ಒಳಗೆ ಕೂತರೇ ಸಂಕಟ! ಹೊರಗೆ ಬಂದರೇ ಕೊರೋನಾ ಹುಡುಕಾಟ! ಎಷ್ಟುದಿನ ಮನೆಯೊಳಗೆ ಕೂರೋದು? ತಿಂಗಳಿಗಿಷ್ಟುಸಂಬಳ ತಂದು ಕೊಡುವ ಕೆಲಸವೂ ಈಗ ಮನೆಯಿಂದಲೇ ಆಗುತ್ತಿದೆ. ಇನ್ನು ಮಕ್ಕಳ ಸ್ಕೂಲು ಅಂದ್ರೆ ಸರಿಯಾಗಿ ಆಡಿಯೋ ಕೇಳದೇ ಪದೇ ಪದೇ ಕರಗುಟ್ಟುವ ವಿಡಿಯೋದಲ್ಲಿ ಬರುತ್ತೆ ಆನ್‌ಲೈನ್ ಪಾಠ. ಎಲ್ಲೂ ಹೆಚ್ಚು ಮಾತಾಡುವಂತಿಲ್ಲ. ಮುಖಕ್ಕೆ ಮಾಸ್ಕ್ ಇರೋ ಕಾರಣಕ್ಕೆ ಅವರ ಮಾತು ಕೂಡ ಎಷ್ಟೋ ಬರಿ ಸನ್ನಿವೇಶದ ಮೇಲೆ ಅರ್ಥ ಮಾಡಿಕೊಳ್ಳಬೇಕಾಗಿದೆ. ಹಾಗಾಗಿ ಒಂಟಿಯಾಗಿ ವಾಕಿಂಗ್.. ಮನೆಯಲ್ಲೇ ಈಟಿಂಗ್.. ಬದುಕೆಲ್ಲಾ ಬೋರಿಂಗ್..!
-ಡೆಲ್ಲಿ ಮಂಜು
ಕೊರೋನಾ ಇಕ್ಕಟ್ಟಿನಲ್ಲಿ ಹೊರಜಗತ್ತು ಭಾರವಾಗಿ ಕಂಡರೂ ಅದರೊಂದಿಗೆ ಇರುವ ಮಜಾ ಎಲ್ಲೂ ಸಿಗೋದಿಲ್ಲ. ಹೊರಗೆ ಸೂರ್ಯ ಕೆಂಡ ಸುರಿಯುತ್ತಿದ್ದರೂ ಅದ್ಯಾಕೋ ಅಷ್ಟುಎತ್ತರದ ಆ ಕುತುಬ್ ಮಿನಾರ್ ಖುಷಿ ಕೊಟ್ಟಿತು.
undefined
ಆರ್ಥಿಕ ಚಟುವಟಿಕೆಗಳು ಗರಿಗೆದರಬೇಕು ಕೊರೋನಾ ಸಂಕಟದ ನಡುವೆಯೇ ಮನೆಯಿಂದ ಹೊರಬರುವ ಜನರಿಗೆ ರಿಲ್ಯಾಕ್ಸ್ ಸಿಗಬೇಕು ಅನ್ನೋ ಕಾರಣ ತೋರಿಸಿ ಡೆಲ್ಲಿ ಸರ್ಕಾರ ಕುತುಬ್ ಮಿನಾರ್ ಕಟ್ಟಡದ ವೀಕ್ಷಣೆಗೆ ಪ್ರವಾಸಿಗರಿಗೆ ಅನುವು ಮಾಡಿಕೊಟ್ಟಿದೆ.
ದೆಹಲಿಯ ಪ್ರವಾಸೋದ್ಯಮದ ಆಕರ್ಷಣೆ ಗಳಲ್ಲಿ ಕುತುಬ್ ಮಿನಾರ್ ಕೂಡ ಒಂದು. ವಿದ್ಯಾರ್ಥಿಗಳಿಗೆ ಇತಿಹಾಸದ ಅಧ್ಯಯನ ಜೊತೆ ಆಕರ್ಷಣೆಯಾಗಿ ಕಂಡರೇ, ಗೆಳೆಯ-ಗೆಳತಿಯರಿಗೆ ಒಂದು ಟಾಕಿಂಗ್ ಸ್ಪಾಟ್ ಕೂಡ.
