ನನ್ನೊಳಗೆ ಇನ್ನೂ ಹಲವು ತೇಜಶ್ರೀಯರಿದ್ದಾರೆ: ಕವಯತ್ರಿ ಜ.ನಾ. ತೇಜಶ್ರೀ ಮನದ ಮಾತು

Published : Nov 29, 2026, 03:55 PM IST
Kannada Poet Ja Na Tejashree

ಸಾರಾಂಶ

"ನನ್ನೊಳಗೆ ಇನ್ನೂ ಹಲವು ತೇಜಶ್ರೀಯರಿದ್ದಾರೆ..." ಕನ್ನಡದ ಖ್ಯಾತ ಕವಯತ್ರಿ ಜ.ನಾ. ತೇಜಶ್ರೀ ಅವರ ಸಾಹಿತ್ಯ, ಬದುಕು, ಕವಿತೆ, ಜೀವರತಿ ಕಾದಂಬರಿ ಮತ್ತು ಕನ್ನಡ ಭಾಷೆಯ ಭವಿಷ್ಯದ ಕುರಿತ ಮನದಾಳದ ಮಾತುಗಳು. ಜೋಗಿ ಅವರ ವಿಶೇಷ ಸಂದರ್ಶನ.

ತೇಜಶ್ರೀಯವರನ್ನು ಓದುವುದು ಅಂದರೆ ನಿರಂತರವಾಗಿ ತನ್ನೊಳಗನ್ನು ಶೋಧಿಸಿಕೊಳ್ಳುತ್ತಲೇ ಇರುವ ಸೃಜನಶೀಲ ಮನಸ್ಸೊಂದರ ಜೊತೆ ಮುಖಾಮುಖಿಯಾಗುವುದು. ಭಾಷೆಯ ಮೇಲಿನ ಪ್ರೀತಿ, ಚಿಂತನೆಯ ಆಳ, ಬದುಕಿನ ಸೂಕ್ಷ್ಮ ವಿವರಗಳನ್ನು ಕಾಣುವ ಕಣ್ಣು, ನಿಲುವಿನಲ್ಲಿರುವ ಪ್ರಾಮಾಣಿಕತೆ—ಇವೆಲ್ಲವೂ ಅವರ ಮಾತುಗಳಲ್ಲಿ ಸಹಜವಾಗಿ ಅರಳುತ್ತವೆ. ಈ ಸಂದರ್ಶನ ಅವರೊಳಗಿನ ಹಲವು ತೇಜಶ್ರೀಯರನ್ನು ಪರಿಚಯಿಸುತ್ತದೆ.

ಸಂದರ್ಶನ: ಜೋಗಿ

1. ನಿಮ್ಮ ಬಾಲ್ಯ, ಒಟ್ಟು ಕುಟುಂಬದ ವಾತಾವರಣದಲ್ಲಿ, ಕೃಷಿ ಬದುಕಿನ ಅನುಭವಗಳ ನಡುವೆ ಕಳೆದಿದೆ. ಆ ಹಳ್ಳಿಯ ಬದುಕು, ಸಂಬಂಧಗಳ ಲೋಕ, ಮನೆಯ ಮಾತುಗಳು ಇವತ್ತಿನ ನಿಮ್ಮ ಕವಿತೆ ಮತ್ತು ಕಥೆಗಳಲ್ಲಿ ಎಷ್ಟು ಉಳಿದುಕೊಂಡಿವೆ? ಹೆಚ್ಚಿನವರ ಬಾಲ್ಯ ಬಹುಬೇಗ ಮುಗಿದುಬಿಡುತ್ತದೆ. ಬರಹಗಾರರ ಬಾಲ್ಯ ಎಂದಿಗೂ ಮುಗಿಯುವುದಿಲ್ಲವೆ?

ಸಂಬಂಧಗಳ ಲೋಕ, ಬದುಕಿನ ರೀತಿಯಿಂದ ಹುಟ್ಟಿದ ಭಾಷೆ/ಮಾತಿನ ನಡುವೆ ಹರಿಗಡಿಯದ ನಂಟಿರುತ್ತದೆ. ಇದು ನನ್ನೊಳಗೆ ಎಷ್ಟು ಉಳಿದಿದೆ ಅನ್ನುವುದಕ್ಕಿಂತ ನನ್ನ ಜೊತೆ ಬೆಳೆದಿದೆ ಮತ್ತು ಬೆಳೆಯುತ್ತಲಿದೆ ಅನ್ನುವುದು ಸರಿಯೇನೋ. ಕಳೆದ ಕಾಲ, ಇರುವ ಕಾಲ ಮತ್ತು ಬರಲಿರುವ ಕಾಲಗಳು ಒಟ್ಟಿಗೆ ಸಹಬಾಳ್ವೆ ನಡೆಸುತ್ತವೆ, ಸೃಜನಶೀಲತೆಯ ಅಗತ್ಯಕ್ಕೆ ತಕ್ಕ ಹಾಗೆ ಮರುಹುಟ್ಟು ಪಡೆಯುತ್ತವೆ. ನನ್ನ ಬಾಲ್ಯವು ಪಟ್ಟಣ ಮತ್ತು ಹಳ್ಳಿಯ ನಡುವೆ ಲಾಳಿ ಹೊಡೆಯುತ್ತ ಕಳೆದಿರುವುದರಿಂದ ಅವೆರಡೂ ನನ್ನಲ್ಲಿ ಬೇರೆಬೇರೆ ಬಗೆಯಲ್ಲಿ ಮೈಪಡೆದಿವೆ. ಇವು ಕವಿತೆಯಲ್ಲಿ ಮತ್ತು ಕಥಾಸಾಹಿತ್ಯದಲ್ಲಿ ಕಾಣಿಸಿಕೊಳ್ಳುವ ಬಗೆಗಳು ಬೇರೆ ಬೇರೆ. ಕವಿತೆಯಲ್ಲಿ ಸ್ಥಳೀಯತೆಯು ಅಮೂರ್ತವಾಗುತ್ತದೆ, ಕಥೆ-ಕಾದಂಬರಿಯಲ್ಲಿ ವರ್ಣನೆಯಾಗುತ್ತದೆ. ಮನದ ಆಳಕ್ಕೆ ಎಷ್ಟು ಇಳಿದು ಅನುಭವವನ್ನು ಹೆಕ್ಕಿ ತೆಗೆಯುತ್ತೇವೆ ಅನ್ನುವುದರ ಮೇಲೆ ಆ ಭಾಷೆ, ಬದುಕು ನನ್ನೊಳಗೆ ಎಷ್ಟು ಉಳಿದಿದೆ ಅನ್ನುವುದು ನಿರ್ಧಾರವಾಗುತ್ತದೆ. ಇದು ಎಲ್ಲರ ಮನೋಲೋಕಕ್ಕೆ ಸಂಬಂಧಿಸಿದ ಪ್ರಶ್ನೆಯೂ ಹೌದು.

