ಕುವೆಂಪು ‘ಕಲಾಸುಂದರಿ’ ಬಗ್ಗೆ ಹೇಳಿದ ಚಿಂತಾಮಣಿ ಕೊಡ್ಲಿಕೆರೆ !

By Kannadaprabha NewsFirst Published Dec 23, 2018, 1:45 PM IST
Highlights

ಚಿಕ್ಕಂದಿನಿಂದ ಕುವೆಂಪುರವರ ಹಾಡುಗಳನ್ನು ಓದುತ್ತ ಬೆಳೆದವರು ನಾವು. ನನ್ನ ತಂದೆಯವರು ಒಂದಷ್ಟು ವರ್ಷ ತೀರ್ಥಹಳ್ಳಿಯಲ್ಲಿ ಓದಿದವರು. ಕುವೆಂಪುರವರ ಕುರಿತು ಅನೇಕ ಕತೆಗಳನ್ನು ಹೇಳುತ್ತಿದ್ದರು. ಹಾ.ಮಾ.ನಾಯಕರ ಸಹಪಾಠಿಯಾಗಿದ್ದ ಅಪ್ಪ ಕವಿಕಾವ್ಯದಲ್ಲಿ ಬಂದ ಅನೇಕ ಸ್ಥಳಗಳ ಕುರಿತು ಒಂದು ಬಗೆಯ ಆರಾಧನೆಯ ಭಾವನೆ ಹುಟ್ಟಿಸಿಬಿಟ್ಟಿದ್ದರು. ಕವಿಯ ಕುರಿತು ನನ್ನ ಮೊದಲ ಸ್ಪಂದನ ಶುರುವಾಗಿದ್ದು ಹೀಗೆ.

ಮುಂದೆ ಒಂದು ಹಂತದಲ್ಲಿ ಕುವೆಂಪು ಅವರ ಕಾವ್ಯದ ಒಳಗಿರುವ ಸ್ಥಾಯಿ ಆವೇಶ ಭಾವದ ಕುರಿತು, ಭಾಷೆಯ ಭಾರದ ಕುರಿತು ಅನುಮಾನ ಶುರುವಾಯಿತು. ಪದ್ಯ ಮುಗಿದರೂ ದೋಣಿ ಯಾಕೆದಡ ಸೇರುವುದಿಲ್ಲವೆಂದು ( ದೋಣಿ ಸಾಗಲಿ ಪದ್ಯ) ನಗತೊಡಗಿದೆವು. ಅವೆಲ್ಲ ಒಂದಷ್ಟು ಕಾಲ. ಮತ್ತೆ ಕವಿ ಬಹುಬೇಗನೆ ನನ್ನನ್ನು ಆವರಿಸಿಕೊಳ್ಳತೊಡಗಿದರು. ಅವರ ಎರಡೂ ಮಹಾಕಾದಂಬರಿಗಳನ್ನು ಓದಿದ ಮೇಲಂತೂ ಈ ಮಹಾನ್ ಲೇಖಕನ ಕುರಿತು ಗೌರವ ಇಮ್ಮಡಿಸಿತು. ‘‘ಮಲೆಗಳಲ್ಲಿ ಮದುಮಗಳು’’ ಬೆಂಗಳೂರಿನ ಕಲಾಗ್ರಾಮದಲ್ಲಿ ತಿಂಗಳುಗಟ್ಟಲೆ ಪ್ರದರ್ಶನಗೊಂಡಾಗ ಮಕ್ಕಳನ್ನು ಎರಡೆರಡು ಬಾರಿ ಕರೆದೊಯ್ದು ನಾಟಕ ತೋರಿಸಿ ಸಂಭ್ರಮಿಸಿದ್ದೇನೆ. ನಮ್ಮ ಮುಂದಿನ ತಲೆಮಾರುಗಳನ್ನೂ ಕುವೆಂಪು ಪ್ರಭಾವಿಸುತ್ತಿರುವ ಬಗೆಯನ್ನು ಕಂಡು ಬೆರಗಾಗಿದ್ದೇನೆ.

