‘‘ಕನ್ನಡ ಎನೆ ಕುಣಿದಾಡುವುದೆನ್ನದೆ
ಕನ್ನಡ ಎನೆ ಕಿವಿ ನಿಮಿರುವುದು’’
ಎಂದಿರುವ ಕು.ವೆಂ.ಪುಟ್ಟಪ್ಪನವರ ಹೆಸರನ್ನು ಕೇಳಿದಾಗ ನನಗೆ ಇದೇ ರೀತಿಯ ಪುಳಕ ಆಗುತ್ತದೆ.
ನನ್ನ ವೃತ್ತಿಜೀವನದಲ್ಲಿ ನನಗೆ ಪುಟ್ಟಪ್ಪನವರನ್ನು ನೋಡುವ, ಭೇಟಿ ಮಾಡುವ ಭಾಗ್ಯ ಸಿಗಲಿಲ್ಲವಾದರೂ, ಚಿಕ್ಕ ವಯಸ್ಸಿನಿಂದಲೂ ಅವರ ಸಾಹಿತ್ಯವನ್ನು ಓದುತ್ತಲೂ ಮತ್ತು ಅವರ ಕವನಗಳನ್ನು ಹಾಡುತ್ತಲೂ ಬೆಳೆದಿದ್ದೇನೆ. ಕೊಪ್ಪದಲ್ಲಿ 1094, ಡಿಸೆಂಬರ್ 29ರಂದು ಜನಿಸಿದ ಪುಟ್ಟಪ್ಪನವರು ನನ್ನ ಅಜ್ಜಿಯ ತವರೂರಾದ ತೀರ್ಥಹಳ್ಳಿಯಲ್ಲಿ ನೆಲೆಸಿದ್ದರು ಎನ್ನುವುದು ನನ್ನ ಹೆಗ್ಗಳಿಕೆ. ಕವಿಶೈಲವೆಂದೇ ಖ್ಯಾತವಾಗಿರುವ ಆ ಸ್ಥಳ ಇಂದಿಗೂ ಲಕ್ಷಾಂತರ ಸಾಹಿತ್ಯ ಪ್ರಿಯರನ್ನೂ ಪ್ರವಾಸಿಗರನ್ನೂ ಆಕರ್ಷಿಸುತ್ತಿದೆ.
ನಾನು ಚಿಕ್ಕ ಮಗುವಾಗಿದ್ದಾಗಿಂದಲೂ ಅಪ್ಪನ ಧ್ವನಿಯಲ್ಲಿ ಕುವೆಂಪು ಅವರ ನೂರಾರು ಕವನಗಳನ್ನು ಹಾಡಿನ ರೂಪದಲ್ಲಿ ಕೇಳುತ್ತಿದ್ದೆ. ಬೆಳೆಯುತ್ತಾ ಬಂದಂತೆ ನನ್ನ ಮಾವನವರ ಧ್ವನಿಯಲ್ಲೂ ಹಾಗೂ ನಾಡಿನ ಹೆಸರಾಂತ ಗಾಯಕರಾದ ಕಾಳಿಂಗರಾಯರು, ಮೈಸೂರು ಅನಂತಸ್ವಾಮಿ, ಸಿ.ಅಶ್ವತ್ಥ್, ರತ್ನಮಾಲಾ ಪ್ರಕಾಶ್, ರಾಜು ಅನಂತಸ್ವಾಮಿ ಮುಂತಾದವರ ಗಾಯನದಲ್ಲಿ ಹೊರಹೊಮ್ಮಿದ ಪುಟ್ಟಪ್ಪನವರ ಅಮೋಘ ಕವನಗಳನ್ನು ಕೇಳಿ, ಅದರಿಂದ ಅತ್ಯಂತ ಪ್ರಭಾವಿತಳಾಗಿ, ಆ ಹಾಡುಗಳನ್ನು ತುಂಬ ಆಸಕ್ತಿಯಿಂದ ಕಲಿತು ಹಾಡುತ್ತಾ ಬಂದಿದ್ದೇನೆ. ಆಗೆಲ್ಲ ನನ್ನನ್ನು ಕಾಡುತ್ತಿದ್ದ ಒಂದು ಪ್ರಶ್ನೆಯೆಂದರೆ, ಬೇರೆ ಕವಿಗಳೆಲ್ಲರಿಗಿಂತಲೂ ಹೆಚ್ಚು ಇವರ ಕವನಗಳನ್ನೇ ಏಕೆ ಬಹುತೇಕ ಸಂಗೀತ ನಿರ್ದೇಶಕರು ಸ್ವರ ಸಂಯೋಜನೆ ಮಾಡಲು ಆರಿಸಿಕೊಳ್ಳುವುದು, ಇವರ ಕವನಗಳನ್ನೇ ಏಕೆ ಹೆಚ್ಚು ಹೆಚ್ಚು ಗಾಯಕರು ವೇದಿಕೆಗಳಲ್ಲಿ ಹಾಡುವುದು,ಕೇಳುಗರು ಇವರ ಹಾಡುಗಳನ್ನೇ ಅಷ್ಟು ಇಷ್ಟಪಟ್ಟು ಮತ್ತೆ ಮತ್ತೆ ಕೇಳುವುದೇಕೆ ಎಂಬುದು.
