ಅ.16ಕ್ಕೆ ಕನ್ನಡದ ಜನಪ್ರಿಯ ಲೇಖಕ ಜೋಗಿಯವರ 75ನೇ ಪುಸ್ತಕ 'ಸಾವು' ಬಿಡುಗಡೆ

By Vaishnavi ChandrashekarFirst Published Oct 14, 2022, 5:25 PM IST
Highlights

ಬದುಕು ಹೀಗೆ ಬದಲಾಗುತ್ತಾ ಹೋಗುತ್ತದೆ. ಗೆಳೆತನ, ಸಹವಾಸ, ಅಕ್ಕರೆ ಮತ್ತು ಸಂಬಂಧ ತನ್ನ ನೆಲೆಯನ್ನೂ ನಿಲುವನ್ನೂ ಮತ್ತೆ ಮತ್ತೆ ಬದಲಾಯಿಸುತ್ತಾ ಹೋಗುತ್ತದೆ. ಕೆಲವರು ‘ನಾನು ಅಷ್ಟು ಬೇಗ ಸಾಯುವುದಿಲ್ಲ ತಿಳ್ಕೊ’ ಅಂತ ಹೇಳಿ ಹೆದರಿಸುವ ಹಾಗೇ ಮತ್ತೆ ಕೆಲವರು ‘ನಾನು ಸಾಯುತ್ತೇನೆ’ ಅಂತ ಹೇಳಿ ಹೆದರಿಸುತ್ತಾರೆ. 
 

ಸಾವಿನ ಕುರಿತಾಗಿ ಸಾಹಿತಿ, ಕನ್ನಡ ಪ್ರಭ ಪುರವಣಿ ವಿಭಾಗದ ಪ್ರಧಾನ ಸಂಪಾದಕ ಜೋಗಿ ಅವರು ಬರೆದಿರುವ ಹೊಸ ಪುಸ್ತಕ 'ಸಾವು'. ಈ ಕೃತಿ ಇದೇ ಭಾನುವಾರ (ಅಕ್ಟೋಬರ್‌ 16) ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಬಸವನಗುಡಿಯಲ್ಲಿರುವ ಇಂಡಿಯನ್‌ ಇನ್ಸಿಟಿಟ್ಯೂಟ್‌ ಆಫ್‌ ವರ್ಲ್ಡ್ ಕಲ್ಚರ್‌ನಲ್ಲಿ ಬಿಡುಗಡೆಯಾಗಲಿದೆ. ಸಾವಿನ ಕುರಿತಾಗಿ ಸುಮಾರು 50 ಬರಹಗಳಿರುವ, 240 ಪುಟಗಳ ಬೃಹತ್‌ ಪುಸ್ತಕವಿದು. ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್‌ನ ಪ್ರಧಾನ ಸಂಪಾದಕ ರವಿ ಹೆಗಡೆ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ವಿಶ್ವವಾಣಿಯ ಪ್ರಧಾನ ಸಂಪಾದಕ ಶ್ರೀ ವಿಶ್ವೇಶ್ವರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಕತೆಗಾರ, ಕೃಷಿಕ, ಕಥೆಕೂಟದ ಅಡ್ಮಿನ್ ಶ್ರೀ ಗೋಪಾಲಕೃಷ್ಣ ಕುಂಟಿನಿ ಮುಖ್ಯ ಅತಿಥಿಯಾಗಿರುತ್ತಾರೆ. ಅಧ್ಯಾತ್ಮ ಚಿಂತಕ, ಸಂಸ್ಕೃತ ವಿದ್ವಾಂಸ ಜಗದೀಶ ಶರ್ಮ ಸಂಪ ಮತ್ತು ಅಂಕಣಕಾರ್ತಿ, ಲೇಖಕಿ ಕುಸುಮಾ ಆಯರಹಳ್ಳಿ ಕೃತಿಯ ಬಗೆಗೆ ಮಾತನಾಡಲಿದ್ದಾರೆ.