ಹದಿನೈದು ವರ್ಷಗಳ ಹಿಂದೆ ಕನ್ನಡ ಕಾವ್ಯ ಮತ್ತು ತಾತ್ವಿಕತೆಗಳ ಸಂಬಂಧದ ಕುರಿತು ಅಧ್ಯಯನ (ಪಿಎಚ್.ಡಿ) ನಡೆಸುವ ಹೊತ್ತಿನಲ್ಲಿ ಕುವೆಂಪು ಕಾವ್ಯಮೀಮಾಂಸೆಯನ್ನು ಇಡಿಯಾಗಿ ಓದುವ ಅವಕಾಶ ಸಿಕ್ಕಿತು. ’’ಕಲಾಸುಂದರಿ’’ ಎಂಬ ತಮ್ಮ ಕವನಸಂಕಲನಕ್ಕೆ ಬರೆದ ಮಾತುಗಳಲ್ಲಿ ಕಾವ್ಯದ ಕುರಿತ ಅವರ ಚಿಂತನೆಯ ಸಾರವೆಲ್ಲ ಅಡಕಗೊಂಡಿದೆ. ’’ಕಲಾಸುಂದರಿ ಸರಸಿಯಾದರೂ ಮಹಾತಪಸ್ವಿನಿ.ಆಕೆಯ ಬಹಿರಂಗದಲ್ಲಿ ತೇಜಸ್ಸಿರುವಂತೆ ಅಂತರಂಗದಲ್ಲಿ ತಪಸ್ಸಿದೆ....ಆಕೆ ಬುದ್ಧಿ ಭಾವಗಳ ವಿದ್ಯುದಾಲಿಂಗನದಿಂದ ಆವಿರ್ಭವಿಸಿರುವ ಪ್ರತಿಭಾರೂಪಸಿ’’ ಮುಂತಾದ ಮಾತುಗಳನ್ನು ಅಕ್ಷರಶಃ ನಂಬಿ ಬಾಳಿದವರು,ಬರೆದವರು ಅವರು. ಕಲೆಗಳಲ್ಲೆಲ್ಲ ಸರ್ವಶ್ರೇಷ್ಠವಾದುದೆಂದರೆ ಕವಿತೆ ಎಂಬ
ಅವರ ಪ್ರತಿಪಾದನೆಯನ್ನು ಗಮನಿಸಬೇಕು.ರಾಮಕೃಷ್ಣಾಶ್ರಮದ ಸಂಪರ್ಕ,ರಾಮಕೃಷ್ಣ, ವಿವೇಕಾನಂದರ ಓದು, ಸ್ವತಃ ಗೈದ ಆಧ್ಯಾತ್ಮಿಕ ಸಾಧನೆ - ಇವೆಲ್ಲವೂ ಅವರ ಕಾವ್ಯಜಗತ್ತನ್ನು ಇನ್ನಿಲ್ಲದಂತೆ ಬೆಳಗಿವೆ. ಮಲೆನಾಡಿನ ಒಕ್ಕಲಿಗ ಕುಟುಂಬದಲ್ಲಿ ಹುಟ್ಟಿಬಂದ ಈ ಕವಿ ಮುಂದೆ ಮೈಸೂರಿನಲ್ಲಿ ತನ್ನೊಳಗೇ ಕುಪ್ಪಳಿಯನ್ನು ರಕ್ಷಿಸಿಕೊಂಡು ಬಂದ ಬಗೆ ಕುತೂಹಲಕಾರಿಯಾಗಿದೆ.

ಅನೇಕ ಕಾವ್ಯಮೀಮಾಂಸಕರು ಕವಿಗಳಲ್ಲ. ಕವಿಗಳಲ್ಲನೇಕರಲ್ಲಿ ಕಾವ್ಯಚಿಂತನೆಯೇ ಇಲ್ಲ. ಇವೆರಡೂ ಅದೃಷ್ಟವಶಾತ್ ಕೂಡಿದವರಲ್ಲೂ ಅನೇಕಸಲ ಬದುಕಿನ ನಿಗೂಢ ಸ್ವರೂಪದ ಕುರಿತು ಕುತೂಹಲವಾಗಲೀ,ಧ್ಯಾನಮಯ ಚಿಂತನೆಯಾಗಲೀ ಇಲ್ಲ. ಕನ್ನಡನವೋದಯದಲ್ಲಿ ಕಾಣಿಸಿಕೊಂಡ ಅಂಥ ಒಂದು ಅಪರೂಪದ ಮಾದರಿ ಕುವೆಂಪು.