undefined
ಬರುಬರುತ್ತಾ ನನ್ನ ಶಾಲಾ ಕಾಲೇಜು ದಿನಗಳಲ್ಲಿ ನನ್ನ ಕನ್ನಡ ಸಾಹಿತ್ಯದ ಅಧ್ಯಯನ ಹೆಚ್ಚು ಆಳವೂ ಗಾಢವೂ ಆಗುತ್ತಾ ಬಂದಂತೆ ಈ ಪ್ರಶ್ನೆಗೆ ಉತ್ತರ ತಿಳಿಯುತ್ತ ಹೋಯಿತು. ಪುಟ್ಪಪ್ಪನವರ ರೂಪ, ವೇಷಭೂಷಣ, ಆಚಾರ-ವಿಚಾರಗಳಲ್ಲಿ ಕಾಣುವ ಘನತೆ, ಗಾಂಭೀರ‌್ಯವು ಅವರ ಬರವಣಿಗೆಗಳಲ್ಲಿ ಇನ್ನೂ ಅಧಿಕ ಪಟ್ಟು ಇದೆ ಎಂದು. ಅದರ ಭಾವಾರ್ಥದ ಉತ್ಕಟತೆಯನ್ನು ಗ್ರಹಿಸಿ ಅರ್ಥೈಸಿಕೊಂಡು ಅದಕ್ಕೆ ಸೂಕ್ತವಾಗಿ ಸ್ವರ ಸಂಯೋಜನೆ ಮಾಡಿ ಹಾಡನ್ನು ಪ್ರಸ್ತುತ ಪಡಿಸುವ ಸಂಪೂರ್ಣ ಕ್ರಿಯೆ ಸುಲಭವಾದುದಲ್ಲ ಹಾಗೂ ಎಲ್ಲರಿಂದಲೂ ಆಗುವಂಥದ್ದೂ ಅಲ್ಲ ಎಂದು ಮನದಟ್ಟಾಯಿತು.
ಇದೊಂದು ಅಭೂತಪೂರ್ವ ಅನುಭೂತಿಯನ್ನು ನಮ್ಮ ಅಂತರಾತ್ಮಕ್ಕೆ ಕೊಡುವ ಕ್ರಿಯೆ ಹಾಗೂ ಯಾರು ಈ ಅನುಭವಕ್ಕೆ ತಮ್ಮನ್ನು ತಾವು ಹೆಚ್ಚು ಹೆಚ್ಚು ಒಡ್ಡಿಕೊಳ್ಳುತ್ತಾರೋ ಅವರ ಆಂತರಿಕ ಬೆಳವಣಿಗೆ ಆಗುವುದರ ಜೊತೆಗೆ ಗೊತ್ತಿಲ್ಲದಂತೆ ನಮ್ಮೊಳಗೆಲ್ಲೋ ಒಂದು ಜ್ಞಾನದ ಜ್ಯೋತಿ ಹತ್ತಿಕೊಂಡು ಜ್ವಲಂತವಾಗಿ ಉರಿಯಲು ಶುರು ಮಾಡುತ್ತದೆ ಎಂದು ನನಗನ್ನಿಸುತ್ತದೆ.
ಒಟ್ಟಾರೆ ಹೇಳಬೇಕೆಂದರೆ ಪುಟ್ಟಪ್ಪನವರ ‘ಕಾನೂರು ಹೆಗ್ಗಡತಿ’, ‘ಮಲೆಗಳಲ್ಲಿ ಮದುಮಗಳು’ ಓದುತ್ತಾ ನಾನೂ ಮಲೆನಾಡಿನ ಬೆಟ್ಟ-ಗುಡ್ಡ, ಕಾಡು-ಮೇಡುಗಳಲ್ಲಿ ಕಳೆದು ಹೋಗಿದ್ದೇನೆ. ಇವರ ‘ಅಂತರತಮ ನೀ ಗುರು’, ‘ಮುಚ್ಚುಮರೆ ಇಲ್ಲದೆಯೇ’ ಮುಂತಾದ ನೂರಾರು ಕವನಗಳನ್ನು ಹಾಡುತ್ತಾ ನನ್ನ ಆತ್ಮಶುದ್ಧಿ ಮಾಡಿಕೊಂಡಿದ್ದೇನೆ.
ಈ ಪದ್ಮವಿಭೂಷಣರಿಗೆ, ಈ ಜ್ಞಾನಪೀಠಿಗೆ, ಈ ರಾಷ್ಟ್ರಕವಿಗೆ, ಈ ಮೇರು ಪರ್ವತಕ್ಕೆ ಇದೋ ನನ್ನ ಸಾಷ್ಟಾಂಗ ನಮನ.