ಇದು ವಿವೇಕಾನಂದರ ಕಾಲವಲ್ಲ, ವಿವಾದಾನಂದರ ಕಾಲ - ಧಾರವಾಡದಲ್ಲಿ ಬರಗೂರು

By Web Desk  |  First Published Jan 18, 2019, 2:13 PM IST

ಅಖಿಲ ಭಾರತ ಸಮ್ಮೇಳನ 61 ವರ್ಷಗಳ ನಂತರ ಧಾರವಾಡದಲ್ಲಿ ಯಶಸ್ವಿಯಾಗಿ ಮುಗಿದು ಇನ್ನೂ 10 ದಿನಗಳಾಗಿಲ್ಲ. ಇದೀಗ ಸಾಹಿತ್ಯದ ತವರೂರು ಧಾರವಾಡ ಮತ್ತೊಂದು ಸಾಹಿತ್ಯ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದೆ. ಮೂರು ದಿನಗಳ ಸಂಭ್ರಮ ಉದ್ಘಾಟನೆಯಾಗಿದೆ.


ಧಾರವಾಡ: ಇತ್ತೀಚೆಗೆ ತಾನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಕ್ಷಿಯಾಗಿದ್ದ ವಿದ್ಯಾಕಾಶಿ ಇದೀಗ ಏಳನೇ ಆವೃತ್ತಿಯ ಸಾಹಿತ್ಯ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದೆ. ಮೂರು ದಿನಗಳ ಕಾಲ ನಡೆಯುವ ಈ ಸಂಭ್ರಮ ಜ.18ರಂದು ಉದ್ಘಾಟನೆಯಾಗಿದೆ.

ಆಶಯ ಭಾಷಣ ಮಾಡಿದ ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಕನ್ನಡ ಸಾಹಿತ್ಯ, ಸಂಭ್ರಮ, ರಾಜ್ಯ ಹಾಗೂ ದೇಶದ ಆಗು ಹೋಗುಗಳ ಬಗ್ಗೆ ಹೇಳಿದ್ದಿಷ್ಟು...