ನನಗೆ ತೋರುವ ಮಟ್ಟಿಗೆ, ಯಾರ ಬಾಲ್ಯವೂ ಹಾಗೆ ಮುಗಿಯುವುದಿಲ್ಲ. ಅದು ಅನುಭವಗಳ ಬೊಕ್ಕಸವಾಗಿ ಮತ್ತು ನೋಡುವ ಕಣ್ಣಾಗಿ ನಮ್ಮೊಳಗೆ ಉಳಿದಿರುತ್ತದೆ. ಸೃಜನಶೀಲವಾಗಿ ಇರುವವರು ಅದನ್ನು ಹಲಬಗೆಯ ಭಾಷೆಯಲ್ಲಿ ಅಭಿವ್ಯಕ್ತಿ ಪಡಿಸುತ್ತಾರೆ ಅಷ್ಟೆ. ನೀವು ಹೇಳುತ್ತಿರುವ ‘ಬಾಲ್ಯ’ವು ವಯಸ್ಸಿಗೆ ಸಂಬಂಧಿಸಿದ್ದು. ವಯಸ್ಸಿನಲ್ಲಿ ಎಷ್ಟೇ ಬೆಳೆದರೂ ನಮ್ಮೊಳಗಿನ ಮಗುತನವನ್ನು ಕಾಪಿಟ್ಟುಕೊಳ್ಳುವುದು ಮುಖ್ಯ. ಇದನ್ನು ನಾವು ಪ್ರಜ್ಞಾಪೂರ್ವಕವಾಗಿ ಮಾಡಲು ಸಾಧ್ಯವಿಲ್ಲ. ಸೃಷ್ಟಿಯ ಸಣ್ಣಸಣ್ಣ ಸಂಗತಿಗಳನ್ನೂ ಕಣ್ಣಿಟ್ಟು ನೋಡುವ, ಆ ವಿದ್ಯಮಾನದ ಹಿಂದಿನ ಬೆರಗನ್ನು ಅನುಭವಿಸುವ ಮನಸ್ಸು ಇರುವತನಕ ನಮ್ಮೊಳಗೊಂದು ಮಗು, ಆ ಮಗುವಿನೊಂದಿಗೆ ಬಾಲ್ಯವೂ ಬದುಕಿರುತ್ತದೆ. ಇದು ಪ್ರಬುದ್ಧತೆಯ ಸಂಗಾತದಲ್ಲಿರುವ ಬಾಲ್ಯ...

2. ನಿಮ್ಮ ತಂದೆ ಜ.ಹೊ.ನಾರಾಯಣಸ್ವಾಮಿ ಅವರು ನಿಮ್ಮಲ್ಲಿ ಸಾಹಿತ್ಯದ Qr ಹೊತ್ತಿಸಿದವರು. ತಂದೆಯಿಂದ ಬಂದ ಸಾಹಿತ್ಯದ ಆಸಕ್ತಿ ಮುಂದೆ ನಿಮ್ಮದೇ ಆದ ಸಾಹಿತ್ಯಿಕ ವ್ಯಕ್ತಿತ್ವವಾಗಿ ರೂಪುಗೊಂಡದ್ದು ಹೇಗೆ? ತಂದೆಯ ಪ್ರಭಾವದಿಂದ ಹೊರಬಂದು ನಿಮ್ಮದೇ ದಾರಿಯನ್ನು ಕಂಡುಕೊಂಡ ಹಂತ ಯಾವುದು?

ಯಾವುದೇ ವ್ಯಕ್ತಿಯ ಸಾರ್ವಜನಿಕ ವ್ಯಕ್ತಿತ್ವ ಮತ್ತು ಖಾಸಗಿ ಅಸ್ತಿತ್ವಗಳು ಬೇರೆಬೇರೆಯೇ ಇರುತ್ತವೆ. ನನ್ನ ತಂದೆ ಈ ಎರಡು ನೆಲೆಯಲ್ಲಿಯೂ ನನಗೆ ನಿಕಟವಾಗಿ ತಿಳಿದವರಾಗಿದ್ದರು. ಮನೆಯಲ್ಲಿ ಸಮೃದ್ಧವಾದ ಸಾಹಿತ್ಯಕ ವಾತಾವರಣವಿತ್ತು. ನನ್ನ ತಂದೆ ಹತ್ತಾರು ಸಂಘಟನೆಗಳಲ್ಲಿ ಕ್ರಿಯಾಶೀಲವಾಗಿದ್ದರು. ಇವೆಲ್ಲದರಲ್ಲಿ ನನ್ನ ಪಾಲುದಾರಿಕೆಯು ಸಹಜವಾದದ್ದಾಗಿತ್ತು. ಹಾಗಾಗಿ ಸಾಹಿತ್ಯ, ಸಾಹಿತಿಗಳ ಒಡನಾಟ, ವೈಚಾರಿಕವಾಗಿ ಚಿಂತಿಸುವುದು ಇತ್ಯಾದಿಗಳು ಹೊರಗಿನಿಂದ ಮಾಡುವ ಕ್ರಿಯೆಯಾಗಿರದೆ ನನ್ನ ಬದುಕಿನ ಭಾಗವಾಗಿದ್ದ ಪರಿಸರದಲ್ಲಿ ನಾನು ಬೆಳೆದೆ. ಇಷ್ಟೆಲ್ಲದರ ನಡುವೆ... ನನ್ನೊಳಗೆ ಮೌನದ ಕೋಶವೊಂದು ಸದಾ ಒಸರುತ್ತಿದೆಯೇನೋ ಅನ್ನಿಸುವಷ್ಟು ಅದರ ಇರುವಿಕೆ ನನಗೆ ಅನುಭವಕ್ಕೆ ಬರುತ್ತಿತ್ತು. ಆಗೆಲ್ಲ ನಾನು ನಮ್ಮ ಮನೆಯಲ್ಲಿದ್ದ ಪುಟ್ಟ ಅಟ್ಟದೊಳಗೆ ಅದೃಶ್ಯವಾಗಿ ಬಿಡುತ್ತಿದ್ದೆ. ಅಲ್ಲಿ ‘ಕೇವಲ ನನ್ನದು’ ಎನ್ನುವ ಮೌನ ಹುಟ್ಟಿಕೊಳ್ಳುತ್ತಿತ್ತು. ನನ್ನೊಳಗಿನ ‘ಕವಿ’ ಮೊಳೆತಿದ್ದು ಹೀಗಿರಬೇಕು... ಹಿಂತಿರುಗಿ ನೋಡಿದರೆ, ತಂದೆಯ ಪ್ರಭಾವದೊಳಗೆ ಇದ್ದುಕೊಂಡೇ ಹೀಗೆ ನನ್ನೊಳಗೊಂದು ಜಗತ್ತನ್ನು ನಾನು ಸೃಷ್ಟಿಸಿಕೊಂಡಿದ್ದೆ: ಇವೆರಡೂ ಏಕಕಾಲದಲ್ಲಿ ಜರುಗುತ್ತಿತ್ತು ಅನ್ನುವುದು ಕೂಡ ಈಗ ಯೋಚಿಸಿದರೆ ಸೋಜಿಗವೆನಿಸುತ್ತದೆ.

3. ನೀವು ಕವಿತೆ, ಕತೆ, ಕಾದಂಬರಿ, ಅನುವಾದ, ಸಂಪಾದನೆ ಹೀಗೆ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದ್ದೀರಿ. ಇವುಗಳಲ್ಲಿ ನಿಮಗೆ ಅತ್ಯಂತ ಸಹಜವಾದ ಅಭಿವ್ಯಕ್ತಿ ಯಾವುದು? ಕವಿತೆ ಬರೆಯುವ ಮನಸ್ಥಿತಿಗೂ, ಕಾದಂಬರಿ ಬರೆಯುವ ಮನಸ್ಥಿತಿಗೂ ಇರುವ ವ್ಯತ್ಯಾಸವೇನು?

ಪ್ರಕಾರಗಳಲ್ಲಿನ ಭೇದದಲ್ಲಿ ನನಗೆ ಆಸಕ್ತಿಯಿಲ್ಲ. ಬರೆಯುವಾಗ ನನ್ನ ಮನಸ್ಸು ಎಷ್ಟು ತೀವ್ರವಾಗಿ ಒಂದು ಅನುಭವಕ್ಕೆ ಒಡ್ಡಿಕೊಳ್ಳುತ್ತದೆ ಅನ್ನುವುದು ನಾನು ಬಳಸುವ ಭಾಷೆಯ ಸಹಜತೆಯನ್ನು, ಅದರ ಪಾರದರ್ಶಕತೆಯನ್ನು ಅವಲಂಬಿಸಿರುತ್ತದೆ. ಇದು ನನಗೆ ಮುಖ್ಯ. ಎಲ್ಲವನ್ನೂ ಒಳಗೊಳ್ಳುವ (ಇನ್ಕ್ಲೂಸಿವ್ನೆಸ್) ಕಾದಂಬರಿಯ ಗುಣವು ಕವಿತೆಯಿಂದ ಅದನ್ನು ಭಿನ್ನವಾಗಿಸುತ್ತದೆ. ಮತ್ತು, ಈ ಗುಣವೇ ಬರೆಯುವಾಗಿನ ಮನಸ್ಥಿತಿಯನ್ನೂ ಬೇರೆಯಾಗಿಸುತ್ತದೆ. ಕವಿತೆಯಂತಹ ಗದ್ಯ ಮತ್ತು ಗದ್ಯದ ಕಸುವು ಇರುವ ಕವಿತೆ ಎರಡೂ ನನ್ನ ಮಟ್ಟಿಗೆ ಭಿನ್ನ ಸಾಧ್ಯತೆಗಳಾಗಿವೆ...