ತಮ್ಮ ಕೃತಿಯ ಬಗ್ಗೆ ವಿವರ ನೀಡಿದ ಜೋಗಿ, 'ಸಾವು ಒಂದು ಮಹಾಗ್ರಂಥ. ಗರುಡ ಪುರಾಣ, ಉಪನಿಷತ್ತು, ಪುರಾಣಗಳು, ಮಹಾಭಾರತ, ರಾಮಾಯಣಗಳಲ್ಲಿ ಸಾವಿನ ಕುರಿತು ಗಹನ ವಿಚಾರಗಳಿವೆ. ವಿಜ್ಞಾನ ಸಾವನ್ನು ಬೇರೆಯೇ ಥರ ನೋಡುತ್ತದೆ. ಪಾಶ್ಚಾತ್ಯರ ಕಣ್ಣಲ್ಲಿ ಸಾವಿನ ಚಿತ್ರವೇ ಬೇರೆ. ಇವನ್ನೆಲ್ಲ ಸಂಗ್ರಹಿಸಿ, ನನ್ನ ಅನುಭವಗಳನ್ನೂ ಸೇರಿಸಿ ಬರೆದ ಪುಸ್ತಕ ಇದು. ಸಾವಿನ ಕುರಿತ ಸಮಗ್ರ ಚಿತ್ರಣ ನೀಡುವ ಪುಸ್ತಕವಿದು' ಎಂದು ತಿಳಿಸಿದ್ದಾರೆ. ಇದೀಗ ಸೋಷಿಯಲ್‌ ಮೀಡಿಯಾದಲ್ಲೂ ಈ ಕೃತಿಗೆ ಸಂಬಂಧಿಸಿದಂಥಾ ಸಾವಿನ ಬಗೆಗಿನ ಜನರ ಮಾತುಗಳು ವೈರಲ್‌ ಆಗುತ್ತಿವೆ.

ಸಾವು ಪುಸ್ತಕದಿಂದ ಆಯ್ದ ಭಾಗ ಇಲ್ಲಿದೆ:

ಆಯುರಾರೋಗ್ಯ ಐಶ್ವರ್ಯ ಕೊಡು ಅಂತ ನಾವೂ ನಮ್ಮ ಪರವಾಗಿ ಹಲವರೂ ಕಂಡಕಂಡ ದೇವರ ಹತ್ತಿರ ಬೇಡಿಕೊಳ್ಳುತ್ತೇವೆ. ಅನಾಯಾಸೇನ ಮರಣಂ ವಿನಾದೈನ್ಯೇನ ಜೀವನಂ ಅಂತ ಮತ್ತೊಂದು ಬೇಡಿಕೆ ಮುಂದಿಡುತ್ತೇವೆ. ಎಲ್ಲಾ ಪೂಜೆ ಪುನಸ್ಕಾರ ಪುರಸ್ಕಾರಗಳೂ ಅಂತಿಮವಾಗಿ ನಮ್ಮನ್ನು ಆರೋಗ್ಯವಂತರನ್ನಾಗಿಯೂ ಐಶ್ವರ್ಯವಂತರನ್ನಾಗಿಯೂ ಅಮರರನ್ನಾಗಿಯೂ ಮಾಡುವ ಉಪಾಯಗಳೆಂದು ಭಾವಿಸುತ್ತೇವೆ. ಮನೆಕೊಳ್ಳುವಾಗ, ಕಟ್ಟುವಾಗ ‘ವಾಸ್ತು’ ಸರಿಯಾಗಿರಬೇಕು ಅಂತ ಬಯಸುತ್ತೇವೆ. ಕುಬೇರನ ಮೂಲೆ ತಗ್ಗಿನಲ್ಲಿದ್ದರೆ ಸಂಪತ್ತು ಹರಿದು ಹೋಗುತ್ತದೆ ಅಂತ ನಂಬುತ್ತೇವೆ.

