ಸಾವಯವ ಲೋಕದ ದ್ರೋಣ ನಾರಾಯಣ ರೆಡ್ಡಿ ಮರಳಿ ಮಣ್ಣಿಗೆ

By Web Desk  |  First Published Jan 15, 2019, 3:43 PM IST

‘ಈ ಭೂಮಿಯೇನಾದ್ರೂ ಒಂದು ಬಸ್ಸಾಗಿದ್ರೆ ಯಾವಾಗ್ಲೋ ಗುಜರಿಗೆ ಹಾಕಬೇಕಿತ್ತು!’ ನಾರಾಯಣ ರೆಡ್ಡಿ ಎಂಬ ಸಾವಯವ ದಂತಕತೆ ಹೇಳುತ್ತಿದ್ದ ಗಟ್ಟಿಮಾತಿದು. ಅಂಥ ಗಟ್ಟಿದನಿ ಕಾಲನ ತೆಕ್ಕೆಗೆ ಸೇರಿದೆ. ನಾಲ್ಕು ದಶಕಗಳ ಸಾವಯವ ನಡಿಗೆ ಅವರದು. ದೊಡ್ಡಬಳ್ಳಾಪುರದ ಮರೇನಹಳ್ಳಿಯ ನಾಲ್ಕೆಕರೆ ಜಮೀನು ಅವರ ಕರ್ಮಭೂಮಿ. ರೆಡ್ಡಿಯವರನ್ನು ಹತ್ತಿರದಿಂದ ಕಂಡ, ಅವರೊಂದಿಗೆ ಒಡನಾಡಿದ ದೊಡ್ಡಬಳ್ಳಾಪುರದ ‘ಸಾಯಿಲ್‌’ ಸಂಸ್ಥೆಯ ವಾಸು ಅವರ ನುಡಿಗಳು ಇಲ್ಲಿವೆ.
 


ದೊಡ್ಡ ಬಳ್ಳಾಪುರ (ಜ. 15):  ‘ಈ ಭೂಮಿಯೇನಾದ್ರೂ ಒಂದು ಬಸ್ಸಾಗಿದ್ರೆ ಯಾವಾಗ್ಲೋ ಗುಜರಿಗೆ ಹಾಕಬೇಕಿತ್ತು!’ ನಾರಾಯಣ ರೆಡ್ಡಿ ಎಂಬ ಸಾವಯವ ದಂತಕತೆ ಹೇಳುತ್ತಿದ್ದ ಗಟ್ಟಿಮಾತಿದು. ಅಂಥ ಗಟ್ಟಿದನಿ ಕಾಲನ ತೆಕ್ಕೆಗೆ ಸೇರಿದೆ. ನಾಲ್ಕು ದಶಕಗಳ ಸಾವಯವ ನಡಿಗೆ ಅವರದು. ದೊಡ್ಡಬಳ್ಳಾಪುರದ ಮರೇನಹಳ್ಳಿಯ ನಾಲ್ಕೆಕರೆ ಜಮೀನು ಅವರ ಕರ್ಮಭೂಮಿ. ರೆಡ್ಡಿಯವರನ್ನು ಹತ್ತಿರದಿಂದ ಕಂಡ, ಅವರೊಂದಿಗೆ ಒಡನಾಡಿದ ದೊಡ್ಡಬಳ್ಳಾಪುರದ ‘ಸಾಯಿಲ್‌’ ಸಂಸ್ಥೆಯ ವಾಸು ಅವರ ನುಡಿಗಳು ಇಲ್ಲಿವೆ.

- ರೈತರು ಬೆಳೆ ಬೆಳೀಬಾರ್ದು, ಮಣ್ಣು ಬೆಳೀಬೇಕು.

Tap to resize

Latest Videos

undefined

- ಮಣ್ಣಿನೊಳಗಿನ ಜೀವಾಣುಗಳು ಚೆನ್ನಾಗಿದ್ದರೆ ಮಣ್ಣಿನ ಮೇಲಿನ ಜೀವಾಣುಗಳೂ ಚೆನ್ನಾಗಿರುತ್ತವೆ.