4. ನಿಮ್ಮ ಇತ್ತೀಚಿನ ಕಾದಂಬರಿ ‘ಜೀವರತಿ’. ಈ ಶೀರ್ಷಿಕೆಯೇ ಬದುಕಿನ ಬಗ್ಗೆ ಒಂದು ಬಗೆಯ ತಾತ್ವಿಕ ಕುತೂಹಲವನ್ನು ಹುಟ್ಟಿಸುತ್ತದೆ. ಈ ಕಾದಂಬರಿಯ ಬೀಜ ನಿಮ್ಮಲ್ಲಿ ಮೊಳಕೆಯೊಡೆದದ್ದು ಯಾವಾಗ? ಇದರ ಮೂಲಕ ನೀವು ಓದುಗರೊಂದಿಗೆ ಹಂಚಿಕೊಳ್ಳಲು ಬಯಸಿದ್ದು ಏನು?

ನಾನು ಕಾದಂಬರಿಯೊಂದನ್ನು ಬರೆಯಬೇಕು ಅಥವಾ ಬರೆಯುತ್ತೇನೆ ಅನ್ನುವ ಯಾವ ಒಳಕುದಿತಗಳೂ ಇಲ್ಲದ ಕಾಲದಲ್ಲೇ ಇದರ ಒಂದು ಅಧ್ಯಾಯವು ನನ್ನ ದಿನಚರಿ ಪುಸ್ತಕದಲ್ಲಿ ಇದೆ. ಇದಾದ ಎಷ್ಟೋ ವರ್ಷಗಳ ನಂತರ ಮತ್ಯಾವುದೋ ಚಿತ್ರವೊಂದು ಮನಸ್ಸಿಗೆ ಬಂದು ಬರೆಸಿಕೊಂಡಿತು. ಇವು ಬಿಡಿಯಾಗಿ ಕತೆಯಂತೆಯೂ ಇರಲಿಲ್ಲ. ಆದರೆ ಈ ಬರಹದ ಒಳಗೆ ಏನೋ ಚಡಪಡಿಕೆ ಇದ್ದಂತಿತ್ತು ಮತ್ತು ಅವಕ್ಕೆ ತಮ್ಮನ್ನು ತಾವು ಮುಕ್ತಾಯಗೊಳಿಸಿಕೊಂಡು ಬಿಡುಗಡೆಗೊಳ್ಳಬೇಕು ಅನ್ನುವ ಇಚ್ಛೆಯೂ ಇದ್ದಂತೆ ನನಗೆ ಕಾಣಿಸಲಿಲ್ಲ. ಇದು ಹೀಗೇ ಬೆಳೆದು... ಒಂದು ಘಟನೆ ಮತ್ತೊಂದಕ್ಕೆ ತನ್ನಷ್ಟಕ್ಕೆ ತಾನು ಸಂವಾದ ಮಾಡುತ್ತ ಹೋಗಿ, ‘ಜೀವರತಿ’ಯಾಯಿತು. ಕತೆ, ಕವಿತೆ, ಪ್ರಬಂಧ ಇತ್ಯಾದಿ ಯಾವುದರಲ್ಲೂ, ಇಂತದ್ದನ್ನು/ನ್ನೇ ನಾನು ಹೇಳಬೇಕು ಎಂದು ಬರವಣಿಗೆಯ ಯಾವ ಹಂತದಲ್ಲಿಯೂ ಪೂರ್ವನಿರ್ಧರಿತವಾಗಿ ಹೋದದ್ದಿಲ್ಲ. ಆದರೆ, ನಾನು ಬದುಕಿದ ಲೋಕದ ಮನುಷ್ಯ ಸಂಬಂಧಗಳಲ್ಲಿ, ನಿಸರ್ಗದ ಜೊತೆಗಿನ ಮನುಷ್ಯನ ಒಡನಾಟದಲ್ಲಿ ಉಂಟಾಗಿರುವ ದೊಡ್ಡಪಲ್ಲಟವು ನನ್ನನ್ನು ಸದಾ ಬಾಧಿಸುತ್ತಿತ್ತು, ಈಗಲೂ ಬಾಧಿಸುತ್ತದೆ. ಈ ಭೂಮಿಗೆ ನಾವು ಮಾಡುತ್ತಿರುವ ಘಾಸಿಯ ಸ್ವರೂಪ, ಹಣ, ಸಂಪತ್ತು, ಅಧಿಕಾರ, ಇತರೆ ಭೌತಿಕ ಸುಖದ ಹಿಂದೆ ಓಡುತ್ತಿರುವ ಮನುಷ್ಯ ನಾಗರಿಕತೆಯು ಯಾವ ದುರಂತಕ್ಕೆ ತನ್ನನ್ನು ಒಡ್ಡಿಕೊಳ್ಳುತ್ತಿದೆ ಅನ್ನುವುದು ನನ್ನನ್ನು ಪ್ರತಿಕ್ಷಣ ಹಿಂಸಿಸುತ್ತದೆ... ಬಹುಶಃ ಇವೆಲ್ಲ ಸೇರಿಕೊಂಡು ಮನಸ್ಸಿನ ಕುದಿತದ ಬಿಂದುವೊಂದು ನನ್ನ ಕಾದಂಬರಿಯಲ್ಲಿ ಅಭಿವ್ಯಕ್ತಿಗೊಂಡಿದೆಯೆನ್ನಿಸುತ್ತದೆ.

5. ಕಾದಂಬರಿ ಬರೆಯುವಾಗ ಲೇಖಕನಿಗೆ ತನ್ನ ಪಾತ್ರಗಳ ಮೇಲೆ ನಿಯಂತ್ರಣ ಇರುತ್ತದೆಯೇ? ಅಥವಾ ಪಾತ್ರಗಳೇ ಲೇಖಕನನ್ನು ತಮ್ಮ ದಾರಿಯಲ್ಲಿ ಎಳೆದುಕೊಂಡು ಹೋಗುತ್ತವೆಯೇ? ‘ಜೀವರತಿ’ಯಲ್ಲಿ ನಿಮಗೆ ಇಂಥ ಅನಿರೀಕ್ಷಿತ ಅನುಭವಗಳಾಗಿವೆಯೇ?