ಪದವಿಲ್ಲದ ಪದ್ಯಕ್ಕೆ ಕದವಿಲ್ಲದ ಕವಿತೆ! ಕವಿ, ಕಾವ್ಯಗಳ ಬಗ್ಗೆ ಜೋಗಿ ವಿಮರ್ಶೆ

ಈ ಅಮರತ್ವದ ಆಶೆಯೇ ವಿಚಿತ್ರವಾದದ್ದು. ತುಂಬ ವರುಷ ಬದುಕಬೇಕು ಅಂತ ಬಯಸಿದವರೇ ಕೊನೆ ಕೊನೆಗೆ ಉಳಿದ ಆಯುಸ್ಸನ್ನು ಏನು ಮಾಡುವುದು ಅಂತ ಗಾಬರಿ ಬೀಳುವುದಿದೆ. ಅಪ್ಪ, ಅಮ್ಮ ಸತ್ತು ಹೋದರೆ ಏನು ಗತಿ ಎಂದು ಊಹೆಯಲ್ಲೇ ನಡುಗುವ ಮಗ, ಕ್ರಮೇಣ ಅವರ ಸಾವಿಗಾಗಿ ಕಾತರಿಸುತ್ತಾನೆ. ಮಕ್ಕಳು ಮೊಮ್ಮಕ್ಕಳೊಂದಿಗೆ ಸುಖವಾಗಿ ಬದುಕಬೇಕು ಅನ್ನುವ ಕನಸು ಕಂಡ ತಾಯಿ, ಕೊನೆ ಕೊನೆಗೆ ಸತ್ತು ಹೋದರೆ ಸಾಕು ಅಂತ ಹಾರೈಸುತ್ತಾಳೆ. ಮುತ್ತೈದೆ ಸಾವು ಕೊಡು ಅಂತ ದೇವರಲ್ಲಿ ಜೀವನಪೂರ್ತಿ ಪ್ರಾರ್ಥಿಸುತ್ತಾ ಬಂದ ಹೆಂಡತಿಗೆ ಕೂಡ ಮುತ್ತೈದೆತನ ಸಾಕು ಅನ್ನಿಸುವಷ್ಟು ಗಂಡನ ಅಸ್ತಿತ್ವ ರೇಜಿಗೆ ಹುಟ್ಟಿಸುತ್ತದೆ.

ಬದುಕು ಹೀಗೆ ಬದಲಾಗುತ್ತಾ ಹೋಗುತ್ತದೆ. ಗೆಳೆತನ, ಸಹವಾಸ, ಅಕ್ಕರೆ ಮತ್ತು ಸಂಬಂಧ ತನ್ನ ನೆಲೆಯನ್ನೂ ನಿಲುವನ್ನೂ ಮತ್ತೆ ಮತ್ತೆ ಬದಲಾಯಿಸುತ್ತಾ ಹೋಗುತ್ತದೆ. ಕೆಲವರು ‘ನಾನು ಅಷ್ಟು ಬೇಗ ಸಾಯುವುದಿಲ್ಲ ತಿಳ್ಕೊ’ ಅಂತ ಹೇಳಿ ಹೆದರಿಸುವ ಹಾಗೇ ಮತ್ತೆ ಕೆಲವರು ‘ನಾನು ಸಾಯುತ್ತೇನೆ’ ಅಂತ ಹೇಳಿ ಹೆದರಿಸುತ್ತಾರೆ. ಒಂದು ಸಾವು ಈ ಜಗತ್ತಿ ನಲ್ಲಿ ಏನನ್ನೂ ಬದಲಾಯಿಸುವುದಿಲ್ಲ ಅನ್ನುವುದನ್ನು ನಾವು ನಂಬುವುದಕ್ಕೆ ಸಿದ್ಧರಿರುವುದಿಲ್ಲ.

