ದಲಿತ ಮುಸ್ಲಿಂ ರಾಜಕಾರಣದ ಬಗ್ಗೆ ಜೋಗೇಂದ್ರ ನಾತ್‌ ಮಂಡಲ್ ಹಾಗೂ ಅಂಬೇಡ್ಕರ್‌ ನಿಲುವುಗಳು!

By Kannadaprabha News  |  First Published Aug 30, 2020, 3:47 PM IST

ಇತಿಹಾಸಕ್ಕೆ ನೆನಪೂ, ಮರೆವೂ ಎರಡೂ ಇರುತ್ತದೆ. ಕೆಲವೊಮ್ಮೆ ಮರೆತಂತೆ ನಟಿಸುವ ಸ್ವಭಾವವೂ. ಹಾಗೆ ಹಲವರ ಕುತಂತ್ರದಿಂದ ಇತಿಹಾಸ ಮರೆತಂತೆ ನಟಿಸಿದ ಪಾತ್ರ ದಲಿತ ನಾಯಕ ಜೋಗೇಂದ್ರನಾಥ್‌ ಮಂಡಲ್‌ ಅವರದು. ಇವರೊಬ್ಬ ಪ್ರತಿಭಾವಂತ ದಲಿತ ನಾಯಕ. ಅವರ ಬಗೆಗಿನ ವಿವರವಾದ ಮಾಹಿತಿ ಇರುವ ಕೃತಿ ರಾಕೇಶ್‌ ಶೆಟ್ಟಿಬರೆದಿರುವ ‘ಮುಚ್ಚಿಟ್ಟದಲಿತ ಚರಿತ್ರೆ’.


ಲೇ: ರಾಕೇಶ್‌ ಶೆಟ್ಟಿ

ಈ ಪುಸ್ತಕ ಜೋಗೇಂದ್ರನಾಥ ಅವರ ಬಗೆಗಿನ ವಿವರ ನೀಡುತ್ತಲೇ ಅವರ ‘ದಲಿತ-ಮುಸ್ಲಿಮ್‌’ ರಾಜಕಾರಣದ ಆಯಾಮಗಳ ಕುರಿತೂ ಚರ್ಚಿಸುತ್ತದೆ. ಹಿಂದಿನ ಪೂರ್ವ ಬಂಗಾಳ ಈಗ ಬಾಂಗ್ಲಾ ದೇಶವಾಗಿದೆ. ಜೋಗೇಂದ್ರನಾಥ್‌ 1904ರಲ್ಲಿ ಪೂರ್ವ ಬಂಗಾಳದ ಬಾರಿಸಾಲ್‌ನಲ್ಲಿ ಜನಿಸಿದವರು. ಅಂದರೆ 2020ಕ್ಕೆ ಅವರು ಜನಿಸಿ 116 ವರ್ಷಗಳಾದವು. ದಲಿತರ ಮೇಲಾಗುವ ದೌರ್ಜನ್ಯದ ವಿರುದ್ಧ ಬಹಳ ಹಿಂದೆಯೇ ಧ್ವನಿ ಎತ್ತಿದವರು. ಆದರೆ ಕೆಲವರ ಕುತಂತ್ರದಿಂದಾಗಿ ಇವರು ಅಂಬೇಡ್ಕರ್‌ ಅವರಿಗೆ ಸರಿಸಮನಾದ ದಲಿತ ಪರ ಧ್ವನಿಯಾಗಿದ್ದರೂ ಕೆಲವು ಪ್ರಬಲ ಅಧಿಕಾರಶಾಹಿಗಳ ಕುತಂತ್ರದಿಂದ ಹಿನ್ನೆಲೆಯಲ್ಲೇ ಉಳಿಯಬೇಕಾಯ್ತು.