ಬಹುಪಾಲು ಸಂದರ್ಭದಲ್ಲಿ ಪಾತ್ರಗಳೇ ನನ್ನನ್ನು ತಮ್ಮ ದಾರಿಯಲ್ಲಿ ಕರೆದೊಯ್ದಿವೆ. ಉದಾಹರಣೆಗೆ, ದೊರೆ ಮತ್ತು ನೀಲು ಆಗಷ್ಟೆ ಪ್ರೇಮದ ಸೆಳೆತದಲ್ಲಿ ಸಿಲುಕುತ್ತಿರುತ್ತಾರೆ. ಇವರಿಬ್ಬರನ್ನು ಮದುವೆ ಮಾಡಿಸಬೇಕು ಅಂದುಕೊಂಡು ನಾನು ಬರೆಯಲು ಹೊರಟವಳು, ಇದು ಸಾಧ್ಯವೇ ಆಗಲಿಲ್ಲ! ಕೊಮಾರಿ ಅನ್ನುವವನು ‘ದೊಡ್ಡಮನೆ’ಯನ್ನು ಮೊದಲ ಸಲ ನೋಡಿ ದಿಗ್ಭ್ರಮೆಗೊಂಡು ಮನೆ ಬಾಗಿಲಿಗೆ ಹೋಗಿ ನಿಲ್ಲುತ್ತಾನೆ. ಅವನು ಮನೆಯೊಳಗೆ ಹೋಗಬೇಕು ಅನ್ನುವುದು ನನ್ನ ಇಷ್ಟವಾಗಿತ್ತು. ನಾನು ಏನೇನು ತಿಣುಕಿದರೂ ಅವನನ್ನು ಮನೆಯೊಳಕ್ಕೆ ಕಳಿಸಲು ನನ್ನಿಂದಾಗಲಿಲ್ಲ. ಇಂತವು ಇನ್ನೂ ಇವೆ...

6. ನಿಮ್ಮ ಕವನ ಸಂಕಲನಗಳ ಹೆಸರುಗಳನ್ನು ಗಮನಿಸಿದರೆ ‘ಲಯ’, ‘ತಿಳಿಗೊಳ’, ‘ಕತ್ತಲೆಯ ಬೆಳಗು’, ‘ಯಕ್ಷಿಣಿ ಕನ್ನಡಿ’, ‘ಮಾಗಿಕಾಲದ ಸಾಲುಗಳು’ ಹೀಗೆ ಭಾಷೆಯಲ್ಲೇ ಒಂದು ಕಾವ್ಯಮಯ ಲೋಕ ಕಾಣಿಸುತ್ತದೆ. ಕವಿತೆಗೆ ಮೊದಲು ಬರುವುದು ಅನುಭವವೋ, ಭಾಷೆಯೋ, ಪ್ರತಿಮೆಯೋ? ಕವಿತೆ ಹುಟ್ಟುವ ಕ್ಷಣವನ್ನು ನೀವು ಹೇಗೆ ಗುರುತಿಸುತ್ತೀರಿ?

ಯಾವುದೋ ಒಂದು ಅನುಭವ ನನ್ನೊಳಗೆ ಕೆಲಕಾಲ ತಂಗಿ, ಅಲ್ಲೇ ಕುದ್ದು, ಎಂದೋ ಒಂದು ದಿನ ಪ್ರತಿಮೆಯ ಮೊಳಕೆಯೊಂದು ತಲೆ ಎತ್ತುತ್ತದೆ. ಹೀಗೆ ತಲೆ ಎತ್ತುವಾಗ ಅದು ಮಣ್ಣನ್ನು ಸೀಳಿಕೊಂಡು ತನ್ನ ತಲೆಯ ಮೇಲೆ ಭಾಷೆಯೆಂಬ ಮಣ್ಣಿನ ಟೋಪಿಯನ್ನೂ ಕೂರಿಸಿಕೊಂಡು ಬರುತ್ತದೆ! ಇದರಿಂದ ಅದೋ, ಅದರಿಂದ ಇದೋ ತಿಳಿಯಲಾರದ ಬಗೆಯಲ್ಲಿ ಒಡಬೆರೆತ ಸಂಬಂಧ ಇದು.

7. ನೀವು ಒಮ್ಮೆ ಕವಿತೆಯನ್ನು ಚಿಟ್ಟೆಗಳ ಸಮೂಹಕ್ಕೆ ಹೋಲಿಸಿದ್ದೀರಿ. ಒಂದು ಪದ ಮತ್ತೊಂದು ಪದವನ್ನು ಕರೆದು ತರುವ ಬೆಡಗೇ ಕವಿತೆ ಎಂದಿದ್ದೀರಿ. ಆದರೆ ಇವತ್ತು ಕವಿತೆ ಬರೆಯುವ ಅನೇಕರು ಮೊದಲೇ ಒಂದು ವಿಚಾರವನ್ನು ನಿರ್ಧರಿಸಿಕೊಂಡು ಅದಕ್ಕೆ ತಕ್ಕ ಭಾಷೆಯನ್ನು ಹುಡುಕುವಂತೆ ಕಾಣುತ್ತದೆ. ಕವಿತೆ ಪೂರ್ವನಿರ್ಧರಿತ ಆಲೋಚನೆಯ ಅಭಿವ್ಯಕ್ತಿಯಾಗಬೇಕೇ ಅಥವಾ ಅನಿರೀಕ್ಷಿತ ಅನುಭವದ ಶೋಧವಾಗಬೇಕೇ?

ಭಾಷೆಗೆ ತನ್ನದೇ ಕೈ, ಕಾಲು, ಹೊಟ್ಟೆ, ಕಣ್ಣು ಇತ್ಯಾದಿ ಅಂಗಗಳು ಮೂಡಿ, ಅದು ಒಂದು ಜೀವವಾಗಿ ಮಿಡಿಯುತ್ತದೆನ್ನುವ ಪ್ರಜ್ಞೆ ಕವಿಯಲ್ಲಿ ಇದ್ದಾಗ ನಮ್ಮೊಳಗೆ ಮಿಸುಕಲು ಹಂಬಲಿಸುತ್ತಿರುವ ಭಾವಕ್ಕೆ ಸಾರ್ಥಕತೆ ಒದಗುತ್ತದೆ. ಹೊರಗಿನ ಓದುಗರನ್ನು ಒಪ್ಪಿಸುವುದು, ಅವರಿಗೆ ಇಷ್ಟವಾಗುವಂತೆ ಬರೆಯುವುದನ್ನು ನಿಜವಾದ ಕವಿಗಳು ಯಾವತ್ತೂ ಮಾಡುವುದಿಲ್ಲ. ಸೃಷ್ಟಿಕ್ರಿಯೆಯೆನ್ನುವುದು ‘ಮಾಡುವುದೋ’ ಅಥವಾ ‘ಆಗುವುದೋ’ ಎಂಬ ಪ್ರಶ್ನೆ ನಮಗೆ ಬಂದಾಗ ಮಾತ್ರ ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ನನ್ನ ತಿಳಿವನ್ನು ಮೀರಿದ ಏನೋ ಈ ಲೋಕದಲ್ಲಿ ಇದೆ ಎಂಬುದು ಹೇಗೆ ತಾಯ್ತನದ ಸುಖವೋ, ಕವಿತೆ ಮತ್ತು ಎಲ್ಲ ಕಲೆಗಳ ಸುಖ ಕೂಡ ಪ್ರತಿ ವ್ಯಕ್ತಿಯ ಒಳಗಿರುವ ‘ತಿಳಿವನ್ನು ಮೀರಿದ’ ಈ ಸಂಗತಿ ಎನ್ನಬಹುದು.

8. ನಿಮ್ಮ ಕವಿತೆಗಳಲ್ಲಿ ಮಹಿಳಾ ಧೋರಣೆಯನ್ನು ಪ್ರಜ್ಞಾಪೂರ್ವಕವಾಗಿ ತೋರಿಸುವುದಿಲ್ಲ. ಮನುಷ್ಯತ್ವವಿದ್ದಲ್ಲಿ ಮಹಿಳೆಯೂ ಪುರುಷನೂ ಸಹಜವಾಗಿ ಇರುತ್ತಾರೆ ಎಂದು ಹೇಳಿದ್ದೀರಿ. ಆದರೆ ಮಹಿಳೆಯ ಬದುಕಿನ ಅನುಭವಗಳು ಪುರುಷರ ಅನುಭವಗಳಿಗಿಂತ ಭಿನ್ನವಾಗಿರುವ ಸಮಾಜದಲ್ಲಿ ಮಹಿಳಾ ಬರಹಗಾರ್ತಿಯೊಬ್ಬಳಿಗೆ ತನ್ನ ಲಿಂಗದ ಅನುಭವವನ್ನು ಮೀರಿ ಬರೆಯುವುದು ಸಾಧ್ಯವೇ?