ಮೊತ್ತ ಮೊದಲು ಸಾವಿನ ಜೊತೆ ಮುಖಾಮುಖಿಯಾದ ಸಂದರ್ಭವನ್ನು ನೆನಪಿಸಿಕೊಳ್ಳಿ. ಆಗ ಸಾವು ಬದುಕಿನಷ್ಟೇ ಗಾಢವಾಗಿ ನಮ್ಮನ್ನು ಕಲಕಿರುತ್ತದೆ. ನಮ್ಮ ಜೊತೆಗಿದ್ದ ವ್ಯಕ್ತಿ ನಾಳೆಯಿಂದ ಇರುವುದಿಲ್ಲ ಮತ್ತು ಶಾಶ್ವತವಾಗಿ ನಮ್ಮಿಂದ ದೂರವಾಗುತ್ತಾನೆ ಅನ್ನುವ ಕಲ್ಪನೆಯೇ ಭಯ ಹುಟ್ಟಿಸುವಂಥದ್ದು. ಚದುರಂಗದ ಮಣೆಯ ಮೇಲಿದ್ದ ಕಾಯಿಯೊಂದನ್ನು ಯಾರೋ ಎತ್ತಿ ಹೊರಗೆಸೆದಂತೆ. ಆ ಜಾಗ ಖಾಲಿ ಹೊಡೆಯುತ್ತದೆ. ಮನೆ ಮುಂದೆ ಬೆಳೆದು ನಿಂತ ಮರವೊಂದು ಗಾಳಿಗೆ ಉರುಳಿದಂತೆ. ಕೆಲವು ದಿನ ಕಣ್ಣು ಆ ಮರವಿದ್ದ ಜಾಗದತ್ತ ಹಾಯುತ್ತದೆ. ಆ ಜಾಗ ಬೋಳು ಬೋಳಾಗಿ ಕಾಣುತ್ತದೆ. ಆದರೆ ಕ್ರಮೇಣ ಅದು ಅಭ್ಯಾಸವಾಗುತ್ತದೆ. ಸ್ವಲ್ಪ ದಿನದ ನಂತರ ಅಲ್ಲೊಂದು ಮರವಿತ್ತು ಅನ್ನುವುದನ್ನೂ ಮರೆತುಬಿಡುತ್ತೇವೆ.

ಆಳುವ ವರ್ಗವನ್ನು ಮತ್ತಷ್ಟು ಬಲಪಡಿಸುವ ಪುರೋಹಿತಶಾಹಿ ರಚನೆ ಪುಣ್ಯಕೋಟಿ ಕಥೆ; ಜೋಗಿ ವಿಮರ್ಶೆ

ಆದರೆ ಬದುಕು ಎಂಬ ಮಾಯೆ ಸಾವಿನ ಭಯವನ್ನು ಮೀರಬಲ್ಲದು. ಸಾವು ಒಂದು ಯಃಕಶ್ಚಿತ್ ಘಟನೆ ಮಾತ್ರ ಅನ್ನಿಸುವಂತೆ ಮಾಡಬಲ್ಲದು. ಒಬ್ಬ ಹಳೆಯ ಗೆಳೆಯನನ್ನು ನಾವು ಭೇಟಿಯಾಗುವ ಹಾಗೆ ಸಾವಿಗೆ ಎದುರಾಗುತ್ತೇವೆ. ಆ ಅಂತಿಮ ಮುಖಾಮುಖಿಯ ನಂತರ ಬದುಕೂ ಇರುವುದಿಲ್ಲ; ಸಾವೂ ಇರುವುದಿಲ್ಲ. ಅವೆರಡೂ ಒಂದೇ ಅನ್ನಿಸುವಷ್ಟರ ಮಟ್ಟಿಗೆ ಒಂದನ್ನೊಂದು ಬೆರೆತುಕೊಂಡಿರುತ್ತವೆ. ಹೀಗಾಗಿ ನಾವು ಬದುಕುತ್ತಿದ್ದೇವೆ ಅಂತ ಹೇಳುವುದೂ, ನಾವು ಸಾಯುತ್ತಿದ್ದೇವೆ ಅಂತ ಹೇಳುವುದೂ ಒಂದೇ ಅರ್ಥ ಕೊಡುತ್ತದೆ. ಹೀಗಾಗಿ ಸಾವು ಮತ್ತು ಬದುಕು ಪ್ರತಿಕ್ಷಣಕ್ಕೂ ಸಂಧಿಸುತ್ತಿರುತ್ತವೆ. ಯಾವುದೋ ಒಂದು ಹಂತದಲ್ಲಿ ಇದು ಅದರೊಳಗೆ ಒಂದಾಗುತ್ತದೆ. ನೀರಿನಲ್ಲಿ ಸಕ್ಕರೆ ಕರಗುವಂತೆ!

click me!