- ಕೃಷಿ ಜಗತ್ತಿನಲ್ಲಿ ತಲ್ಲಣಗಳೇನಿಲ್ಲ. ಅದೆಲ್ಲ ನಾವೇ ಮಾಡಿಕೊಂಡಿದ್ದು. ಈಗಲೂ ಮನಸ್ಸು ಮಾಡಿದರೆ ಅದನ್ನೆಲ್ಲ ಸರಿಪಡಿಸಬಹುದು.

- ನೀನು ಏನೇ ಮಾಡಿದರೂ ಮಣ್ಣಿನ ಬಗ್ಗೆ ಮಕ್ಕಳಿಗೆ ತಿಳಿಹೇಳುವುದನ್ನು ಮರೆಯಬೇಡ.

ಸುಮಾರು 30 ವರ್ಷಗಳ ಹಿಂದಿನ ಮಾತು. ನಾವು ಒಂದು ಸಣ್ಣ ಸಂಸ್ಥೆ ಕಟ್ಟಿಸಾವಯವ ಬೆಳೆಯ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು ಎಂದು ಹೊರಟಿದ್ದೆವು. ಆ ಹೊತ್ತಿಗೆ ಸಾವಯವ ಕೃಷಿ ಬಗ್ಗೆ ಕೇಳಿ ಗೊತ್ತಿತ್ತಷ್ಟೇ. ಅದರ ಬಗ್ಗೆ ಹೆಚ್ಚಿನ ಅರಿವು ಇರಲಿಲ್ಲ. ರಾಸಾಯನಿಕ ಬಿಟ್ಟು ಪರ್ಯಾಯ ಕೃಷಿ ಎಂಬ ಅರಿವಿತ್ತು.  ಹೇಗೆ ಅನ್ನುವುದೂ ತಿಳಿದಿರಲಿಲ್ಲ. ಆದರೆ ನಮ್ಮೆದುರು ದೊಡ್ಡ ಸವಾಲಿತ್ತು. ಸಾವಯವ ಎಂಬ ಪದವನ್ನೂ ಕೇಳಿ ಗೊತ್ತಿಲ್ಲದ ರೈತರಿಗೆ ಸಾವಯವ ಕೃಷಿಯ ಪಾಠ ಮಾಡಬೇಕಿತ್ತು. ಆಗ ನಮ್ಮ ನೆರವಿಗೆ ಬಂದವರು ನಾರಾಯಣ ರೆಡ್ಡಿ ಅವರು.

ನನ್ನ ದೃಷ್ಟಿಯಲ್ಲಿ ಅವರು ಸಾವಯವ ಲೋಕದ ದ್ರೋಣಾಚಾರ್ಯ. ಸಾವಯವ ಕೃಷಿಯ ಬಗ್ಗೆ ನಮಗೆಲ್ಲ ವಿದ್ಯೆ ಕಲಿಸಿದವರು. ಅವರು ಕೃಷಿಯನ್ನು ಪ್ರತ್ಯೇಕ ಭಾಗವಾಗಿ ನೋಡಲೇ ಇಲ್ಲ. ಕೃಷಿ ಅಂದರೆ ಕೇವಲ ಬೆಳೆ ಬೆಳೆಯೋದು ಅಷ್ಟೆಅಲ್ಲ ಅನ್ನುವುದನ್ನು ಸಾಧಿಸಿ ತೋರಿಸಿದವರು.