‘ಮೀರುವಿಕೆ’ಯೇ ಸೃಜನಶೀಲತೆಯ ಮೂಲಭೂತ ಗುಣ. ‘ಮೀರಿ’ ಬರೆಯುವುದು ಖಂಡಿತ ಸಾಧ್ಯ. ಈ ಪ್ರಶ್ನೆಯನ್ನು ಗಂಡಸು-ಸಾಹಿತಿಗಳಿಗೆ ಯಾರಾದರೂ ಕೇಳುತ್ತಾರೆಯೇ? ಯಾಕೆ ಕೇಳುವುದಿಲ್ಲ- ಅನ್ನುವುದರಲ್ಲಿಯೇ ನಮ್ಮ ಧೋರಣೆ ತಿಳಿಯುತ್ತದೆ. ಸೃಜನಶೀಲತೆಯೆಂಬುದು ಗಂಡೂ ಅಲ್ಲ, ಹೆಣ್ಣೂ ಅಲ್ಲ, ಅದು ‘ನಡುವೆ ಸುಳಿವ ಆತ್ಮ’. ಸೃಜನಶೀಲ ಮನಸ್ಸಿಗೆ ಪರರ ಮನಸ್ಸನ್ನು ಪ್ರವೇಶಿಸುವ ಶಕ್ತಿಯಿರುತ್ತದೆ. ಬರವಣಿಗೆಯ ತಳಹದಿಯೆಂದರೆ ಉತ್ಕಟತೆ, ನಿಷ್ಠುರತೆ ಮತ್ತು ಪ್ರಾಮಾಣಿಕತೆ. ಈ ಅಂಶಗಳು ಗಂಡು, ಹೆಣ್ಣು ಇಬ್ಬರಿಗೂ ಒಂದೇ ಅಲ್ಲವೆ?

9. ನೀವು ಅನುವಾದವನ್ನು ಕೇವಲ ಭಾಷೆಯ ಬದಲಾವಣೆಯೆಂದು ನೋಡುವುದಿಲ್ಲ. ಅದು ಒಂದು ಸಂಸ್ಕೃತಿಯ ಎದುರು ಮತ್ತೊಂದು ಸಂಸ್ಕೃತಿಯನ್ನು ನಿಲ್ಲಿಸುವ ಪ್ರಕ್ರಿಯೆ ಎಂದಿದ್ದೀರಿ. ಹಾಗಾದರೆ ಅನುವಾದಕನಿಗೆ ಮೂಲಕೃತಿಯ ಭಾಷೆ ತಿಳಿದಿರುವುದಕ್ಕಿಂತಲೂ ಅದರ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವ ಸಾಮಥ್ಯರ ಮುಖ್ಯವೇ?

ಭಾಷೆಯ ಮೂಲಕವೇ ಸಾಂಸ್ಕೃತಿಕ ಮುಖಾಮುಖಿಯೂ ನಡೆಯುತ್ತಿರುತ್ತದೆ. ಅನುವಾದಕ/ಕಿಯ ಸಂವೇದನೆ ಎಲ್ಲಕ್ಕಿಂತ ಮುಖ್ಯ. ಈ ಸಂವೇದನೆಯು ಅನುಭವದ ಒಡಲಿನ ಜೊತೆಗೆ ಅದರ ಅಂತರಂಗವನ್ನೂ ಅರಿಯುತ್ತ, ಅನುವಾದದಲ್ಲಿ ಅದನ್ನು ಪುನಃ ನಿರ್ಮಿಸುತ್ತದೆ.

10. ನೆರೂಡ, ಟಾಲ್ಸ್ಟಾಯ್, ವೋಲೆ ಸೋಯಿಂಕಾ ಮುಂತಾದ ವಿಭಿನ್ನ ಸಾಹಿತ್ಯ ಪರಂಪರೆಗಳ ಕೃತಿಗಳನ್ನು ಕನ್ನಡಕ್ಕೆ ತಂದಿದ್ದೀರಿ. ಒಂದು ಕೃತಿಯನ್ನು ಅನುವಾದಕ್ಕೆ ಆಯ್ಕೆ ಮಾಡುವಾಗ ಅದರ ಸಾಹಿತ್ಯಿಕ ಮೌಲ್ಯ ಮುಖ್ಯವಾಗುತ್ತದೆಯೇ ಅಥವಾ ಕನ್ನಡದ ಓದುಗರಿಗೆ ಅದರಿಂದ ಹೊಸ ಅನುಭವ ಸಿಗುತ್ತದೆ ಎಂಬ ನಿರೀಕ್ಷೆಯೇ ಮುಖ್ಯವಾಗುತ್ತದೆಯೇ?

ಎರಡೂ ಮುಖ್ಯ. ಅನುವಾದದ ಹಿಂದೆ ಅನುವಾದಕರ ಅಂತರಂಗದ ಅಗತ್ಯ ಇರಬೇಕು, ಇರುತ್ತದೆ. ಇದು ಒಂದು ಬಗೆಯ ತಹತಹ ಮತ್ತು ಸಾಮಾಜಿಕ, ಸಾಹಿತ್ಯಕ ಅಗತ್ಯ. ಒಂದು ಸಾಹಿತ್ಯ ಕೃತಿಯು ನೀಡುವ ಜೀವನಾನುಭವ, ನನ್ನೊಳಗೆ ಆ ಅನುಭವಗಳು ಉಂಟುಮಾಡುವ ತಲ್ಲಣಗಳು, ನನ್ನನ್ನು ಅವು ಮಾನವೀಯವಾಗಿ ಇರಲು ಹೇಗೆ, ಏಕೆ ಒತ್ತಾಯಿಸುತ್ತವೆ ಅನ್ನುವುದು ಮುಖ್ಯ. ಒಂದು ಕೃತಿಯ ಜೀವನಮೌಲ್ಯದ ಒಳಗೆ ಅದರ ಸಾಹಿತ್ಯಿಕ ಮೌಲ್ಯವೂ ಅಡಗಿರುತ್ತದೆ.

11. ಬೃಹತ್ ಕೃತಿಯನ್ನು ಅನುವಾದಿಸುವುದು ಒಂದು ರೀತಿಯ ದೀರ್ಘಕಾಲದ ಸಹವಾಸ. ಅಂಥ ಕೃತಿಯನ್ನು ಅನುವಾದಿಸಿದ ನಂತರ ಮೂಲಕ ಲೇಖಕನಿಂದ ಹೊರಬರುವುದು ಕಷ್ಟವೇ? ಅನುವಾದಕಿಯಾಗಿ ನೀವು ಬದಲಾಗುತ್ತೀರಾ ಅಥವಾ ಆ ಕೃತಿ ನಿಮ್ಮೊಳಗೆ ಬದಲಾಗುತ್ತದೆಯೇ?

... ಇವೆಲ್ಲವೂ ಒಂದು ಹಂತದವರೆಗೆ ನಿಜವೇ. ಕೃತಿಯೊಂದು ತನ್ನ ಸಂಕೀರ್ಣತೆಯಿಂದ ನಮ್ಮನ್ನು ಆವರಿಸಿದಾಗ ಅದರಿಂದ ಯಾಕಾದರೂ ಹೊರಬರಬೇಕು? ಅದು ನಮ್ಮೊಳಗೆ ತಂಗಬೇಕು, ಓದಿನ ಸುಖವನ್ನು ಮೆಲುಕು ಹಾಕುತ್ತಿರಬೇಕು, ಅದು ನಮ್ಮನ್ನು ಕೆಣಕಬೇಕು, ಸಂವಾದಕ್ಕೆ ಆಹ್ವಾನಿಸಬೇಕು, ಅದರೊಟ್ಟಿಗೆ ನಾವು ಅರಳಬೇಕು, ಆಗ ಕೃತಿಯೂ ನಮ್ಮೊಟ್ಟಿಗೆ ಬೆಳೆಯುತ್ತದೆ. ಇದೊಂದು ದೀರ್ಘ ಪ್ರಕ್ರಿಯೆ. ಇವೆಲ್ಲ ಒಟ್ಟಾಗಿ ನನ್ನನ್ನು ಬದಲಿಸುತ್ತದೆ ಮತ್ತು ನಿಜವಾದ ಕೃತಿಯೊಂದು ಹಾಗೆ ನಮ್ಮನ್ನು ಬದಲಿಸಬೇಕು. ಹೀಗೆ ನಮ್ಮನ್ನು ಅದು ಬದಲಿಸಿದಾಗ, ಕೃತಿಯೂ ನಮ್ಮೊಳಗೆ ಶಿಫ್ಟ ಆಗುತ್ತದೆ, ಆಗುತ್ತಿರುತ್ತದೆ.