  • ಈ ಸಂಭ್ರಮಕ್ಕೆ ಸಾಕ್ಷಿಯಾಗಲು ಗಿರಡ್ಡಿ ಗೋವಿಂದರಾಜು ಹಾಗೂ ಕಲಬುರ್ಗಿಯವರು ಆಹ್ವಾನಿಸುತ್ತಲೇ ಇದ್ದರು. ಇದೀಗ ಇಬ್ಬರನ್ನೂ ಕಳೆದುಕೊಂಡಿದ್ದೇವೆ. ಈಗ ಕಾರ್ಯಕ್ರಮಕ್ಕೆ ನಾನು ಬಂದಿದ್ದೇನೆ. 
  • ಇದು ಗಿರಡ್ಡಿಯವರನ್ನು ಸ್ಮರಿಸಿಕೊಳ್ಳೋ ಕಾರ್ಯಕ್ರಮವೂ ಹೌದು.
  • ಕಲಬುರ್ಗಿ ಹಂತಕರನ್ನು ಪತ್ತೆ‌ ಮಾಡದಿರುವುದು ವಿಷಾದದ ಸಂಗತಿ. ಕುರ್ಚಿ ಗಲಾಟೆ ಮುಗಿದ ಮೇಲಾದರೂ ಕಲಬುರ್ಗಿ ಹಂತಕರನ್ನು ಪತ್ತೆ ಹಚ್ಚುವ ಬಗ್ಗೆ ಯೋಚಿಸಿ. 
  • ಇತ್ತೀಚಿಗೆ ದೇಶದಲ್ಲಿ ಕೊಲೆಗಳಾಗುತ್ತಿವೆ. ಜಾತಿ-ಧರ್ಮದ ಹೆಸರಿನಲ್ಲಿಯೂ ಕೊಲೆ ಆಗಿರಬಹುದು ಅಥವಾ ಮುಸ್ಲಿಂ ಕೊಲೆ ಇರಬಹುದು. ಆದರೆ ಹತ್ಯೆ ಹತ್ಯೆಯೇ. ಸಾವಿಗೂ ಸಂಭ್ರಮಿಸೋ ವಿಕೃತಿ ಮೆರೆಯುತ್ತಿದ್ದೇವೆ. ಇಂಥ ವಿಕಾರ ಮನಸ್ಸುಳ್ಳ ಮನುಷ್ಯನದ್ದು ಒಂದು ಸಮಾಜವೇ? ಇದು ವಿವೇಕಾನಂದರ ಕಾಲವಲ್ಲ ಬದಲಿಗೆ ವಿಕಾರಾನಂದರ ಕಾಲ, ವಿವಾದಾನಂದರ ಕಾಲ.
  • ಸಾಹಿತ್ಯವನ್ನು ನಾನು ಮನುಷ್ಯನಾಗೋ‌ ಪ್ರಕ್ರಿಯೆ ಅಂದುಕೊಂಡವನು. ಇವತ್ತು ಅಸಹಿಷ್ಣುತೆ ತೀವ್ರ ಸ್ವರೂಪದಲ್ಲಿದೆ. ಈ‌ ಮುಂಚೆಯೂ ಅಸಹಿಷ್ಣುತೆ ಇತ್ತು .1989 ಜನವರಿ 1ರಂದು ದೆಹಲಿಯಲ್ಲಿ ಸಫ್ದರ್ ರಶ್ಮಿ ಹತ್ಯೆಯಂಥ ಘಟನೆಗಳು ಹಿಂದೆಯೂ ನಡೆದಿವೆ. ಇಂಥ ಬಿಡಿ ಘಟನೆ ಇಂದು ಸಂಘಟಿತ ರೂಪ‌ ಪಡೆಯುತ್ತಿವೆ.
  • ಇವತ್ತು ನನಗೆ ಗನ್ ಮ್ಯಾನ್ ರಕ್ಷಣೆ ಇದೆ. ಬೆಂಗಳೂರಿನಲ್ಲಿ ಇಬ್ಬರು, ಇಲ್ಲಿಗೆ ಬಂದರೆ ಒಬ್ಬರು. ಇದು ನನಗೆ ಅತೀವ ನೋವು ತರುತ್ತಿರುವ ವಿಷಯ. 
  • ಸಿದ್ದಗಂಗಾ ಶ್ರೀಗಳ ಜಿಲ್ಲೆಗೆ ಸೇರಿದವನು ನಾನು. ಮಠದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಅಕ್ಷರ, ಅನ್ನ ದಾಸೋಹ ನಡೆಯುತ್ತವೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಮಕ್ಕಳಿಗೆ ವಿದ್ಯೆ, ಅನ್ನ ಕೊಡವಂಥ ಮಠ ಇನ್ನೊಂದಿಲ್ಲ. ಇವತ್ತು ಮಠಗಳೆಲ್ಲವೂ ಮತೀಯವಾಗುತ್ತಿವೆ. ಈ ಸಂದರ್ಭದಲ್ಲಿ ಅಲ್ಲಿ ಮಕ್ಕಳಿಗೆ ಶಿಕ್ಷಣ, ಅನ್ನ ನೀಡುತ್ತಿದೆ. ಇದನ್ನೆಲ್ಲ ಪರಿಗಣಿಸಿ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಎಂದೋ ಕೊಡಬೇಕಾಗಿತ್ತು. ಈಗಲಾದರೂ ಕೊಡಲಿ. 

