ರಂಗಭೂಮಿ ಬದಲಾಗುತ್ತಿದೆ, ಹೊಸ ಯೋಚನೆ ಜೊತೆ ಹಣವೂ ಹುಟ್ಟುತ್ತಿದೆ: ರಾಜೇಶ್‌ ನಟರಂಗ

Published : Sep 06, 2026, 07:53 AM IST
Rajesh Nataranga

ಸಾರಾಂಶ

ನಟ ರಾಜೇಶ್ ನಟರಂಗ ಅವರು ಸುಮಾರು 20 ವರ್ಷಗಳ ನಂತರ 'ಮಳೆ ನಿಲ್ಲುವವರೆಗೆ' ನಾಟಕದ ಮೂಲಕ ರಂಗಭೂಮಿಗೆ ಮರಳಿದ್ದಾರೆ. ಶರತ್ ಪರ್ವತವಾಣಿ ನಿರ್ದೇಶನದ ಈ ನಾಟಕವು, ನಿವೃತ್ತ ನ್ಯಾಯಾಂಗದ ಅಧಿಕಾರಿಗಳು ದಾರಿ ತಪ್ಪಿ ಬಂದವರೊಂದಿಗೆ ಆಡುವ ಒಂದು ಆಟವು ಹೇಗೆ ಗಂಭೀರ ತಿರುವು ಪಡೆಯುತ್ತದೆ ಎಂಬುದನ್ನು ವಿವರಿಸುತ್ತದೆ.

ಪ್ರಿಯಾ ಕೆರ್ವಾಶೆ

‘ನಾವು ನಮ್ಮ ಕೆಲಸದಲ್ಲಿದ್ದಾಗಲೂ ಇಷ್ಟು ಚುರುಕಾಗಿರಲಿಲ್ಲ ಅನಿಸುತ್ತೆ. ಹೊರಗಿನ ಪ್ರಪಂಚದ ಕೋರ್ಟ್‌ಗಳಲ್ಲಿ ನಮ್ಮ ತಲೆ ಕುಟ್ಕೊಂಡು ಕುಟ್ಕೊಂಡು ನ್ಯಾಯ ಅನ್ನೋದನ್ನ ಈಗ ಇನ್‌ ಇಟ್ಸ್‌ ಪ್ಯೂರೆಸ್ಟ್ ಫಾರ್ಮ್‌ ಅಭ್ಯಾಸ ಮಾಡ್ತಾ ಇದ್ದೀವಿ.

ಇದು ನನಗೊಬ್ಬನಿಗೇ ಹೊಳೆದ ಯೋಚನೆ ಅಲ್ಲ, ಎಲ್ರಿಗೂ ಒಟ್ಟಿಗೆ ಹೊಳೀತು ಅನ್ನಿ, ಬೇಕಾದ್ರೆ ಮಹಿಮೆ ಅನ್ನಿ. ಯಾಕೆಂದರೆ ನಮಗೆ ಮಾಡಲಿಕ್ಕೆ ಬೇರೆ ಯಾವ ಕೆಲಸನೂ ಇರಲಿಲ್ಲ. ಉದ್ದೇಶ ಅಂತೂ ಮೊದಲೇ ಇರಲಿಲ್ಲ. ನಮ್ಮ ಮನಸ್ಸು ಹೇಗೋ ಮೈಯ್ಯೂ ಹಾಗೇ ಒಳಗಡೆಯಿಂದ ಕುಸೀಲಿಕ್ಕೆ ಶುರು ಆಗಿತ್ತು. ಸೋಂಬೇರಿತನ ನಮ್ಮನ್ನ ತಿಂದುಹಾಕ್ತ ಇತ್ತು..’

ರಾಜೇಶ್‌ ನಟರಂಗ ಶೂನ್ಯದಲ್ಲಿ ದೃಷ್ಟಿನೆಟ್ಟು ಅಂತರಂಗಕ್ಕೆ ಟಾರ್ಚ್‌ಲೈಟ್‌ ಬಿಡುವ ರೀತಿ ಮಾತನಾಡಿದರು. ಸದ್ಯಕ್ಕೆ ಅವರ ಮಾತು ಇಲ್ಲಿಗೆ ನಿಂತಿದೆ. ಸೆಪ್ಟೆಂಬರ್‌ 17ರಂದು ಸಂಜೆ 7.30ಕ್ಕೆ ಮಲ್ಲೇಶ್ವರಂ ಹತ್ತಿರ ಇರುವ ಚೌಡಯ್ಯ ಮೆಮೋರಿಯಲ್‌ ಹಾಲ್‌ಗೆ ಹೋದರೆ ಪೂರ್ತಿಯಾಗಿ ಕೇಳಬಹುದು. ಅವರ ನಟನೆಯನ್ನೂ ಕಣ್ತುಂಬಿಕೊಳ್ಳಬಹುದು.

