- ಗಡ್ಡ ಬಿಟ್ಟು ರಾಮಾಯಣ ದರ್ಶನಂ ಓದಿದ್ದು
- ಎಸ್ ಜಿ ಸಿದ್ದರಾಮಯ್ಯನವರ ಆತ್ಮಕಥನ ಯರೆಬೇವು ಆಯ್ದಭಾಗ
ಹಿರಿಯ ಸಾಹಿತಿ, ಸಾಮಾಜಿಕ ಚಿಂತಕ ಎಸ್ ಜಿ ಸಿದ್ದರಾಮಯ್ಯನವರ ಆತ್ಮ ಕಥನ ‘ಯರೆಬೇವು’ ಪ್ರಕಟವಾಗಿದೆ. ‘ಬಹುರೂಪಿ’ ಪ್ರಕಾಶನ ಪ್ರಕಟಿಸಿರುವ ಈ ಕೃತಿ ಇಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ. ಸಿದ್ದರಾಮಯ್ಯನವರ ತುಂಬು 75 ವಸಂತಗಳ ಬಗ್ಗೆ ಗಮನ ಹರಿಸುವ ಕೃತಿ ಇದು. ಸಿಂಗಾಪುರ ಗುರುಭಕ್ತಯ್ಯ ಸಿದ್ದರಾಮಯ್ಯ ಕಾರಣಿಕ ಶಿಶುವಾಗಿ ಹುಟ್ಟಿ ನಾಡಿನ ಪ್ರಮುಖ ವೈಚಾರಿಕ ಚಿಂತಕರಾಗಿ ಬೆಳೆದ ಬಗೆ ಇಲ್ಲಿದೆ. ಈ ಕೃತಿಯ ಆಯ್ದ ಭಾಗ ಇಲ್ಲಿದೆ.
ನಾವು ಎಂ.ಎಸ್. ರಾಮಲಿಂಗಪ್ಪನವರ ಮನೆಗೆ ಆಗಾಗ ಹೋದಾಗ ಅವರು ಮೈಸೂರಿನಲ್ಲಿ ಒಂಟಿಕೊಪ್ಪಲಿನಲ್ಲಿರುವ ಕುವೆಂಪು ಅವರ ಬಗ್ಗೆ ಅವರ ಬದುಕಿನ ರಸಋಷಿ ಗುಣದ ಬಗ್ಗೆ ಪ್ರಶಂಸಿಸಿ ಹೇಳುತ್ತಿದ್ದರು. ಅವರು ಕಾದಂಬರಿಗಳನ್ನು ಬರೆದ ಹಿನ್ನೆಲೆ ಮಹಾಕಾವ್ಯ ರಚಿಸಿದ ಹಿನ್ನೆಲೆ ಇವುಗಳನ್ನು ಸ್ವಾರಸ್ಯಕರವಾಗಿ ಹೇಳುತ್ತಿದ್ದರು. ಇದರ ಪರಿಣಾಮ ಗಜೇಂದ್ರನ ಮಾತನ್ನು ಮಾರ್ಗದರ್ಶನದಂತೆ ತೆಗೆದುಕೊಂಡು ಆ ದಿನವೇ ನಾನು ರಾಮಾಯಣ ದರ್ಶನಂ ಮಹಾಕಾವ್ಯವನ್ನು ಗ್ರಂಥಾಲಯದಿಂದ ಬಾರೋ ಮಾಡಿದೆ. ಅದೃಷ್ಟಕ್ಕೆ ನಮ್ಮ ತರಗತಿಗೆ ಗ್ರಂಥಗಳನ್ನು ವಿತರಿಸುವ ದಿನವೂ ಅಂದೇ ಆಗಿತ್ತು. ಅದು ನನಗೆ ಪ್ರೋತ್ಸಾಹಕ್ಕೆ ಸರಿಯಾಗಿ ಬಿತ್ತನೆಯ ಬೀಜ ಹಾಕಿದಂತಾಯಿತು.