ಅವರ ಜಮೀನಿನಲ್ಲಿ ಕೃಷಿಯ ಜೊತೆಗೆ ಇತರ ಗಿಡ ಮರಗಳ ಸಮೃದ್ಧತೆ ಇತ್ತು. ಬಹಳಷ್ಟುಜಾನುವಾರುಗಳಿದ್ದವು. ಅವರು ವಿಶೇಷವಾಗಿ ಒತ್ತು ಕೊಡುತ್ತಿದ್ದದ್ದು ಮಣ್ಣಿನಲ್ಲಿರುವ ಜೀವಾಣುಗಳಿಗೆ. ಮಣ್ಣಿನೊಳಗಿನ ಜೀವಾಣುಗಳು ಚೆನ್ನಾಗಿದ್ದರೆ ಮಣ್ಣಿನ ಮೇಲಿನ ಜೀವಾಣುಗಳೂ ಚೆನ್ನಾಗಿರುತ್ತವೆ ಎಂದು ನಂಬಿದ್ದರು.

ನಾರಾಯಣ ರೆಡ್ಡಿಯವರು ರೈತರಿಗೆ ಸದಾ ಹೇಳುತ್ತಿದ್ದ ಮಾತು- ಬೆಳೆ ಬೆಳೀಬಾರ್ದು, ಮಣ್ಣು ಬೆಳೀಬೇಕು ಅಂತ. ಏಕೆಂದರೆ ಬೆಳೆ ಬೆಳೆಯುವ ಜವಾಬ್ದಾರಿ ಮಣ್ಣಿನದು. ಮಣ್ಣಿನಲ್ಲಿ ಜೀವಾಣುಗಳು ಚೆನ್ನಾಗಿದ್ದರೆ ಬೆಳೆಯೂ ಚೆನ್ನಾಗಿರುತ್ತದೆ. ಅಂದರೆ ಮಣ್ಣಿಗೆ ಬೇಕಾದ್ದೆಲ್ಲ ಕೊಟ್ಟುಬಿಡಿ. ಆದರೆ ಈ ಸಾರಜನಕ, ರಂಜಕಗಳಂಥ ರಾಸಾಯನಿಕಗಳನ್ನೆಲ್ಲ ಬಿಟ್ಟುಬಿಡಿ. ಮಣ್ಣಿನಲ್ಲಿ ಮೂರು ಅಂಶಗಳಿರಬೇಕು. ಮೊದಲನೆಯದು ಸಾವಯವ ಅಂಶ, ಎರಡನೆಯದು ತೇವಾಂಶ, ಮೂರನೆಯದು ಜೀವಾಂಶ. ಈ ಮೂರನ್ನು ಮಣ್ಣಿಗೆ ಕೊಟ್ಟು ಚೆನ್ನಾಗಿ ನೋಡಿಕೊಂಡರೆ, ಆ ಮಣ್ಣು ಬೆಳೆಗಳನ್ನು ಬೆಳೆಸುತ್ತದೆ.

ನನ್ನ ಅದೃಷ್ಟಕ್ಕೆ ಅವರ ಒಡನಾಟ ಸಿಕ್ಕಿತು. ಅವರ ಜೊತೆಗೆ ರಾಜ್ಯಾದ್ಯಂತ ಪ್ರಯಾಣ ಮಾಡಿದ್ದೆ. ಆಗ ರಾಸಾಯನಿಕ ಕೃಷಿಗೆ ಪರ್ಯಾಯವಾದ ಮಾರ್ಗದ ಬಗ್ಗೆ ಮಾತನಾಡುವವರೇ ಇರಲಿಲ್ಲ. ನಾವು ಮಾತನಾಡಿದಾಗ ನಮ್ಮನ್ನು ಹುಚ್ಚರು ಅಂತಿದ್ರು. ಗಲಾಟೆ ಮಾಡುತ್ತಿದ್ದರು, ಜಗಳ ಆಡುತ್ತಿದ್ದರು. ಆಗೆಲ್ಲ ನಾವು ನಾರಾಯಣ ರೆಡ್ಡಿ ಅವರನ್ನು ಗುರಾಣಿ ಥರ ಬಳಸಿಕೊಂಡಿದ್ದೇವೆ. ಯುದ್ಧದಲ್ಲಿ ಯೋಧರು ಆತ್ಮರಕ್ಷಣೆಗಾಗಿ ಗುರಾಣಿ ಬಳಸುತ್ತಾರಲ್ಲ, ಆ ಗುರಾಣಿಯ ಹಾಗೆ ನಮ್ಮ ರಕ್ಷಣೆಗೆ ನಾರಾಯಣ ರೆಡ್ಡಿ ಅವರು ನಿಲ್ಲುತ್ತಿದ್ದರು. ನಮಗೆ ರೈತರಲ್ಲಿ ತಿಳುವಳಿಕೆ ಮೂಡಿಸಬೇಕಾದ ಮಾಹಿತಿಗಳನ್ನೆಲ್ಲ ನಾರಾಯಣ ರೆಡ್ಡಿ ಅವರೇ ನೀಡುತ್ತಿದ್ದರು.