ಸಿನಿಮಾ, ಸೀರಿಯಲ್‌ ಅಂತ ಬ್ಯುಸಿಯಾಗಿದ್ದ ರಾಜೇಶ್‌ ನಟರಂಗ ತನ್ನ ಮೂಲಮನೆಯಾದ ರಂಗಭೂಮಿಗೆ ಮರಳಿದ್ದಾರೆ. ಸುಮಾರು 20 ವರ್ಷಗಳ ಬಳಿಕ ‘ಮಳೆ ನಿಲ್ಲುವವರೆಗೆ’ ಎಂಬ ನಾಟಕದಲ್ಲಿ ಅಭಿನಯಿಸುತ್ತಿದ್ದಾರೆ. ಹಿರಿಯ ನಾಟಕಕಾರ ಪರ್ವತವಾಣಿ ಅವರ ಮೊಮ್ಮಗ ಐಟಿ ಹಿನ್ನೆಲೆಯ ಶರತ್‌ ಪರ್ವತವಾಣಿ ಈ ನಾಟಕವನ್ನು ನಿರ್ದೇಶನ ಮಾಡಿದ್ದಾರೆ.

ರಭಸದ ಮಳೆ ಸುರಿಯುತ್ತಿದ್ದ ಒಂದು ಸಂಜೆಯಲ್ಲಿ ರಾಜೇಶ್‌ ಅವರು ನಾಟಕದ ಬಗ್ಗೆ, ಕಾಲೇಜು ದಿನಗಳ ಬಗ್ಗೆ, ಏಕತಾನತೆಯಿಂದ ಹೊರಬರುವ ಯೋಚನೆಗಳ ಬಗ್ಗೆ ಮಾತನಾಡಿದರು. ಅವರ ಮಾತುಗಳು ಇಲ್ಲಿವೆ.

***********

- ಬಹಳ ದಿವಸ ಆಯ್ತು ನಾಟಕ ಮಾಡಿ. ಮತ್ತೆ ನಾಟಕದ ಪಾತ್ರವಾಗಿ ಸ್ಟೇಜ್‌ ಹತ್ತಬೇಕು ಅಂತ ಆಗಾಗ ಅನ್ನಿಸುತ್ತಿತ್ತು. 1994-95ರ ಹೊತ್ತಿಗೆ ‘ಮಳೆ ನಿಲ್ಲುವವರೆಗೆ’ ನಾಟಕ ಮಾಡಿದ್ದೆವು. ಆಗ ನಾನು ಬೇರೆ ಪಾತ್ರದಲ್ಲಿ ನಟಿಸಿದ್ದೆ. ಇದು ಟೆಲಿಫಿಲಂ ಆಗಿತ್ತು. ಅಲ್ಲೊಂದು ಪಾತ್ರದಲ್ಲಿ ನಟಿಸಿದ್ದೆ. ಈಗ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಪಾತ್ರದಲ್ಲಿ ನಟಿಸುತ್ತಿದ್ದೇನೆ.

- ಈ ನಾಟಕದ ಮೂಲ ಜರ್ಮನ್‌ ಕಾದಂಬರಿ ‘ಎ ಡೇಂಜರಸ್‌ ಗೇಮ್‌’. ಇಂಗ್ಲಿಷ್‌ ಸೇರಿದಂತೆ ಜಗತ್ತಿನ ಬೇರೆ ಬೇರೆ ಭಾಷೆಗಳಲ್ಲಿ ನಾಟಕ ಆಗಿದೆ. ಸದಾ ಮಳೆ ಸುರಿಯುತ್ತಲೇ ಇರುವ ಒಂದು ನಿರ್ಜನ ಪ್ರದೇಶ. ಅಲ್ಲೊಂದು ಕಟ್ಟಡ. ಕೋರ್ಟ್‌ನಲ್ಲಿ ಕೆಲಸ ಮಾಡುವ ಐವರು ಅಲ್ಲಿರುತ್ತಾರೆ. ಕಾರು ಕೆಟ್ಟವರಿಗೆ, ದಾರಿ ತಪ್ಪಿದವರಿಗೆ ನೆಲೆಯಾಗಿ ಅಲ್ಲಿರುವುದು ಅದೊಂದೇ ಸೂರು. ಸುತ್ತಮುತ್ತ ಯಾವುದೇ ಜನವಸತಿ ಇಲ್ಲ.