12. ಯು.ಆರ್.ಅನಂತಮೂರ್ತಿಯವರ ಆತ್ಮಕತೆ ‘ಸುರಗಿ’ಯ ನಿರೂಪಣೆ ಮತ್ತು ಸಂಯೋಜನೆ ಮಾಡಿದ್ದೀರಿ. ಒಬ್ಬ ಮಹತ್ವದ ಲೇಖಕ ತನ್ನ ಬದುಕನ್ನು ತಾನೇ ಹೇಳಿಕೊಂಡಾಗ, ಅದನ್ನು ಮತ್ತೊಬ್ಬರು ನಿರೂಪಿಸುವುದು ವಿಶೇಷ ಜವಾಬ್ದಾರಿ. ಅವರ ಬದುಕಿನ ಯಾವ ಮುಖ ನಿಮಗೆ ಅತ್ಯಂತ ಕುತೂಹಲ ಹುಟ್ಟಿಸಿತು? ಅನಂತಮೂರ್ತಿಯವರನ್ನು ಓದುವುದಕ್ಕೂ ಅವರ ಬದುಕಿನ ನಿರೂಪಣೆಯಲ್ಲಿ ತೊಡಗುವುದಕ್ಕೂ ಏನು ವ್ಯತ್ಯಾಸವಿತ್ತು?

‘ಸುರಗಿ’ಯ ಕೆಲಸದ ಮೂಲಕ ನಾನು ಕಲಿತದ್ದು ಅಪಾರ. ಇದನ್ನು ಮಾಡುವಾಗಿನ ಕಾಲದಲ್ಲಿ ಅನಂತಮೂರ್ತಿಯವರ ಜೊತೆಗಿನ ಕಾವ್ಯದ ಕುರಿತ ಮಾತುಕತೆ, ಚರ್ಚೆಯ ಮೂಲಕ ಎಷ್ಟೊಂದು ಒಳನೋಟಗಳು ನನಗೆ ದಕ್ಕಿದವು ಎಂಬುದನ್ನು ನೆನೆದರೆ ನನ್ನ ಮನಸ್ಸು ತುಂಬಿ ಬರುತ್ತದೆ... ಒಂದು ವಿಷಯವನ್ನು ಅವರು ಚಿಂತನಾಕ್ರಮವಾಗಿ ಬೆಳೆಸುತ್ತಿದ್ದ ರೀತಿ, ಅದನ್ನು ಹಲವು ಕೋನಗಳಿಂದ ಶೋಧಿಸುತ್ತಿದ್ದ ಬಗೆ, ಅವೆಲ್ಲವನ್ನೂ ಅವರು ಒಟ್ಟಿಗೆ ತರುತ್ತಿದ್ದ ಅಂದರೆ, ಕನೆಕ್ಟ ಮಾಡುತ್ತಿದ್ದ ಕ್ರಮವನ್ನು ಅವರನ್ನು ನೋಡುತ್ತ ಕಲಿತಿದ್ದೇನೆ. ಅನಂತಮೂರ್ತಿ ಅವರಿಗೆ ಆಗ ಡಯಾಲಿಸಿಸ್ ನಡೆಯುತ್ತಿತ್ತು. ಅದರ ನಡುವೆ ಅವರ ಮನಸ್ಸು ಸಿದ್ಧವಿದ್ದಾಗ ನಾನು ಅವರು ಹೇಳಿದ್ದನ್ನು ಬರೆದುಕೊಳ್ಳಬೇಕಿತ್ತು, ಅಥವಾ ರೆಕಾರ್ಡ್ ಮಾಡಬೇಕಿತ್ತು. ತಮ್ಮ ದೇಹದ ನೋವು ದೊಡ್ಡದು ಎನ್ನುವಂತೆ ಅವರು ಒಂದು ದಿನವೂ ನಡೆದುಕೊಳ್ಳಲಿಲ್ಲ, ಹೀಗಾಯಿತಲ್ಲ ಎಂದು ಕೊರಗಲಿಲ್ಲ. ನಾವೆಲ್ಲ ನಿತ್ಯವೂ ಗುಣಮುಖವಾಗಬೇಕಾದ (ದೈಹಿಕವಾಗಿ ಮತ್ತು ಮಾನಸಿಕವಾಗಿ) ಒಂದು ಸ್ಥಿತಿಯನ್ನು ಅವರ ಬದುಕು ನನಗೆ ಕಲಿಸಿದೆ. ಹಾಗೂ, ಗಂಡು-ಹೆಣ್ಣಿನ ಸಂಬಂಧದ ಕುರಿತು ಅವರು ತಳೆದ ನಿಲುವು, ಅದನ್ನವರು ಪರಿಭಾವಿಸಿದ ರೀತಿ ನನಗೆ ಅವರನ್ನು ಹೊಸಬಗೆಯಲ್ಲಿ ತೋರಿಸಿದೆ. ಒಬ್ಬ ಮಹತ್ವದ ಲೇಖಕನನ್ನು ಹೊರಗಿನಿಂದ ಓದುವುದು ಬೇರೆ, ಅವರ ಬರಹವನ್ನು ರೂಪಿಸಿದ ಬದುಕಿನ ಮೂಲಕ ಅರಿಯುತ್ತ ಹೊಸದಾಗಿ ಮತ್ತೆ ಅವರ ಬರಹಗಳನ್ನು ಕಂಡುಕೊಳ್ಳುವ ರೀತಿ ಬೇರೆ. ಈ ಶಿಫ್ಟ ಅನ್ನು ‘ಸುರಗಿ’ಯ ನಿರೂಪಣೆಯ ಕೆಲಸ ನನಗೆ ಕಲಿಸಿ ಕೊಟ್ಟಿದೆ.

13. ಕನ್ನಡದಲ್ಲಿ ಪುಸ್ತಕಗಳ ಪ್ರಕಟಣೆ ಹೆಚ್ಚುತ್ತಿದೆ, ಆದರೆ ಅದಕ್ಕೆ ತಕ್ಕಂತೆ ಭಾಷೆಯ ಲಯಗಳು, ರೂಪಕಗಳು ಸೃಷ್ಟಿಯಾಗುತ್ತಿಲ್ಲ ಎಂದು ನೀವು ಹಿಂದೆ ಅಭಿಪ್ರಾಯಪಟ್ಟಿದ್ದೀರಿ. ಕನ್ನಡದ ಇವತ್ತಿನ ಬರವಣಿಗೆಯಲ್ಲಿ ನಿಮಗೆ ಕಾಣುತ್ತಿರುವ ದೊಡ್ಡ ಕೊರತೆ ಯಾವುದು? ನಾವು ಹೆಚ್ಚು ಬರೆಯುತ್ತಿದ್ದೇವೆಯೇ ಹೊರತು ಹೆಚ್ಚು ಓದುತ್ತಿಲ್ಲವೇ?