ರೆಡ್ಡಿ ಅವರ ಸಾವಯವ ತೋಟ ನೋಡಲು, ಅವರಿಂದ ಸಾವಯವ ಕೃಷಿಯ ಪಾಠ ಹೇಳಿಸಿಕೊಳ್ಳಲು ದೇಶ ವಿದೇಶದ ವಿದ್ಯಾರ್ಥಿಗಳು ಜಮೀನಿಗೆ ಬರುತ್ತಿದ್ದರು. ದೊಡ್ಡವರು, ಚಿಕ್ಕವರು ಎಂಬ ಯಾವ ಭೇದವನ್ನೂ ಮಾಡದೇ ಎಲ್ಲರಿಗೂ ತೋಟ ತೋರಿಸುತ್ತಿದ್ದರು. ಮಣ್ಣಿನ ಬಗ್ಗೆ ಪಾಠ ಮಾಡುತ್ತಿದ್ದರು. ಎಷ್ಟೋ ಜನರ ನೋವಿಗೂ ಸ್ಪಂದಿಸುತ್ತಿದ್ದ ವ್ಯಕ್ತಿ.

ಕೃಷಿ ಜಗತ್ತಿನಲ್ಲಿ ತಲ್ಲಣಗಳೇನಿಲ್ಲ. ಅದೆಲ್ಲ ನಾವೇ ಮಾಡಿಕೊಂಡಿದ್ದು. ಈಗಲೂ ಮನಸ್ಸು ಮಾಡಿದರೆ ಅದನ್ನೆಲ್ಲ ಸರಿಪಡಿಸಬಹುದು ಎನ್ನುತ್ತಿದ್ದ ಆಶಾವಾದಿ ಅವರು.

ಅತೀ ಹೆಚ್ಚು ರಾಗಿ ಬೆಳೆದ ಪ್ರಗತಿಪರ ರೈತ ಅಂತ ಸರ್ಕಾರ ಅವರನ್ನು ಗೌರವಿಸಿತ್ತು. ಆದರೆ ಅವರಿಗೆ ಆ ಬಗ್ಗೆ ಅಂಥಾ ಖುಷಿ ಇರಲಿಲ್ಲ. ಅವರೊಮ್ಮೆ ಮಾತನಾಡುವಾಗ ಈ ಕುರಿತು ಹೇಳಿದರು. ‘ಈ ಬೆಳೆಯಿಂದ ಲಾಭನೂ ಇಲ್ಲ. ನಷ್ಟನೂ ಇಲ್ಲ. ಅಲ್ಲಿಂದಲ್ಲಿಗೆ ಸರಿಹೋಗಿದೆ ಅಷ್ಟೇ. ಜೊತೆಗೆ ಈ ಬೆಳೆಗೆ ರಸಗೊಬ್ಬರ ನೀಡಿದ್ದರಿಂದ ಜಮೀನಿನ ತಾಕತ್ತು ಕಡಿಮೆಯಾಗುತ್ತಾ ಬಂದದ್ದು ನನ್ನ ಗಮನಕ್ಕೆ ಬಂತು. ನಾನು ಸರ್ಕಾರ ಹೇಳಿದ ಎಲ್ಲವನ್ನೂ ಮಾಡಿದೆ. ಕೃಷಿ ಇಲಾಖೆ ಹೇಳಿದ್ದನ್ನೂ ಮಾಡಿದೆ. ಆದರೂ ಲಾಭವಾಗಲಿಲ್ಲ. ಹಣಕಾಸಿನ ಲಾಭವೂ ಇಲ್ಲ. ಪರಿಸರಕ್ಕೆ, ಮಣ್ಣಿಗೆ ಲಾಭವೂ ಇಲ್ಲ’ ಎಂದಿದ್ದರು.