ಕುವೆಂಪು ಅವರನ್ನು ಪ್ರತ್ಯಕ್ಷವಾಗಿ ನಾನು ನೋಡಿದ್ದು ಒಂದೇ ಸಲ.ಅದು ಮೂವತ್ಮೂರು ವರ್ಷಗಳ ಹಿಂದಿನ ಮಾತು.ಉದಯರವಿಯ ಉದ್ಯಾನದಲ್ಲಿ ಕುಳಿತ ಉದಯೋನ್ಮುಖ ಕವಿಗಳೊಡನೆ ಹಿರಿಯ ಕವಿ ಮೆಲುದನಿಯಲ್ಲಿ ಅಂದು ಬೆಳಿಗ್ಗೆ ಮಾತನಾಡಿದರು.ಜಾತಿ ಮತಗಳ ಸಣ್ಣ ಆವರಣಗಳಲ್ಲಿ ಸಿಲುಕಿ ಮತಿಹೀನರಾಗಬೇಡಿ ಎಂಬ ಕಳಕಳಿಯೇ ಅಂದಿನ ಅವರ ಮಹತ್ವದ ಸಂದೇಶವಾಗಿತ್ತು.ಒಳ್ಳೆಯ ಕವಿಯಾಗುವುದು ಮುಂದಿನ ಮಾತು,ಕಡೇಪಕ್ಷ ಒಳ್ಳೇ ಮನುಷ್ಯರಾಗಿ ಎಂದು ಅವರು ಸೂಚಿಸಿದಂತಿತ್ತು. ಕಳೆದ ದಶಕಗಳಲ್ಲಿ ಸಮಾಜದಲ್ಲೂ, ಸಾಹಿತ್ಯದಲ್ಲೂ ಸಣ್ಣತನ ಒರಲೆಯಂತೆ ಹಬ್ಬಿರುವುದನ್ನು ಕಂಡಾಗ ಕವಿ ಅಂದು ಹಂಚಿಸಿದ ವಿಶ್ವಮಾನವಸಂದೇಶದ ಮಾತುಗಳು ಒಳಗೆಲ್ಲೋ ಹಿರಿಯರು ಆಡಿದ ಬೆಳಕಿನ ನುಡಿಗಳಂತೆ ಕೇಳುತ್ತವೆ. ಕಳೆದ ವರ್ಷ ಇದೇ ಹೊತ್ತಿಗೆ ಕುಪ್ಪಳಿಯಲ್ಲಿದ್ದೆ. ನಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋದ ಗೆಳೆಯ ಶ್ರೀ ಸದಾನಂದರು ಮುಂದೆ ಸಿಬ್ಬಲುಗುಡ್ಡಕ್ಕೂ ಕರೆದೊಯ್ದರು. ದೇವರು ರುಜು ಮಾಡಿದ್ದನ್ನು ಕವಿ ರಸವಶರಾಗಿ ನಿಂತು ನೋಡಿದ ಜಾಗ ಅದು. ಕಾಲದ ಯಾತ್ರೆಯಲ್ಲಿ ಆ ಸ್ಥಳ ತನ್ನ ಸೌಂದರ್ಯವನ್ನಾಗಲೀ, ರಹಸ್ಯಮಯತೆಯನ್ನಾಗಲೀ ಇನಿತೂ ಕಳೆದುಕೊಂಡಿರಲಾರದು. ಸಿಬ್ಬಲುಗುಡ್ಡದ ಹೊಳೆಯ ಮೀನುಗಳು ನಾವು ಕೊಟ್ಟ ಮಂಡಕ್ಕಿಯನ್ನು ಆನಂದಾವೇಶದಿಂದ ಕಬಳಿಸುತ್ತ ನೀರಲ್ಲಿ ಒಂದು ಕೋಲಾಹಲವನ್ನೇ ಸೃಷ್ಟಿಸಿದ್ದವು.ಬಳಿಕ ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದೆವು. ತಲೆಯೆತ್ತಿದರೆ ಹಕ್ಕಿಗಳ ಹಿಂಡೊಂದು ಏರಿಳಿತದ ಲಯಬದ್ಧ ಸಾಲಿನಂತೆ ಹಾರಿಹೋಯಿತು.
ಅದು ಕವಿಯ ರುಜುವಿನಂತೆ ಕಂಡಿತು! ಕವಿಯೊಬ್ಬ ತನ್ನ ಕುರುಹುಗಳನ್ನು ಹೀಗೆ ಅನಂತ ಆಕಾಶದಲ್ಲಿ ಬಿಟ್ಟುಹೋಗುವುದಿದೆ.ಅದು ನಾಡಿನ ಭಾಗ್ಯ.

 

click me!