ಕುವೆಂಪು ಪದ್ಯ ಮಗನಿಗೆ ಹೆಸರಿಡುವಷ್ಟು ಹತ್ತಿರ!

By Kannadaprabha News  |  First Published Dec 23, 2018, 12:55 PM IST

ಸಣ್ಣ ತರಗತಿಯಲ್ಲಿರುವಾಗ ಹಲವು ಪದ್ಯಗಳು ಬಾಯಿಪಾಠ ಮಾಡಲೆಂದೇ ಇತ್ತು. ಅವುಗಳಲ್ಲಿ ಕೆಲವು ‘ಕನ್ನಡ ಎನೆ ಕುಣಿದಾಡುವುದೆನ್ನೆದೆ.. ಕನ್ನಡ ಎನೆ ಕಿವಿ ನಿಮಿರುವುದು’, ‘ಕನ್ನಡಕೆ ಹೋರಾಡು ಕನ್ನಡದ ಕಂದಾ’, ‘ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ..’ ಹೀಗೆ.


ಇಂತವುಗಳು ಮೊದಲಿಗೆ ಕುವೆಂಪು ಅವರನ್ನು ಎಳೆಯರಾದ ನಮಗೆ ಪರಿಚಯಿಸಿದಂತವುಗಳು. ಭಾರತದಂತಹ ವಿಶಾಲ ದೇಶದ ಮಗಳು ಕರ್ನಾಟಕ ಎಂದಾಗ ಸಂತಸವಾಗುತ್ತಿತ್ತು. ಅದೂ ಎಂತಹ ಸಂಪದ್ಭರಿತ ಕಲೆ, ಕಾವ್ಯ, ಪ್ರಕೃತಿಯ ಸೊಬಗಿನವಳು, ಹರಿ ಮತ್ತು ಹರ ಇಬ್ಬರಿಗೂ ಪ್ರಿಯವಾದವಳು ಎಂದೆಲ್ಲಾ ಶಾಲೆಯ ಟೀಚರ್ ಹೇಳುತ್ತಿದ್ದಂತೆ ಮೈ ರೋಮಾಂಚನಗೊಳ್ಳುತ್ತಿದ್ದುದು ಸುಳ್ಳಲ್ಲ. ಆಗಿನ ಮುಗ್ಧ ಮನಸ್ಸು ಕರ್ನಾಟಕ ರಾಜ್ಯಭಾರತ ಮಾತೆಯ ಮೊದಲ ಮಗಳೇ ಇರಬೇಕು, ಅದರಿಂದಾಗಿಯೇ ಕುವೆಂಪು ಪದ್ಯ ಬರೆದಿರಬೇಕು ಎಂದುಕೊಳ್ಳುತ್ತಿತ್ತು. ಆಗಿನ ಎಳೆ ಮನಸ್ಸಿಗೆ ಕನ್ನಡದ ಕುರಿತು ಪ್ರೀತಿ ತುಂಬಿದ್ದು ಕುವೆಂಪು ಬರೆದ ಪದ್ಯಗಳು. 

ಅದರ ನಂತರ ಮನೆ ಮನೆಗಳಲ್ಲಿ ರೇಡಿಯೋದಿಂದ ಮೇಲ್ತರಗತಿಯದು ಎಂದು ನಾವಂದುಕೊಂಡ ಟೇಪ್ ರೆಕಾರ್ಡರುಗಳು ಕಾಲಿಟ್ಟವು. ಆಗಿನ ಕ್ಯಾಸೆಟ್ ಕ್ರಾಂತ ಪರಿ ಚಯಿಸಿದ್ದು ‘ಓ ನನ್ನ ಚೇತನಾ..’ದಂತಹ ಪದ್ಯ ಗಳನ್ನು. ರಜೆಯಲ್ಲಿ ಅಜ್ಜನ ಮನೆಗೆ ಹೋಗಿದ್ದಾಗ ಅಣ್ಣನ ಭಾವಗೀತೆಗಳ ಕ್ಯಾಸೆಟ್ ಸಂಗ್ರಹದಲ್ಲಿದ್ದುದು ಇದು. ‘ಇದನ್ನು ಬರೆದಿದ್ದು ಕುವೆಂಪು ಗೊತ್ತಾ?’ ಎಂದು ದೊಡ್ಡಮ್ಮನ ಮಗ ಹೇಳಿದಾಗ ಅಚ್ಚರಿಪಟ್ಟಿದ್ದೆ. ಯಾರು ಕುವೆಂಪು, ನಮ್ಮ ಪಾಠ ಪುಸ್ತಕದಲ್ಲಿದ್ದಾರಲ್ಲ ಅವರಾ? ನಿಜವಾ? ಎಂದು ಕುತೂಹಲದಿಂದ ಕೇಳಿದ್ದೆ. ನನ್ನ ಮಂಕುತನಕ್ಕೆ ನಕ್ಕು ‘ಹೌದು ಅವರೇ. ಕೇಳು ಎಷ್ಟು ಚೆಂದ ಇದೆ’ ಎಂದು ಹೇಳಿ ಆ ಕ್ಯಾಸೆಟ್ ಕೇಳಿಸಿದ್ದಲ್ಲದೇ ನಾನು ರಜೆ ಮುಗಿಸಿ ಹೊರಡುವಾಗ ಅದನ್ನು ನನಗೆಂದು ಉಡುಗೊರೆಯಾಗಿ ಕೊಟ್ಟಿದ್ದ. ಹೀಗೆ ಕುವೆಂಪು ನಮ್ಮ ಮನೆಯೊಳಗೆ ಧ್ವನಿಯಾಗಿ ಕಾಲಿಟ್ಟರು. ಮೊದಲಿಗೆ ಪರಿಚಯವಾದ ರಾಗ ನಂತರ ಪದ್ಯದ ಭಾವದ ಜೊತೆಗೆ ನಾನು ಬೆಳೆದಂತೆಲ್ಲಾ ಬೆಳೆಯುತ್ತಾ ಹೋದ, ಇನ್ನೂ ಬೆಳೆಯುತ್ತಲೇ ಇರುವ
ಕವಿತೆಯ ವಿಶಾಲ ಅರ್ಥಗಳೂ..ಮಗನ ಹೆಸರೂ ಚೇತನ್ ಎಂದು ಇಡುವಷ್ಟು ಇಷ್ಟವಾಗಿದ್ದದು. 