ನಾನು ‘ಸಾಯಿಲ್‌’ ಅರ್ಥಾತ್‌ ‘ಮಣ್ಣು’ ಎಂಬ ಸಂಸ್ಥೆ ಸೃಷ್ಟಿಮಾಡಿದ್ದೆ. ಅವರು ಹೇಳಿದ್ದಿಷ್ಟೇ, ‘ನೀನು ಏನೇ ಮಾಡಿದರೂ ಮಣ್ಣಿನ ಬಗ್ಗೆ ಮಕ್ಕಳಿಗೆ ತಿಳಿಹೇಳುವುದನ್ನು ಮರೆಯಬೇಡ. ತಿಳುವಳಿಕೆ ಕೊಡು. ಮಣ್ಣಿನ ನೀತಿ ಬಗ್ಗೆ ಪುಸ್ತಕ, ಮಾಹಿತಿ ಬರುವ ಹಾಗೆ ಮಾಡು. ರೈತರಿಗೂ ಮಣ್ಣು ಬೆಳೆಯುವ ಬಗ್ಗೆ ಅರಿವು ಮೂಡಿಸು’ ಅನ್ನುತ್ತಿದ್ದರು. ಆ ಮಾತಿನ ಬೆಳಕಲ್ಲೇ ಮುನ್ನಡೆಯುತ್ತಿದ್ದೇನೆ.

ಫುಕುವೋಕ ಸ್ಫೂರ್ತಿ

ಆಗ ಅವರ ನೆರವಿಗೆ ಬಂದದ್ದು ಫುಕುವೋಕ ಎಂಬ ಜಪಾನಿನ ರೈತ. ಅವರ ಪುಸ್ತಕಗಳನ್ನು ಓದಿ, ಅವರ ಕೃಷಿಯ ಬಗ್ಗೆ ತಿಳಿದುಕೊಂಡು ಸಾಕಷ್ಟುಪ್ರಯೋಗ ಮಾಡಿದರು. ಜೀವನದಲ್ಲಿ ಒಮ್ಮೆಯಾದರೂ ಫುಕವೋಕ ಅವರನ್ನು ನೋಡಬೇಕು ಅಂದುಕೊಂಡಿದ್ದರು. ಆದರೆ ಇವರ ಸಾಧನೆ ಕಂಡು ಫುಕುವೋಕ ಅವರೇ ಇವರ ಜಮೀನಿಗೆ ಬಂದಿದ್ದರು. ಇದಕ್ಕೂ ಮುನ್ನ ಫುಕುವೋಕ ಒಮ್ಮೆ ಬೆಂಗಳೂರಿಗೆ ಬಂದಿದ್ದರು. ಹೊಸೂರಿನಲ್ಲೆಲ್ಲೋ ಅವರ ಕಾರ್ಯಕ್ರಮ ಇತ್ತು. ಇವರ ದುರಾದೃಷ್ಟಕ್ಕೆ ಆ ಹೊತ್ತಿಗೆ ಸ್ಟೆ್ರೖಕ್‌ ಇತ್ತು. ಈ ಛಲವಾದಿ ಧೃತಿಗೆಡಲಿಲ್ಲ. ಅಷ್ಟೂದೂರ ನಡೆದುಕೊಂಡೇ ಹೋಗಿ ತಮಗೆ ಸ್ಫೂರ್ತಿ ನೀಡಿದ ವ್ಯಕ್ತಿಯನ್ನು ಭೇಟಿಯಾದರು.