Prof BA Vivek Rai Turns 75: ಸಂವಹನ ನಡೆಸುವುದು ಶಕ್ತಿಯಲ್ಲ, ಹೊಸತು ದಾಟಿಸುವುದು ಮುಖ್ಯundefined
ರಾಮಾಯಣ ದರ್ಶನಂ ಓದಲು ತೊಡಗಿದ ಎರಡನೆಯ ದಿನಕ್ಕೆ ನನಗೆ ಒಂದು ಬಗೆಯ ಹಟ ಮೊಳೆಯಿತು. ಈ ಕಾವ್ಯವನ್ನು ಓದಿ ಮುಗಿಸುವವರೆಗೂ ನಾನು ಗಡ್ಡ ತೆಗೆಯಬಾರದು ಎಂದು ನಿರ್ಧರಿಸಿದೆ. ಆದರೆ ಎಂದಿನಂತೆ ಪ್ರತಿ ಶನಿವಾರದ ಎನ್‌ಸಿಸಿ ಕವಾಯಿತು. ಅಭ್ಯಾಸಕ್ಕೆ ಹೋಗಬೇಕಾಯಿತು. ಆಗ ಇದೇ ಚುಚ್ಚು ಗಡ್ಡದಲ್ಲಿ ಎನ್‌ಸಿಸಿಗೆ ಹೋದರೆ ಟಿ. ಶಿವಣ್ಣನವರೇನಾದರೂ ಕಂಡರೆ ನೇರವಾಗಿ ಬಂದು ಎರಡೂ ಕೆನ್ನೆಗಳ ಚುಚ್ಚುಗಡ್ಡಕ್ಕೆ ಅಂಗೈ ಉಜ್ಜಿ ‘ಏನೋ ಹನುಮಂತ ಗಡ್ಡ ಯಾಕೋ ತೆಗೆದಿಲ್ಲ ಅಂತ ಅದೇ ಕೆನ್ನೆಗೆ ಹೊಡೆದರೆ!’ - ಈ ಭಯ ಕಾಡಿತು. ಆದರೆ ಶಪಥ ಮಾಡಿಯಾಗಿದೆ-ಕಾವ್ಯದ ಓದು ಮುಗಿಯದ ಹೊರತು ಗಡ್ಡ ತೆಗೆಯುವುದಿಲ್ಲ. ಈಗ ಏನು ಮಾಡುವುದು? ಶಪಥ ಮುರಿಯುವುದೋ ಅಥವಾ ಎನ್.ಸಿ.ಸಿ.ಗೆ ಚಕ್ಕರ್ ಹೊಡೆಯುವುದೋ? ಕುವೆಂಪು ಬಗೆಗಿನ ಅಭಿಮಾನ ಚಕ್ಕರ್ ಹೊಡೆಯುವಂತೆ ಪ್ರೇರಣೆ ನೀಡಿತು. ಹೀಗಾಗಿ ತರಗತಿಗಳ ಸಂದರ್ಭವನ್ನು ಬಿಟ್ಟು ಮಿಕ್ಕ ಎಲ್ಲಾ ಸಮಯವನ್ನು ಓದಿಗೆ ಮೀಸಲಿಟ್ಟೆ. ಅದು ಖಂಡಿತ ಯಾಂತ್ರಿಕ ಓದಲ್ಲ. ಪ್ರೀತಿಯ ಆಪ್ತತೆಯ ಓದು. ಅಭಿಮಾನ ತುಂಬಿದ ಓದು.
ಗುರುಗಳಿಂದಲೇ ನೀನಿನ್ನು ಬರಬೇಡ ಎನಿಸಿಕೊಂಡಾಕೆ ಭಾಗವತೆಯಾಗಿ ಬೆಳೆದ ಕಥೆಆ ಓದು ನನ್ನ ಓದಿನ ಕ್ರಮವನ್ನು ಬದಲಾಯಿಸಿದ ಓದಾಗಿತ್ತು. ಪಠ್ಯಗಳನ್ನು ಬಿಟ್ಟು ಬೇರೆ ಏನನ್ನೂ ಓದುವುದರ ಅಭ್ಯಾಸವನ್ನು ರೂಢಿಸಿಕೊಂಡಿರದಿದ್ದ ನನಗೆ ಪಠ್ಯೇತರ ಓದಿನ ಗೀಳನ್ನು ಬೆಳಸಿದ ಓದು ಅದಾಗಿತ್ತು. ಕಾವ್ಯವನ್ನು ಪೂರ್ತಿ ಓದಿ ಮುಗಿಸಿದ ಮೇಲೆ ಅದೇ ಕಾವ್ಯದ ಶೈಲಿಯಲ್ಲಿ ಒಂದು ಹತ್ತು ಪುಟಗಳ ಕವಿತೆಯನ್ನೂ ಬರೆದೆ. ಟಿ.ಎಸ್. ವೆಂಕಣ್ಣಯ್ಯನವರಿಗೆ ಅರ್ಪಿಸಿದ ಭಾಗದಲ್ಲಿ ಕುವೆಂಪು ಅವರು ‘ಇದೋ ಮುಗಿಸಿ ತಂದಿಹೆನ್...’ ಎಂದು ಹೇಗೆ ಪ್ರಾರಂಭಿಸಿದ್ದರೋ ಅದೇ ಶೈಲಿಯಲ್ಲಿ, ‘ಇದೋ ಓದಿ ಪುಳಕಿತನಾಗಿರುವೆನ್ ಧನ್ಯಭಾವದಿ ಕವಿವರ್ಯ’- ಎಂದು ಬರೆದ ಆ ಕವಿತೆ ರಾಮಾಯಣ ದರ್ಶನದಲ್ಲಿನ ಮುಖ್ಯ ದರ್ಶನಗಳನ್ನು ಉಲ್ಲೇಖಿಸಿದಂತೆ ಹಾಡಿ ಹೊಗಳಿದ್ದ ಕವಿತೆಯೇ ಆಗಿತ್ತು. ಆ ಕವಿತೆಯನ್ನು ಮಿತ್ರರೆದುರು ಓದಿದ ಮೇಲೆ ನನ್ನ ಕವಿಪಟ್ಟ ಗಟ್ಟಿಯಾದ ಭಾವನೆ ಮೂಡಿತು. ಅಷ್ಟೇ ಅಲ್ಲ ಹಲವು ಜನ ಮಿತ್ರರು ಅದರಲ್ಲೂ ಗಜೇಂದ್ರ, ಪ್ರಸನ್ನ, ಎಂ. ಚನ್ನಬಸವಯ್ಯ ನನ್ನನ್ನು ಕವಿ ಎಂದೇ ಕರೆಯತೊಡಗಿದರು.
ಯರೆಬೇವು
ಲೇ: ಎಸ್ ಜಿ ಸಿದ್ದರಾಮಯ್ಯ
ಪ್ರಕಾಶನ: ಬಹುರೂಪಿ, ಬೆಂಗಳೂರು
ಪುಟ: 624
ಬೆಲೆ: ರು. 750
ದೂ: 7019182729