Latest Videos

undefined

ಮಲೆಗಳಲ್ಲಿ ಮದುಮಗಳು ಕೈಯಲ್ಲಿ ಹಿಡಿದಾಗ ಹೈಸ್ಕೂಲು. ಮೇಡಂ ಒಬ್ಬರ ಮೇಜಿನಲ್ಲಿದ್ದ ಪುಸ್ತಕವನ್ನು ತುಂಬಾ ದಿನಗಳಿಂದ ಗಮನಿಸಿ ‘ಅಮ್ಮನಿಗೆ ಓದ್ಬೇಕಂತೆ ಈ ಪುಸ್ತಕ’ ಎಂದು ಸುಳ್ಳು ಹೇಳಿ ಮನೆಗೆ ತಂದಿದ್ದೆ. ಶಾಲೆ ಪುಸ್ತಕಗಳನ್ನು ಓದುವಾಗಲೇ ಕಣ್ಣು ತಪ್ಪಿಸಿ ಓದಿದ್ದ ಪುಸ್ತಕವದು. ನಾವಿದ್ದ ಹಸಿರಿನ ಬನ ಕೊಡಗಿನಂತೆ ಕಾದಂಬರಿಯಲ್ಲೂ ವರ್ಣಿತವಾಗುತ್ತಿದ್ದ ಪ್ರಕೃತಿಯ ಸೌಂದರ್ಯ, ಪರಿಸರ, ನಮ್ಮಲ್ಲೆಲ್ಲೋ ಹಿರಿಯರು ಗುಸು ಗುಸುನೆ ಮಾತಾಡಿಕೊಂಡಿದ್ದಂತಹ ಪ್ರಕರಣಗಳು ಕಥೆಯಲ್ಲೂ ಕಾಣಿಸಿ ಎಷ್ಟು ಚಂದ ಕಥೆ ಬರೀತಾರಲ್ವಾ ಎನ್ನಿಸಿಬಿಟ್ಟಿತ್ತು. ಮತ್ತೆ ಮತ್ತೆ ಹಲವು ಸಲ ಪುಟ ತೆರೆಸಿಕೊಂಡು ಮರು ಓದಿಗೂ ಮೊದಲಿನದೇ ಹೊಸತನವನ್ನು ತಂದಿದ್ದ ಪುಸ್ತಕವದು. 

ರಾಷ್ಟ್ರಕವಿ ಕುವೆಂಪು ಬರೆದ ಅಕ್ಷರಗಳ ಅಮೃತ ಭಾಂಡದಿಂದ ಹೊರ ಚೆಲ್ಲಿದ ಬಿಂದು ಮಾತ್ರದಷ್ಟು ಓದು ನನ್ನದಾಗಿದ್ದರೂ ಕುವೆಂಪು ಹೆಸರು ಕೇಳಿದಾಕ್ಷಣ ಜೀವಮಾನದಲ್ಲಿ ಕವಿಯೊಬ್ಬ ಸಾಗಿದ ಬಹು ಉದ್ದದ ದಾರಿಯ ತಿರುವು ಕಾಣಿಸುತ್ತದೆ. ಕಣ್ಣಿಗೆ ಕಂಡಷ್ಟರಲ್ಲೇ, ಓದಿಗೆ ನಿಲುಕಿದಷ್ಟರಲ್ಲೇ ತೃಪ್ತಿ ನನ್ನದು. 

ವರ್ಷಗಳ ಕೆಳಗೆ ಕುಪ್ಪಳ್ಳಿಯಲ್ಲಿ ಕುವೆಂಪು ಬರೆಯುತ್ತಿದ್ದ ಕೋಣೆಯ ಕಿಟಕಿಯ ಹೊರಗಿನಿಂದ ಕಂಡ ಕುಂದಾದ್ರಿ ಪರ್ವತ ನನ್ನಂತೆಯೇ ಅವನು ಎಂದು ಪಿಸುಗುಟ್ಟಿತ್ತು. ರೂಪ ರೂಪಗಳನು ದಾಟಿ, ನಾಮಕೋಟಿಗಳನು ಮೀಟಿದ ಕವಿಯಾತ್ಮದ ಚೇತನ ಅಲ್ಲೇ ನಿಂದಿತ್ತು. 

ಅನಿತಾ ನರೇಶ್ ಮಂಚಿ

click me!