    ರಾಮಚಂದ್ರರ 5 ಅಣಿಮುತ್ತುಗಳು
     
  • ಕೋಗಿಲೆಯ ಕಂಠಸಿರಿಯನ್ನು ಹಾಡಿ ಹೊಗಳುತ್ತ ಕಾಗೆಯ ಕಂಠವನ್ನು ಕರ್ಕಶವೆನ್ನುವ ವಿಪರ್ಯಾಸ ನಮ್ಮೆದುರಿಗಿದೆ. ಹೀಗಾಗಿ ಸಾಕ್ಷರ ಕವಿಗಳೂ, ಧಾರ್ಮಿಕ ಕಲಿಗಳೂ, ರಾಜಕೀಯ ಹುಲಿಗಳು ಕಾಗೆಯಿಂದ ಸೌಹಾರ್ದದ ಪಾಠ ಕಲಿಯಬೇಕಾದ ಕಾಲ ಬಂದಿದೆ. ಕಾಗೆ ನಮ್ಮ ಕಾಲದ ಗುರು!
  • ಜನಪ್ರಿಯ ದಾಟಿಯಲ್ಲಿ ಬರೆಯುವುದೇ ಅಪರಾಧವೆಂಬಂತೆ ಬಿಂಬಿಸಿ ‘ಜನಪ್ರಿಯ ಸಾಹಿತ್ಯ’ವನ್ನು ಹೊರಗೆ ಇಟ್ಟು ‘ವಿಮರ್ಶಾ ವರ್ಣಾಶ್ರಮ’ವನ್ನು ಆಚರಣೆಗೆ ತರಲಾಯಿತು. ಹಾಗೆ ನೋಡಿದರೆ ಕನ್ನಡದ ಜನಪ್ರಿಯ ಕತೆ, ಕಾದಂಬರಿಗಳಲ್ಲೇ ಪ್ರಗತಿಪರ ಸಾಮಾಜಿಕ ರಾಜಕೀಯ ಪ್ರಜ್ಞೆ, ಸರಳವಾಗಿದ್ದರೂ ಪ್ರಖರವಾಗಿ ಮೂಡಿ ಬಂದಿದೆ. ಪ್ರಗತಿಪರ ವಿಚಾರಧಾರೆಯ ಸಾಹಿತಿ ಮತ್ತು ಸಾಹಿತ್ಯವನ್ನು ‘ಶಿಲ್ಪ’ದ ಮಾನದಂಡ ಮುಖ್ಯ ಮಾಡಿಕೊಂಡು ಹೊರಗಿಟ್ಟ ‘ವಿಮರ್ಶಾ ವರ್ಣಾಶ್ರಮ’ ಬಹಳಷ್ಟು ಸಾಹಿತಿಗಳಿಗೆ ಅನ್ಯಾಯ ಮಾಡಿದೆ.
  • ಸಾಮಾಜಿಕ ವರ್ಣಾಶ್ರಮದಲ್ಲಿ ಕೆಲವರನ್ನು ಹೊರಗಿಟ್ಟಂತೆಯೇ ಪ್ರಗತಿಪರ ವಿಚಾರಧಾರೆಯ ಸಾಹಿತ್ಯ ಮತ್ತು ಸರಳ ನಿರೂಪಣಾ ವಿಧಾನದ ಜನಪ್ರಿಯ ಸಾಹಿತ್ಯವನ್ನು ಹೊರಗಿಡುವ ಶ್ರೇಷ್ಠತೆಯ ಸೊಕ್ಕಿನ ವಿಮರ್ಶಾ ಪ್ರವೃತ್ತಿಯನ್ನು ‘ವಿಮರ್ಶಾ ವರ್ಣಾಶ್ರಮ’ವೆಂದು ಕರೆಯುತ್ತಿದ್ದೇನೆ.
  • ಈ ‘ವಿಮರ್ಶಾ ವರ್ಣಾಶ್ರಮ’ದ ವ್ಯಾಪ್ತಿಗೆ ಮಹಿಳೆಯರ ಜನಪ್ರಿಯ ಸಾಹಿತ್ಯವನ್ನು ಅತ್ಯುತ್ಸಾಹದಿಂದ ಸೇರಿಸಲಾಗಿದೆ! ಮಹಿಳೆಯರು ಬರೆದದ್ದು ‘ಅಡುಗೆ ಮನೆ ಸಾಹಿತ್ಯ’ ಎಂದು ಹಿಂದೊಮ್ಮೆ ಕೆಲ ನವ್ಯವಿಮರ್ಶಕರು ಹೀಗಳೆದದ್ದನ್ನು ಇಲ್ಲಿ ನೆನೆಯಬಹುದು.
  • ಮಹಿಳೆಯರದು ‘ಅಡುಗೆ ಮನೆ ಸಾಹಿತ್ಯ’ ಎಂದಾಗ ನವ್ಯದ ಕೆಲವರದು ‘ಮಲಗೊ ಮನೆ ಸಾಹಿತ್ಯ’ ಎಂದರೆ ಹೇಗಿರುತ್ತದೆ?
     

Tap to resize

Latest Videos

click me!