- ಈ ಐವರಲ್ಲಿ ನನ್ನದು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಪಾತ್ರ. ಐವರೂ ನ್ಯಾಯಾಂಗದಲ್ಲಿದ್ದವರೇ. ನಮ್ಮ ಫೇವರಿಟ್‌ ಟೈಮ್‌ ಪಾಸ್‌ ಅಂದರೆ ಕೋರ್ಟ್‌ನಲ್ಲಿ ಕೇಸ್‌ ನಡೆಸುತ್ತಿದ್ದ ರೀತಿಯಲ್ಲೇ ಸುಮ್ಮನೆ ಆಟಕ್ಕೆ ಕೇಸ್‌ ನಡೆಸೋದು. ದಾರಿತಪ್ಪಿಯೋ, ಕಾರು ಕೆಟ್ಟುಹೋಗಿಯೋ ಯಾರಾದರೂ ಯಾತ್ರಿಗಳು ಬಂದಾಗ ಅವರನ್ನೂ ಸೇರಿಸಿಕೊಂಡು ಆಟ ಆಡ್ತೀವಿ. ಅವರಿಗೆ ಚೆನ್ನಾಗಿ ಹೆಂಡ ಕುಡಿಸಿ ಆಟ ಆಡಿಸೋದು. ಈ ಆಟಕ್ಕೆ ಸೇರಬೇಕು ಅಂದರೆ ಏನಾದರೂ ತಪ್ಪು ಮಾಡಿದ್ದೀವಿ ಅಂತ ಒಪ್ಪಿಕೊಳ್ಳಬೇಕು. ಹೀಗೆ ಶುರುವಾಗುವ ಆಟ ಹೇಗೆಲ್ಲ ತಿರುವು ತೆಗೆದುಕೊಳ್ಳುತ್ತ, ಕೊನೆಗೆ ಎಲ್ಲಿಗೆ ಹೋಗಿ ತಲುಪುತ್ತದೆ ಎನ್ನುವುದು ನಾಟಕದ ಕಥೆ. ಇದೇ ಸಬ್ಜೆಕ್ಟ್‌ನಲ್ಲಿ ಇತ್ತೀಚೆಗೆ ಅಮಿತಾಬ್‌ ಬಚ್ಚನ್‌ ಅವರ ‘ಬದ್‌ಲಾ’ ಸಿನಿಮಾ ಬಂದಿತ್ತು. ಕನ್ನಡದಲ್ಲಿ ‘ಈ ಮುಖದವರು’, ‘ಸದ್ದು ವಿಚಾರಣೆ ನಡೆಯುತ್ತಿದೆ’ ಮೊದಲಾದ ನಾಟಕಗಳದೂ ಹೆಚ್ಚು ಕಡಿಮೆ ಇದೇ ರೀತಿಯ ಸ್ಟೋರಿಲೈನ್‌.

- ಮೂಲದಲ್ಲಿ ಇದು ಗಂಭೀರ ನಾಟಕ. ಆದರೆ ನಾವು ಆಶಯಕ್ಕೆ ಧಕ್ಕೆ ಬರದಂತೆ ವ್ಯಂಗ್ಯ, ತಮಾಷೆ ತಂದಿದ್ದೇವೆ. ನಾಟಕದ ಆಶಯವನ್ನು ಪುಷ್ಠೀಕರಿಸುವುದಕ್ಕೆ ಸಣ್ಣಪುಟ್ಟ ಸೇರ್ಪಡೆಗಳನ್ನು ಮಾಡಿದ್ದೀವಿ.

- ಈ ನಾಟಕದ ನಿರ್ದೇಶಕ ಶರತ್‌ ಪರ್ವತವಾಣಿ ಮತ್ತು ನಾನು ಕಾಲೇಜು ದಿನಗಳಲ್ಲಿ ಒಟ್ಟಿಗೆ ನಾಟಕ ಮಾಡುತ್ತಿದ್ದೆವು. ನಮ್ಮದೇ ಗ್ಯಾಂಗ್‌ ಇತ್ತು. ನನಗೆ 1992ನಿಂದ ಶರತ್‌ ಪರಿಚಯ. ಆವಾಗ ಈತನಿಗೆ ನಾಟಕ ಮಾಡುವುದರಲ್ಲಿ ಅಂಥಾ ಆಸಕ್ತಿ ಇರಲಿಲ್ಲ. ಓದಿನ ನಂತರ ಇಂಜಿನಿಯರಿಂಗ್‌ ಮಾಡಿ ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ 10 ವರ್ಷಗಳ ಕಾಲ ರಂಗಭೂಮಿಗೆ ಕೆಲಸ ಮಾಡಿದ್ದ. 10 ವರ್ಷದ ಕೆಳಗೆ ಭಾರತಕ್ಕೆ ಮರಳಿದ. ಈಗ ರಂಗಭೂಮಿ, ಸಿನಿಮಾಗಳಿಗೆ ಚಿತ್ರಕಥೆ ಇತ್ಯಾದಿ ಕೆಲಸಗಳಲ್ಲಿ ಸಕ್ರಿಯ.