ಸರ್ಕಾರದ ನಡೆಯ ಬಗ್ಗೆ ಬೇಸರ

ಸರ್ಕಾರ ಕೃಷಿಗೆ ಸಂಬಂಧಿಸಿ ವೈಜ್ಞಾನಿಕವಾಗಿ ಕಾರ್ಯನಿರ್ವಹಿಸಿದ ಬಗ್ಗೆ ರೆಡ್ಡಿ ಅವರಿಗೆ ಬೇಸರವಿತ್ತು. ರೈತರು, ಸಾಲಮನ್ನಾ ಎಂದೆಲ್ಲ ಮಾತನಾಡುವ ಸರ್ಕಾರ ಎಲ್ಲಕ್ಕೂ ಮೂಲವಾದ ಮಣ್ಣಿನ ಸಂರಕ್ಷಣೆಗೇ ಒತ್ತು ನೀಡುತ್ತಿಲ್ಲ. ಮಣ್ಣಿನ ಬಗ್ಗೆ ಒಂದು ಮಂಡಳಿಯಾಗಲೀ, ಕಾನೂನಾಗಲೀ ಇಲ್ಲ ಎಂದು ಅವರು ಬಹಳ ಬೇಸರದಿಂದ ನುಡಿಯುತ್ತಿದ್ದರು. ಆ ಕೆಲಸವನ್ನು ನಾವಾದರೂ ಮಾಡಬೇಕು ಅನ್ನುವುದು ಅವರ ಇಂಗಿತವಾಗಿತ್ತು.

ನಾರಾಯಣ ರೆಡ್ಡಿಗಳ ಮಾನವೀಯ ಮುಖ

ಯಾರೋ ಒಬ್ರಿಗೆ ಆಗ ಕ್ಯಾನ್ಸರ್‌ ಬಂತು. ಆ ಅವರಿಗೆ ವೈದ್ಯರು ಸಾವಯವ ತಾಜಾ ತರಕಾರಿಗಳ ಜ್ಯೂಸ್‌ಅನ್ನು ಕುಡಿಯಲು ಸೂಚಿಸಿದರು. ಅದರಲ್ಲೂ ಕ್ಯಾರೆಟ್‌ ಜ್ಯೂಸ್‌ ಕುಡಿದರೆ ಇನ್ನೂ ಉತ್ತಮ ಅಂತ ಹೇಳಿದ್ದರು. ಇದು ಇಪ್ಪತ್ತೈದು ವರ್ಷ ಹಿಂದಿನ ಮಾತು.

ಆಗ ಸಾವಯವ ವಿಧಾನದಲ್ಲಿ ತರಕಾರಿ ಬೆಳೆಯುವವರೇ ಸಿಗುತ್ತಿರಲಿಲ್ಲ, ನಾರಾಯಣ ರೆಡ್ಡಿ ಅವರನ್ನು ಹೊರತುಪಡಿಸಿ. ಈ ವಿಷಯವನ್ನು ರೆಡ್ಡಿ ಅವರಿಗೆ ತಿಳಿಸಿದಾಗ ಅವರು ಮಾರುಕಟ್ಟೆಗೆ ಸಾಗಿಸಬೇಕೆಂದಿದ್ದ ಕ್ಯಾರೆಟ್‌ಗಳನ್ನೆಲ್ಲ ಆ ಕ್ಯಾನ್ಸರ್‌ ರೋಗಿಗೆ ನೀಡಿದರು. ಒಂದು ಪೈಸೆ ಹಣವನ್ನೂ ಮುಟ್ಟಲಿಲ್ಲ. ಆ ಕಾಲಕ್ಕೆ ಸುಮಾರು ಹತ್ತು ಸಾವಿರ ರುಪಾಯಿ ಬೆಲೆಯ ಕ್ಯಾರೆಟ್‌ಅನ್ನು ಇವರು ಆ ರೋಗಿಗೆ ನೀಡಿದ್ದರು. ಅವರ ಬಳಿ ಇದ್ದದ್ದು ಎರಡೇ ಉಡುಗೆ, ಅಷ್ಟು ಸರಳ ಮನುಷ್ಯ.

click me!