ಇವತ್ತಿನ ಕಾಲದ ಸಾಹಿತ್ಯದ ಓದುಗ ಮತ್ತು ಲೇಖಕ/ಕಿ ಇಬ್ಬರೂ ಸಾಮಾಜಿಕ ಜಾಲತಾಣಗಳ ಮೂಲಕ ಬೇರೆಬೇರೆ ‘ಭಾಷೆ’ಗಳ ಜೊತೆ ನೇರವಾಗಿ ಸಂಬಂಧ ಹೊಂದಿದ್ದಾರೆ. ಇದರಿಂದ ವಿಚಿತ್ರ ಸಂಕೀರ್ಣತೆಯು ಸೃಷ್ಟಿಯಾಗಿದೆ. ಇವತ್ತಿನ ಲೇಖಕ/ಕಿಯ ‘ಪರಂಪರೆ’ ಅನ್ನುವುದು ‘ಕನ್ನಡ ಪರಂಪರೆ’ ಮಾತ್ರ ಅಲ್ಲ ಅನ್ನುವುದು ಒಂದರ್ಥದಲ್ಲಿ ಸಕಾರಾತ್ಮಕ. ಆದರೆ ಇದೇ ಹೊತ್ತಿಗೆ, ಬರೆಯುವವರಲ್ಲಿ ಮಾತೃಭಾಷೆಯ ಪದಸಂಪತ್ತು ಬಹುಪಾಲು ನಶಿಸಿ ಹೋಗಿದೆ ಅನ್ನುವುದು ನಕಾರಾತ್ಮಕ. ಯಾಕೆಂದರೆ, ಆಧುನಿಕ ತಂತ್ರಜ್ಞಾನವು ನಮ್ಮ ಬದುಕನ್ನು ಇನ್ನಿಲ್ಲದಂತೆ ಆಪೋಶಿಸುತ್ತಿದೆ. ಸಾಹಿತ್ಯವು ಇದಕ್ಕೆ ಹೊರತಲ್ಲ. ಗಳಿಗೆಗೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಅಡ್ಡಾಡುತ್ತ, ನಿಗ್ರಹ ಗುಣವನ್ನು ಕಳೆದುಕೊಂಡ ನಮ್ಮ ಕಾಲದ ರಾಜಕೀಯ ಭಾಷೆಯನ್ನು ನಿತ್ಯವೂ ಒಳಗೊಳ್ಳುತ್ತ, ಟಿವಿ ಸೀರಿಯಲ್ ಇತ್ಯಾದಿಗಳಲ್ಲಿ ಬಳಸಲಾಗುವ ಭಾಷೆಯನ್ನು ನೋಡುತ್ತ ಕುಳಿತರೆ ಹೊಸ ಭಾಷೆ ಸೃಷ್ಟಿಯಾಗಲು ಹೇಗೆ ತಾನೆ ಸಾಧ್ಯ? ಇಂತಹ ವಾತಾವರಣದಲ್ಲಿ ನಮ್ಮ ಅನುಭವಗಳು, ಆ ಅನುಭವಕ್ಕೆ ಒದಗಿ ಬರಬೇಕಾದ ಪದಗಳ ನಡುವಿನ ಸಂಪರ್ಕ ತುಂಡರಿಸುತ್ತ ಹೋಗುತ್ತದೆ. ಈ ವಿಷಮಸ್ಥಿತಿಯಲ್ಲಿ ಇವತ್ತಿನ ಕವಿತೆ/ಸಾಹಿತ್ಯ ತೊಳಲಾಡುತ್ತಿದೆ. ಒಂದು ನಾಡಿನ ರಾಜಕೀಯಕ್ಕೂ, ಅಲ್ಲಿನ ಕಾವ್ಯಕ್ಕೂ ಹತ್ತಿರದ ಸಂಬಂಧವಿದೆ ಎನ್ನುವ ಅರಿವು ಮತ್ತು ತಂತ್ರಜ್ಞಾನವು ಕವಿತೆಯ ಈ ಅಭಿವ್ಯಕ್ತಿಗೆ ತೊಂದರೆ ಮಾಡಿದೆ ಎನ್ನುವ ಪ್ರಜ್ಞೆ ಇವತ್ತಿನ ಕವಿಗಳಿಗೆ ಅಗತ್ಯ. ನಾವು ಹೆಚ್ಚು ಬರೆಯುತ್ತಿದ್ದೇವೆ ಯಾಕೆಂದರೆ ಹೆಚ್ಚು ಓದುತ್ತಿಲ್ಲ ಅದಕ್ಕೆ!

14. ಇಂಗ್ಲಿಷ್ ಸಾಹಿತ್ಯದಲ್ಲಿ ಉನ್ನತ ಶಿಕ್ಷಣ ಪಡೆದಿದ್ದೀರಿ. ಈ ಹಿನ್ನೆಲೆ ಕನ್ನಡವನ್ನು ನೋಡುವ ನಿಮ್ಮ ದೃಷ್ಟಿಯನ್ನು ವಿಸ್ತರಿಸಿದೆಯೇ? ಬೇರೆ ಭಾಷೆಗಳ ಸಾಹಿತ್ಯವನ್ನು ಓದಿದಾಗ ಕನ್ನಡದ ಸಾಧ್ಯತೆಗಳ ಬಗ್ಗೆ ಹೆಚ್ಚು ಹೆಮ್ಮೆ ಅನಿಸುತ್ತದೆಯೇ ಅಥವಾ ಅದರ ಮಿತಿಗಳ ಬಗ್ಗೆ ಹೆಚ್ಚು ಆತಂಕವಾಗುತ್ತದೆಯೇ?

ಇಂಗ್ಲಿಷ್ ಸಾಹಿತ್ಯದ ಮತ್ತು ಅದರ ಮೂಲಕ ಇತರ ಭಾಷೆಗಳ ಸಾಹಿತ್ಯದ ಓದು ಖಂಡಿತವಾಗಿ ನನ್ನ ಲೋಕದೃಷ್ಟಿಯನ್ನು ವಿಸ್ತರಿಸಿದೆ. ಕನ್ನಡದ ಶ್ರೀಮಂತ ಸಾಹಿತ್ಯ ಪರಂಪರೆಯ ಬಗ್ಗೆ, ಭಾಷೆಯ ಸಾಧ್ಯತೆ ಬಗೆಗೆ ನನ್ನಲ್ಲಿ ಯಾವತ್ತೂ ವಿಸ್ಮಯವಿದೆ. ಈ ಪರಂಪರೆಯನ್ನು ಅರಿಯುವ, ಅಲ್ಲಿಂದ ನಮ್ಮ ಅಭಿವ್ಯಕ್ತಿಯ ಮುಂಚಾಚುಗಳನ್ನು ಬೆಳೆಸುವ ಕುರಿತು ನಾವು ಇನ್ನೂ ಅರಿಯಬೇಕಿದೆ. ಇದನ್ನು ಶೋಧನೆ ಮಾಡದೆ ಇರುವುದು ಕೂಡ ಈ ಹೊತ್ತಿನ ಏಕಾಕಾರದ ಭಾಷಾಬಳಕೆಯ ಹಿಂದಿನ ಕಾರಣವಿರಬಹುದು. ಯಾವುದೇ ಭಾಷೆಯ ಜೀವಾಳ ಅದರ ಪದಸಂಪತ್ತು. ಅದು ಕೃಶವಾದಾಗ ಭಾಷೆಯ ಭಾವಕೋಶ ಕೂಡ ನಾಶವಾಗುತ್ತದೆ, ಆಗ ಬೇರೆಬೇರೆ ಲಯ ವಿನ್ಯಾಸಗಳು ಸೃಷ್ಟಿ ಆಗುವ ಸಾಧ್ಯತೆಯೂ ಕಡಿಮೆಯಾಗುತ್ತ ಹೋಗುತ್ತದೆ. ಈ ಮಿತಿಯನ್ನು ಗೆದ್ದುಕೊಳ್ಳಬೇಕು... ಆತಂಕ ಅನಗತ್ಯ. ಕನ್ನಡವನ್ನು ಕನ್ನಡದಿಂದಲೇ ಹಿಗ್ಗಿಸಬೇಕು.