- ಶರತ್‌ ನಾಟಕ ತಂಡದ ಹೆಸರು ಕಲಾದ್ಯುತಿ. ಇದರಿಂದ ‘ಉಂಡಾಡಿ ಗುಂಡ’ ಅಂತ ನಾಟಕ ಮಾಡಿದ್ದ. ಆ ನಾಟಕದ ಪ್ರಮೋಶನ್‌ಗೆ ಅಂತ ಒಂದು ವೀಡಿಯೋ ಮಾಡಿದ್ದೆ. ಅದರಲ್ಲಿ ನಾಟಕ ರಂಗದಿಂದ ಬೇರೆ ಬೇರೆ ಕ್ಷೇತ್ರಗಳಿಗೆ ಹೋದ ಹಳಬರೆಲ್ಲ ಮರಳಿ ರಂಗಭೂಮಿಗೆ ಬರಬೇಕು ಅಂತೇನೂ ಹೇಳಿದ್ದೆ. ಆಗಾಗ ಶರತ್‌ ಬಳಿ ಹೇಳ್ತಿದ್ದೆ, ನನಗೂ ಈ ಆ್ಯಕ್ಷನ್‌ ಕಟ್‌ಗಳ ನಡುವೆ ಬೇಜಾರಾಗಿದೆ, ಮತ್ತೆ ನಾಟಕ ಮಾಡಬೇಕು ಅಂತ. ಅವನ ಸೆಕೆಂಡ್‌ ಪ್ರೊಡಕ್ಷನ್‌ಗೆ ಕರೆದೆ, ಸರಿ ಎಂದೆ.

- ಹೇಳೋದೇನೋ ಹೇಳಿಬಿಟ್ಟೆ, ಈಗ ಭಯ ಆಗ್ತಿದೆ ಹೇಗಪ್ಪ ಮಾಡೋದು ಅಂತ. ಆದರೆ ನನ್ನ ಒಂದಿಷ್ಟು ಸಮಯವನ್ನು ಇನ್ನುಮೇಲೆ ರಂಗಭೂಮಿಗೆ ತೆಗೆದಿಡಬೇಕು ಅಂತ ನಿರ್ಧರಿಸಿದ್ದೇನೆ. ಈಗೀಗ ಬಹಳ ರಿಯಲಿಸ್ಟಿಕ್‌ ಆಗಿಯೂ ಥಿಯೇಟರ್‌ ಬೆಳೆಯುತ್ತಿದೆ. ಜಾಹೀರಾತು, ಸ್ಪಾನ್ಸರ್ಸ್‌ ಎಲ್ಲ ಬರುತ್ತಿದ್ದಾರೆ. ಒಂದೊಳ್ಳೆ ಬೆಳವಣಿಗೆ ಅಂದರೆ ಇದರಿಂದ ರಂಗಭೂಮಿಯ ನಟ ನಟಿಯರಿಗೂ ಹಣ ನೀಡುವ ಕ್ರಮ ನಿಧಾನಕ್ಕೆ ಶುರುವಾಗುತ್ತಿದೆ. ಮೊದಲೆಲ್ಲ ಹೀಗಿರಲಿಲ್ಲ, ಇದ್ದಿದ್ದರೆ ನಾವು ಸಿನಿಮಾ, ಸೀರಿಯಲ್‌ ಕಡೆ ಹೆಚ್ಚಾಗಿ ಹೋಗುತ್ತಿರಲಿಲ್ಲ. ಒಂದುವೇಳೆ ಹೋದರೂ ಚ್ಯೂಸಿ ಆಗಿರುತ್ತಿದ್ದೆವು. ಆಗೆಲ್ಲ ಬೇರೆ ಕೆಲವು ಭಾಷೆಗಳ ಥಿಯೇಟರ್‌ ನೋಡಿ ಹೊಟ್ಟೆ ಉರಿಯೋದು, ಮರಾಠಿ, ಹಿಂದಿ, ಗುಜರಾತಿ ಥಿಯೇಟರ್‌ನಲ್ಲೆಲ್ಲ ದುಡ್ಡು ಬರ್ತಿದೆ, ಕನ್ನಡದಲ್ಲಿ ಯಾಕೆ ಬರ್ತಿಲ್ಲ ಅಂತ. ಅದೃಷ್ಟವಶಾತ್‌ ಈಗ ಕನ್ನಡದಲ್ಲೂ ಅಂಥಾದ್ದೊಂದು ಪ್ರಕ್ರಿಯೆ ಶುರುವಾಗಿದೆ. ಅಂದ್ರೆ ಅದರಿಂದಲೇ ಜೀವನ ನಡೆಯುತ್ತೆ ಅಂತಲ್ಲ. ಆದರೆ ನನ್ನಂಥವರು ಈಗಾಗಲೇ ಗುರುತಿಸಿಕೊಂಡಿರುವ ಕಾರಣ ಕಷ್ಟ ಅನಿಸಲ್ಲ.