ಬೇಸಿಗೆ ರಜೆಯಲ್ಲಿ ಕುತುಬ್ ಮಿನಾರ್ ತೋರಿಸುತ್ತೀನಿ ಎಂದಿದ್ದ ಅಪ್ಪ-ಮಗ, ಅಯ್ಯೋ ಉತ್ತರ ಇಂಡಿಯಾದ ಇತಿಹಾಸದಲ್ಲಿ ಇದಕ್ಕೆ ಅಗ್ರಪಂಕ್ತಿ ಅಂತ ಬಂದ ಇತಿಹಾಸದ ಆಸಕ್ತರು ಹೀಗೆ ಎಲ್ಲರೂ ಅಲ್ಲಿ ಕಾಣೋಕೆ ಶುರುವಾಗಿದ್ದಾರೆ. ಕೊರೋನಾದಿಂದಾಗಿ ಹೊರಬರಲು ಸಾಧ್ಯವಾಗಿರಲಿಲ್ಲ. ಮಗನಿಗೆ ಕರೆದುಕೊಂಡು ಹೋಗ್ತಿನಿ ಅಂದಿದ್ದೆ. ಈಗ ಒಪನ್ ಆಗಿದೆ ಬಂದ್ವಿ ಅಂತಾರೆ ಫರಿದಾಬಾದ್‌ನಿಂದ ಬಂದಿದ್ದ ಅಪ್ಪ-ಮಗ.
ಕೊರೋನಾಗೂ ಮುನ್ನ ನಿತ್ಯ ಸಾವಿರಗಳ ಲೆಕ್ಕದಲ್ಲಿ ಪ್ರವಾಸಿಗರು ಬರುತ್ತಿದ್ದರು. ವೀಕೆಂಡ್‌ನಲ್ಲಿ ಆ ಸಂಖ್ಯೆ 10 ಸಾವಿರ ತಲುಪುತ್ತದೆ ಅನ್ನೋ ಸೆಕ್ಯುರಿಟಿ ಗಾರ್ಡ್‌ಗಳು, ಕೊರೋನೋತ್ತರ ಅಂದ್ರೆ ಶುರುವಾಗಿ ಹತ್ತು ದಿನ ಆಗಿದೆ. ಇದೀಗ ನಿತ್ಯ 100 ರಿಂದ 150 ಪ್ರವಾಸಿಗರು ಭೇಟಿ ಕೊಡ್ತಾ ಇದ್ದಾರೆ ಅಂತಾರೆ.
ಡಿಜಿಟಲ್ ಮಿನಾರ್
ಕೊರೋನಾ ಒಂದೊಂದು ಪಾಠ ಕಲಿಸಿಲ್ಲ. ಈಗ ಇಲ್ಲಿ ಟಿಕೆಟ್ ಕೂಡ ಡಿಜಿಟಲ್ ಆಗಿದೆ. ಪೇಟಿಎಂ ಮೂಲಕ ಹಣ ಪಾವತಿ ಮಾಡಿದ್ರೆ ಆಟೋಮೆಟಿಕ್ ಟಿಕೆಟ್ ಜನರೇಟ್ ಆಗುತ್ತೆ. ಪ್ರವೇಶದ್ವಾರದಲ್ಲಿ ಆ ಟಿಕೆಟ್ ಕೋಡ್ ಡಿಕೋಡ್ ಆಗುತ್ತೆ. ಆಗ ಒಳಗೆ ಪ್ರವೇಶಿಸಬಹುದು. ಇನ್ನು ಎಂಟ್ರಿಗೂ ಮುನ್ನ ಫೀವರ್ ಚೆಕ್, ಸ್ಯಾನಿಟೇಜಷನ್ ಎಲ್ಲವೂ ಕಡ್ಡಾಯವಾಗಿ ನಡೆಯುತ್ತವೆ. ಮಾಸ್ಕ್ ಮತ್ತು ಸಾಮಾಜಿಕ ಅಂತರ ಪಾಲನೆ ನಮ್ಮ ಹೊಣೆಯಾಗಿರುತ್ತೆ.
ಈಗ ಪ್ರವೇಶ ಶುರುವಾಗಿದೆ. ಮತ್ತೊಮ್ಮೆ ಇತಿಹಾಸ ಪ್ರಸಿದ್ಧ ಕುತುಬ್ ಮಿನಾರ್ ನೋಡ ಬನ್ನಿ. ಮನಸ್ಸಿಗೆ ಒಂದಷ್ಟುಖುಷಿ ತುಂಬಿ.