15. ಇಷ್ಟು ವರ್ಷಗಳ ಸಾಹಿತ್ಯ ಪಯಣದಲ್ಲಿ ಕವಿತೆ, ಕತೆ, ಕಾದಂಬರಿ, ಅನುವಾದ ಹೀಗೆ ಹಲವು ದಾರಿಗಳಲ್ಲಿ ನಡೆದಿದ್ದೀರಿ. ಈಗ ಹಿಂದಿರುಗಿ ನೋಡಿದಾಗ ಇನ್ನೂ ನಿಮ್ಮನ್ನು ಕಾಡುತ್ತಿರುವ, ಬರೆಯಲೇಬೇಕೆಂದು ಅನಿಸುತ್ತಿರುವ ವಿಷಯ ಯಾವುದು? ನಿಮ್ಮೊಳಗೆ ಇನ್ನೂ ಬರೆಯದೆ ಉಳಿದಿರುವ ತೇಜಶ್ರೀ ಯಾರು?

ನನ್ನೊಳಗೆ ಇನ್ನೂ ಹಲವು ತೇಜಶ್ರೀಯರಿದ್ದಾರೆ... ಹಿಂತಿರುಗಿ ನೋಡಿದರೆ... ಎಷ್ಟೋಂ...ದು ಕಾಲ ಕಳೆದು ಹೋಯಿತು, ಇನ್ನೂ ಎಷ್ಟೊಂದು ಹೇಳುವುದಿದೆ ಅನ್ನಿಸುತ್ತದೆ...

16. ಸಾಹಿತ್ಯ ಲೋಕದಲ್ಲಿ ಕಾಣುವ ಆತುರ, ಹಪಾಪಹಿ, ಪ್ರಕಟಿಸುವ ಹುಮ್ಮಸ್ಸು, ಪ್ರಚಾರದ ಹುರುಪು, ಟಾಪ್ಟೆನ್ ಸಡಗರ- ಇವೆಲ್ಲವನ್ನೂ ಒಂದು ವರ್ಗ ಬಹಳ ಹಿಂದಿನಿಂದಲೂ ಕಡೆಗಣ್ಣಿನಿಂದ ನೋಡುತ್ತಾ ಬಂದಿದೆ. ಈ ಅನುಕೂಲಗಳೆಲ್ಲ ನಗರ ಪ್ರದೇಶದ ಲೇಖಕರಿಗೆ ಮಾತ್ರ ಸಿಗುತ್ತಿದೆ ಎಂಬ ಆರೋಪವೂ ಇದೆ. ನಿಮ್ಮ ಪ್ರಕಾರ ಲೇಖಕರಿಗೆ ಇವೆಲ್ಲ ಬೇಕಾ? ಬೇಡ ಎಂದರೆ ಬುಕರ್ ಅವಾರ್ಡ್ ಮುಂತಾದ ಪ್ರಶಸ್ತಿಗಳ ನಂತರ ಸಿಗುವ ಲೈಮ್ಲೈಟ್ ಯಾವ ಥರದ್ದು?

ಇವೆಲ್ಲ ಲೋಕದಲ್ಲಿ ಇರುವಂತವೇ, ನಾವು ಇವಕ್ಕೆಲ್ಲ ಪ್ರಜ್ಞಾಪೂರ್ವಕವಾಗಿ ಪ್ರತಿಕ್ರಿಯಿಸಿದಷ್ಟೂ ಅಂತರಂಗದಲ್ಲಿ ಟೊಳ್ಳಾಗುತ್ತ ಹೋಗುತ್ತೇವೆ. ಸಾಹಿತಿಗೆ ರಾಜಕೀಯ ಗೌಣವಾಗಬೇಕು, ಆದರೆ ರಾಜಕಾರಣದಲ್ಲಿ ಆಸಕ್ತಿ, ತಿಳಿವಳಿಕೆ ಇರಬೇಕು. ಲಜ್ಜೆ ಅನ್ನುವುದು ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವ ಮುಖ್ಯ ಸಂಗತಿ. ಹೀಗೆ ಯಾವಯಾವುದೋ ನೆಪದಲ್ಲಿ/ಹೆಸರಿನಲ್ಲಿ ಅದನ್ನು ಕಳೆದುಕೊಳ್ಳುತ್ತ ಹೋದ ಹಾಗೆ ನಮ್ಮನ್ನು ನಾವು ನಿಷ್ಠುರವಾಗಿ, ಪ್ರಾಮಾಣಿಕವಾಗಿ ದಿಟ್ಟಿಸಿ ನೋಡಿಕೊಳ್ಳುವುದು ಸಾಧ್ಯವಿಲ್ಲ. ಬದುಕು ಮುಖ್ಯ, ಸಾಹಿತ್ಯ ಆಮೇಲೆ. ಇವೆಲ್ಲಕ್ಕೂ, ನಮ್ಮ ಬದುಕಿಗೂ ಸಂಬಂಧವಿದೆ ಅಲ್ಲವೆ? ಯಾವುದೇ ಪ್ರಶಸ್ತಿ, ಗೌರವವೂ ನಮ್ಮ ಪ್ರತಿಭೆಯನ್ನು ಯಾರೋ ಗುರುತಿಸಿದ್ದಾರೆ ಅನ್ನುವುದರ ಸಣ್ಣ ಕುರುಹು ಅಷ್ಟೆ, ಅದೇ ಎಲ್ಲವೂ ಅಲ್ಲ. ಮತ್ತು, ಒಂದು ಪ್ರಶಸ್ತಿಯು ನಮಗೆ ಒದಗಿಸುವ ‘ಲೈಮ್ಲೈಟ್’ ಅನ್ನುವುದು ನನ್ನ ಮಾತಿಗೆ ದಕ್ಕುವ ಜವಾಬ್ದಾರಿಯನ್ನು ಪ್ರತಿನಿಧಿಸುತ್ತದೆ ಎಂಬುದು ನನ್ನ ನಂಬಿಕೆ. ‘ನಾನು’ ಅನ್ನುವುದು ‘ನಾವು’ ಆಗಬೇಕಾಗಿ ಪರಿವರ್ತನೆ ಆಗಬೇಕಾದ ಜವಾಬ್ದಾರಿ ಅದು. ಅಲ್ಲಿ ನನ್ನ ಭಾಷೆ, ನನ್ನ ಸಾಹಿತ್ಯ ಪರಂಪರೆಯ ಪ್ರತಿನಿಧೀಕರಣ ಇರಬೇಕು. ಎಷ್ಟೇ ದೊಡ್ಡ ಪ್ರಶಸ್ತಿಯನ್ನು ಪಡೆದರೂ ನಾವಾಡುವ ಮಾತು ಬದುಕಿನ ಆಳ ಸತ್ಯಗಳ ಶೋಧನೆಯಾಗದೆ, ಹಲವು ಮನಸ್ಸುಗಳ ಪ್ರತೀಕವಾಗದೆ ಹೋದರೆ ಅಂತಹ ಪ್ರಶಸ್ತಿ, ಗೌರವಕ್ಕೆ ಯಾವ ಬೆಲೆಯೂ ಇರಲಾರದು, ಲೈಮ್ಲೈಟ್ ಕಳೆದು ಹೋದ ನಂತರ ವ್ಯಕ್ತಿ-ಮಾತು ಎರಡೂ ಮರೆತು ಹೋಗುತ್ತವೆ.

PREV
Read more Articles on
click me!

Recommended Stories

ನೂರಾರು ಕಲಾವಿದರಿಗೆ ಬದುಕು ಕೊಟ್ಟ ಆ ಕಲಾಸೌಧ ನೋಡಿದ್ರೆ ಈಗ ಕಣ್ಣೀರು ಬರುತ್ತೆ: ಆಗಿದ್ದೇನು?
ದೂರಾದ ಆತಂಕ: ಅಗ್ನಿವೀರರಿಗೆ ಹೆಚ್ಚುವರಿ ಅವಕಾಶ