- ನಾವೆಲ್ಲಾ ಸಂಪಾದನೆ ಮಾಡದ ಸಮಯದಲ್ಲೂ ಏನೇನೋ ಪ್ರಯತ್ನ, ಪ್ರಯೋಗ ಮಾಡಿ ಖುಷಿಯಾಗಿದ್ದೆವು. ಅದು ಹೇಗೆ ಅಂತ ಯೋಚನೆ ಮಾಡ್ತಿದ್ದೆ. ಈಗ ಹಣ ಇದೆ, ಅಂದಿನ ಸಂತೋಷ ಇಲ್ಲ. ನಾಟಕ ಬಹಳ ಆಯಾಮಗಳಲ್ಲಿ ಯೋಚನೆ ಮಾಡಲು ಅವಕಾಶ ಕೊಡುತ್ತೆ. ನಾವು ಪಾತ್ರದೊಳಗೆ ಕಳೆದುಹೋಗ್ತೀವಿ. ಬೇರೆ ಬೇರೆ ಪಾತ್ರಗಳು, ತಯಾರಿ, ಓದು, ಅಬ್ಸರ್ವೇಶನ್‌ ಎಲ್ಲ ಇರುತ್ತೆ. ಇದರ ಜೊತೆಗೆ ಏಕಾಗ್ರತೆ, ಎನರ್ಜಿ, ನೆನಪಿನ ಶಕ್ತಿ ಅದ್ಭುತವಾಗಿರುತ್ತದೆ. ಆ ಜಗತ್ತಲ್ಲಿರುವಾಗ ಹೊರಜಗತ್ತಿನ ಅರಿವೇ ಇಲ್ಲ ಹಾಗಿರುತ್ತೇವೆ. ನಾಟಕದಿಂದ ಇಷ್ಟೆಲ್ಲ ಪಡೆಯುವ ಅವಕಾಶ ಇರುವಾಗ ಅದಕ್ಕಾಗಿ ಒಂಚೂರು ಸಮಯ ಕೊಡಬಹುದಲ್ವಾ.. ನಮ್ಮನ್ನು ನಾವು ಪರಿಷ್ಕರಿಸಿಕೊಳ್ಳುತ್ತಾ ಹೋಗಬಹುದಲ್ವಾ..

ನಾಟಕ : ಮಳೆ ನಿಲ್ಲುವವರೆಗೆ, ನಿರ್ದೇಶನ : ಶರತ್‌ ಪರ್ವತವಾಣಿ, ತಂಡ : ಕಲಾದ್ಯುತಿ, ಎಲ್ಲಿ? : ಚೌಡಯ್ಯ ಮೆಮೋರಿಯಲ್‌ ಹಾಲ್‌, ಯಾವಾಗ: ಸೆಪ್ಟೆಂಬರ್ 17, ಸಂಜೆ 7ಕ್ಕೆ

PREV
Read more Articles on
click me!

Recommended Stories

ಅಜ್ಞಾತ ಹೋರಾಟಗಾರರ ಪರಿಚಯ, ರಾಷ್ಟ್ರೋತ್ಥಾನ ಸಾಹಿತ್ಯದ ‘ಕ್ರಾಂತಿಯ ಕಿಡಿಗಳುʼ ಪುಸ್ತಕ ಲೋಕಾರ್ಪಣೆ
ದ್ವೇಷಭಾಷಣ ಮಸೂದೆ ರಾಜ್ಯದಲ್ಲಿ ಜಾರಿ ಅನಾವಶ್ಯ - ವಿಧೇಯಕ ಜಾರಿಗೆ ಬಂದರೆ ಹಿರಿಯರು ಬುದ್ಧಿವಾದ ಹೇಳಲಾಗದು, ಇತಿಹಾಸಕಾರರು ಸತ್ಯ ನುಡಿಯಲು ಆಗದು!