Tap to resize

Latest Videos

undefined

ಆ ಕುತಂತ್ರಗಳೇನು? ಅವುಗಳು ಜೋಗೇಂದ್ರನಾಥ್‌ ಅವರನ್ನು ಹೇಗೆ ತುಳಿದುಹಾಕಲು ಹುನ್ನಾರ ನಡೆಸಿದವು ಎಂಬ ಬಗೆಗೆ ವಿವರವಾದ ಮಾಹಿತಿ ಇದರಲ್ಲಿದೆ. ಜೊತೆಗೆ ಜೋಗೇಂದ್ರನಾಥ್‌ ಅವರ ಹೋರಾಟ ಹಾದಿ, ಅದರ ಯಶಸ್ಸು, ಆ ಬಳಿಕ ಮುಸ್ಲಿಮರೂ ದಲಿತರಂತೇ ತುಳಿತಕ್ಕೊಳಗಾದವರು ಎಂದು ತಿಳಿದು ಅಚಾತುರ್ಯದಿಂದ ಮುಸ್ಲಿಮ್‌ ಲೀಗ್‌ಗೆ ಸೇರಿದ್ದು, ಅಲ್ಲಿ ಇವರ ದಿಕ್ಕು ತಪ್ಪಿಸುವ ಕಾರ್ಯ ನಡೆದದ್ದು, ಸತ್ಯ ಗೊತ್ತಾಗುವ ಸಮಯಕ್ಕೆ ಎಲ್ಲವೂ ಇವರ ಹಿಡಿತ ತಪ್ಪಿ ಹೋದದ್ದು.. ಇತ್ಯಾದಿ ರಾಜಕೀಯ ಸೂಕ್ಷ್ಮಗಳಿವೆ. ಇಲ್ಲಿ ಅಂಬೇಡ್ಕರ್‌ ಚಿಂತನೆಗಳ ವಿಭಿನ್ನ ನೋಟವೂ ಇದೆ.

ಡಾ. ಬಿ.ಆರ್. ಅಂಬೇಡ್ಕರ್‌ ಅವರಿಗೆ ಊಟ ಬಡಿಸಿದ್ದ ಬೆಳಗಾವಿ ಸಿದ್ದವ್ವ ಇನ್ನಿಲ್ಲ

ಆ ಕಾಲದ ರಾಜಕೀಯ ಮೇಲಾಟಗಳನ್ನು ವಿವರಿಸುವ ಜೊತೆಗೆ ಧರ್ಮ, ರಾಜಕೀಯ ಕಾರಣಗಳಿಗೆ ಛಿದ್ರ ಛಿದ್ರವಾಗಿ ಹರಿದು ಹಂಚಿಹೋದ ಜನಜೀವನ, ದುಸ್ತರವಾದ ಬದುಕು, ಹೆಣ್ಮಕ್ಕಳ ದಯನೀಯ ಸ್ಥಿತಿಯ ವರ್ಣನೆಗಳಿವೆ. ಇಂಥಾ ಮರೆಯಾದ ಇತಿಹಾಸವನ್ನು ಮತ್ತೆ ಬೆಳಕಿಗೆ ಹಿಡಿದು ಅದರಲ್ಲಿ ಇತ್ತೀಚಿನ ಹೋರಾಟಗಳಾದ ಸಿಎಎ ಹಾಗೂ ಎನ್‌ಆರ್‌ಸಿಗಳನ್ನು ನೋಡುವ ಪ್ರಯತ್ನವಾಗಿದೆ.

ಇತಿಹಾಸದ ಅಜ್ಞಾತ ನಾಯಕ ಜೋಗೇಂದ್ರನಾಥ ಅವರ ಬಗ್ಗೆ ತಿಳಿದುಕೊಳ್ಳುವ, ಅವರ ಕಾಲಘಟ್ಟದ ಸಂಘರ್ಷಗಳ ಬಗೆಗಿನ ವಿವರಗಳಿಂದ ಹಾಗೂ ಆ ನೆಲೆಗಟ್ಟಿನಲ್ಲಿ ಇಂದಿನ ರಾಜಕೀಯ, ಸಾಮಾಜಿಕ ಸ್ಥಿತಿಯನ್ನು ವಿಶ್ಲೇಷಿಸುವ ಕಾರಣಕ್ಕೆ ಈ ಕೃತಿ ಮಹತ್ವದ್ದು ಅನಿಸುತ್ತದೆ.

click me!