದೇ ಇರಲಿ ಅಂದ್ಕೊಳ್ತನೇ ಬೇಗ ಬೇಗ ಹೊಟ್ಟೆಗೇನಾದ್ರೂ ಹಾಕ್ಕೊಂಡು ಬಪ್ಪಿ ಮಲಗಿದ್ದ ಜಾಗಕ್ಕೆ ಬರುತ್ತೆ. ಆಮೇಲೆ ಅದನ್ನೂ ಕರೆದುಕೊಂಡು ಎಳೆ ಬಿದಿರನ್ನು ಆರಿಸಿ ತಿನ್ನಲು ಹೇಳೋದು, ಪುಟ್ಟಬಪ್ಪಿ ಪುಟ್ಟಸೊಂಡಿಲಿನಿಂದ ಎಳೆ ಬಿದಿರನ್ನು ತಿನ್ನುತ್ತಾ ನಡು ನಡುವೆ ಕುಣಿಯುತ್ತಾ ಇರೋದು, ಅಮ್ಮ ಕೊಂಚ ಅತ್ತ ಹೋದರೆ ಸೊಂಡಿಲಿನ ತುಂಬ ಮಣ್ಣು ತುಂಬಿಸಿಕೊಂಡು ಮೈ ಮೇಲೆಲ್ಲ ಎರಚಿಕೊಳ್ಳೋದು.. ಹೀಗೆಲ್ಲ ಆಗ್ತಿತ್ತು.

Children's Day: ಕನ್ನಡ ನಟ, ನಟಿಯರ ಬಾಲ್ಯದ ಆಟ ಆ ಹುಡುಗಾಟ

ಆದರೆ ಅವತ್ತು ಬಪ್ಪಿ ಅಮ್ಮನ ಕಣ್ಣು ತಪ್ಪಿಸಿ ಮಣ್ಣಾಟ ಆಡುತ್ತಿದ್ದಾಗ ಪಕ್ಕದಲ್ಲೇ ಜಿಂಕೆ ಮರಿಯೊಂದು ಕುಣಿಯುತ್ತ ಕುಣಿಯುತ್ತ ಬಪ್ಪಿ ಹತ್ರ ಬಂತು. ಬಪ್ಪಿಗೆ ಯಾರೂ ಫ್ರೆಂಡ್‌್ಸ ಇಲ್ಲ, ಜಿಂಕೆ ಮರಿ ಕಂಡಿದ್ದೇ ಅದೇ ನನ್ನ ಫ್ರೆಂಡ್‌ ಅಂತ ಬಪ್ಪಿಗೆ ಅನಿಸಿಬಿಟ್ಟಿತು. ಅದನ್ನೇ ಜಿಂಕೆ ಮರಿ ಹತ್ರ ಹೇಳಿದ್ರೆ, ಅದು ಪುಸಕ್ಕನೆ ನಕ್ಕು ಜಿಗಿ ಜಿಗಿದು ಕುಣಿಯುತ್ತಾ, ‘ನೀನೂ ನನ್ನ ಹಾಗೆ ಜಂಪ್‌ ಮಾಡಿದ್ರೆ ನಾವಿಬ್ರೂ ಫ್ರೆಂಡ್‌್ಸ’ ಅಂದಿತು. ಅಷ್ಟೇ ತಾನೇ, ತಾನು ಜಿಂಕೆ ಮರಿ ಫ್ರೆಂಡ್‌್ಸ ಆಗೋದು ಗ್ಯಾರಂಟಿ ಅಂದ್ಕೊಂಡು ಜಂಪ್‌ ಮಾಡೋಕೆ ಟ್ರೈ ಮಾಡಿತು ನೋಡಿ, ನಾಲ್ಕು ಕಾಲು ಎತ್ತಿ ನೆಗೆದಿದ್ದೇ ಬಂತು, ವಾಪಾಸ್‌ ಕಾಲು ನೆಲದ ಮೇಲೆ ನಿಲ್ಲಲಿಲ್ಲ. ಬಪ್ಪಿ ಧೊಪ್ಪಂತ ಬಿತ್ತು. ಜಿಂಕೆ ಮರಿ ಮತ್ತೆ ಮತ್ತೆ ಜಿಗಿದು ತೋರಿಸುತ್ತಿತ್ತು, ಬಪ್ಪಿ ಮರಿ ಮತ್ತೆ ಮತ್ತೆ ಬೀಳ್ತಿತ್ತು. ಅವತ್ತಿಡೀ ಅದೇ ಆಗಿ ರಾತ್ರಿ ಆದರೂ ಬಪ್ಪಿ ಕರೆಕ್ಟಾಗಿ ನೆಗೆಯಲೇ ಇಲ್ಲ. ಜಿಂಕೆ ಮರಿ ಅಮ್ಮನ ಜೊತೆ ಹೋಯ್ತು.

ಮರುದಿನ ಕಾಡಿಂದ ಅಪ್ಪ ಆನೆ ಬಂತು. ಅದಕ್ಕೆ ಬಪ್ಪಿನ ನೋಡಿ ಪಾಪ ಅನಿಸ್ತು. ಜಿಂಕೆ ಮರಿಯನ್ನೂ ಬಪ್ಪಿ ಮರಿಯನ್ನೂ ಕೂರಿಸ್ಕೊಂಡು ಆನೆಮರಿಗೆ ಯಾಕೆ ಜಂಪ್‌ ಮಾಡಕ್ಕಾಗಲ್ಲ ಅನ್ನೋದನ್ನು ನಿಧಾನಕ್ಕೆ ತಿಳಿಸಿ ಹೇಳಿತು. ಆಮೇಲೆ ಬಪ್ಪಿ ಮರಿಗೆ ಜಂಪ್‌ ಮಾಡೋಕೆ ಬರದಿದ್ರೂ ಪರ್ವಾಗಿಲ್ಲ, ನಾವಿಬ್ರೂ ಫ್ರೆಂಡ್‌್ಸ ಅಂತ ಜಿಂಕೆ ಮರಿ ಹೇಳ್ತು. ಈಗ ಅವೆರಡೂ ಫ್ರೆಂಡ್ಸೇ. ಆದರೆ ಬಪ್ಪಿ ಮರಿ ಮಾತ್ರ ದಿನಕ್ಕೊಮ್ಮೆ ಆದ್ರೂ ಜಿಂಕೆ ಮರಿ ಥರ ಜಂಪ್‌ ಮಾಡೋಕೆ ಹೋಗಿ ದೊಪ್ಪಂತೆ ಬೀಳುತ್ತೆ, ಒಂದಲ್ಲ ಒಂದಿನ ತಾನು ಜಂಪ್‌ ಮಾಡೇ ಮಾಡ್ತೀನಿ ಅನ್ನೋ ಹಠ ಬಪ್ಪಿಯದ್ದು.

ವಿ.ಸೂ: ಆನೆಗಳಿಗೆ ಜಂಪ್‌ ಮಾಡೋಕೆ ಬರಲ್ಲ, ಮೇಲೆ ಹಾರಿ ಕೆಳಕ್ಕೆ ಬಂದಾಗ ನಾಲ್ಕೂ ಕಾಲನ್ನು ಒಂದೇ ಟೈಮಿಗೆ ಊರಿ ಬ್ಯಾಲೆನ್ಸ್‌ ಮಾಡೋದು ಅವಕ್ಕೆ ಕಷ್ಟ.

click me!